ಇತ್ತೀಚಿನ ದಿನಗಳಲ್ಲಿ ವೈದ್ಯರಾದಿಯಾಗಿ ಜನಸಾಮಾನ್ಯರು ಆರೋಗ್ಯದ ಹಿತದೃಷ್ಟಿಯಿಂದ ಆರ್ಗಾನಿಕ್ ಆಹಾರ ಸೇವಿಸುವುದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಸರರ್ಕಾರಗಳ ವಾರ್ಷಿಕ ಬಜೆಟ್ನಲ್ಲೂ ರೈತರಿಗೆ ರಾಸಾಯನಿಕ ಮುಕ್ತ, ನೈಸರ್ಗಿಕ ಕೃಷಿ ವಿಧಾನಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ. ಆದರೆ ಕರ್ನಾಟಕದ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದ ಸರೋಜಾ ಪಾಟೀಲ್ ಎರಡು ದಶಕಗಳಿಂದ ನೈಸರ್ಗಿಕ ಕೃಷಿಗೆ ಒತ್ತು ನೀಡಿಕೊಂಡು ಬಂದಿದ್ದಾರೆ. ಅಲ್ಲದೆ 63 ವರ್ಷದ ಇವರು ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ಪ್ರದೇಶದ ನೂರಾರು ಮಹಿಳೆಯರು ಸಬಲೀಕರಣಗೊಳ್ಳಲು ನೆರವಾಗಿದ್ದಾರೆ.
ಭದ್ರಾವತಿ ತಾಲೂಕಿನ ಅರಬ್ಳಚೆ ಮೂಲದವರಾದ ಸರೋಜಾ ಪಾಟೀಲ್ ಅವರ ಪೋಷಕರ ಮೂವರು ಹೆಣ್ಣುಮಕ್ಕಳಲ್ಲಿ ಎರಡನೆಯವರು. 1979 ರಲ್ಲಿ ಅವರ ಮದುವೆ ನಿಟ್ಟೂರು ಗ್ರಾಮದ ನಾಗೇಂದ್ರಪ್ಪ ಅವರ ಜೊತೆ ನೆರವೇರಿತ್ತು. ಅವರ ಗಂಡನ ಕುಟುಂಬವು ಒಟ್ಟು 25 ಎಕರೆ ಕೃಷಿಭೂಮಿಯನ್ನು ಹೊಂದಿತ್ತು, ವಿಭಕ್ತ ಕುಟುಂಬವಾಗಿ ಬಿಭಜಿಸಲ್ಪಟ್ಟ ನಂತರ ಅವರ ಪಾಲಿಗೆ ಸಣ್ಣ ಭೂಮಿ ಮಾತ್ರ ಉಳಿಯಿತು. ಇದರಿಂದಾಗಿ ಜೀವನ ನಿರ್ವಹಣೆಗೆ ಹೆಚ್ಚುವರಿ ಆದಾಯಕ್ಕಾಗಿ ನಾಗೇಂದ್ರಪ್ಪ ಗ್ರಾಮದ ತೆಂಗಿನಕಾಯಿ ಕಾರ್ಖಾನೆಗೆ ಸೇರಿದರು. ಆ ಕಾರ್ಖಾನೆಯಲ್ಲಿ ತೆಂಗಿನ ತ್ಯಾಜ್ಯವನ್ನು ಹಾಸಿಗೆಗಳು, ಹಗ್ಗಗಳು ಮತ್ತು ಇತರ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. ಇದರಿಂದ ಪ್ರೇರೇಪಿತರಾದ ಸರೋಜಾ ಪಾಟೀಲ್ ಮನೆಯಲ್ಲೇ ಸಣ್ಣ ಘಟಕ ಸ್ಥಾಪಿಸಿ ಉದ್ಯಮ ಆರಂಭಿಸಲು ನಿರ್ಧರಿಸಿದರು.
ಇದಕ್ಕಾಗಿ ತನ್ನ ಕುಟುಂಬದಿಂದ ಸ್ವಲ್ಪ ಹಣವನ್ನು ಸಾಲವಾಗಿ ತೆಗೆದುಕೊಂಡು, ತನ್ನ ಉಳಿತಾಯವನ್ನೂ ಬಳಸಿ ಅವರು ತೆಂಗಿನ ತ್ಯಾಜ್ಯದಿಂದ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಿದರು. ಕೆಲವು ತಿಂಗಳುಗಳ ನಂತರ, ಅವಳು ಒಂದು ಸಣ್ಣ ಡೈರಿ ಫಾರ್ಮ್ ಅನ್ನು ಸ್ಥಾಪಿಸಲು ಹಸುಗಳನ್ನು ಸಾಕತೊಡಗಿದರು.
“ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು ಮತ್ತು ವ್ಯಾಪಾರವು ಉತ್ತಮವಾಗಿ ಪ್ರಾರಂಭವಾಯಿತು. ಆದರೆ ಕಳಪೆ ಮೂಲಸೌಕರ್ಯ ಮತ್ತು ಅನಿಯಮಿತ ವಿದ್ಯುತ್ ಸರಬರಾಜಿಂದಾಗಿ ನನಗೆ ನಿರೀಕ್ಷಿತ ಲಾಭವನ್ನು ಗಳಿಸಲಾಗಲಿಲ್ಲ. ಅಂತಿಮವಾಗಿ, ವ್ಯಾಪಾರವು ನಷ್ಟದ ಹಾದಿಯಲ್ಲಿ ಸಾಗಲು ಪ್ರಾರಂಭಿಸಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು, ” ಎಂದು ಸರೋಜಾ ‘ದಿ ಬೆಟರ್ ಇಂಡಿಯಾ’ ಜೊತೆ ಮಾತಾಡುತ್ತಾ ಹೇಳಿದ್ದಾರೆ.
ಆನಂತರ ಸಹಜವಾಗಿ ಇತರ ಉದ್ಯಮಗಳತ್ತ ಗಮನ ಹರಿಸಿದ ಅವರಿಗೆ ಸಾವಯವ ಕೃಷಿ ಉತ್ಪನ್ನಗಳ ವ್ಯಾಪಾರದ ಬಗ್ಗೆ ಕುತೂಹಲ ಉಂಟಾಯಿತು. “ನಾನು ಯಾವಾಗಲೂ ರಾಗಿ ಮತ್ತು ಇತರ ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಬಳಸಿ ಅಡುಗೆ ಮಾಡಲು ಆಸಕ್ತಿ ಹೊಂದಿದ್ದೆ. ನನ್ನ ಪತಿ ಸಾವಯವ ತರಕಾರಿಗಳು ಮತ್ತು ಜೋಳ, ರಾಗಿ, ಭತ್ತ ಮತ್ತು ರಾಗಿ ಮುಂತಾದ ಆಹಾರ ಧಾನ್ಯಗಳನ್ನು ಬೆಳೆದರು. ಹಾಗಾಗಿ, ನಮ್ಮ ಫಾರ್ಮ್ನ ತಾಜಾ ಸುಗ್ಗಿಯನ್ನು ಬಳಸಿಕೊಂಡು ಹಾನಿಕಾರಕ ರಾಸಾಯನಿಕ ಮುಕ್ತ ಉತ್ಪನ್ನಗಳು ಮತ್ತು ಸಾಂಪ್ರದಾಯಿಕ ಪಾಕವಿಧಾನಗಳನ್ನು ಮಾಡಿ ಮಾರಾಟ ಮಾಡಲು ನಾನು ನಿರ್ಧರಿಸಿದೆ ” ಎಂದು ಅವರು ಹೇಳುತ್ತಾರೆ.
ಸರೋಜಾ ಅವರು ಮೊದಲು ಅನೌಪಚಾರಿಕವಾಗಿ ವ್ಯಾಪಾರ ಆರಂಭಿಸಿದ್ದರು. ಆದರೆ ಆಕೆಯ ಉತ್ಪನ್ನಗಳು ಮೆಚ್ಚುಗೆ ಪಡೆದ ನಂತರ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯವನ್ನು ಪಡೆದ ನಂತರ ಅನೇಕ ರೈತರು ಅವರನ್ನು ಸಂಪರ್ಕಿಸಲಾರಂಭಿಸಿದರು. “ಸಾವಯವ ಕೃಷಿ ನಿರ್ವಹಣೆಗಾಗಿ ಲಭ್ಯವಿರುವ ಕೃಷಿ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಲು, ಮಣ್ಣಿನ ಗುಣಮಟ್ಟ ಮತ್ತು ಇಳುವರಿಯನ್ನು ಹೆಚ್ಚಿಸಲು ನಾನು ಮಹಿಳೆಯರಿಗೆ ಮತ್ತು ಪುರುಷರಿಗೆ ಕಲಿಸಲು ಪ್ರಾರಂಭಿಸಿದೆ” ಎಂದು ಅವರು ಹೇಳುತ್ತಾರೆ.
ಈಕೆಯ ಕೆಲಸವನ್ನು ಗುರುತಿಸಿದ ಕೃಷಿ ಇಲಾಖೆ ಅಧಿಕಾರಿಗಳೂ ಸಾವಯವ ಕೃಷಿಯನ್ನು ಉತ್ತೇಜಿಸಲು ಅವರನ್ನು ಸಂಪರ್ಕಿಸಿದರು. ನಂತರ ಅವರು ಹರಿಹರ ಮತ್ತು ರಾಜ್ಯದ ಇತರ ಭಾಗಗಳ 20 ಹಳ್ಳಿಗಳನ್ನು ಸುತ್ತುವ ಮೂಲಕ ರೈತರಿಗೆ ಮಾರ್ಗದರ್ಶನ ನೀಡಿದರು. “ನಾನು ಉತ್ತಮ ಶಿಕ್ಷಕಿಯಾಗಿದ್ದೇನೆ, ಆದರೆ ಇತರ ರೈತರಿಂದ ಬೆಳೆಗಳನ್ನು ಬೆಳೆಯಲು ಹೊಸ ತಂತ್ರಗಳನ್ನೂ ಕಲಿತೆ” ಎಂದು ಅವರು ಹೇಳುತ್ತಾರೆ, “ಕೃಷಿಯಿಂದಾದ ಕಲಿಕೆ ಮತ್ತು ಗಳಿಕೆಯು ನನ್ನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನನಗೆ ಸಹಾಯ ಮಾಡಿದೆ” ಎಂದೂ ಅವರು ಹೆಮ್ಮೆಯಿಂದ ಹೇಳುತ್ತಾರೆ.
2014 ರಲ್ಲಿ ಸರೋಜಾ ಅವರು ತಮ್ಮ ವ್ಯಾಪಾರವನ್ನು ‘ತಧ್ವನಮ್’ ಬ್ರಾಂಡ್ನಡಿ ನೋಂದಾಯಿಸಿದರು. ಅವರ ಬಾಳೆ ಹಿಟ್ಟು, ರಾಗಿ, ಅಕ್ಕಿ, ಜೋಳ ಮತ್ತು ಮುತ್ತು ರಾಗಿಗಳಿಂದ ಮಾಡಿದ ಪಾಪಡ್ನಂತಹ ಉತ್ಪನ್ನಗಳು ಗ್ರಾಹಕರೆಡೆಯಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡವು. ಅವರ ವಿಶಿಷ್ಟ ಉತ್ಪನ್ನಗಳಲ್ಲಿ ಅಕ್ಕಿ, ಗೋಧಿ, ರಾಗಿ ಮತ್ತು ಇತರ ವಸ್ತುಗಳಿಂದ ತಯಾರಿಸಿದ ಶ್ಯಾವಿಗೆಯೂ ಸೇರಿದೆ. ಅವರ ರವಾ ಇಡ್ಲಿ ಮಿಶ್ರಣ, ನವಣೆ ಬಿಸಿ ಬೇಳೆ ಬಾತ್ ಮಿಶ್ರಣ, ರಾಗಿ ಮಾಲ್ಡಿ , ಹಲವು ವಿಧಗಳ ಚಟ್ನಿ ಪುಡಿಗಳು ಗ್ರಾಹಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವು.
ಸಾವಯವ ಆಹಾರ ಬೆಳೆಗಾರರಾದ ಈಶ್ವರ ತೀರ್ಥರು ಉತ್ಪನ್ನಗಳನ್ನು ಪ್ಯಾಕ್ ಮಾಡುವುದು ಮತ್ತು ಮಾರುಕಟ್ಟೆ ಮಾಡುವುದು ಹೇಗೆ ಎಂಬುದನ್ನು ಕಲಿಸಿದರು ಎಂದು ಸರೋಜಾ ವಿಶ್ವಾಸದಿಂದ ನೆನೆಸಿಕೊಳ್ಳುತ್ತಾರೆ . ಆದರೆ “ನಾನು ಅವರಿಗೆ ಕಲಿಸಿದ್ದಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದ್ದಾರೆ ಮತ್ತು ಅವರ ಸಾಧನೆಗಳ ಬಗ್ಗೆ ನಾನು ಹೆಮ್ಮೆಪಡುತ್ತೇನೆ” ಎಂದು ಈಶ್ವರ್ ಹೇಳುತ್ತಾರೆ.
ಸರೋಜಾ ಮುಂಬೈ, ಅಹಮದಾಬಾದ್, ನವದೆಹಲಿ, ಚೆನ್ನೈ ಮತ್ತು ಕರ್ನಾಟಕದ ವಿವಿಧ ನಗರಗಳಾದ್ಯಂತ ಹಲವು ಪ್ರದರ್ಶನಗಳಲ್ಲಿ ತನ್ನ ಸಾವಯವ ಉತ್ಪನ್ನಗಳನ್ನು ಪ್ರಚಾರ ಮಾಡಿದ್ದಾರೆ. “ಒಮ್ಮೆ ಇಸ್ಕಾನ್ ಅವರು ಅಕ್ಕಿ ಪಾಪಾಡ್ಗಾಗಿ ಆರ್ಡರ್ ಮಾಡಲು ನನ್ನನ್ನು ಸಂಪರ್ಕಿಸಿದಾಗ ನನ್ನ ಉತ್ಪನ್ನಗಳಲ್ಲಿ ನನಗೆ ಹೆಚ್ಚು ವಿಶ್ವಾಸ ಬೆಳೆಯಿತು. ಗ್ರಾಹಕರಿಗೆ ಬೇಕಾದ ಉತ್ಪನ್ನಗಳನ್ನು ತಲುಪಿಸುವ ಮತ್ತು ಕಸ್ಟಮೈಸ್ ಮಾಡುವ ಬಗ್ಗೆ ನನಗೆ ಹೆಮ್ಮೆ ಅನಿಸಿತು” ಎಂದು ಅವರು ಹೇಳುತ್ತಾರೆ.
ಅವರ ಬಾಳೆಹಣ್ಣಿನ ಹಿಟ್ಟು ಕೂಡ ತಕ್ಷಣವೇ ಹಿಟ್ ಆಗಿತ್ತು. “ಬಾಳೆ ಹಣ್ಣಿನ ಹಿಟ್ಟನ್ನು ಬಾಳೆಹಣ್ಣುಗಳನ್ನು ಒಣಗಿಸಿ ಮತ್ತು ಸಂಸ್ಕರಣೆ ಮಾಡಿ ಪುಡಿಯನ್ನು ತಯಾರಿಸುವ ಮೂಲಕ ತಯಾರಿಸಲಾಗುತ್ತದೆ. ಇದು ಮೈದಾ ಅಥವಾ ಇತರ ರೀತಿಯ ಹಿಟ್ಟಿಗೆ ಆರೋಗ್ಯಕರ ಬದಲಿಯಾಗಿದೆ. ನಾನು 15 ಆರೋಗ್ಯಕರ ಪಾಕವಿಧಾನಗಳನ್ನು ಹಂಚಿಕೊಂಡಿದ್ದೇನೆ, ಕೇಕ್ ಮತ್ತು ಥಕಲಿ (ಟೊಮ್ಯಾಟೊ ರೈಸ್)ಯಂತಹ ಮಸಾಲೆಯುಕ್ತ ಪದಾರ್ಥಗಳನ್ನು ಗ್ರಾಹಕರು ಇಷ್ಟಪಟ್ಟಿದ್ದಾರೆ” ಎಂದು ಅವರು ಹೇಳುತ್ತಾರೆ.
ಉದ್ಯಮ ಒಂದು ಹಂತಕ್ಕೆ ಬರುತ್ತಿದ್ದಂತೆ ಸರೋಜಾ ಅವರು ಮಹಿಳಾ ಸ್ವ-ಸಹಾಯ ಗುಂಪುಗಳನ್ನು ರಚಿಸಿದರು ಮತ್ತು ಅವರನ್ನು ಪ್ರದರ್ಶನ ಪ್ರವಾಸಗಳಿಗೆ ಕರೆದುಕೊಂಡು ಹೋದರು. ಇದುವರೆಗೆ ನಿಟ್ಟೂರು, ಹೊಸಪೇಟೆ, ಚಿತ್ರದುರ್ಗ, ಹರಿಹರು, ಬಳ್ಳಾರಿ, ಗದಗ, ಧಾರವಾಡ ಮತ್ತು ಹುಬ್ಬಳ್ಳಿಯಾದ್ಯಂತ 500ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿ ಉದ್ಯಮ ಸ್ಥಾಪಿಸಲು ನೆರವಾಗಿದ್ದಾರೆ. ಅವರಿಂದ ತರಬೇತಿ ಪಡೆದ ಅನೇಕರು ತಮ್ಮ ಉತ್ಪನ್ನ ತಯಾರಿಕೆಯನ್ನು ಪ್ರಾರಂಭಿಸಿದರು ಅಥವಾ ಸಾವಯವ ಕೃಷಿಗೆ ಪ್ರವೇಶಿಸಿದರು, ಇದು ಆರ್ಥಿಕವಾಗಿ ಸ್ವತಂತ್ರರಾಗಲು ಅವರಿಗೆ ಸಹಾಯ ಮಾಡಿತು.
ಪಕ್ಕದ ಹರಿಹರ ಗ್ರಾಮದ ರೈತ ಮಹಿಳೆ ಮಮತಾ ಹೇಳುವಂತೆ ನಾಲ್ಕು ವರ್ಷಗಳ ಹಿಂದೆ ಸರೋಜಾ ಅವರ ಪರಿಚಯವಾಗಿತ್ತು. “ನನ್ನ ಜಮೀನಿನಲ್ಲಿ ಭತ್ತ ಮತ್ತು ಋತುಮಾನದ ತರಕಾರಿಗಳನ್ನು ಬೆಳೆಯಲು ನಾನು ಸರೋಜಾ ಅವರಿಂದ ಸಾವಯವ ಕೃಷಿ ತಂತ್ರಗಳನ್ನು ಕಲಿತಿದ್ದೇನೆ. ನನ್ನ ಪತಿ ಅನಾರೋಗ್ಯದಿಂದ ನಿಧನರಾದರು. ಆದರೆ ಸಾವಯವ ಕೃಷಿಯು ನನಗೆ ಆರ್ಥಿಕವಾಗಿ ಸ್ವತಂತ್ರವಾಗಿ ಉಳಿಯಲು ಸಹಾಯ ಮಾಡಿದೆ” ಎಂದು ಅವರು ಹೇಳುತ್ತಾರೆ.
ಮಹಿಳೆಯರನ್ನು ಸಬಲೀಕರಣಗೊಳಿಸುವಾಗ, ಸರೋಜಾ ಅವರು ಉದ್ಯಮಿಯಾಗಿರ ಎದುರಿಸಿದ ಕಷ್ಟಗಳನ್ನು ನಿವಾರಿಸುವ ಮಾರ್ಗೋಪಾಯದ ಬಗ್ಗೆಯೂ ವಿವರಿಸಿದ್ದಾರೆ. “ಗ್ರಾಹಕರು ಮತ್ತು ರೈತರನ್ನು ಸಾವಯವ ಕೃಷಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವೊಲಿಸುವಲ್ಲಿ ನಾನು ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಖರೀದಿದಾರರನ್ನು ಪ್ರೋತ್ಸಾಹಿಸಲು, ನಾನು ಸಣ್ಣ ಮಣ್ಣಿನ ಮಡಕೆಗಳಲ್ಲಿ ಮಾದರಿಗಳನ್ನು ನೀಡಿದ್ದೇನೆ. ರಾಸಾಯನಿಕ ಮುಕ್ತ ಆಹಾರವನ್ನು ಸೇವಿಸಲು ಪ್ರಯತ್ನಿಸುವಂತೆ ನಾನು ಗ್ರಾಹಕರನ್ನು ವಿನಂತಿಸಿದೆ. ಅವರು ಅದನ್ನು ಇಷ್ಟಪಟ್ಟರು ಮತ್ತಷ್ಟು ಬೇಡಿಕೆ ಇಟ್ಟರು. ನನ್ನ ಹೆಚ್ಚಿನ ಗ್ರಾಹಕರು ಮತ್ತೆ ಮತ್ತೆ ನನ್ನಿಂದ ಉತ್ಪನ್ನಗಳನ್ನು ಕೊಳ್ಳುತ್ತಾರೆ”ಎಂದು ಅವರು ಹೇಳುತ್ತಾರೆ.
ಹಣಕಾಸಿನ ವ್ಯವಸ್ಥೆಯು ತನ್ನ ಉದ್ಯಮಶೀಲತೆಯ ಪ್ರಯಾಣವನ್ನು ಕಷ್ಟಕರವಾಗಿಸಿತು ಎನ್ನುವ ಅವರು “ನಗರದ ಉದ್ಯಮಿಗಳಂತೆ, ಸರ್ಕಾರ ಮತ್ತು ಖಾಸಗಿ ಬ್ಯಾಂಕ್ಗಳು ಗ್ರಾಮೀಣ ಮಹಿಳೆಯರಿಗೆ ನಷ್ಟ ಮತ್ತು ಆತ್ಮವಿಶ್ವಾಸದ ಕೊರತೆಯ ಭಯದಿಂದ ಸಾಲವನ್ನು ನೀಡುವುದಿಲ್ಲ. ನಾನು ನನ್ನ ಕುಟುಂಬದಿಂದಲೇ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಇದಲ್ಲದೆ, ನನಗೆ ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳು ತಿಳಿದಿರಲಿಲ್ಲ ಮತ್ತು ನನ್ನ ಆರಂಭಿಕ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮವು ಅಸ್ತಿತ್ವದಲ್ಲಿರಲಿಲ್ಲ. ಗ್ರಾಹಕರೊಂದಿಗೆ ವೈಯಕ್ತಿಕವಾಗಿ ಸಂವಹನ ನಡೆಸುವ ಮೂಲಕ ನಾನು ನಂಬಿಕೆಯನ್ನು ಬೆಳೆಸಿಕೊಳ್ಳಬೇಕಾಗಿತ್ತು” ಎಂದು ಸರೋಜಾ ಹೇಳುತ್ತಾರೆ. “ಇಂದು, ನಾನು ಮಹಿಳೆಯರಿಗೆ ವಿಶ್ವಾಸಾರ್ಹ ಸಂಸ್ಥೆಗಳ ಮೂಲಕ ಹಣಕಾಸು ಸಂಗ್ರಹಿಸಲು ಸಹಾಯ ಮಾಡುತ್ತೇನೆ ಮತ್ತು ಅವರ ಉತ್ಪನ್ನಗಳ ಮಾರ್ಕೆಟಿಂಗ್ ಮತ್ತು ಪ್ರಚಾರದಲ್ಲಿ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ” ಎಂದಿದ್ದಾರೆ.
ಇಂದು ಮಾಸಿಕ 50,000 ರೂ.ಗಳ ವ್ಯವಹಾರ ನಡೆಸುತ್ತಿರುವ ಸರೋಜಾ, ತನ್ನ ಸಾಧನೆಯಿಂದಲೇ ತೃಪ್ತಳಾಗಿದ್ದಾರೆ. “ಇಂದು 20 ಮಹಿಳೆಯರು ಅವರ ಅನುಕೂಲಕ್ಕೆ ತಕ್ಕಂತೆ ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಾನು ಸಾವಯವ ಆಹಾರವನ್ನು ಉತ್ತೇಜಿಸುವ ಗುರಿ ಹೊಂದಿದ್ದೇನೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳು ಕಲಬೆರಕೆಯಾಗಿದ್ದು, ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡಲು ಜನರನ್ನು ಉತ್ತೇಜಿಸಲು ನಾನು ಬಯಸುತ್ತೇನೆ ”ಎಂದು ಅವರು ವಿವರಿಸುತ್ತಾರೆ. “ಸಾವಯವ ಕೃಷಿಯ ಪರಿಕಲ್ಪನೆಯು ಜಗತ್ತಿನ ಮೂಲೆ ಮೂಲೆಯನ್ನು ತಲುಪಬೇಕೆಂದು ನಾನು ಬಯಸುತ್ತೇನೆ. ನಗರವಾಸಿಗಳು ರಾಸಾಯನಿಕಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಲು ಸಾವಯವ ಕೃಷಿಯನ್ನು ಅಭ್ಯಾಸ ಮಾಡಬೇಕು ಮತ್ತು ತರಕಾರಿಗಳನ್ನು ಬೆಳೆಯಬೇಕು. ಪ್ರತಿಯೊಬ್ಬ ಮನುಷ್ಯನೂ ಉತ್ತಮ ಆರೋಗ್ಯ ಹೊಂದಬೇಕು” ಎನ್ನುವ ಅವರು ಸಾವಯವ ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದು ಬಯಸುವವರಿಗೆ ಮಾರ್ಗದರ್ಶಕರಂತೆ ತೋರುತ್ತಾರೆ.