ಕಳೆದ 7 ತಿಂಗಳ ಶಾಂತಿಯುತ ರೈತ ಚಳವಳಿಯನ್ನು ಕೆಣಕುವ ಸಂಚು ಈಗ ದೇಶದ ಮುಂದೆ ಬಹಿರಂಗವಾಗಿದೆ. ಎಸ್ ಸತ್ನಾಮ್ ಸಿಂಗ್ ಪನ್ನು ನೇತೃತ್ವದ ದೀಪ್ ಸಿಧು ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯಂತಹ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳ ಜೊತೆಗೆ ಶಾಮೀಲಾಗಿ ಕೇಂದ್ರ ಸರ್ಕಾರವು ಈ ನ್ಯಾಯಯುತ ರೈತ ಹೋರಾಟವನ್ನು ಹಿಂಸಾತ್ಮಕಗೊಳಿಸಿತು. ಕೆಂಪು ಕೋಟೆ ಮತ್ತು ದೆಹಲಿಯ ಇತರ ಭಾಗಗಳಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೂ ನಮಗೂ ಸಂಬಂಧವಿಲ್ಲ ಎಂದು ನಾವು ಮತ್ತೆ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ದೇಶದ ಮುಂದೆ ರೈತ ಹೋರಾಟವನ್ನು ಬೇರೆಯದೇ ರೀತಿಯಲ್ಲಿ ತೋರಿಸಲು ಸರ್ಕಾರ ಪ್ರಯತ್ನ ಮಾಡಿತು. ವಾಸ್ತವವಾಗಿ ರೈತರ ಮೆರವಣಿಗೆ ಶಾಂತಿಯುತವಾಗಿತ್ತು ಮತ್ತು ಸರಿಯಾದ ಮಾರ್ಗದಲ್ಲಿತ್ತು. ರಾಷ್ಟ್ರೀಯ ಚಿನ್ಹೆಗಳಿಗಾದ ಅವಮಾನವನ್ನು ರೈತರಾದ ನಾವು ಬಲವಾಗಿ ಖಂಡಿಸುತ್ತೇವೆ. ಹಾಗೆಂದು ರೈತರ ಚಳವಳಿಯನ್ನು ‘ಹಿಂಸಾತ್ಮಕ’ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮೊಂದಿಗೆ ಸಂಬಂಧವಿಲ್ಲದ ಕೆಲವು ಸಮಾಜ ವಿರೋಧಿ ವ್ಯಕ್ತಿ ಮತ್ತು ಸಂಘಟನೆಗಳು ರೈತರ ಹೆಸರಿನಲ್ಲಿ ಹಿಂಸಾಚಾರವನ್ನು ಮಾಡಿವೆ. ನಮ್ಮ ನೇತೃತ್ವದಲ್ಲಿ ಹೊರಟಿದ್ದ ಎಲ್ಲಾ ಗಡಿಗಳಲ್ಲಿನ ರೈತರು ತಮ್ಮ ಮೆರವಣಿಗೆಗಳನ್ನು ನಿನ್ನೆ ಶಾಂತಿಯುತ ರೀತಿಯಲ್ಲಿ ಪೂರ್ಣಗೊಳಿಸಿ ತಮ್ಮ ಮೂಲ ಸ್ಥಳವನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಹಿಂಸೆಯಿಲ್ಲದೆ ತಲುಪಿದ್ದಾರೆ.
ರೈತ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪೊಲೀಸ್ ಮತ್ತು ಇತರ ಏಜೆನ್ಸಿಗಳನ್ನು ಬಳಸಿಕೊಂಡು ಈ ರೈತ ಹೋರಾಟವನ್ನು ಮಣಿಸಲು ಕೇಂದ್ರ ಸರ್ಕಾರ ಮಾಡಿದ ಪ್ರಯತ್ನಗಳು ಈಗಾಗಲೇ ಬಹಿರಂಗಗೊಂಡಿದೆ. ಮತ್ತು ಇನ್ನಷ್ಟೂ ಬಟಾಬಯಲಾಗುತ್ತದೆ. ಹಿಂಸಾಚಾರಕ್ಕೂ ನಿನ್ನೆ ಬಂಧಿಸಲ್ಪಟ್ಟ ಹಲವು ರೈತರಿಗೂ ಸಂಬಂಧವೇ ಇಲ್ಲ. ಹಾಗಾಗಿ ಬಂಧಿಸಲ್ಪಟ್ಟಿರುವ ಎಲ್ಲ ನಿಜವಾದ ರೈತ ಪ್ರತಿಭಟನಾಕಾರರು ಮತ್ತು ಬೆಂಬಲಿಗರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ರೈತರ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗಿಯಾಗಿದ್ದ ಟ್ರಾಕ್ಟರುಗಳು ಮತ್ತು ಇತರ ವಾಹನಗಳನ್ನು ಹಾನಿ ಮಾಡಲು ಪೊಲೀಸರು ಪ್ರಯತ್ನಿಸಿರುವುದನ್ನು ಕೂಡಾ ನಾವು ಖಂಡಿಸುತ್ತೇವೆ.
ರಾಷ್ಟ್ರೀಯ ಚಿಹ್ನೆಗಳನ್ನು ಕೀಳಾಗಿ ಮತ್ತು ಅಪವಿತ್ರಗೊಳಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸುತ್ತದೆ. ರೈತರು ಈ ದೇಶದ ದೊಡ್ಡ ರಾಷ್ಟ್ರೀಯವಾದಿಗಳು. ರೈತರೇ ಈ ರಾಷ್ಟ್ರದ ನಿಜವಾದ ರಕ್ಷಕರು. ರೈತರು ಮತ್ತು ರಾಷ್ಟ್ರೀಯವಾದ ಬೇರೆ ಬೇರೆ ಅಲ್ಲ ಎಂಬುದನ್ನು ಮತ್ತೆ ಮತ್ತೆ ಹೇಳಲು ಬಯಸುತ್ತೇವೆ.
ಆದರೂ ನಿನ್ನೆ ನಡೆದ ಕೆಲವು ವಿಷಾದನೀಯ ಘಟನೆಗಳಿಗೆ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡ ಸಂಯುಕ್ತ ಕಿಸಾನ್ ಮೋರ್ಚ ನೈತಿಕ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತದೆ. ತನ್ನದಲ್ಲದ ಹಿಂಸಾಚಾರದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚವು ಫೆಬ್ರವರಿ 1 ರಂದು ನಿಗದಿಯಾಗಿದ್ದ ಸಂಸತ್ ಛಲೋ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದೆ. ಬದಲಾಗಿ, ಜನವರಿ 30 ರಂದು, ಗಾಂಧೀಜಿಯವರ ಹುತಾತ್ಮ ದಿನದಂದು, ಶಾಂತಿ ಮತ್ತು ಅಹಿಂಸೆಯನ್ನು ಸಾರಲು ದೇಶಾದ್ಯಂತ ರೈತರು ಒಂದು ದಿನದ ಉಪವಾಸ ಆಚರಿಸಲಿದ್ದಾರೆ.
ದೀಪ್ ಸಿಧು ಅವರಂತಹ ಕುತ್ಸಿತ ವ್ಯಕ್ತಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚ್ ಸಾರ್ವಜನಿಕರಿಗೆ ಮನವಿ ಮಾಡುತ್ತದೆ.
ದೆಹಲಿಯಲ್ಲಿ ಮಾತ್ರವಲ್ಲದೆ ರೈತ ಸಂಘಟನೆಗಳ ರೈತ ಗಣರಾಜ್ಯೋತ್ಸವ ಪೆರೇಡ್ ಅನ್ನು ಅನೇಕ ರಾಜ್ಯಗಳಲ್ಲಿ ನಡೆಸಲಾಯಿತು. ಬಿಹಾರ, ಪಾಟ್ನಾ ಸೇರಿದಂತೆ ದೇಶದ ಅನೇಕ ಸ್ಥಳಗಳಲ್ಲಿ ರೈತ ಗಣರಾಜ್ಯೋತ್ಸವವನ್ನು ರೈತರು ಉತ್ಸಾಹದಿಂದ ಆಚರಿಸಿದರು. ಮಧ್ಯಪ್ರದೇಶದಲ್ಲಂತೂ ರೈತರು ಈ ಅದ್ಭುತ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದ್ದನ್ನು ದೇಶದ ರೈತರು ಗಮನಿಸಿದ್ದಾರೆ. ದೆಹಲಿಯಲ್ಲಿ ನಡೆದ ರೈತ ಮೆರವಣಿಗೆಯಲ್ಲಿ ಎನ್ಎಪಿಎಂನ ಕಾರ್ಮಿಕರು ಸೇರಿಕೊಂಡರು. ಮುಂಬೈನ ಆಜಾದ್ ಮೈದಾನದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಅಭೂತಪೂರ್ವ ರೈತರ ಪೆರೇಡ್ನಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು. ಇವೆಲ್ಲವೂ ಸಂಪೂರ್ಣವಾಗಿ ಶಾಂತಿಯುತವಾಗಿತ್ತು. ರೈತರ ಗಣರಾಜ್ಯ ಮೆರವಣಿಗೆಯಲ್ಲಿ ತಮಿಳುನಾಡು, ಕೇರಳ, ಹೈದರಾಬಾದ್, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ಛತ್ತೀಸ್ ಘಡ್ ಮತ್ತು ಉತ್ತರ ಪ್ರದೇಶದ ರೈತರು ಭಾಗವಹಿಸಿದ್ದರು. ಮುಂದಿನ ದಿನಗಳಲ್ಲಿ ಸಂಘಟಿತ ರೈತರ ಇತರ ಯೋಜನೆಗಳು ಮತ್ತು ಚಟುವಟಿಕೆಗಳನ್ನು ಪ್ರಕಟಿಸಲಾಗುವುದು.
ನಮ್ಮ ರೈತ ಚಳುವಳಿ ಎಂದೆಂದಿಗೂ ಶಾಂತಿಯುತವಾಗಿ ಮುಂದುವರೆಯುತ್ತದೆ ಎಂದು ನಾವು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇವೆ. ದೇಶದ ರೈತರು ಬಹಳ ಆತ್ಮವಿಶ್ವಾಸಮತ್ತು ಶಾಂತಿಯುತವಾಗಿ ಈಗಿನ ಕೇಂದ್ರ ಸರ್ಕಾರದೊಂದಿಗೆ ತಮ್ಮ ಭಿನ್ನಾಭಿಪ್ರಾಯವನ್ನು ಮಂಡಿಸುತ್ತಾರೆ. ಜನವರಿ 26 ರಂದು ನಡೆದ ರೈತರ ಪೆರೇಡ್ ಗೆ ದೇಶದ ನಾಗರಿಕರು ವ್ಯಕ್ತಪಡಿಸಿದ ಪ್ರೀತಿಗೆ ರೈತ ಸಮುದಾಯ ಅಭಾರಿಯಾಗಿದೆ ಎಂದು ಹೇಳಿದೆ.
ಅನುವಾದ : ನವೀನ್ ಸೂರಿಂಜೆ