ದೇಶದ ತೆರಿಗೆಗಳ್ಳರು, ಕಪ್ಪು ಹಣದ ಕುಳಗಳ ಮೇಲೆ ಪ್ರಧಾನಿ ಮೋದಿಯವರು ಸಾರಿದ ನೋಟ್ ಬ್ಯಾನ್, ಜಿಎಸ್ ಟಿಯಂತಹ ಸರ್ಜಿಕಲ್ ದಾಳಿಗಳು ಎಷ್ಟರಮಟ್ಟಿಗೆ ಫಲಕೊಟ್ಟಿವೆ ಎಂಬುದು ಬೇರೆ ಮಾತು.
ಆದರೆ, ಸ್ವಿಜರ್ ಲೆಂಡ್ ನಂತಹ ಅಂತಾರಾಷ್ಟ್ರೀಯ ತೆರಿಗೆ ಸ್ವರ್ಗಗಳಲ್ಲಿ ಕಳ್ಳ ಹೂಡಿಕೆಯಾಗಿರುವ ಭಾರತೀಯರ ಕಳ್ಳಹೂಡಿಕೆದಾರರ ಮಾಹಿತಿಯನ್ನು ಆಗಾಗ ಬಯಲು ಮಾಡುತ್ತಿರುವ ಪನಾಮಾ ಪೇಪರ್ಸ್, ಪ್ಯಾರಡೈಸ್ ಪೇಪರ್ಸ್ ನಂತಹ ಅಂತಾರಾಷ್ಟ್ರೀಯ ತನಿಖಾ ಪ್ರಯತ್ನಗಳ ಹೊರತಾಗಿಯೂ ಭಾರತೀಯ ತೆರಿಗೆ ವಂಚಕರು ಹೇಗೆ ಕಾನೂನು ಎಂಬ ರಂಗೋಲಿಯ ಕೆಳಗೆ ನುಸುಳುತ್ತಿದ್ದಾರೆ ಎಂಬುದನ್ನು ಇದೀಗ ಬಯಲಾಗಿರುವ ಪಾಂಡೊರಾ ಲೀಕ್ಸ್ ಬಯಲು ಮಾಡಿದೆ.
ಈ ಹಿಂದೆ ಪನಾಮಾ ಮತ್ತು ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ವಂಚನೆ, ತೆರಿಗೆಗಳ್ಳತನ, ಕಪ್ಪುಹಣದ ಕುರಿತ ಸಂಚಲನಕಾರಿ ಮಾಹಿತಿಗಳನ್ನು ಜಗಜ್ಜಾಹೀರು ಮಾಡಿದ್ದ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟ(ಐಸಿಐಜೆ), ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳ ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು, ಅಧಿಕಾರಿಗಳು ಹೇಗೆ ಆಯಾದೇಶದ ಕಾನೂನುಗಳಿಂದ ತಪ್ಪಿಸಿಕೊಳ್ಳಲು ತೆರಿಗೆ ಸ್ವರ್ಗ ಎಂದೇ ಜನಪ್ರಿಯವಾಗಿರುವ ವಿವಿಧ ರಾಷ್ಟ್ರಗಳಲ್ಲಿ ಕಳ್ಳ ಹೂಡಿಕೆ ಮಾಡಿವೆ ಎಂಬುದನ್ನು ದಾಖಲೆಸಹಿತ ಬಹಿರಂಗಪಡಿಸಿತ್ತು.
2016ರ ಪನಾಮಾ ಪೇಪರ್ಸ್ ಲೀಕ್ ಬಂದ ಬಳಿಕ, ಭಾರತದಲ್ಲಿ ಹಲವು ಉದ್ಯಮಿಗಳು, ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳಿಗೆ ತಾವು ಈಗಾಗಲೇ ವಿದೇಶಗಳಲ್ಲಿ ಮಾಡಿರುವ ಹೂಡಿಕೆ, ಇಟ್ಟಿರುವ ಕಾಳಧನವನ್ನು ಐಸಿಐಜೆಯಂತಹ ತನಿಖಾ ಪ್ರಯತ್ನಗಳು ಮತ್ತು ಸರ್ಕಾರದ ಇಡಿ, ಐಟಿಯಂತಹ ತನಿಖಾ ವ್ಯವಸ್ಥೆಗಳಿಂದ ಮುಚ್ಚಿಡುವ ದಾರಿಗಳನ್ನು ಹುಡುಕತೊಡಗಿದ್ದರು. ಅಂತಹ ಹುಡುಕಾಟದಲ್ಲಿ ಅವರು ಕಂಡುಕೊಂಡ ಉಪಾಯವೇ, ಶೆಲ್ ಕಂಪನಿಗಳ ಬದಲಾಗಿ, ಟ್ರಸ್ಟ್ ಹುಟ್ಟುಹಾಕಿ, ಆ ಟ್ರಸ್ಟ್ ಮೂಲಕ ನಗದೀಕರಿಸುವ ರಂಗೋಲಿ ಕೆಳಗೆ ನುಸುಳುವ ಯತ್ನಗಳನ್ನು ಇದೀಗ ಅದೇ ಐಸಿಐಜೆ, ಪಾಂಡೊರಾ ಪೇಪರ್ಸ್ ಹೆಸರಿನಲ್ಲಿ ಬಹಿರಂಗಪಡಿಸಿದೆ.
ಜಗತ್ತಿನಾದ್ಯಂತ ಸಂಚಲನ ಹುಟ್ಟಿಸಿರುವ ಈ ಸ್ಫೋಟಕ ತನಿಖಾ ವರದಿಯಲ್ಲಿ; 14 ಜಾಗತಿಕ ಕಾರ್ಪೊರೇಟ್ ಹಣಕಾಸು ಮತ್ತು ಕಾನೂನು ಸೇವಾ ಸಂಸ್ಥೆಗಳಿಂದ ಸೋರಿಕೆಯಾದ 1.20 ಕೋಟಿ ಕಡತಗಳ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಜಗತ್ತಿನ ಒಟ್ಟು 29,000 ಆಫ್-ದಿ-ಶೆಲ್ಫ್ ಕಂಪನಿಗಳು ಮತ್ತು ಖಾಸಗಿ ಟ್ರಸ್ಟ್‌ಗಳಿಗೆ ಸಂಬಂಧಿಸಿದ ವಿವಿಧ ಹೂಡಿಕೆಯ ಮಾಹಿತಿಯನ್ನು ಈ ಕಡತಗಳು ಒಳಗೊಂಡಿದ್ದು, ಸ್ವಿಜರ್ ಲೆಂಟ್, ಬ್ರಿಟಿಷ್ ವರ್ಜಿನ್ ದ್ವೀಪಸಮೂಹ, ಸ್ಯಾಚಿಲ್ಲೆ, ಪನಾಮಾ ದ್ವೀಪ ಮಾತ್ರವಲ್ಲದೆ, ಸಿಂಗಾಪುರ, ನ್ಯೂಜಿಲೆಂಡ್ ಮತ್ತು ಅಮೆರಿಕದಂತಹ ದೇಶಗಳಲ್ಲೂ ಈ ಕಂಪನಿ ಮತ್ತು ಟ್ರಸ್ಟುಗಳು ಕಾರ್ಯನಿರ್ವಹಿಸುತ್ತಿವೆ.

ಪಾಂಡೊರಾ ಪೇಪರ್ಸ್ ನಲ್ಲಿ ಸದ್ಯ 380 ಕ್ಕೂ ಹೆಚ್ಚು ಭಾರತೀಯರ ಹೆಸರುಗಳೂ ಕಾಣಿಸಿಕೊಂಡಿದ್ದು, ಆ ಪೈಕಿ, ಅಂತಾರಾಷ್ಟ್ರೀಯ ತನಿಖಾ ವರದಿಗಾರರ ಕೂಟದ ಈ ತನಿಖಾ ವರದಿಗಾರಿಕೆಯ ಭಾಗವಾಗಿರುವ ‘ಇಂಡಿಯನ್ ಎಕ್ಸ್‌ಪ್ರೆಸ್’ ಮಾಧ್ಯಮ, ಈವರೆಗೆ 60 ಪ್ರಮುಖ ಭಾರತೀಯರು ಮತ್ತು ಭಾರತೀಯ ಮೂಲದ ಕಂಪನಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ದೃಢೀಕರಿಸಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಹಾಗೆ ದೃಢಪಡಿಸಿರುವ ಭಾರತೀಯರ ಪೈಕಿ, ಈಗಾಗಲೇ ದೇಶದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚಿಸಿ ತಲೆಮರೆಸಿಕೊಂಡು ವಿದೇಶಕ್ಕೆ ಪಲಾಯನ ಮಾಡಿರುವ ಮೆಹುಲ್ ಚೋಕ್ಸಿ, ಬ್ರಿಟನ್ ನ್ಯಾಯಾಲಯದಲ್ಲಿ ತಾನು ದಿವಾಳಿಯಾಗಿದ್ದೇನೆ ಎಂದು ಪ್ರಮಾಣಪತ್ರ ಸಲ್ಲಿಸಿರುವ ಅನಿಲ್ ಅಂಬಾನಿ, ಬೆಂಗಳೂರಿನ ಬಯೋಕಾನ್ ಕಂಪನಿಯ ಕಿರಣ್ ಮುಜಮದಾರ್ ಶಾ ಪತಿ, ಭಾರತೀಯರ ಪಾಲಿನ ಕ್ರಿಕೆಟ್ ದೇವರು(ಲಿಟಲ್ ಗಾಡ್) ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ, ವಿವಿಧ ರಾಜಕಾರಣಿಗಳು, ಸಿನಿಮಾ ನಟರು, ಉನ್ನತ ಅಧಿಕಾರಿಗಳ ಹೆಸರುಗಳು ಕಾಣಿಸಿಕೊಂಡಿವೆ.
ಲಿಟಲ್ ಗಾಡ್ ಸಚಿನ್ ತೆಂಡೂಲ್ಕರ್, ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಮಾವ ಆನಂದ್ ಮೆಹ್ತಾ ಅವರುಗಳ ಹೆಸರುಗಳು ಪನಾಮಾದ ಕಾನೂನು ಸೇವಾ ಸಂಸ್ಥೆ ಆಲ್ಕೊಗಲ್ ಗೆ ಸಂಬಂಧಿಸಿದ ಕಡತಗಳಲ್ಲಿ ಕಾಣಿಸಿಕೊಂಡಿವೆ. ಆ ದಾಖಲೆಗಳ ಪ್ರಕಾರ, 2016ಕ್ಕೆ ಮುನ್ನ ಸಚಿನ್ ಮತ್ತು ಅವರ ಕುಟುಂಬದವರು ಬ್ರಿಟಿಷ್ ವರ್ಜಿನ್ ದ್ವೀಪದಲ್ಲಿ(ಬಿವಿಐ) ಸಾಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಕೆಲವು ರಹಸ್ಯ ಹೂಡಿಕೆಗಳನ್ನು ಮಾಡಿದ್ದರು. ಆದರೆ, 2016ರಲ್ಲಿ ಪನಾಮಾ ಪೇಪರ್ಸ್ ಲೀಕ್ ಆದ ಬಳಿಕ ಮೂರು ತಿಂಗಳಲ್ಲಿ ಆ ಹೂಡಿಕೆಯನ್ನು ಟ್ರಸ್ಟ್ ವೊಂದರ ಮೂಲಕ ನಗದೀಕರಿಸಿದ್ದಾರೆ. ಆದರೆ, ತೆಂಡೂಲ್ಕರ್ ಅವರ ಫೌಂಡೇಶನ್ ಸಿಸಿಒ ಮೃಣಮಯಿ ಮುಖರ್ಜಿ, ಈ ಆರೋಪಗಳನ್ನು ತಳ್ಳಿಹಾಕಿದ್ದು, ಆ ಎಲ್ಲಾ ಹೂಡಿಕೆಯೂ ಕಾನೂನುಬದ್ಧ ಮತ್ತು ತೆರಿಗೆ ಮಾಹಿತಿಯನ್ನು ಆ ಎಲ್ಲವನ್ನೂ ಸರ್ಕಾರಕ್ಕೆ ಕಾಲಕಾಲಕ್ಕೆ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಮೂಲದ ಬಯೋಕಾನ್ ಬಯೋಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮುಜುಮದಾರ್ ಶಾ ಅವರ ಪತಿ ಜಾನ್ ಮೆಕ್ಲಮ್ ಮಾರ್ಷಲ್ ಅವರು, ಅಕ್ರಮ ಷೇರು ವಹಿವಾಟು ಕಾರಣಕ್ಕೆ ಸೆಬಿಯಿಂದ ಶಿಕ್ಷೆಗೊಳಗಾಗಿರುವ ಕುನಾಲ್ ಅಶೋಕ್ ಕಶ್ಯಪ್ ಎಂಬುವರ ಪಾಲುದಾರಿಕೆಯೊಂದಿಗೆ ಡೀನ್ ಸ್ಟೋನ್ ಟ್ರಸ್ಟ್ ಹೆಸರಿನಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಕೂಡ ಪಾಂಡೊರಾ ಪೇಪರ್ಸ್ ಬಹಿರಂಗಪಡಿಸಿವೆ. ಆದರೆ, ಈ ವಿಷಯದಲ್ಲಿ ಕೂಡ ಕಿರಣ್ ಶಾ ಅವರು ಸ್ಪಷ್ಟನೆ ನೀಡಿದ್ದು, ತಮ್ಮ ಪತಿ ಹೂಡಿಕೆ ಮಾಡಿರುವ ಟ್ರಸ್ಟ್ ಕಾನೂನುಬದ್ಧವಾಗಿದ್ದು, ಅದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿದ್ದಾರೆ.

ಪಾಂಡೊರಾ ಪೇಪರ್ಸ್ ನಲ್ಲಿ ಕಂಡುಬಂದಿರುವ ಮತ್ತೊಂದು ಪ್ರಮುಖ ಹೆಸರು, ಉದ್ಯಮಿ ಅನಿಲ್ ಅಂಬಾನಿ ಅವರದು. ಕಳೆದ ವರ್ಷವಷ್ಟೇ ಬ್ರಿಟನ್ ನ್ಯಾಯಾಲಯದಲ್ಲಿ ತಾವು ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡಿದ್ದ ಅನಿಲ್ ಅಂಬಾನಿ, ಇಡೀ ಜಗತ್ತಿನಾದ್ಯಂತ ಎಲ್ಲೂ ತನಗೆ ಮೂರು ಕಾಸಿನ ಬೆಲೆಬಾಳುವ ಆಸ್ತಿ ಇಲ್ಲ. ತನ್ನ ಸಂಪತ್ತು ಸಂಪೂರ್ಣ ಶೂನ್ಯ ಎಂದು ಘೋಷಿಸಿ, ಚೀನಾ ಕಂಪನಿಗಳ ಸಾಲ ತೀರಿಸುವುದರಿಂದ ಪಾರಾಗಿದ್ದರು. ಆದರೆ, ಇದೀಗ ಪಾಂಡೊರಾ ಪೇಪರ್ಸ್ ಬಹಿರಂಗಪಡಿಸಿರುವ ವಿವರಗಳ ಪ್ರಕಾರ ಅನಿಲ್ ಅಂಬಾನಿಯ ಎಡಿಎ ಸಮೂಹ ಮತ್ತು ಅವರ ಪ್ರತಿನಿಧಿಗಳು ಜರ್ಸಿ, ಬಿವಿಐ ಮತ್ತು ಸೈಪ್ರಸ್ ನಲ್ಲಿ ಕನಿಷ್ಟವೆಂದರೂ 18ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದಾರೆ ಮತ್ತು ಅವುಗಳ ಒಟ್ಟು ಮೌಲ್ಯ ಸುಮಾರು 1.3 ಬಿಲಿಯನ್ ಡಾಲರ್ !
ಹೀಗೆ ದೇಶದ ವಿವಿಧ ಪ್ರತಿಷ್ಠಿತ ಉದ್ಯಮಿಗಳು, ಕ್ರಿಕೆಟಿಗರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ತಮ್ಮ ಅಕ್ರಮ ಸಂಪಾದನೆ, ತೆರಿಗೆ ವಂಚಿತ ಬಿಲಿಯನ್ ಗಟ್ಟಲೆ ಸಂಪತ್ತನ್ನು ವಿದೇಶಿ ಟ್ರಸ್ಟ್ ಗಳಲ್ಲಿ ಹೂಡಿಕೆ ಮಾಡುತ್ತಿರುವ 2016ರ ಬಳಿಕದ ಹೊಸ ಟ್ರೆಂಡನ್ನು ಈ ಬಾರಿಯ ಐಸಿಐಜೆ ತನಿಖಾ ಮಾಹಿತಿಯ ಪಾಂಡೊರಾ ಪೇಪರ್ಸ್ ಬಹಿರಂಗಪಡಿಸಿವೆ ಎಂಬುದು ವಿಶೇಷ. ಸದ್ಯಕ್ಕೆ ಕೆಲವೇ ಮಂದಿಯ ಹೂಡಿಕೆಯ ವಿವರಗಳನ್ನು ವರದಿ ಮಾಡಿರುವ ಐಸಿಜೆಐನ ಭಾರತೀಯ ಪಾಲುದಾರ ದ ಇಂಡಿಯನ್ ಎಕ್ಸ್ ಪ್ರೆಸ್, ಮುಂದಿನ ದಿನಗಳಲ್ಲಿ 380 ಮಂದಿ ಭಾರತೀಯರ ಪೈಕಿ ಬಹುತೇಕ ಪ್ರಮುಖರ ವಿವರಗಳನ್ನು ಬಹಿರಂಗಪಡಿಸಲಿದೆ. ಆ ಹಿನ್ನೆಲೆಯಲ್ಲಿ ಪನಾಮಾ ಪೇಪರ್ಸ್ ಲೀಕ್ ಬಳಿಕ ಐದು ವರ್ಷಗಳ ನಂತರ ಹೊರಬಿದ್ದಿರುವ ಪಾಂಡೊರಾದ ಬರಲಿರುವ ವಿವರಗಳು, ಬಹಿರಂಗವಾಗಲಿರುವ ದಾಖಲೆಗಳು ಕುತೂಹಲ ಕೆರಳಿಸಿವೆ.









