ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಕೊಂಚ ರಿಲೀಫ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ಕ್ರಮವಾಗಿ 5 ರೂ. ಮತ್ತು 10 ರೂ.ನಷ್ಟು ಕಡಿತಗೊಳಿಸಿದೆ. ಇದನ್ನು ಬಿಜೆಪಿಯ ಪ್ರಮುಖ ನಾಯಕರು ದೀಪಾವಳಿ ಹಬ್ಬಕ್ಕೆ ದೇಶದ ಜನರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿರುವ ಗಿಫ್ಟ್ ಎಂದು ಸಂಭ್ರಮಾಚರಣೆ ಮಾಡಿದ್ದಾರೆ. ಇದರ ಬೆನಲ್ಲೇ ಶಿವಸೇನಾ ಪಕ್ಷದ ಸಂಸದ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೇಶದ ಜನರಿಗೆ ಹೊರೆಯಾಗಿರುವ ಇಂಧನ ಬೆಲೆಯನ್ನು 100ರೂ.ಗೆ ಏರದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಅಂತಾ ಹೇಳಿದ್ದಾರೆ. ದೇಶದಲ್ಲಿ ಕೆಲ ದಿನಗಳಿಂದ ನಿಂತರವಾಗಿ ತೈಲಬೆಲೆ ಏರಿಕೆಯಾಗುತ್ತಿದ್ದು, ಪೆಟ್ರೋಲ್ ಬೆಲೆ 100 ರೂ.ಗಿಂತಲೂ ಅಧಿಕವಾಗಿದೆ.
ಅಗತ್ಯ ವಸ್ತುಗಳ ಜೊತೆಗೆ ಪೆಟ್ರೋಲ್-ಡೀಸೆಲ್ ಬೆಲೆ ಗಗನಮುಖಿಯಾಗಿದ್ದರಿಂದ ದೇಶದ ಜನರು ಪರದಾಡುವಂತಾಗಿದೆ. ಹೀಗಾಗಿ ಕೇಂದ್ರದ ವಿರುದ್ಧ ಸಂಜಯ್ ರಾವತ್ ಹರಿಹಾಯ್ದಿದ್ದಾರೆ. ಪೆಟ್ರೋಲ್ ಬೆಲೆಯಲ್ಲಿ 5 ರೂ. ಕಡಿತ ಮಾಡಿರುವುದರಿಂದ ಯಾವುದೇ ಉದ್ದೇಶ ಸಾಧಿಸಿದಂತಲ್ಲ. ಇದನ್ನು ಕನಿಷ್ಠ 25ಕ್ಕೆ ರೂ.ಗೆ, ತದನಂತರ 50 ರೂ.ಗೆ ಇಳಿಸಬೇಕು ಅಂತಾ ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನಡೆದ ಕೆಲವು ಉಪಚುನಾವಣೆಯಲ್ಲಿ ಜನರು ಬಿಜೆಪಿ(BJP)ಯನ್ನು ಸೋಲಿಸಿದ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ 5 ರೂ. ಕಡಿತ ಮಾಡಿದೆ. ಇದನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಅಂತಾ ಹೇಳಿದ್ದಾರೆ.


