ಚಂಡೀಗಡ: ನಟಿ ಹಾಗೂ ನೂತನ ಸಂಸದೆ ಕಂಗನಾ ರಣಾವತ್ ಗೆ ಮಹಿಳಾ ಸೆಕ್ಯುರಿಟಿ ಗಾರ್ಡ್ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ.
ಹಿಮಾಚಲದ ಮಂಡಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದಿರುವ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಅವರಿಗೆ ಕೇಂದ್ರ ಕೈಗಾರಿಕಾ ರಕ್ಷಣಾ ದಳದ (ಸಿಐಎಸ್ಎಫ್) ಮಹಿಳಾ ಸೆಕ್ಯುರಿಟಿ ಗಾರ್ಡ್ ಕಪಾಳಮೋಕ್ಷ ಮಾಡಿದ್ದಾರೆ.
ಅವರು ಚಂಡೀಗಡದಿಂದ ದೆಹಲಿಗೆ ಯುಕೆ707 ಸಂಖ್ಯೆಯ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ಅಲ್ಲಿಂದ ಬೋರ್ಡಿಂಗ್ ಪಾಯಿಂಟ್ ಗೆ ತೆರಳಿದ್ದರು. ಅಲ್ಲಿ ಸಿಐಎಸ್ಎಫ್ ನ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಯೊಬ್ಬರು ಬಂದು ಏನೇನೋ ಪ್ರಶ್ನೆಗಳನ್ನು ಕೇಳಿದ್ದಾರೆ. ಆಗ ಕಂಗಣಾ ಹಾಗೂ ಸೆಕ್ಯುರಿಟಿ ಸಿಬ್ಬಂದಿಯ ನಡುವೆ ಮಾತಿಗೆ ಮಾತು ಬೆಳೆಯಿತು. ಆಗ ಪೇದೆಯು ಕಪಾಳಮೋಕ್ಷ ಮಾಡಿದ್ದಾರೆ.
ಘಟನೆಯಿಂದ ತೀವ್ರವಾಗಿ ನೊಂದಿರುವ ಕಂಗನಾ, ಅದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ದೆಹಲಿಗೆ ಬಂದಿಳಿದ ಕೂಡಲೇ ಸಿಐಎಸ್ಎಫ್ ಕೇಂದ್ರ ಕಚೇರಿಗೆ ತೆರಳಿ ಅಲ್ಲಿ, ಸಿಐಎಸ್ಎಫ್ ನಿರ್ದೇಶಕರಾದ ನೈನಾ ಸಿಂಗ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ನಡೆದ ಘಟನೆ ಕುರಿತು ವಿವರಿಸಿದ್ದಾರೆ. ಅಲ್ಲದೇ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಪಾಳಮೋಕ್ಷ ಮಾಡಿದವರನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ.