ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ, ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಕಾರ್ಯಕ್ರಮದಲ್ಲಿ, ಮೊದಲ ಅತಿಥಿಯಾಗಿ ಭಾಗಿಯಾಗಿದ್ರು. ಕಾರ್ಯಕ್ರಮದ ಎಪಿಸೋಡ್‌ಗಳು ಕಳೆದ ವಾರವಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಅಭಿಮಾನಿಗಳು ಹಾಗೂ ಕಿರುತೆರೆ ವೀಕ್ಷಕರು ರಮ್ಯಾ ಬದುಕು, ಅವರು ನಡೆದುಬಂದ ಹಾದಿಯ ಬಗ್ಗೆ ತಿಳಿದುಕೊಳ್ಳೋಕೆ ಕಾತುರದಿಂದ ಕಾಯ್ತಿದ್ರು.

ಆದ್ರೆ ಎಪಿಸೋಡ್ ಟೆಲಿಕಾಸ್ಟ್ ಆದ್ಮೇಲೆ ಕಿರುತೆರೆಯ ಕೆಲ ವೀಕ್ಷಕರಿಗೆ ಬೇಸರವಾಗಿದ್ದಂತೂ ನಿಜ. ಕಾರಣ.. ರಮ್ಯಾ ಕಾರ್ಯಕ್ರಮದಲ್ಲಿ ಕನ್ನಡಕ್ಕಿಂತಲೂ ಜಾಸ್ತಿ ಇಂಗ್ಲೀಷ್‌ನಲ್ಲಿಯೇ ಮಾತನಾಡಿದ್ದು. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪದ್ಮಾವತಿಯನ್ನ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ರು. ʻಇದೇನು ಕನ್ನಡ ಕಾರ್ಯಕ್ರಮನಾ..? ಇಂಗ್ಲೀಷ್ ಕಾರ್ಯಕ್ರಮನಾ?.. ʻಇದು ವೀಕೆಂಡ್ ವಿತ್ ರಮೇಶ್ ಅಲ್ಲ.. ವೀಕೆಂಡ್ ವಿತ್ ಇಂಗ್ಲೀಷ್ʼ ಅಂತ ರಮ್ಯಾರನ್ನ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ರು. ಅಷ್ಟೇ ಅಲ್ಲ.. ರಶ್ಮಿಕಾ ಮಂದಣ್ಣನಂತೆಯೇ ರಮ್ಯಾ. ರಶ್ಮಿಕಾ ತತ್ಸಮ ಆದ್ರೆ, ರಮ್ಯಾ ತದ್ಭವ ಅಂತಲೂ ರಮ್ಯಾ ಅವರ ಕಾಲೆಳೆದಿದ್ರು.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಆರಂಭಕ್ಕೂ ಮೊದಲು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಯೂಟ್ಯೂಬರ್ ಡಾ.ಬ್ರೋ ಅವರನ್ನ ಶೋಗೆ ಕರೆಸೋಕೆ ಆಗಲ್ಲ ಎಂದಿದ್ರು.. ಈ ಬಗ್ಗೆ ಪ್ರಶ್ನೆ ಕೇಳಿದ್ದ ಪತ್ರಕರ್ತನಿಗೆ ಡಾ.ಬ್ರೋ ಯಾರು ಅಂತ ನಿಮಗೆ ಗೊತ್ತು. ನನಿಗ್ ಗೊತ್ತು.. ನಿಮ್ಮ ಅಜ್ಜಿ, ಅಮ್ಮನಿಗೆ ಗೊತ್ತಿಲ್ಲ ಅಂತ ರಾಘವೇಂದ್ರ ಹುಣಸೂರು ಹೇಳಿದ್ರು. ರಮ್ಯಾ ಎಪಿಸೋಡ್ ನೋಡಿದ್ಮೇಲೆ ʼನಮ್ಮ ಅಮ್ಮ, ಅಜ್ಜಿಗೆ ಇಂಗ್ಲೀಷ್ ಬರಲ್ಲ.. ಯಾವಾಗ ಶೋ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡ್ತೀರಾ ಹೇಳಿʼ ಅಂತಲೂ ನೆಟ್ಟಿಗರು ವ್ಯಂಗ್ಯವಾಡಿದ್ರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದನ್ನ ನೋಡಿ ಖುದ್ದು ಪದ್ಮಾವತಿಯೇ ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೀಮ್ ಒಂದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ʻಕಾರ್ಯಕ್ರಮದ ಅತಿಥಿಗಳಲ್ಲಿ ಬಹುತೇಕರು ಕನ್ನಡಿಗರಾಗಿದ್ದರು. ಅವರಿಗೆ ಹಾಗೂ ಮತ್ತೆಲ್ಲರಿಗೂ ಅರ್ಥವಾಗಲು ಇಂಗ್ಲೀಷ್‌ನಲ್ಲಿ ಮಾತ್ನಾಡಿದೆ ಅಷ್ಟೇ.. ಮುಂದಿನ ಬಾರಿ ಎಲ್ಲಾ ಮುದ್ದಿನ ಅಜ್ಜಿಯಂದಿರಿಗಾಗಿ ಕನ್ನಡದಲ್ಲೇ ಮಾತ್ನಾಡ್ತೀನಿ. ನಾವೆಲ್ಲರೂ ಪ್ರೀತಿ ಮತ್ತೆ ದಯೆಯಿಂದ ಭಾಷೆಯನ್ನ ಮಾತನಾಡೋಣ.. ಹಂಚೋಣʼ ಅಂತ ರಮ್ಯಾ ಹೇಳಿದ್ದಾರೆ. ಸದ್ಯ ರಮ್ಯಾ ಅವರ ಈ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ
