ಶಿವಮೊಗ್ಗ ನಗರದ ಕುಂಬಾರ ಕೇರಿಯ ದಿವಂಗತ ಹರ್ಷ ಹಿಂದೂ ಮನೆಗೆ ಇಂದು ಭೇಟಿ ನೀಡಿದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ, ಬೆಂಬಲ ಯಾಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವೈಚಾರಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹರ್ಷ, ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅನೇಕ ಯುವಕರಿಗೆ ಹರ್ಷ ಸ್ಪೂರ್ತಿಯಾಗಿದ್ದರು. ಸದಾ ಹಿಂದುತ್ವದ ಬಗ್ಗೆ ಕೆಲಸ ಮಾಡುತ್ತಿದ್ದ ಹರ್ಷ ನೂರಾರು ಯುವಕರಿಗೆ ಶಕ್ತಿ ತುಂಬಿದ್ದ. ಹಿಂದುತ್ವ ಎನ್ನುವುದು ಒಂದು ಜೀವನ ಪದ್ಧತಿ. ಹರ್ಷ ಅದನ್ನು ಪಾಲಿಸಿಕೊಂಡು ಬಂದಿದ್ದ. ಆತನ ಕುಟುಂಬ ಸದಾ ದೇಶಕ್ಕೆ ಒಳ್ಳೆಯದಾಗಲಿ ಎಂದೇ ಯೋಚಿಸುತ್ತಿದ್ದರು ಎಂದರು. ರಾಷ್ಟ್ರ ಕಾರ್ಯ ಎನ್ನುವುದು ಈಶ್ವರೀ ಕಾರ್ಯವಾಗಿದ್ದು, ಹಿಂದುತ್ವ ಎನ್ನುವುದು ಕೂಡ ನಮ್ಮ ದೇಶದ ರಾಷ್ಟ್ರೀಯತೆ. ಹರ್ಷನ ಕುಟುಂಬ ನಾನು ಅಭ್ಯರ್ಥಿಯಾಗಿದ್ದಕ್ಕೆ ತುಂಬಾ ಸಂತೋಷ, ಬೆಂಬಲ ವ್ಯಕ್ತಪಡಿಸಿದೆ.

ನಾವು ಕೂಡ ಸದಾ ಆ ಕುಟುಂಬದೊಂದಿಗೆ ಇರುತ್ತೇವೆ ಎಂದರು. ಹರ್ಷನ ಅಕ್ಕ ಅಶ್ವಿನಿ ಮಾತನಾಡಿ, ಬಿಜೆಪಿ ಚೆನ್ನಬಸಪ್ಪನವರಿಗೆ ಟಿಕೆಟ್ ನೀಡಿರುವುದು ನಮ್ಮ ಕುಟುಂಬಕ್ಕೆ ಹರ್ಷ ತಂದಿದೆ. ನಾವೆಲ್ಲರೂ ಬಿಜೆಪಿಗೆ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ನನ್ನ ತಮ್ಮನಿಗೆ ಬಂದ ಸಾವು ಯಾವ ಯುವಕನಿಗೂ ಬರಬಾರದು. ಎಲ್ಲಾ ಕಡೆ ಕೋಮು ಸಂಘರ್ಷಗಳು ನಡೆಯದೇ ಶಾಂತಿ ನೆಲೆಸಬೇಕೆಂಬುದೇ ನನ್ನ ಆಶಯ ಎಂದರು. ಮನೆಗೆ ಆಗಮಿಸಿದ ಚೆನ್ನಬಸಪ್ಪನವರಿಗೆ ಹರ್ಷನ ಕುಟುಂಬ ಆರತಿ ಬೆಳಗಿ, ಶಾಲು ಹಾರ ಹಾಕಿ ಗೆದ್ದು ಬನ್ನಿ ಎಂದು ಶುಭ ಹಾರೈಸಿದರು. ಹರ್ಷಾ ಅಕ್ಕ ಅಶ್ವಿನಿ ಮಾತನಾಡಿ, ಯಾವುದೇ ಹಿಂದೂ ಯುವಕರಿಗೆ ಹರ್ಷನಂತಹ ಸ್ಥಿತಿ ಬರಬಾರದು. ಝೀರೋ ಬ್ಯಾಲೆನ್ಸ್ ಅಭ್ಯರ್ಥಿ ಚೆನ್ನಬಸಪ್ಪ ಪರವಾಗಿ ನಾವೆಲ್ಲರೂ ಕೆಲಸ ಮಾಡಿ ಗೆಲ್ಲಿಸುತ್ತೇವೆ. ನಾನು ಬಿಜೆಪಿ ಸೇರಿಕೊಂಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರು ಮತ್ತು ಹರ್ಷನ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.











