ಇತ್ತೀಚೆಗೆ ಸೆಪ್ಟಂಬರ್ 23ರಂದು ನಡೆದ ಪರಿಸರ ಸಚಿವರ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ “ ಅರ್ಬನ್ ನಕ್ಸಲರು ಮತ್ತು ರಾಜಕೀಯ ಬೆಂಬಲ ಹೊಂದಿರುವ ಅಭಿವೃದ್ಧಿ ವಿರೋಧಿ ಶಕ್ತಿಗಳು ಸರ್ದಾರ್ ಸರೋವರ ಅಣೆಕಟ್ಟಿನ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ಕಾರಣಕ್ಕೆ ಇದರ ವಿರುದ್ಧ ಹೋರಾಟಗಳನ್ನು ನಡೆಸುವ ಮೂಲಕ ನಿರ್ಮಾಣಕ್ಕೆ ಅಡಚಣೆ ಉಂಟುಮಾಡಿದ್ದರು. ಈ ವಿಳಂಬದಿಂದ ಅಪಾರ ಮೊತ್ತದ ಹಣ ಪೋಲಾಗಿದೆ. ಈಗ ಅಣೆಕಟ್ಟು ಪೂರ್ಣವಾಗಿದ್ದು, ಈ ಆರೋಪಗಳು ಎಷ್ಟು ಪೊಳ್ಳು ಎನ್ನುವುದು ಜಗಜ್ಜಾಹೀರಾಗಿದೆ ” ಎಂದು ಹೇಳಿದ್ದರು. ಮುಂದುವರೆಯುತ್ತಾ ಪ್ರಧಾನಿ ನರೇಂದ್ರ ಮೋದಿ “ ಅರ್ಬನ್ ನಕ್ಸಲರು ಇನ್ನೂ ಸಕ್ರಿಯವಾಗಿದ್ದಾರೆ. ಜೀವನದ ಮತ್ತು ವ್ಯಾಪಾರ ವಹಿವಾಟಿನ ಸರಳೀಕರಣಕ್ಕಾಗಿ ಕೈಗೊಂಡಿರುವ ಈ ಯೋಜನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಿ. ಪರಿಸರ ನೆಪದಲ್ಲಿ ಇಂತಹ ಯೋಜನೆಗಳನ್ನು ಅನಗತ್ಯವಾಗಿ ಸ್ಥಗಿತಗೊಳಿಸಕೂಡದು. ಇಂತಹವರ ಪಿತೂರಿಗಳನ್ನು ನಾವು ಸಮಚಿತ್ತದೊಂದಿಗೆ ಎದುರಿಸಬೇಕು ” ಎಂದು ಹೇಳಿದ್ದಾರೆ.
ಗೌರವಾನ್ವಿತ ಪ್ರಧಾನಿಗಳ ಮಾತುಗಳನ್ನು ಪರಿಶೀಲಿಸುವ ಮುನ್ನ ಸರ್ದಾರ್ ಸರೋವರ್ ಯೋಜನೆಯನ್ನು (ಎಸ್ಎಸ್ಪಿ)ಅರ್ಥಮಾಡಿಕೊಳ್ಳುವುದು ಉಚಿತ. ಸರ್ದಾರ್ ಅಣೆಕಟ್ಟು ಎಸ್ಎಸ್ಪಿ ಯೋಜನೆಯ ಒಂದು ಭಾಗವಾಗಿದೆ. ಈ ಸಮಗ್ರ ಯೋಜನೆಯಡಿ ಒಟ್ಟು 3000 ಸಣ್ಣ ಪ್ರಮಾಣದ, 135 ಮಧ್ಯಮ ಪ್ರಮಾಣದ ಮತ್ತು 30 ಪ್ರಮುಖ ಅಣೆಕಟ್ಟು-ಕಾಲುವೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, 1980ರಲ್ಲಿ ಆರಂಭವಾದ ಈ ಯೋಜನೆಯು ನರ್ಮದಾ ಕಣಿವೆಯ 1315 ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಬೃಹತ್ ಪ್ರಮಾಣದ ಅಣೆಕಟ್ಟುಗಳ ನಿರ್ಮಾಣದಲ್ಲಿ ಇದೇ ಕೊನೆಯದಾಗಿದೆ. ಎಸ್ಎಸ್ಪಿ ಯೋಜನೆ ವಿಳಂಬವಾಗಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಈ ವಿಳಂಬಕ್ಕೆ “ ಅರ್ಬನ್ ನಕ್ಸಲರು ಮತ್ತು ಅಭಿವೃದ್ಧಿ ವಿರೋಧಿಗಳು” ಕಾರಣ ಎನ್ನುವುದು ನ್ಯಾಯಯುತವಾದ ಆರೋಪ ಎನಿಸುವುದಿಲ್ಲ, ಇದು ವಾಸ್ತವಿಕತೆಗೆ ದೂರವಾದ ಆರೋಪ ಎಂದು ಹೇಳಬಹುದು. ಪ್ರಧಾನಮಂತ್ರಿಗಳಿಗೆ ಎಲ್ಲ ವಿವರಗಳೂ ತಿಳಿದಿರಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ ಆದರೆ ಅವರ ಸಿಬ್ಬಂದಿ ವರ್ಗವು ಸಮರ್ಪಕವಾದ ಮಾಹಿತಿಯನ್ನು ನೀಡದಿರುವುದನ್ನು ಗಮನಿಸಿದಾಗ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಿಂದಿನ ಸರ್ಕಾರಗಳನ್ನು ಮತ್ತು ಪ್ರಧಾನ ಮಂತ್ರಿಗಳನ್ನು ಕತ್ತಲಲ್ಲಿಸಿರಿವೆ.
ನರ್ಮದಾ ಕಣಿವೆಯ ಯೋಜನೆಗಳು
ಈ ಯೋಜನೆಗಳಡಿ ನರ್ಮದಾ ಸಾಗರ್ ಮತ್ತು ಸರ್ದಾರ್ ಸರೋವರ್ ಹೆಸರಿನ ಎರಡು ಬೃಹತ್ ಅಣೆಕಟ್ಟುಗಳ ನಿರ್ಮಾಣವಾಗಲಿದ್ದು 2 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುವುದಾಗಿಯೂ, 20 ದಶಲಕ್ಷ ಜನಕ್ಕೆ ನೀರಿನ ಸೌಕರ್ಯ ಒದಗಿಸುವುದಾಗಿಯೂ ಹೇಳಲಾಗಿದ್ದು, 30 ದಶಲಕ್ಷ ಜನಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ, ಒಂದು ದಶಲಕ್ಷ ಜನರಿಗೆ ಉದ್ಯೋಗ ದೊರೆಯುತ್ತದೆ ಹಾಗೂ ಕೃಷಿ ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಯೋಜನೆಗಳು ಪೂರ್ಣಗೊಂಡ ನಂತರ ಈ ಉದ್ದೇಶಿತ ಗುರಿಯನ್ನು ಎಷ್ಟರಮಟ್ಟಿಗೆ ತಲುಪಲಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಗಮನ ನೀಡದಿರುವುದನ್ನು ಗಮನಿಸಿದಾಗ, ಯೋಜನೆಯ ಅವಾಸ್ತವಿಕ ವೆಚ್ಚ ಮತ್ತು ಪ್ರಯೋಜನಗಳ ಧ್ಯೇಯವನ್ನು ಸಾಧಿಸಲು ಸಾಧ್ಯವಾಗದಿರುವುದು ಸ್ಪಷ್ಟವಾಗುತ್ತದೆ.
ಯೋಜನೆಯನ್ನು ರೂಪಿಸುವ ಹಂತಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಯಿಂದ 37 ಸಾವಿರ ಹೆಕ್ಟೇರ್ ಅರಣ್ಯ ಮತ್ತು ಕೃಷಿ ಭೂಮಿಯ ಮುಳುಗಡೆಯಾಗುತ್ತದೆ, ಲಕ್ಷಾಂತರ ಅರಣ್ಯ ವಾಸಿಗಳ, ಕೃಷಿ ಆಧರಿಸಿದ ಆದಿವಾಸಿಗಳ ಮತ್ತು ಗ್ರಾಮೀಣ ಕುಟುಂಬಗಳ ಜೀವನಕ್ಕೆ ಸಂಚಕಾರ ತರುತ್ತದೆ ಎಂಬ ವಾಸ್ತವಾಂಶಗಳ ಬಗ್ಗೆ ಮೌನ ವಹಿಸಿದ್ದವು. ಅಷ್ಟೇ ಅಲ್ಲದೆ ನರ್ಮದಾ ಕಣಿವೆಯ ಜನತೆಯ ಮತ್ತು ಭಾರತೀಯರ ಅನೇಕ ಧಾರ್ಮಿಕ-ಸಾಂಸ್ಕೃತಿಕ ಮಹತ್ವವುಳ್ಳ ಸ್ಥಾವರಗಳು, ಹಿಂದೂ ದೇವಾಲಯಗಳು ಮುಳುಗಡೆಯಾಗುತ್ತವೆ ಎಂಬ ಅಂಶವನ್ನೂ ಮರೆಮಾಚಲಾಗಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಶ್ವಬ್ಯಾಂಕಿನಿಂದ ಸಾಲ ಪಡೆದು ಬೃಹತ್ ಯೋಜನೆಗಳಿಗೆ ಚಾಲ್ತಿ ನೀಡುವ ಭರದಲ್ಲಿ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆಯೂ ಯೋಚಿಸಲು ಮುಂದಾಗಲಿಲ್ಲ.
ಉದಾಹರಣೆಗೆ ಅಣೆಕಟ್ಟು ಯೋಜನೆಗಳ ಆರ್ಥಿಕ ಸುಗಮತೆಯನ್ನು ನಿರ್ಧರಿಸಲು ಮೂಲತಃ ಒಟ್ಟು ವಾರ್ಷಿಕ ಹೊರಹರಿವಿನ ಅಂದಾಜು ಮಾಡಲಾಗುತ್ತದೆ. ನರ್ಮದಾ ಅಣೆಕಟ್ಟಿನ ವಾರ್ಷಿಕ ಹೊರಹರಿವು ಯೋಜನೆಯ ವಿನ್ಯಾಸದಲ್ಲಿ ನಮೂದಿಸಿದ ಮಟ್ಟಕ್ಕಿಂತಲೂ ಶೇ 17 ರಷ್ಟು ಕಡಿಮೆ ಇದೆ ಎಂದು ಬ್ರಾಡ್ಫೋರ್ಡ್ ಮೋರ್ಸ್ ಸಮಿತಿ ಹೇಳಿದೆ. ಅಂದರೆ ಯೋಜಿತ ಅನುಕೂಲತೆಗಳನ್ನು ಸಾಧಿಸಲಾಗುವುದಿಲ್ಲ ಹಾಗೂ ವೆಚ್ಚ-ಅನುಕೂಲತೆಗಳ ಲೆಕ್ಕಾಚಾರಗಳು ತಪ್ಪಾಗಿದ್ದವು ಎಂದು ಸ್ಪಷ್ಟವಾಗುತ್ತದೆ. ಮರುವಸತಿ, ಪರಿಸರದ ಮೇಲಿನ ಪರಿಣಾಮ, ಯೋಜನೆಗಳ ಆರ್ಥಿಕ ಕಾರ್ಯಸಾಧ್ಯತೆಯ ಬಗ್ಗೆ 1992ರಲ್ಲಿ ಸಲ್ಲಿಸಲಾದ ಬ್ರಾಡ್ಫೋರ್ಡ್ ಮೋರ್ಸ್ ಸಮಿತಿಯ ವರದಿಯನ್ನು ಆಧರಿಸಿ ವಿಶ್ವಬ್ಯಾಂಕ್ 1993ರಲ್ಲಿ 450 ದಶಲಕ್ಷ ಡಾಲರ್ ಪಾಲುದಾರಿಕೆಯ ಹಣವನ್ನು ಹಿಂಪಡೆದುಕೊಂಡಿತ್ತು. ಹೀಗಾಗಿ ಒಂದು ವರ್ಗದ ಜನತೆಗೆ ಭವಿಷ್ಯದಲ್ಲಿ ಉಂಟಾಗಬಹುದಾದ ಅನುಕೂಲತೆಗಳಿಗಾಗಿ, ಯೋಜನೆಯಿಂದ ಪೀಡಿತರಾದ ಮತ್ತೊಂದು ವರ್ಗದ ಅಸಂಖ್ಯಾತ ಜನತೆ ಭೂ ಸ್ವಾಧೀನ ಪ್ರಕ್ರಿಯೆಯಿಂದ ಸ್ಥಳಾಂತರಗೊಳ್ಳಬೇಕಾಯಿತು. ಇದು ಸಾಮಾಜಿಕವಾಗಿಯೂ ಸಾಕಷ್ಟು ಪ್ರಕ್ಷುಬ್ಧತೆಯನ್ನು ಉಂಟುಮಾಡಿತ್ತು.
ಸಾಮಾನ್ಯವಾಗಿ ತಿಳಿದಿರುವಂತೆ ಕಾನೂನು ಬಾಹಿರವಾದ ಮತ್ತು ಅಕ್ರಮ ಹಣಕಾಸು ಸೌಲಭ್ಯಗಳು ಕಟ್ಟಡ ನಿರ್ಮಾಣ ಉದ್ಯಮಕ್ಕೆ ಮತ್ತು ಆಡಳಿತ ನಿರ್ವಹಣಕಾರ-ಇಂಜಿನಿಯರ್-, ಗುತ್ತಿಗೆದಾರ-ರಾಜಕಾರಣಿಗಳ ಕೂಟಕ್ಕೆ ರವಾನೆಯಾದವು. ಈ ಯೋಜನೆಯ ವ್ಯಾಪ್ತಿಗೊಳಪಡುವ ಮೂರು ರಾಜ್ಯಗಳ ಪೈಕಿ ಅತಿ ಹೆಚ್ಚಿನ ಮುಳುಗಡೆ ಮತ್ತು ಜನಸಂಖ್ಯೆಯ ಸ್ಥಳಾಂತರವು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಸಂಭವಿಸಿತ್ತು. ಈ ರಾಜ್ಯಗಳೇ ಅತಿ ಹೆಚ್ಚು ಸಂಕಷ್ಟಗಳನ್ನೂ ಹೊರಬೇಕಾಯಿತು. ನರ್ಮದಾ ಯೋಜನೆಗಳ ಪ್ರಧಾನ ಫಲಾನುಭವಿ ರಾಜ್ಯ ಗುಜರಾತ್ ಆಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ, 1993ರಲ್ಲಿ ಗುಜರಾತ್ ಸರ್ಕಾರ ಹೊರಡಿಸಿದ 450 ದಶಲಕ್ಷ ಡಾಲರ್ ಮೌಲ್ಯದ ಸರ್ದಾರ್ ಸರೋವರ್ ಬಾಂಡ್ಗಳೇ ಸಾಕ್ಷಿ. ವಿಶ್ವಬ್ಯಾಂಕ್ ಹಿಂಪಡೆದುಕೊಂಡ ಹಣಕಾಸು ನೆರವಿನ ಕೊರತೆಯನ್ನು ಇದು ಪೂರೈಸಿತ್ತು.
ಯೋಜನೆಯಿಂದ ಬಾಧಿತವಾದ ಕುಟುಂಬಗಳು
1980ರ ಆರಂಭದಲ್ಲಿ ಯೋಜನೆ ಪೀಡಿತ ಕುಟುಂಬಗಳು 3000ಕ್ಕೂ ಹೆಚ್ಚು ಯೋಜನೆಗಳ ಪರಿಣಾಮವನ್ನು ಗ್ರಹಿಸಲಾರಂಭಿಸಿದ್ದವು. ಈ ಯೋಜನೆಗಳ ಸಾಮಾಜಿಕ, ಹಣಕಾಸಿನ ಮತ್ತು ತಾಂತ್ರಿಕ ಮೂಲ ನೆಲೆಗಳನ್ನು ಪ್ರಶ್ನಿಸಲಾರಂಭಿಸಿದ್ದೇ ಅಲ್ಲದೆ ಇಡೀ ಯೋಜನೆಯ ಕಾರ್ಯಸಾಧ್ಯತೆಯನ್ನು ಪ್ರಶ್ನಿಸಲಾರಂಭಿಸಿದ್ದರು. ಆದರೆ ಈ ಆಕ್ಷೇಪಗಳಿಗೆ ಸರ್ಕಾರಗಳು, ಜನಪ್ರತಿನಿಧಿಗಳು ಕಿವಿಗೊಡದೆ ಇದ್ದುದರಿಂದ ಜನರು ಸ್ವತಃ ಸಂಘಟಿತರಾಗಿ ಪ್ರತಿಭಟಿಸಿದ್ದೇ ಅಲ್ಲದೆ ಜಿಲ್ಲಾ ನ್ಯಾಯಾಲಯಗಳ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದರು. ಕಾರ್ಪೋರೇಟ್ ಒಡೆತನದ ಮುಖ್ಯವಾಹಿನಿಯ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಈ ಹೋರಾಟ ಮತ್ತು ಪ್ರತಿಭಟನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನೂ ನೀಡಲಿಲ್ಲ. ಬದಲಾಗಿ ಈ ಪ್ರತಿರೋಧಗಳನ್ನು ಅಭಿವೃದ್ಧಿ ವಿರೋಧಿ ಎಂದು ಬಣ್ಣಿಸಲಾರಂಭಿಸಿದ್ದವು. ತದನಂತರ ಈ ಕುಟುಂಬಗಳ ವಾದ ಪ್ರತಿವಾದಗಳನ್ನು ಆಲಿಸಿದ ನಂತರ, ಅವರ ಕಾಳಜಿ ಮತ್ತು ಶಾಂತಿಯುತ ಪ್ರತಿಭಟನೆಗಳಿಗೆ ಮನ್ನಣೆ ನೀಡಿ ಸರ್ಕಾರವು ಕುಂದುಕೊರತೆ ನಿವಾರಣಾ ಪ್ರಾಧಿಕಾರವನ್ನು ಸ್ಥಾಪಿಸಿತ್ತು.
ಮಾನವ ಸ್ಥಳಾಂತರದ ಸಾಮಾಜಿಕ ಹಾನಿ, ವನ್ಯಜೀವಿ ಸಂಪತ್ತು ಮತ್ತು ಅರಣ್ಯ ನಾಶದಿಂದ ಉಂಟಾಗುವ ಪರಿಸರ ಹಾಗೂ ಜೀವವೈವಿಧ್ಯತೆಯ ಹಾನಿ ಇವೆಲ್ಲವನ್ನೂ ಕಡೆಗಣಿಸಿ ಮಾಡಲಾದ ವೆಚ್ಚ-ಅನುಕೂಲತೆಗಳನ್ನು ಅಧರಿಸಿ ಈ ಯೋಜನೆಗಳನ್ನು ಸಮರ್ಥಿಸಿಕೊಳ್ಳಲಾಯಿತು. ಅಭಿವೃದ್ಧಿಯ ವೆಚ್ಚಗಳನ್ನು ಸರಿದೂಗಿಸಲು, ಅಣೆಕಟ್ಟು ಮತ್ತು ಕಾಲುವೆ ನಿರ್ಮಾಣಕ್ಕಾಗಿ, ಲಕ್ಷಾಂತರ ಜನರು ತಮ್ಮ ಜೀವನೋಪಾಯವನ್ನೇ ತ್ಯಾಗಮಾಡುವ ಮೂಲಕ ಭೂಮಿ ಮತ್ತು ಜೀವನೋಪಾಯದ ಮಾರ್ಗಗಳನ್ನು ಕಳೆದುಕೊಳ್ಳಬೇಕಾಯಿತು. ಕಾನೂನು ಪ್ರಕಾರವಾಗಿ ಈ ಜನತೆಗೆ ಪರಿಹಾರವನ್ನು ಒದಗಿಸಲಾಯಿತು. ಆದರೆ 1894ರ ಭೂ ಸ್ವಾಧೀನ ಕಾಯ್ದೆ ಆ ಸಂದರ್ಭದಲ್ಲಿ ಜಾರಿಯಲ್ಲಿದ್ದುದರಿಂದ ಭೂಮಿಯನ್ನು ಹೊಂದಿರುವವರು ಮತ್ತು ಪಕ್ಕಾ ನಿರ್ಮಿತ ಆಸ್ತಿಯನ್ನು ಹೊಂದಿರುವವರು ಮಾತ್ರ ಪರಿಹಾರಕ್ಕೆ ಅರ್ಹತೆಯನ್ನು ಪಡೆದಿದ್ದರು. ಯೋಜನೆಯಿಂದ ಪೀಡಿತರಾದ ಅರಣ್ಯ ವಾಸಿಗಳು, ಭೂರಹಿತ ಕೃಷಿ ಗ್ರಾಮೀಣ ಕೃಷಿಕರು ಮತ್ತು ಕೃಷಿ ಆಧಾರಿತ ಕುಶಲಕರ್ಮಿಗಳ ಪೈಕಿ ಪರಿಹಾರ ಪಡೆದವರ ಸಂಖ್ಯೆ ನಗಣ್ಯವಾಗಿತ್ತು. ಹಾಗಾಗಿ ಯೋಜನಾ ಪೀಡಿತ ಕುಟುಂಬಗಳ ಪೈಕಿ ಬಹುಸಂಖ್ಯೆಯ ಜನರು ಅಭಿವೃದ್ಧಿಗೆ ಬಲಿಯಾದ ಸಂತ್ರಸ್ತರಾಗಿದ್ದರು, ಇವರಿಗೆ ಯಾವುದೇ ಪರಿಹಾರಗಳೂ ದೊರೆಯಲಿಲ್ಲ. ಇವರಲ್ಲಿ ಬಹುತೇಕ ಜನರು ನಗರಗಳ ಸ್ಲಂಗಳಲ್ಲಿ ಜೀವನ ನಿರ್ವಹಿಸಬೇಕಾಯಿತು, ತತ್ಪರಿಣಾಮ ಸ್ಥಳಾಂತರ, ಉಚ್ಚಾಟನೆ ಮತ್ತು ನಿರ್ಗತಿಕತೆಯ ಸಂತ್ರಸ್ತರಾಗಿ ಉಳಿಯಬೇಕಾಯಿತು.
ಪ್ರಧಾನಿ ನರೇಂದ್ರ ಮೋದಿ ಸುಗಮ ಜೀವನದ ಬಗ್ಗೆ ಪ್ರಸ್ತಾಪಿಸುವ ಸಂದರ್ಭದಲ್ಲಿ ಇಂತಹ ಮೂರು ಪೀಳಿಗೆಯ ಸಂತ್ರಸ್ತರು ಅವರ ಗಮನದಲ್ಲಿರಲಿಲ್ಲ ಎನಿಸುತ್ತದೆ. ಅದರೆ ಈ ಜನತೆ ಅವರ ಆಳ್ವಿಕೆಯ ಅವಧಿಯಲ್ಲಿ ಒಳಗೊಳ್ಳಬೇಕಾಗಿತ್ತು. ಯೋಜನಾ ಪೀಡಿತರಲ್ಲಿ ಪರಿಹಾರ ಪಡೆದ ಅಲ್ಪಸಂಖ್ಯೆಯ ಜನರಿಗೂ ಸಹ ಪರಿಹಾರ ಪಡೆಯಲು ಸಾಕಷ್ಟು ಸಂಕಷ್ಟಗಳು ಎದುರಾಗಿದ್ದವು. ಹೆಚ್ಚು ಗಂಭೀರ ಎನ್ನಬಹುದಾದ ಸಮಸ್ಯೆಗಳೆಂದರೆ ಆಸ್ತಿ ಒಡೆತನದ ದಾಖಲೆಗಳನ್ನು ಒದಗಿಸುವುದು, ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಪರಿಹಾರಕ್ಕಾಗಿ ಹೆಸರು ನೋಂದಾಯಿಸುವುದು, ಯೋಜನಾ ಪೀಡಿತರ ವಯಸ್ಕ ಮಕ್ಕಳಿಗೆ ಪರಿಹಾರ ಪಡೆಯುವುದು ಮತ್ತು ಪುನರ್ವಸತಿಗೆ ಅಗತ್ಯವಿರುವಷ್ಟು ಪರಿಹಾರ ಮೊತ್ತವನ್ನು ಪಡೆಯದೆ ಇರುವುದು ಮೂಲ ಸಮಸ್ಯೆಗಳಾಗಿದ್ದವು. ಮುಳುಗಡೆಯಾದ ಪ್ರದೇಶಗಳ ಎಲ್ಲೆಕಟ್ಟುಗಳ ಸ್ಥಳಾಕೃತಿಯ ಸಮೀಕ್ಷೆಗಳನ್ನು ಸರ್ಕಾರಗಳು ಕೈಗೊಂಡಿದ್ದು, ಈ ಸಮೀಕ್ಷೆಗಳಲ್ಲಿ ಮೂಲತಃ ಅರಣ್ಯ ಮತ್ತು ಕೃಷಿ ಭೂಮಿಯ ವಿಸ್ತೀರ್ಣವನ್ನು ನಿಷ್ಕರ್ಷೆ ಮಾಡಲಾಗಿತ್ತು. ಜೊತೆಗೆ ಮುಳುಗಡೆಯಾಗಲಿರುವ ಗ್ರಾಮಗಳು ಮತ್ತು ಪಟ್ಟಣಗಳನ್ನು ಗುರುತಿಸಲಾಗಿತ್ತು.
ತತ್ಪರಿಣಾಮ ಮುಳುಗಡೆ ಪ್ರದೇಶದಲ್ಲಿ ಜೀವನ ನಡೆಸುತ್ತಿರುವ ಜನರ ಗಣತಿಯಲ್ಲಿ ಸಾಕಷ್ಟು ಲೋಪಗಳಿದ್ದವು. ಅಣೆಕಟ್ಟುಗಳನ್ನು ನಿರ್ಮಿಸುತ್ತಿರುವಂತೆಯೇ ಮುಳುಗಡೆಯೂ ಸಂಭವಿಸುತ್ತಿದ್ದಾಗಲೂ ಕೆಲವು ಗ್ರಾಮಗಳು ಒಣ ಪ್ರದೇಶಗಳಾಗಿ ಉಳಿದಿದ್ದರೆ ಇನ್ನು ಕೆಲವು ಜಲಾವೃತವಾಗಿದ್ದರೂ ಅದಕ್ಕೆ ಅಣೆಕಟ್ಟು ಕಾರಣವಾಗಿರಲಿಲ್ಲ. ಇದರ ಪರಿಣಾಮವಾಗಿ ಉಂಟಾದ ಗೊಂದಲ ಮತ್ತು ಯೋಜನಾ ಪೀಡಿತರ ಸಂಕಷ್ಟಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವರದಿಯಾಗಲೇ ಇಲ್ಲ. ನರ್ಮದಾ ತಾಯಿಯಿಂದ ಮಕ್ಕಳ ಮೇಲೆ ಉಂಟಾದ ಸಾಮಾಜಿಕ ದುಷ್ಪರಿಣಾಮಗಳು ನಿರ್ಲಕ್ಷಿತವಾಗಿಯೇ ಉಳಿದವು. ಏಕೆಂದರೆ ಬಹುಪಾಲು ಯೋಜನಾಪೀಡಿತ ಜನರು ಆದಿವಾಸಿಗಳಾಗಿದ್ದರು, ಗ್ರಾಮೀಣ ಜನತೆಯಾಗಿದ್ದರು. 75 ವರ್ಷಗಳ ಸ್ವಾತಂತ್ರ್ಯದ ನಂತರ ಇಂದಿಗೂ ಸಹ ಈ ಜನಸಮೂಹಗಳು ಸುಗಮ ಜೀವನದ ಪರಿಕಲ್ಪನೆಗೆ ಒಳಪಡುವುದಿಲ್ಲ.
ಆದಿವಾಸಿ ಪ್ರದೇಶಗಳಲ್ಲಿ ಭೂ ಸ್ವಾಧೀನ ಮಾಡಿಕೊಳ್ಳುವ ಮುನ್ನ ಗ್ರಾಮಸಭೆಗಳ ಅನುಮತಿಯನ್ನು ಪಡೆಯದಿರುವುದು ಪಂಚಾಯತ್ (ಅನುಸೂಚಿತ ಪ್ರದೇಶಗಳ ವಿಸ್ತರಣೆ) ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮುಜುಗರ ಉಂಟುಮಾಡುವಂತಹ ಅಂಶವಾಗಿದೆ. ಮೇಲಾಗಿ ಆಡಳಿತಾತ್ಮಕ ಅದಕ್ಷತೆ ಮತ್ತು ನಿರ್ಲಕ್ಷ್ಯವು ಚುನಾವಣೆಯ ಸಮಯದಲ್ಲಿ ರಾಜಕೀಯವಾಗಿ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಪ್ರಧಾನಿ ಮೋದಿ ಪಿತೂರಿ ಎಂಬ ಪದ ಬಳಸಿರುವುದು ಸೂಕ್ತವಾಗಿಯೇ ಇದೆ. ಆದರೆ ಇದು 1980ರಿಂದ ಈವರೆಗಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪಟ್ಟಭದ್ರ ಹಿತಾಸಕ್ತಿಳಿಗೆ ಹೆಚ್ಚು ಅನ್ವಯಿಸುತ್ತದೆ. ಹೇಗೆ ಎಂದು ನೋಡೋಣ.
ಯೋಜನಾ ಪೀಡಿತರು ಮರುವಸತಿ ಮತ್ತು ಮರುಸ್ಥಾಪನೆ ಪ್ರಕ್ರಿಯೆಯಲ್ಲಿ ಇದ್ದ ಭ್ರಷ್ಟಾಚಾರ ಮತ್ತು ದುರ್ನಿರ್ವಹಣೆಯ ಬಗ್ಗೆ ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. 2008ರಲ್ಲಿ ಉಚ್ಚ ನ್ಯಾಯಾಲಯವು ನಿವೃತ್ತ ನ್ಯಾಯಮೂರ್ತಿ ಎಸ್.ಎಸ್. ಝಾ ಅವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ, ದೂರುಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ನ್ಯಾ ಎಸ್.ಎಸ್. ಝಾ ಆಯೋಗವು ಸಲ್ಲಿಸಿದ ವರದಿಯಲ್ಲಿ ಅನೇಕ ನಕಲಿ ನೋಂದಣಿಗಳು ಕಂಡುಬಂದಿದ್ದು, ಅರ್ಹರಲ್ಲದವರಿಗೂ ಪರಿಹಾರ ನೀಡಿರುವುದನ್ನು, ಹಾಗೂ ನೈಜ ಯೋಜನಾಪೀಡಿತರನ್ನು ಕೈಬಿಟ್ಟಿರುವುದನ್ನು ಉಲ್ಲೇಖಿಸಲಾಗಿತ್ತು. ಈ ಆಯೋಗದ ವರದಿಯು 1500 ಕೋಟಿ ರೂಗಳ ವ್ಯವಸ್ಥಿತ ಭ್ರಷ್ಟಾಚಾರವನ್ನು ಹೊರಗೆಳೆದಿದ್ದೇ ಅಲ್ಲದೆ ಇದರಿಂದ ಯೋಜನಾ ಪೀಡಿತರ ಪುನರ್ವಸತಿ ಹಾಗೂ ಪುನರುಜ್ಜೀವನಕ್ಕೆ ಧಕ್ಕೆ ಉಂಟಾಗಿದೆ ಎಂದು ಹೇಳಿತ್ತು. ಈ ವರದಿಯನ್ನು ಸಾರ್ವಜನಿಕರ ಮುಂದಿಡುವಂತೆ ಯೋಜನಾ ಪೀಡಿತರು 2016ರಲ್ಲಿ ಆಗ್ರಹಿಸಿದ್ದರು. ತನ್ಮೂಲಕ ಮರುವಸತಿ ಮತ್ತು ಮರುಸ್ಥಾಪನೆ ಪ್ರಕ್ರಿಯೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಪೀಡಿತರಿಗೆ ಸಲ್ಲಬೇಕಾದ ಪರಿಹಾರವನ್ನು ನೀಡದಿರುವುದು, ಜೀವನೋಪಾಯದ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗಿರುವುದನ್ನು ಬೆಳಕಿಗೆ ತರುವಂತೆ ಒತ್ತಾಯಿಸಿದ್ದರು.
ಆದಿವಾಸಿಗಳ ಬಲವಂತದ ಉಚ್ಚಾಟನೆ
ಆದರೆ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಸಲುವಾಗಿ ಮಧ್ಯಪ್ರದೇಶ ಸರ್ಕಾರವು ನ್ಯಾ ಝಾ ಆಯೋಗದ ವರದಿಯನ್ನು ಸಾರ್ವಜನಿಕರ ಮುಂದೆ ಪ್ರಸ್ತುಪಡಿಸಲಿಲ್ಲ. ಇಂದಿಗೂ ಸಹ ಈ ವರದಿಯು ಕಡತಗಳಲ್ಲೇ ಉಳಿದಿದೆ. ಹೀಗಾಗಿ ಆಡಳಿತಾಧಿಕಾರಿಗಳು-ಇಂಜಿನಿಯರುಗಳು-ಗುತ್ತಿಗೆದಾರರು ಮತ್ತು ರಾಜಕಾರಣಿಗಳ ಕೂಟಕ್ಕೆ ಸುಗಮ ವ್ಯಾಪಾರದ ಹಾದಿ ಇಂದಿಗೂ ಸುಸ್ಥಿತಿಯಲ್ಲಿದೆ. ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಯೋಜನಾಪೀಡಿತರ ಪುನರ್ವಸತಿಗಾಗಿ ಭೂಮಿಗೆ ಬದಲಾಗಿ ಭೂಮಿಯನ್ನೇ ನೀಡುವಂತೆ ಆದೇಶಿಸಿದಾಗ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು, ಈ ಉದ್ದೇಶಕ್ಕಾಗಿ ಭೂಮಿ ಲಭ್ಯವಿಲ್ಲ ಎಂದು ನ್ಯಾಯಾಲಯದ ಮುಂದೆಯೇ ಹೇಳಿದ್ದವು. ಆದರೆ ಇದೇ ಸರ್ಕಾರಗಳಿಗೆ ಕೈಗಾರಿಕೆಗಳ ಬಳಕೆಗಾಗಿ ಭೂಮಿ ಬ್ಯಾಂಕುಗಳನ್ನು ಸ್ಥಾಪಿಸಲು ಭೂಮಿ ಲಭ್ಯವಿತ್ತು. ವಿಶೇಷ ಆರ್ಥಿಕ ವಲಯಗಳಿಗೆ ಕೃಷಿ ಭೂಮಿಯನ್ನು ಒದಗಿಸಲು ಲಭ್ಯವಾಗಿತ್ತು. ಇದು ಆಳ್ವಿಕೆಯ ಮೇಲೆ ಸಾಮಾನ್ಯ ಜನತೆಯ ಹಿತಾಸಕ್ತಿಗಳನ್ನು ಬಲಿಕೊಟ್ಟು ಕಾರ್ಪೋರೇಟ್ ಪ್ರಭಾವ ಇರುವುದನ್ನು ನಿಚ್ಚಳವಾಗಿ ನಿರೂಪಿಸುತ್ತದೆ.
ಮಧ್ಯಪ್ರದೇಶದಲ್ಲಿ ಪೊಲೀಸ್ ಮತ್ತು ಅಡಳಿತ ವ್ಯವಸ್ಥೆಯು ಮುಳುಗಡೆ ಪ್ರದೇಶದಲ್ಲಿನ ಆದಿವಾಸಿಗಳನ್ನು ಬಲವಂತದಿಂದ ಉಚ್ಚಾಟನೆ ಮಾಡಿದ್ದವು. ಅವರ ಹ್ಯಾಂಡ್ಪಂಪ್ಗಳನ್ನು ಬಂದ್ ಮಾಡಿದ್ದರು. ಮನೆಗಳನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳು ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸರ್ಕಾರ ಹೊಂದಿರುವ ಧೋರಣೆಯನ್ನು ಬಿಂಬಿಸುತ್ತದೆ. ಈ ಅನ್ಯಾಯಗಳು, ಶಾಂತಿಯುತ ಪ್ರತಿಭಟನಕಾರರ ಮೇಲೆ ಪೊಲೀಸರ ದಾಳಿ ಮತ್ತು ಅಭಿವೃದ್ಧಿ ಪ್ರೇರಿತ ಸ್ವಯಂ ಪ್ರೇರಿತವಲ್ಲದ ಸ್ಥಳಾಂತರದ ಅಭಿವೃದ್ಧಿಯನ್ನು ತಡೆಗಟ್ಟಲು ಸಾಂವಿಧಾನಿಕ ಸಂಸ್ಥೆಗಳ ವೈಫಲ್ಯಗಳು , ಇವುಗಳ ಹೊರತಾಗಿಯೂ ಯೋಜನಾ ಪೀಡಿತರು ಅಹಿಂಸಾ ಮಾರ್ಗದ ಮೂಲಕವೇ ತಮ್ಮ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಎಸ್ಎಸ್ಪಿ ಕುರಿತು ಹೇಳುವುದಾದರೆ, ಈ ಅಣೆಕಟ್ಟಿನ ಗರಿಷ್ಟ ಎತ್ತರ 138.68 ಮೀಟರ್ ಇರುವಂತೆ ನಿರ್ಮಿಸಲಾಗಿದೆ. ಪೊಲೀಸರು ಬಲಾತ್ಕಾರದಿಂದ ಯೋಜನಾಪೀಡಿತರನ್ನು ಗ್ರಾಮಗಳಿಂದ ಉಚ್ಚಾಟಿಸಿದ್ದಾರೆ. ಪ್ರತಿಹಂತದಲ್ಲೂ ನೀಡಬೇಕಾದ ಮರುವಸತಿ ಮತ್ತು ಮರುಸ್ಥಾಪನೆಯ ಪರಿಹಾರವನ್ನೂ, ಆರಂಭಿಕ ಹಂತಗಳಲ್ಲೂ ಸಹ, ನೀಡಲಾಗಿಲ್ಲ. ಸರ್ಕಾರವು ಸಲ್ಲಿಸಿದ್ದ ಮರುವಸತಿ ಮತ್ತು ಮರುಸ್ಥಾಪನೆ ಕ್ರಿಯಾ ವರದಿಯನ್ನಾಧರಿಸಿ ಸುಪ್ರೀಂಕೋರ್ಟ್ ಅಣೆಕಟ್ಟಿನ ಎತ್ತರವನ್ನು 121 ಮೀಟರ್ಗೆ ಎತ್ತರಿಸಲು ಅನುಮತಿ ನೀಡಿದ್ದಾಗ, ಯೋಜನಾಪೀಡಿತರು 2006ರ ಆರಂಭದಲ್ಲಿ ನವದೆಹಲಿಯ ಜಲಸಂಪನ್ಮೂಲ ಸಚಿವಾಲಯದ ಕಚೇರಿಯ ಮುಂದೆ ಶಾಂತಿಯುತ ಪ್ರತಿಭಟನೆಯನ್ನು ನಡೆಸಿದ್ದರು. ಸರ್ಕಾರದ ಕ್ರಿಯಾ ವರದಿಯಲ್ಲಿರುವುದು ಸುಳ್ಳು ಎಂದು ಪ್ರತಿಪಾದಿಸಿದ್ದರು. ಇದರ ಪರಿಣಾಮ ಪ್ರಧಾನಿ ಮನಮೋಹನ್ ಸಿಂಗ್ ಕೇಂದ್ರ ಜಲಸಂಪನ್ಮೂಲ ಸಚಿವ (ಪ್ರೊ ಸೈಫುದ್ದಿನ್ ಸೋಝ್) ಅವರ ನೇತೃತ್ವದಲ್ಲಿ ಸಚಿವರ ತಂಡವನ್ನು ನೇಮಿಸಿದ್ದರು. ಈ ಸಮಿತಿಯು ಸಾಮಾಜಿಕ ನ್ಯಾಯದ ಸಚಿವರನ್ನೂ ಒಳಗೊಂಡಿದ್ದು ಯೋಜನಾ ಪೀಡಿತರು ಎತ್ತಿರುವ ಆರೋಪಗಳ ಮತ್ತು ಆಕ್ಷೇಪಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ ಆದೇಶಿಸಿದ್ದರು.
ಈ ತಂಡವು ಸಂತ್ರಸ್ತರನ್ನು ಭೇಟಿ ಮಾಡಿದ ನಂತರ ಪ್ರೊ ಸೈಫುದ್ದಿನ್ ಸೋಝ್ ಅವರು ಪುನರ್ವಸತಿಯು ಅಪೂರ್ಣವಾಗಿರುವುದನ್ನು ಪ್ರಾಮಾಣಿಕವಾಗಿ ವರದಿಮಾಡಿದ್ದೇ ಅಲ್ಲದೆ, ಬಹುಮಟ್ಟಿಗೆ ಪರಿಹಾರ ಕಾರ್ಯಗಳು ಕಡತಗಳಲ್ಲೇ ಉಳಿದಿರುವುದನ್ನೂ ಉಲ್ಲೇಖಿಸಿ, ಅಣೆಕಟ್ಟಿನ ಎತ್ತರವನ್ನು 121 ಮೀಟರ್ಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಅಕಾಲಿಕ ಎಂದು ತಿರಸ್ಕರಿಸಿದ್ದರು. ಈ ಬೆಳವಣಿಗೆಯ ನಂತರವೂ ನಿರ್ಮಾಣ ಕಾರ್ಯವು ಮರುವಸತಿ ಮತ್ತು ಮರುಸ್ಥಾಪನೆ ಪ್ರಕ್ರಿಯೆಯ ಹೊರತಾಗಿಯೇ ಮುಂದುವರೆದಿತ್ತು. ಅಂದಿನ ದಿನಗಳಲ್ಲೂ ಸಹ ಸಾಮಾಜಿಕ ನ್ಯಾಯದ ವಿರುದ್ಧ ವ್ಯಾಪಾರವನ್ನು ಸುಗಮಗೊಳಿಸುವ ಪ್ರಯತ್ನಗಳು ಮೇಲುಗೈ ಸಾಧಿಸಿದ್ದವು.
ಅಣೆಕಟ್ಟಿನ ನಿರ್ಮಾಣದಲ್ಲಿ ಎತ್ತರವನ್ನು ಹಂತಹಂತವಾಗಿ ಹೆಚ್ಚಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದು, ಮುಳುಗಡೆಯಾದ ಪ್ರದೇಶಗಳ ಮರುವಸತಿ ಮತ್ತು ಮರುಸ್ಥಾಪನೆ ಪ್ರಕ್ರಿಯೆ ಪೂರ್ತಿಯಾದ ನಂತರವೇ ಕಾಮಗಾರಿ ನಡೆಸುವಂತೆಯೂ ಆದೇಶಿಸಿತ್ತು. ಆ ವೇಳೆಗೆ 122 ಮೀಟರ್ ಎತ್ತರಕ್ಕೆ ನಿರ್ಮಾಣ ಪೂರ್ತಿಯಾಗಿತ್ತು. ಇದರ ನಂತರದಲ್ಲಿ 122 ಮೀಟರ್ಗಳಿಂದ 138.68 ಮೀಟರ್ಗಳಿಗೆ ಎತ್ತರಿಸುವವರೆಗೂ ಪ್ರತಿ ಹಂತದಲ್ಲೂ ಯೋಜನಾಪೀಡಿತರ ಮರುವಸತಿ ಮತ್ತು ಮರುಸ್ಥಾಪನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಕೋರ್ಟ್ ಆದೇಶಿಸಿತ್ತು. ಮರುವಸತಿ ಮತ್ತು ಮರುಸ್ಥಾಪನೆ ಪ್ರಕ್ರಿಯೆಯು ಸುಲಭವಾದ್ದದು ಎಂದು ಯಾರೂ ಹೇಳುವುದಿಲ್ಲ. ಸಹಜವಾಗಿಯೇ ಸರ್ಕಾರಗಳಿಗೆ ನಿರ್ಮಾಣದ ಪ್ರತಿ ಹಂತದಲ್ಲೂ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯಾವಕಾಶ ಬೇಕಾಗುತ್ತದೆ. ಈ ಪ್ರಕ್ರಿಯೆಯಿಂದ ವಂಚಿತರಾದ ಯೋಜನಾ ಪೀಡಿತರು ಸುಪ್ರೀಂಕೋರ್ಟ್ ಮೊರೆ ಹೊಕ್ಕಾಗ ಅವರ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್, ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಕ್ರಿಯಾ ವರದಿಗಳು ದೋಷಪೂರಿತವಾಗಿವೆ ಎಂದು ಆರೋಪಿಸಿತ್ತು
ತದನಂತರ ಎಸ್ಎಸ್ಪಿ ಯೋಜನೆಯ ನಿರ್ಮಾಣದಲ್ಲಿ ಆದಂತಹ ವಿಳಂಬವನ್ನು ಅಲ್ಲಗಳೆಯಲಾಗುವುದಿಲ್ಲ ಹಾಗೆಯೇ ನಿರ್ಮಾಣ ವೆಚ್ಚವು ಹೆಚ್ಚಾಗಿರುವುದನ್ನೂ ಅಲ್ಲಗಳೆಯಲಾಗದು. ಮರುವಸತಿ ಮತ್ತು ಮರುಸ್ಥಾಪನೆಯನ್ನು ಪರಿಗಣಿಸದೆಯೇ ನಿರ್ಮಾಣ ಕಾರ್ಯವನ್ನು ಮುಂದುವರೆಸುವ ಮೂಲಕ ಆಡಳಿತಾಧಿಕಾರಿಗಳು-ಇಂಜಿನಿಯರುಗಳು-ಗುತ್ತಿಗೆದಾರರು ಮತ್ತು ರಾಜಕಾರಣಿಗಳ ಕೂಟವು, ಯೋಜನಾ ಪೀಡಿತರಿಗೆ ಪದೇ ಪದೇ ನ್ಯಾಯಾಲಯದ ಮೊರೆ ಹೋಗುವಂತಹ ಸನ್ನಿವೇಶಗಳನ್ನು ಸೃಷ್ಟಿಸಿತ್ತು. ಯೋಜನೆಗಳಿಂದ ಸ್ಥಳಾಂತರಗೊಂಡ ಜನರ ಮರುವಸತಿಯ ವಿಚಾರವನ್ನು ಸರ್ಕಾರಗಳು ನ್ಯಾಯಾಂಗದ ಆದೇಶದಂತೆ ಸೂಕ್ತ ಆಡಳಿತ ಕ್ರಮಗಳನ್ನು ಅನುಸರಿಸುವುದರಿಂದ ವಿಳಂಬವೂ ಹೆಚ್ಚಾಗಿತ್ತು. ಈ ಎಲ್ಲ ವಿವರಗಳನ್ನು ಗಮನಿಸಿದ ನಂತರವೂ ನರ್ಮದಾ ಯೋಜನೆಯ ನಿರ್ಮಾಣದಲ್ಲಿ ಮತ್ತು ಎಸ್ಎಸ್ಪಿ ಯೋಜನೆಯನ್ನೂ ಸೇರಿದಂತೆ ಎಲ್ಲ ಯೋಜನೆಗಳಲ್ಲೂ ವಿಳಂಬವಾಗಿರುವುದಕ್ಕೆ ಆಡಳಿತಾಧಿಕಾರಿ-ಇಂಜಿನಿಯರ್-ಗುತ್ತಿಗೆದಾರ-ರಾಜಕಾರಣಿಗಳ ಕೂಟವೇ ಇದಕ್ಕೆ ಕಾರಣ ಎಂದು ತಿಳಿಯಲು ರಾಕೆಟ್ ವಿಜ್ಞಾನದ ಜ್ಞಾನ ಅಗತ್ಯವಿಲ್ಲ.
ಚುನಾವಣೆಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುವ ಈ ಕೂಟವೇ, ಈ ವಿಳಂಬಕ್ಕೆ ಯೋಜನಾ ಪೀಡಿತರೇ ಕಾರಣ ಎಂದು ಆರೋಪಿಸುತ್ತಿದೆ. ಯೋಜನಾ ಪೀಡಿತರು ಮಾಡಿದ ಅಪರಾಧ ಎಂದರೆ ಶಾಂತಿಯುತವಾಗಿ ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿರುವುದು ಮತ್ತು ಸ್ಥಳಾಂತರಕ್ಕಾಗಿ ಸೂಕ್ತ ಪರಿಹಾರವನ್ನು ಭಾಗಶಃ ಪಡೆದಿರುವುದೇ ಆಗಿದೆ. ಲಕ್ಷಾಂತರ ಆಸ್ತಿ ಹೀನರು, ಅರ್ಹತೆಯನ್ನು ಹೊಂದಿರದ ಆದಿವಾಸಿ ಮತ್ತಿತರ ಯೋಜನಾಪೀಡಿತ ಕುಟುಂಬಗಳ ಬಗ್ಗೆ ಇನ್ನೇನೂ ಹೇಳಬೇಕಿಲ್ಲ. ಏಕೆಂದರೆ ದಶಕಗಳಿಂದಲೂ, ಇಂದಿನವರೆಗೂ ರಾಜಕಾರಣಿಗಳಿಗೆ ಇವರ ಅವಶ್ಯಕತೆ ಕಂಡುಬಂದಿಲ್ಲ. ತಮ್ಮ ಭರವಸೆ ಆಶ್ವಾಸನೆಗಳ ಮೂಲಕ, ಉಚಿತ ಕೊಡುಗೆಗಳ ಮೂಲಕ ಈ ಜನರ ಮತಗಳನ್ನು ಗಳಿಸುವುದೊಂದೇ ಅವರ ಉದ್ದೇಶವಾಗಿರುತ್ತದೆ. ಕಳೆದ ಹಲವು ದಶಕಗಳಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸಮಾನ ಅಂಶವೊಂದನ್ನು ಗಮನಿಸಿದರೆ, ಅದು ಸಾಂವಿಧಾನಿಕ ಮೌಲ್ಯಗಳ ನಿರ್ಲಕ್ಷ್ಯ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಇರುವ ಅಸಡ್ಡೆಯೇ ಆಗಿದೆ. ಅಂತಿಮವಾಗಿ ಹೇಳುವುದಾದರೆ, ಸೂಕ್ತ ಯೋಜನೆಯಿಲ್ಲದೆ ಅನುಷ್ಟಾನಗೊಳಿಸಿದ ಎಸ್ಎಸ್ಪಿ ಯೋಜನೆಯ ಅಪಾರ ವೆಚ್ಚ ಮತ್ತು ವಿಳಂಬಕ್ಕೆ, ಅದರಿಂದ ಉಂಟಾಗಿರುವ ಸಾಮಾಜಿಕ ಹಾನಿ ಮತ್ತು ಪರಿಸರ ಹಾನಿಗೆ, ಅಭಿವೃದ್ಧಿ ವಿರೋಧಿಗಳು ಮತ್ತು ಅರ್ಬನ್ ನಕ್ಸಲರೇ ಕಾರಣ ಎಂದು ಭಾವಿಸುವುದು ಚುನಾವಣೆಗಳನ್ನು ಎದುರಿಸಲಿರುವ ರಾಜ್ಯದಲ್ಲಿ ರಾಜಕೀಯವಾಗಿ ಲಾಭದಾಯಕವೇ ಆಗುತ್ತದೆ.