ಆಗಸ್ಟ್‌ನಲ್ಲಿ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯಿಕ ಸಮಾರಂಭದಲ್ಲಿ ವೇದಿಕೆಯ ಮೇಲೆ ನಡೆದ ದಾಳಿಯ ನಂತರ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಠಿ ಮತ್ತು ಒಂದು ಕೈಯ ಸ್ವಾಧೀನವನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ ಎಂದು ಅವರ ಏಜೆಂಟ್ ಆಂಡ್ರ್ಯೂ ವೈಲಿಹೇಳಿದರು.
ಸ್ಪ್ಯಾನಿಷ್ ಪತ್ರಿಕೆ ಎಲ್ ಪೈಸ್‌ಗೆ ನೀಡಿದ ಸಂದರ್ಶನದಲ್ಲಿ “ಕ್ರೂರ” ದಾಳಿಯಲ್ಲಿ ರಶ್ದಿ ಅನುಭವಿಸಿದ ಗಾಯಗಳ ಗಂಭೀರತೆಯ ಬಗ್ಗೆ ಆಂಡ್ರ್ಯೂ ವೈಲಿ ವಿವರಿಸಿದ್ದಾರೆ.
“ರಶ್ದಿ ಕುತ್ತಿಗೆಯಲ್ಲಿ ಮೂರು ಗಂಭೀರವಾದ ಗಾಯಗಳಿದ್ದವು. ಅವರ ತೋಳಿನ ನರಗಳು ಕತ್ತರಿಸಿದ ಕಾರಣ ಒಂದು ಕೈ ನಿಷ್ಕ್ರಿಯವಾಗಿದೆ. ಮತ್ತು ಅವರ ಎದೆ ಮತ್ತು ಮುಂಡದಲ್ಲಿ ಸುಮಾರು 15 ಗಾಯಗಳಿವೆ.” ಎಂದು ಪತ್ರಿಕೆ ವರದಿಯಲ್ಲಿ ಹೇಳಿದೆ.
“ದಿ ಸೈಟಾನಿಕ್ ವರ್ಸಸ್” ಖ್ಯಾತಿಯ ಲೇಖಕರಾದ ರಶ್ದಿ ಇನ್ನೂ ಎರಡು ತಿಂಗಳಿಗಿಂತ ಹೆಚ್ಚು ಆಸ್ಪತ್ರೆಯಲ್ಲಿದ್ದಾರೆಯೇ ಎಂದು ಹೇಳಲು ವೈಲಿ ನಿರಾಕರಿಸಿದ್ದಾರೆ.
ಚೌಟಕ್ವಾ ಸಂಸ್ಥೆಯಲ್ಲಿ ಉಪನ್ಯಾಸ ನೀಡುತ್ತಿರುವ ಸಂದರ್ಭದಲ್ಲಿ 24 ವರ್ಷದ ನ್ಯೂಜೆರ್ಸಿಯ ವ್ಯಕ್ತಿಯೊಬ್ಬ ರಶ್ದಿ ಅವರ ಕುತ್ತಿಗೆ ಮತ್ತು ಮುಂಡಕ್ಕೆ ಭೀಕರವಾಗಿ ಇರಿದಿದ್ದ. ದಾಳಿಯಲ್ಲಿ ತೀವ್ರವಾದ ಗಾಯಗಳ ನಂತರ ರಶ್ದಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅವರ ತೋಳಿನಲ್ಲಿ ನರ ಹಾನಿ, ಯಕೃತ್ತಿಗೆ ಗಾಯಗಳು ಮತ್ತು ಕಣ್ಣಿನ ನಷ್ಟದ ಸಾಧ್ಯತೆಯಿದೆ ಎಂದು ವೈಲಿ ಆ ಸಮಯದಲ್ಲಿ ಹೇಳಿದ್ದರು.

ಇರಾನ್‌ನ ನಾಯಕರಾಗಿದ್ದ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರು ಫತ್ವಾ ಹೊರಡಿಸಿದ್ದ 33 ವರ್ಷಗಳ ನಂತರ ಈ ದಾಳಿ ನಡೆದಿರುವುದು ಸಾಹಿತ್ಯಕ ಜಗತ್ತನ್ನು ಬೆಚ್ಚಿ ಬೀಳಿಸಿತ್ತು. ಖೊಮೇನಿ “ದಿ ಸೈಟಾನಿಕ್ ವರ್ಸಸ್” ಪ್ರಕಟವಾದ ಕೆಲವು ತಿಂಗಳ ನಂತರ ರಶ್ದಿಯನ್ನು ಹತ್ಯೆ ಮಾಡುವಂತೆ ಮುಸ್ಲಿಮರಿಗೆ ಕರೆ ನೀಡಿದರು. ಪ್ರವಾದಿ ಮುಹಮ್ಮದ್ ಬಗ್ಗೆ ಕಾದಂಬರಿಯಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದರು.
ಭಾರತದಲ್ಲಿ ಮುಸ್ಲಿಂ ಕಾಶ್ಮೀರಿ ಕುಟುಂಬದಲ್ಲಿ ಜನಿಸಿದ ರಶ್ದಿ ಬ್ರಿಟಿಷ್ ಪೋಲೀಸ್ ರಕ್ಷಣೆಯಲ್ಲಿ ಒಂಬತ್ತು ವರ್ಷಗಳ ಕಾಲ ತಲೆಮರೆಸಿಕೊಂಡು ಬದುಕಿದ್ದರು.
1990 ರ ದಶಕದ ಉತ್ತರಾರ್ಧದಲ್ಲಿ ಇರಾನ್‌ನ ಅಧ್ಯಕ್ಷ ಮೊಹಮ್ಮದ್ ಖತಾಮಿ ಅವರ ಸುಧಾರಣಾ ಪರ ಸರ್ಕಾರವು ಫತ್ವಾದಿಂದ ದೂರವಿದ್ದರೂ, ರಶ್ದಿಯ ತಲೆಯ ಮೇಲೆ ನೇತಾಡುತ್ತಿದ್ದ ಬಹು ಮಿಲಿಯನ್ ಡಾಲರ್ ಬಹುಮಾನವು ಹಾಗೆಯೇ ಇತ್ತು. ಹಾಗೂ ಫತ್ವಾವನ್ನು ಎಂದಿಗೂ ತೆಗೆದುಹಾಕಿರಲಿಲ್ಲ.
ರಶ್ದಿ ವಿರುದ್ಧದ ಫತ್ವಾವನ್ನು “ಹಿಂತೆಗೆದುಕೊಳ್ಳಲಾಗುವುದಿಲ್ಲ” ಎಂದು ಹೇಳಿದ್ದ, ಖೊಮೇನಿಯ ಉತ್ತರಾಧಿಕಾರಿ, ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರನ್ನು 2019 ರಲ್ಲಿ ಟ್ವಿಟರ್‌ನಿಂದ ಅಮಾನತುಗೊಳಿಸಲಾಗಿತ್ತು.