ಇತ್ತೀಚೆಗೆ ಬಲಪಂಥೀಯರ ಹಾಗೂ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸಾಯಿ ಪಲ್ಲವಿ ಬೆನ್ನಿಗೆ ಬಹುಭಾಷಾ ನಟ ಕಿಶೋರ್ ಕುಮಾರ್ ನಿಂತಿದ್ದಾರೆ.
ಬಾಯಿ ಮುಚ್ಚಿಸುವುದು ಸರ್ಕಾರದ ಕೆಲಸವಲ್ಲವೇ ಮಾಧ್ಯಮಗಳು ಯಾವಾಗಿಂದ ಈ ಕೆಲಸಕ್ಕೂ ಗುತ್ತಿಗೆ ಪಡೆದವು? ಎಂದು ಪ್ರಶ್ನಿಸಿರುವ ಕಿಶೋರ್ ಕುಮಾರ್, ಸಿನಿಮಾದವರಿಗೆ ಜನಪರ ಕಾಳಜಿ ಇರುವುದು ತಪ್ಪೇ? ಎಂದು ಕೇಳಿದ್ದಾರೆ.
ನಟಿ ಸಾಯಿ ಪಲ್ಲವಿ ಅವರ ಚಿತ್ರವೊಂದು ಹಂಚಿ, ಫೇಸ್ಬುಕ್ ಪೋಸ್ಟ್ ಹಾಕಿರುವ ಕಿಶೋರ್ ಕುಮಾರ್, “ಕಾರಣ ಏನೇ ಆದರೂ ಕೊಲೆ ಮಾಡುವ ಮನಸ್ಥಿತಿ ಒಂದೇ ಹಾಗೂ ಅದು ತಪ್ಪು ಎಂದರೆ ತಪ್ಪೇ? ನಮ್ಮಲ್ಲಿನ ಅಲ್ಪಸಂಖ್ಯಾತರನ್ನು ನಾವು ಹೇಗೆ ಸಮಾನರಾಗಿ ಬದುಕಲು ಬಿಡುತ್ತೇವೆನ್ನುವುದು ನಮ್ಮ ಸಮಾಜದ ಸ್ವಾಸ್ಥ್ಯದ, ಸಭ್ಯತೆಯ ಅಳತೆಗೋಲು ಎನ್ನುವುದು ತಪ್ಪೇ? ಜೀವಕ್ಕೆ ಜಾತಿ ಧರ್ಮಗಳ ಹಂಗಿಲ್ಲವೆಂದರೆ ತಪ್ಪೇ? ಒಬ್ಬರ ಆಹಾರಕ್ರಮದ ಮೇಲೆ ನಿಷೇಧ ಹೇರಿ ಆಹಾರವನ್ನೂ ದ್ವೇಷದ ಸಾಧನವಾಗಿ ಬಳಸಬಾರದೆಂದರೆ ತಪ್ಪೇ?” ಎಂದು ಸುದೀರ್ಘ ಪ್ರಶ್ನೆಗಳನ್ನು ಕೇಳಿದ್ದಾರೆ.
“ಮಾನವೀಯತೆಯ ನಿಲುವಿನ ಸಾಯಿಪಲ್ಲವಿಯಿಂದ ಈ ಮಾಧ್ಯಮದವರು ಕಲಿಯಿವುದು ಸಾಕಷ್ಟಿದೆ . ಸಾಮಾಜಿಕ ಬದ್ಧತೆಯನ್ನು ಧರ್ಮಾಂಧತೆಯ ಕನ್ನಡಿಯಲ್ಲಿ ನೋಡುವ ಮಾಧ್ಯಮ ಗೋಕಾಕ್ ಚಳುವಳಿಯ ಕಾಲದಲ್ಲಿದ್ದಿದ್ದರೆ ರಾಜಕುಮಾರ್ ರವರ ಬಾಯನ್ನೂ ಮುಚ್ಚಿಸುತ್ತಿತ್ತೇನೊ.” ಎಂದು ಅವರು ಬರೆದಿದ್ದಾರೆ.
ಧರ್ಮದ ಹೆಸರಿನಲ್ಲಿ ನಡೆಯುವ ಯಾವುದೇ ಕೊಲೆಯೂ ತಪ್ಪು ಎಂದಿದ್ದ ನಟಿ ಸಾಯಿ ಪಲ್ಲವಿ, ಕಾಶ್ಮೀರ ಹತ್ಯೆಯಾದರೂ ಜೈ ಶ್ರೀ ರಾಂ ಎಂದು ಹೇಳಿ ದನ ಸಾಗಾಟಗಾರನನ್ನು ಕೊಲ್ಲುವುದಕ್ಕೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ್ದರು.
ಇದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಸಾಯಿ ಪಲ್ಲವಿ ಅಭಿನಯದ ಎಲ್ಲಾ ಚಿತ್ರಗಳನ್ನು ಬಹಿಷ್ಕರಿಸುವಂತೆ ಬಲಪಂಥೀಯರ ಅಭಿಯಾನ ಮಾಡಿದ್ದರು. ಅದಾಗ್ಯೂ, ಈ ವಿವಾದದ ಬಳಿಕ ತೆರೆಕಂಡ ವಿರಾಟ ಪರ್ವಂ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
