ಕನ್ನಡದ ಮೇರು ಪ್ರತಿಭೆಗಳಾದ ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ ನಿರ್ದೇಶನದಲ್ಲಿ ಶ್ರೇಯಸ್ ಮಂಜು ನಾಯಕನಾಗಿ ನಟಿಸುತ್ತಿರುವ ʼಒಂದ್ಸಲ ಮೀಟ್ ಮಾಡೋಣʼ ಚಿತ್ರ ಆರಂಭವಾಗಿದೆ.
ಚಿಕ್ಕಮಗಳೂರಿನ ಶ್ರೀದೇವಿರಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಶ್ರೇಯಸ್ ಮಂಜು ಹಾಗೂ ತಾರಾ ಅನುರಾಧ ಅವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್ ಡಿ ತಮ್ಮಯ್ಯ ಆರಂಭ ಫಲಕ ತೋರಿದರು. ನಿರ್ಮಾಣ ಸಹಾಯಕ ಮಹದೇವ ಕ್ಯಾಮೆರಾ ಚಾಲನೆ ಮಾಡಿದರು.
ʼಒಂದ್ಸಲ ಮೀಟ್ ಮಾಡೋಣʼ ಪ್ರೀತಿಯ ಜರ್ನಿ ಎಂದು ಹೇಳುವ ನಿರ್ದೇಶಕರು, ಚಿಕ್ಕಮಗಳೂರಿನಿಂದ ಚಿತ್ರೀಕರಣ ಪ್ರಾರಂಭವಾಗಿ, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ನಡೆಯಲಿದೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಎಂದು ತಿಳಿಸಿದ್ದಾರೆ.
ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಇವರ ಕಾಂಬಿನೇಶನ್ ನಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗಲಿದೆ.
ನಿರ್ದೇಶಕ ಎಸ್.ನಾರಾಯಣ್ ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಗಿಫ್ಟ್ ಸಂಗೀತ ನೀಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಸಂತು ನೃತ್ಯ ನಿರ್ದೇಶನ ಹಾಗೂ ಆನಂದ್ ಅವರ ಕಲಾ ನಿರ್ದೇಶನ ʼಒಂದ್ಸಲ ಮೀಟ್ ಮಾಡೋಣʼ ಚಿತ್ರಕ್ಕಿದೆ.
ಶ್ರೇಯಸ್ ಮಂಜು ನಾಯಕಿಯಾಗಿ ಬೃಂದಾ ಆಚಾರ್ ನಟಿಸುತ್ತಿದ್ದಾರೆ. ತಾರಾ ಅನುರಾಧ, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್, ಸುಜಯ್ ಶಾಸ್ತ್ರಿ, ಗಿರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.






