
ಸಂತೋಷ್ ಲಾಡ್ ಫೌಂಡೇಶನ್ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಲೇ ಬರುತ್ತಿದೆ. ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರ ಮಾರ್ಗದರ್ಶನದಲ್ಲಿ ಫೌಂಡೇಶನ್ ಹಲವಾರು ಮಾನವೀಯ ಕೆಲಸಗಳನ್ನು ಹಮ್ಮಿಕೊಳ್ಳುತ್ತಿದೆ.
ಫೌಂಡೇಶನ್‌ಗೆ ನೆರವು ಅರಸಿ ಬರುವವರಿಗೆ, ಸಹಾಯ ಕೋರಿದವರಿಗೆ, ಸೌಲಭ್ಯ ಬಯಸಿದವರನ್ನು ಬರಿಗೈಲಿ ಕಳಿಸಿದ ಉದಾಹರಣೆಗಳೇ ಇಲ್ಲ. ಫೌಂಡೇಶನ್‌ನ ಸಹಾಯದ ವ್ಯಾಪ್ತಿ ಕೇವಲ ಧಾರವಾಡಕ್ಕೆ ಮೀಸಲಾಗಿಲ್ಲ. ಬದಲಾಗಿ ಅದು ರಾಜ್ಯದಾದ್ಯಂತ ವಿಸ್ತಾರವಾಗಿದೆ. ಬೇರೆ ಬೇರೆ ಜಿಲ್ಲೆಗಳ ಜನರು ಸಂತೋಷ್ ಲಾಡ್‌ಗೆ ಮನವಿ ಸಲ್ಲಿಸಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಅಂಧರಿಗೆ ಎಐ ಆಧಾರಿತ ಕನ್ನಡಕ ವಿತರಣೆ
ಕೃತಕ ಬುದ್ಧಿಮತ್ತೆ ಅರ್ಥಾತ್ ಎ ಐ ಇತ್ತೀಚೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದೆ. ಎಐ ಎಲ್ಲಾ ಕ್ಷೇತ್ರಗಳಿಗೆ, ರಂಗಗಳಿಗೆ ಲಗ್ಗೆ ಇಟ್ಟಿದೆ. ಈ ತಂತ್ರಜ್ಞಾನವನ್ನೇ ಸಂತೋಷ್ ಲಾಡ್ ಫೌಂಡೇಶನ್ ಈಗ ಬಳಕೆ ಮಾಡುತ್ತಿದೆ. ಈ ನಿಟ್ಟಿನಲ್ಲಿ, ಅಂಧರಿಗೆ ಎ ಐ ಆಧಾರಿತ ಕನ್ನಡಕಗಳನ್ನು ಫೌಂಡೇಶನ್ ವಿತರಿಸುತ್ತಿದೆ. ಫೌಂಡೇಶನ್ ಮೂಲಕ ಕಣ್ಣಿನ ಉಚಿತ ತಪಾಸಣೆ ಹಾಗೂ ಕನ್ನಡಕಗಳನ್ನು ವಿತರಿಸುವ ಕಾರ್ಯಗಳನ್ನು ಈ ಹಿಂದೆಯೂ ಹಲವಾರು ಬಾರಿ ಮಾಡಿದೆ. ಇದೀಗ ಇದರ ಮತ್ತೊಂದು ಹೆಜ್ಜೆಯಾಗಿ ಅಂಧರಿಗೆ ಎಐ ಆಧಾರಿತ ಕನ್ನಡಕಗಳನ್ನು ವಿತರಿಸಿ ಅವರ ಬಾಳಲ್ಲಿ ಹೊಸ ಬೆಳಕನ್ನು ಮೂಡಿಸಿದೆ. ಈ ಸೌಲಭ್ಯ ಪಡೆದಿರುವ ಅಂಧರು ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಚಿವ ಸಂತೋಷ್ ಲಾಡ್ ಅವರ ದೂರದೃಷ್ಟಿ ಮತ್ತು ಕಳಕಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
38 ಅಂಧರಿಗೆ ಕನ್ನಡಕ ವಿತರಿಸಿದ ಸಂತೋಷ್ ಲಾಡ್
ಜನಪ್ರಿಯ ಸುದ್ದಿವಾಹಿನಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಇತ್ತೀಚೆಗೆ 38 ಅಂಧರಿಗೆ ಎ ಐ ಆಧಾರಿತ ಕನ್ನಡಕಗಳನ್ನು ವಿತರಿಸಲಾಗಿದೆ. ವಾಹಿನಿಯ ಬೆಂಗಳೂರಿನ ಕಚೇರಿಯಲ್ಲಿ ಸಚಿವ ಸಂತೋಷ್ ಲಾಡ್ ಹಾಗೂ ಪಬ್ಲಿಕ್ ಟಿ ವಿ ಮುಖ್ಯಸ್ಥರಾದ ಶ್ರೀ ರಂಗನಾಥ್ ಅವರು ಈ ಕನ್ನಡಕಗಳನ್ನು ವಿತರಣೆ ಮಾಡಿದ್ದಾರೆ.

ಅಮೆರಿಕದ ತಂತ್ರಜ್ಞಾನ
ಸ್ಮಾರ್ಟ್ ವಿಷನ್ ಗ್ಲಾಸ್ ಎಂದು ಕರೆಯಲಾಗುವ ಈ ಕನ್ನಡಕದಲ್ಲಿ ಬಳಕೆ ಮಾಡಿರುವುದು ಅಮೆರಿಕದ ತಂತ್ರಜ್ಞಾನ. ಇದರಲ್ಲಿ ಸೆನ್ಸಾರ್ ಗಳಿರುತ್ತವೆ. ಹಾಗೂ ವಾಯ್ಸ್ ಕಮಾಂಡಿಂಗ್ ಹಾಗೂ ಒಂದು ಲೆನ್ಸ್ ಇರುತ್ತದೆ. ಈ ಕನ್ನಡಕಕ್ಕೊಂದು ಅಪ್ಲಿಕೇಶನ್ ಇದ್ದು ಅದನ್ನು ಬಳಕೆದಾರರು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದು ಪ್ರತಿಯೊಂದನ್ನು ಗುರುತಿಸಿ ವಾಯ್ಸ್ ಕಮಾಂಡ್‌ನಲ್ಲಿ ಅಂಧರಿಗೆ ತಿಳಿಸುತ್ತದೆ. ಅಂಡ್ರ್ಯಾಯ್ಡ್ ಅಥವಾ ಐಫೋನ್ ಮೊಬೈಲ್ ಇರಬೇಕು.
ಪ್ರಾಯೋಗಿಕ ವಿತರಣೆ
ಸದ್ಯಕ್ಕೆ ಮಾಡಿರುವುದು ಪ್ರಾಯೋಗಿಕ ವಿತರಣೆ. ಇದು ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ. ಅಂಧರಿಗೆ ಎಷ್ಟರಮಟ್ಟಿಗೆ ಸಹಾಯ ಮಾಡುತ್ತದೆ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ. ಆನಂತರವೇ ಮುಂದೆ ಇದೇ ರೀತಿಯ ಕನ್ನಡಕ ವಿತರಣೆ ಕುರಿತು ಚಿಂತಿಸಲಾಗುತ್ತದೆ. ಈಗಾಗಲೇ ಕನ್ನಡಕ ಪಡೆದವರಲ್ಲಿ ಹೆಚ್ಚಿನವರು ಉತ್ತಮವಾಗಿದೆ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಕನ್ನಡಕದ ವಿಶೇಷತೆ ಏನು
ಈ ಕನ್ನಡಕ ಧರಿಸಿದರೆ ಸುತ್ತಮುತ್ತ ವಸ್ತುಗಳಿವೆಯೇ, ಜನರಿದ್ದಾರೆಯೇ ಎಂಬುದನ್ನು ತಿಳಿಸುತ್ತದೆ. ವಾಹನಗಳು ತಿರುಗಾಡುತ್ತಿದ್ದರೆ ತಿಳಿಸುತ್ತದೆ. ರಸ್ತೆ ದಾಟಲು ನೆರವು ನೀಡುತ್ತದೆ. ಎದುರು ನಿಂತು ಮಾತನಾಡುತ್ತಿರುವ ವ್ಯಕ್ತಿಯ ಮುಖದ ಭಾವನೆಗಳು ಏನು ಎಂಬ ಮಾಹಿತಿ ನೀಡುತ್ತದೆ. ಮೊಬೈಲ್‌ಗೆ ಕರೆ ಬಂದಿದ್ದರೆ ಯಾರು ಕರೆ ಮಾಡಿರುವುದು ಎಂಬುದನ್ನು ತಿಳಿಸುತ್ತದೆ.
ಹಣ ಎಣಿಸಲು ಸಹಾಯ
ಅಂಧರ ಪ್ರಮುಖ ಸಮಸ್ಯೆಗಳಲ್ಲಿ ಹಣ ಎಣಿಸುವುದು ಒಂದು. ಅವರಿಗೆ ನೋಟು ಕಾಣದ ಕಾರಣ ವ್ಯವಹಾರದ ವೇಳೆ ತೊಂದರೆ ಅನುಭವಿಸುತ್ತಾರೆ. ಯಾವ ನೋಟು ಎಂಬುದನ್ನು ನಿಖರವಾಗಿ ಗುರುತಿಸಿ ತಿಳಿಸುತ್ತದೆ. ಎಷ್ಟರ ನೋಟು ಕೊಟ್ಟೆ, ವ್ಯಾಪಾರದ ನಂತರ ವ್ಯಾಪಾರಿಗಳು ಎಷ್ಟು ಚಿಲ್ಲರೆ ನೀಡಿದರು ಎಂಬುದನ್ನು ಸರಿಯಾಗಿ ತಿಳಿಯದೇ ಅಂಧರು ಪರದಾಡುತ್ತಾರೆ. ಆದರೆ ಈ ಎಐ ಕನ್ನಡಕ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ.

ಫಲಕ ಓದಲು ಸಹಾಯ
ಈ ಕನ್ನಡಕ ಧರಿಸಿದರೆ ಎದುರು ಇರುವ ಸೂಚನಾ ಫಲಕವನ್ನು ಓದಿ ತಿಳಿಸುತ್ತದೆ. ಪುಸ್ತಕ ಹಿಡಿದುಕೊಂಡರೆ ಓದಿ ಹೇಳುತ್ತದೆ. ಬೇರೆ ಭಾಷೆಯಲ್ಲಿರುವ ಸೂಚನಾ ಫಲಕಗಳನ್ನು ಸ್ಥಳೀಯ ಭಾಷೆಯಲ್ಲಿ ತಿಳಿಸುತ್ತದೆ. ಒಮ್ಮೆ ಪರಿಚಯವಾದ ವ್ಯಕ್ತಿ ಮತ್ತೊಮ್ಮೆ ಎದುರಾದರೆ ಅವರನ್ನು ಗುರುತಿಸುತ್ತದೆ. ಎಟಿಎಂನಲ್ಲಿ ಹಣ ಪಡೆಯಲು ಸಹಾಯ ಮಾಡುತ್ತದೆ.
ಈ ಆಲೋಚನೆ ಬಂದಿದ್ದು ಹೇಗೆ
ಎಐ ಕನ್ನಡಕದ ಆಲೋಚನೆ ಬಂದಿರುವುದು ಸಹ ವಿಭಿನ್ನವಾಗಿದೆ. ಇಂತಹ ಒಂದು ಕನ್ನಡಕವನ್ನು ಸಿದ್ಧಪಡಿಸಿ ಅಂಧರಿಗೆ ನೀಡಬಹುದು ಎಂದು ಬೆಂಗಳೂರಿನ ವ್ಯಕ್ತಿಯೊಬ್ಬರು ಸಂತೋಷ್ ಲಾಡ್ ಫೌಂಡೇಶನ್ ಗಮನಕ್ಕೆ ತಂದರು. ನಂತರ ಈ ಕನ್ನಡಕಗಳನ್ನು ರೂಪಿಸಿ ಅಂಧರಿಗೆ ನೀಡಲಾಯಿತು.

ಮಾಮೂಲು ಕನ್ನಡಕದಂತೆಯೇ
ಈ ಎಐ ಕನ್ನಡಕವು ದೃಷ್ಟಿ ದೋಷ ಇರುವ ಸಾಮಾನ್ಯರು ಧರಿಸುವ ಕನ್ನಡಕದಂತೆಯೇ ಇದೆ. ಇದರ ತೂಕ ಸಹ ಹೆಚ್ಚು ಇಲ್ಲ. ಆದರೆ ಇದನ್ನು ಮೊಬೈಲ್‌ನಂತೆಯೇ ಚಾರ್ಜ್ ಮಾಡಿಕೊಳ್ಳಬೇಕು. ಬ್ಲೂ ಟೂತ್ ಸಂಪರ್ಕ ಮಾಡಿರಬೇಕು. ಬಳಕೆಯಲ್ಲಿ ಇಲ್ಲದೇ ಇರುವಾಗ ಆಫ್ ಮಾಡಿ ಇಡಬೇಕು. ಕೃತಕ ಕಣ್ಣುಗಳ ರೀತಿಯೇ ಇದು ಕೆಲಸ ಮಾಡುತ್ತದೆ. ಈ ಕನ್ನಡಕ ಯಾರಿಗೆ ನೋಂದಣಿಯಾಗಿರುತ್ತದೊ ಅವರೇ ಬಳಕೆ ಮಾಡಬೇಕು ಇತರರಿಗೆ ವರ್ಗಾವಣೆ ಮಾಡುವಂತಿಲ್ಲ.
ಒಟ್ಟಾರೆ ಅಂಧರಿಗೆ ಸ್ವಾವಲಂಬಿಯಾಗಿ ಬದುಕಲು ಈ ಕನ್ನಡಕ ಸಹಾಯ ಮಾಡಲಿದೆ. ಸ್ನೇಹಿತನಾಗಿ, ಮಾರ್ಗದರ್ಶಿಯಾಗಿ ನೆರವಿಗೆ ಬರುತ್ತದೆ. ಕನ್ನಡಕ ಬಳಸಿದವರ ಅಭಿಪ್ರಾಯಗಳು.

ಇದೊಂದು ಪುಣ್ಯದ ಕೆಲಸ. ಹೊರ ಹೋಗುವಾಗ, ರಸ್ತೆ ದಾಟುವಾಗ ಸಾಕಷ್ಟು ತೊಂದರೆಯಾಗುತ್ತಿತ್ತು. ಈಗ ಇದಕ್ಕೆಲ್ಲ ಸಂತೋಷ್ ಲಾಡ್ ಫೌಂಡೇಶನ್ ಪರಿಹಾರ ಕೊಟ್ಟಿದೆ. ಸಚಿವ ಲಾಡ್ ಅವರ ಸಹಕಾರವನ್ನು ನಾವು ಎಂದೆಂದೂ ಮರೆಯುವುದಿಲ್ಲ ಎಂದು ಕನ್ನಡಕ ಬಳಸಿದ ಬೆಂಗಳೂರಿನ ಹೆಗ್ಗನಹಳ್ಳಿಯ ತ್ರಿಶಕ್ತಿ ಚಾರಿಟಬಲ್ ಟ್ರಸ್ಟ್‌ನಲ್ಲಿರುವ ಅಂಧರೊಬ್ಬರು ತಿಳಿಸಿದ್ದಾರೆ.
ಈ ಕನ್ನಡಕ ಪಡೆದು ತುಂಬಾ ಖುಷಿ ಆಗ್ತಿದೆ. ಅಂಧರು ಹೀಗೂ ಓದಬಹುದಾ ಎಂದು ತಿಳಿಸಿಕೊಟ್ಟಿದ್ದಾರೆ. ತುಂಬಾ ಯೂಸ್ ಆಗಿದೆ. ನಾನು ಸಾಕಷ್ಟು ಕಾದಂಬರಿ ಓದುತ್ತೇನೆ, ಹೊಸ ಭಾಷೆ ಕಲಿಯುತ್ತೇನೆ. ಇದಕ್ಕೆ ಸ್ಮಾರ್ಟ್ ವಿಷನ್ ಕನ್ನಡಕ ಸಹಾಯ ಮಾಡಿದೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ.









