• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ನಿರ್ಲಜ್ಜ ನಿರ್ದಯಿ ವ್ಯವಸ್ಥೆಯೂ ದುಡಿಮೆಯ ದನಿಗಳೂ

by
April 10, 2021
in ದೇಶ
0
ನಿರ್ಲಜ್ಜ ನಿರ್ದಯಿ ವ್ಯವಸ್ಥೆಯೂ ದುಡಿಮೆಯ ದನಿಗಳೂ
Share on WhatsAppShare on FacebookShare on Telegram

ನೊಂದವರ ದನಿಗೆ ದನಿಯಾಗುವುದು ಸಾತ್ವಿಕ-ಪ್ರಬುದ್ಧ ಲೋಕದ ಲಕ್ಷಣ. ನೊಂದವರ ಆಕ್ರಂದನಕ್ಕೆ ಸಾಂತ್ವನ ಹೇಳುವುದು ಸಭ್ಯ ಲೋಕದ ಲಕ್ಷಣ. ಈ ದನಿಗಳಿಗೆ ಕಿವಿಯಾಗುವುದು ಮನುಷ್ಯ ಲೋಕದ ಲಕ್ಷಣ. “ ಮುಗಿಲು ಮುಟ್ಟುವ ನನ್ನ ದನಿಯನ್ನೂ ಇಲ್ಲಿ ಯಾರೂ ಕೇಳುವವರಿಲ್ಲವೇ ” ಎನ್ನುವ ಹತಾಶೆಯ ದನಿ ನೊಂದ ಜೀವಗಳಿಂದ ಮೂಡಿ ಬಂದರೆ ಅಲ್ಲೊಂದು ಅಮಾನುಷ ಪರಂಪರೆ ಅಸ್ತಿತ್ವದಲ್ಲಿದೆ ಎಂದೇ ಅರ್ಥ. ನಿರ್ಜೀವ ಸ್ಮಾರಕಗಳೊಂದಿಗೆ ಸಂವಹನ ನಡೆಸುವ ಒಂದು ಸಾಮಾಜಿಕ ವ್ಯವಸ್ಥೆಯಾದರೂ ಗೋಡೆಗಳಿಗೂ ಕಿವಿ ಇರುತ್ತದೆ ಎನ್ನುವ ಕನಿಷ್ಟ ಪರಿಜ್ಞಾನ ಆಳುವವರಲ್ಲಿದ್ದರೆ, ಶಾಲೆಗಳೇ ನಡೆಯದೆ ಕಂಗಾಲಾಗಿರುವ ಮಕ್ಕಳೊಡನೆ ಪರೀಕ್ಷೆಯ ಕುರಿತ ಸಂವಾದ ನಡೆಯುವುದಿಲ್ಲ. ಬೀದಿಬೀದಿಯಲ್ಲಿ ಹೋರಾಡುತ್ತಿರುವ ದುಡಿಮೆಯ ದನಿಗಳೊಡನೆ ಸಂವಹನ ನಡೆಯುತ್ತದೆ. ಆದರೆ ಭಾರತ ಬದಲಾಗಿದೆ.

ADVERTISEMENT

ಹೌದು #ಆತ್ಮನಿರ್ಭರ ಭಾರತದಲ್ಲಿ ನಿರ್ಭರವಾಗುತ್ತಿರುವುದು ಯಾರ ಆತ್ಮಗಳು ? ನೊಂದ ಆತ್ಮಗಳೋ ಅಥವಾ ದುಡಿವ ನಾಡಿಮಿಡಿತದ ಪರಿವೆಯೇ ಇಲ್ಲದ ಸಂತೃಪ್ತ ಆತ್ಮಗಳೋ ? ಅಥವಾ ಕೊರೋನಾ ಬಿಕ್ಕಟ್ಟಿನ ನಡುವೆಯೂ ಶತಕೋಟ್ಯಧಿಪತಿಗಳಾಗಿರುವ 38 ಉದ್ಯಮಿಗಳ ಆತ್ಮಗಳೋ ? ನಿರ್ಭರ ಎಂದರೆ ಮತ್ತೊಂದು ಅರ್ಥ ಕ್ರೌರ್ಯ ಎಂದೂ ಇದೆ. ಸಾಮಾನ್ಯ ಜನತೆಯ ಪಾಲಿಗೆ, ಒಂದು ರೀತಿಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದ ಆತ್ಮನಿರ್ಭರತೆ ಈ ಕ್ರೌರ್ಯದ ಅನಾವರಣವೇ ಆಗಿದೆ. ಪ್ರಜೆಗಳ ದನಿಗೆ ಕಿವಿಯಾಗುವುದಿರಲಿ, ಈ ದೇಶದ ಸಾರ್ವಭೌಮ ಪ್ರಜೆಗಳಿಗೂ ಒಂದು ಅಂತರಂಗದ ದನಿ ಇದೆ, ಒಂದು ಅಂತರಾತ್ಮದ ದನಿ ಇದೆ ಎಂಬ ಪರಿವೆಯೇ ಇಲ್ಲದ ನಿರ್ದಯಿ ಪ್ರತಿನಿಧಿಗಳನ್ನು, ನಮಗೆ ನಾವೇ ಕೊಟ್ಟುಕೊಂಡಿದ್ದೇವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ನೆರೆರಾಷ್ಟ್ರದ 50ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ, “ ನಿಮ್ಮ ದೇಶದ ವಿಮೋಚನೆಗೆ ನಾವೂ ಸತ್ಯಾಗ್ರಹ ಮಾಡಿ ಜೈಲುವಾಸ ಅನುಭವಿಸಿದ್ದೆವು ” ಎಂದು ಎದೆತಟ್ಟಿ ಹೇಳುವ ದೇಶದ ನೇತಾರರಿಗೆ ತಮ್ಮ ಮೂಗಿನಡಿಯಲ್ಲೇ ಶತದಿನೋತ್ಸವ ಕಾಣುತ್ತಿರುವ ರೈತ ಮಷ್ಕರದತ್ತ ಕಣ್ಣೆತ್ತಿ ನೋಡಲೂ ಮನಸ್ಸಾಗುವುದಿಲ್ಲ ಎಂದರೆ ಭಾರತದ #ಆತ್ಮನಿರ್ಭರತೆಯಲ್ಲಿರುವುದು ಕ್ರೌರ್ಯವೋ ಅಥವಾ ಪರಿಪೂರ್ಣತೆಯೋ ಎನ್ನುವುದನ್ನು ಗ್ರಹಿಸುವುದು ಸುಲಭ. 1971ರ ಬಾಂಗ್ಲಾ ವಿಮೋಚನೆಯ ಶ್ರೇಯ ಸಲ್ಲಬೇಕಾದ್ದು ಅಂದಿನ ಭಾರತೀಯ ಸೇನೆಯ ಯೋಧರಿಗೆ ಮತ್ತು ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ಇಂದಿರಾಗಾಂಧಿಯವರಿಗೆ. ಆಕೆಯ ಹೆಸರನ್ನೂ ಉಲ್ಲೇಖಿಸದೆ ಮತ್ತೊಬ್ಬರ ಬಾಗಿನದಲ್ಲಿ ತಮ್ಮ ಸಿರಿಧಾನ್ಯ ಹುಡುಕುವಂತಹ ವಿಕೃತಿಗಳ ನಡುವೆ ನಾವು ಬದುಕುತ್ತಿದ್ದೇವೆ.

ಒಂದು ಪ್ರಜಾತಂತ್ರ ವ್ಯವಸ್ಥೆಯ ಮೂಲಭೂತ ಲಕ್ಷಣ ಎಂದರೆ ಆಳುವವರ ಕಣ್ಣು-ಕಿವಿಗಳು ಸದಾ ತೆರೆದಿರುವುದು. ಆಲಿಸದಿರುವವನಿಗೆ ಮಾತನಾಡುವ ನೈತಿಕ ಹಕ್ಕು ಇರುವುದಿಲ್ಲ. ಕಣ್ಣಿದ್ದೂ ನೋಡದವನಿಗೆ ದಂಡಿಸುವ ಹಕ್ಕೂ ಇರುವುದಿಲ್ಲ. ಸಂಸತ್ತಿನ ನಿಯಮಗಳನ್ನೂ ಉಲ್ಲಂಘಿಸಿ, ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಸ್ತ ದೇಶದ ಜನತೆ ದಿಗ್ಬಂಧನದಲ್ಲಿರುವಾಗ ಜಾರಿಗೊಳಿಸಲಾದ ರೈತ ವಿರೋಧಿ ಕೃಷಿ ಮಸೂದೆ ರೈತರ ಪಾಲಿಗೆ ಮರಣಶಾಸನವಾಗಲಿದೆ. ಈ ಮಸೂದೆಯನ್ನು ಹಿಂಪಡೆಯಲು ಆಗ್ರಹಿಸಿ ದೇಶದ ಲಕ್ಷಾಂತರ ರೈತರು ಮುಷ್ಕರ ಆರಂಭಿಸಿ ಇಂದಿಗೆ 134 ದಿನಗಳು ಕಳೆದಿವೆ. ಆರಂಭದಿಂದ ಇಂದಿನವರೆಗೂ ಈ ಮುಷ್ಕರವನ್ನು ದೇಶದ್ರೋಹದ ಚೌಕಟ್ಟಿನಲ್ಲೇ ನೋಡುತ್ತಿರುವ ಆಡಳಿತ ವ್ಯವಸ್ಥೆ ಕರ್ನಾಟಕಕ್ಕೆ ಬಂದಿದ್ದ ರೈತ ನಾಯಕ ಟಿಕಾಯತ್ ವಿರುದ್ಧ ಕ್ಷುಲ್ಲಕ ಕಾರಣಗಳಿಗಾಗಿ ಎಫ್‍ಐಆರ್ ದಾಖಲಿಸುವ ಮೂಲಕ ತನ್ನ ಕ್ರೌರ್ಯ ಮೆರೆದಿದೆ.

ಸಂವಿಧಾನಬಾಹಿರವಾಗಿ ಒಂದು ಜನವಿರೋಧಿ ಕರಾಳ ಶಾಸನವನ್ನು ಜಾರಿಗೊಳಿಸುವುದೇ ಪ್ರಜಾತಂತ್ರಕ್ಕೆ ಮಾಡುವ ದೊಡ್ಡ ಅಪಚಾರ ಎನ್ನುವ ಪ್ರಜ್ಞೆ ಜನಪ್ರತಿನಿಧಿಗಳಲ್ಲಿರಬೇಕು. ಆದರೆ #ಆತ್ಮನಿರ್ಭರ ಭಾರತದಲ್ಲಿ ಈ ಪ್ರಜ್ಞೆ ಸತ್ತುಹೋಗಿರುವುದೇ ಅಲ್ಲದೆ, ಕೋವಿದ್ ಬಿಕ್ಕಟ್ಟಿನ ಸಂದರ್ಭದಲ್ಲೇ ಹಲವು ಕಾನೂನುಗಳು ಜಾರಿಯಾಗುವ ಮೂಲಕ ಆಡಳಿತ ವ್ಯವಸ್ಥೆಯ ಕ್ರೌರ್ಯ ಹಂತಹಂತವಾಗಿ ಅನಾವರಣವಾಗುತ್ತಿದೆ. ಮೂರು ಕೃಷಿ ಮಸೂದೆಗಳು ಕೇವಲ ರೈತರನ್ನು ಬಾಧಿಸುವುದಿಲ್ಲ, ಸಮಸ್ತ ಜನಕೋಟಿಯನ್ನೂ ಬಾಧಿಸುತ್ತದೆ. ಈ ವಾಸ್ತವವನ್ನು ಹಲವಾರು ವೇದಿಕೆಗಳಲ್ಲಿ ಹೇಳಿಯಾಗಿದೆ. ಮತ್ತೊಂದು ದೇಶದ ವಿಮೋಚನೆಗಾಗಿ ಹೋರಾಡಿದ ಒಂದು ಜೀವ ಇಲ್ಲಿ ನೂರಕ್ಕೂ ಹೆಚ್ಚು ದಿನ ಬಿಸಿಲು, ಮಳೆ, ಚಳಿ ಗಾಳಿ ಲೆಕ್ಕಿಸದೆ ಹೋರಾಡುತ್ತಿರುವ ಜೀವಗಳನ್ನು ಆಂದೋಲನಜೀವಿಗಳೆಂದು ಅಪಮಾನಿಸುವುದನ್ನು ನೋಡಿದಾಗ ನಮ್ಮ ಪ್ರಾತಿನಿಧಿಕ ಸರಕಾರಕ್ಕೆ ಕಣ್ಣು ಕಿವಿ ನಿಷ್ಕ್ರಿಯವಾಗಿವೆ ಎಂದೇ ಭಾಸವಾದೀತು.

ಭಾರತದ ಸಂವಿಧಾನ ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ಪ್ರತಿರೋಧದ ಹಕ್ಕನ್ನು ನೀಡಿದೆ. ಹೀಗೆಯೇ ಪ್ರತಿಭಟನೆ ನಡೆಸಬೇಕು ಎಂಬ ನಿಯಮಗಳನ್ನು ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಪೇಕ್ಷಿಸಲಾಗುವುದಿಲ್ಲ. ಜನರು ತಮ್ಮ ಹಕ್ಕುಗಳಿಗಾಗಿ , ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ಹೋರಾಡುತ್ತಾರೆ. ಕೆಲವು ಹೋರಾಟಗಳು ಶಾಂತಿಯುತವಾಗಿರುತ್ತವೆ, ಕೆಲವು ಹಿಂಸಾತ್ಮಕವಾಗಿರುತ್ತವೆ. ಅಂತಿಮವಾಗಿ ಸಮಾಜದ ಉನ್ನತಿಗಾಗಿ ಸಮಷ್ಟಿ ಪ್ರಜ್ಞೆ ಇರುವವರು ಹೋರಾಟ ನಡೆಸುತ್ತಾರೆ. ವ್ಯಕ್ತಿಗತ ಪ್ರತಿಷ್ಠೆ ಅಥವಾ ಅನುಕೂಲಗಳಿಗೆ ಸಾರ್ವತ್ರಿಕ ಹೋರಾಟಗಳು ರೂಪುಗೊಳ್ಳುವುದಿಲ್ಲ. ಹಾಗಾಗಿ ಒಂದು ಪ್ರಜಾತಂತ್ರ ವ್ಯವಸ್ಥೆ ಜನರ ಹೋರಾಟಗಳನ್ನು ಸಮಷ್ಟಿ ಪ್ರಜ್ಞೆಯ ನೆಲೆಯಲ್ಲಿ ನೋಡಿದಾಗಲೇ ಸಂವೇದನಾಶೀಲ ಪರಿಹಾರ ಸಾಧ್ಯವಾಗುತ್ತದೆ.

ಭಾರತ ಈ ಸಂವೇದನೆಯನ್ನು ಕಳೆದುಕೊಳ್ಳುತ್ತಿದೆ. ಲಕ್ಷಾಂತರ ಜನತೆಯ ಆಶೋತ್ತರಗಳನ್ನು ಪ್ರತಿನಿಧಿಸುವ ಬೃಹತ್ ಜನಾಂದೋಲನಗಳನ್ನು ಅನುಮಾನಿಸಿ ನೋಡುವ ಮೂಲಕ, ಅಪಮೌಲ್ಯಗೊಳಿಸುವ ಮೂಲಕ #ಆತ್ಮನಿರ್ಭರ ಭಾರತ ತನ್ನ ಮಾನವೀಯ ನೆಲೆಗಳನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿದೆ. ಹಾಗಾಗಿಯೇ ನೆರೆ ರಾಷ್ಟ್ರದ ಹೋರಾಟಗಳಿಗೆ ಮಿಡಿಯುವ ಆಳುವವರ ಮನಸು ಆಂತರಿಕ ಹೋರಾಟಗಳ ಸಂದರ್ಭದಲ್ಲಿ ನಿರ್ಲಿಪ್ತವಾಗುತ್ತದೆ ಅಥವಾ ಕ್ರೂರ ಮೌನಕ್ಕೆ ಶರಣಾಗುತ್ತದೆ. 134 ದಿನಗಳ ರೈತ ಮುಷ್ಕರದಲ್ಲಿ 200ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದರೂ, ಮುಷ್ಕರ ನಿರತ ರೈತರ ಬೇಡಿಕೆಗಳಿಗೆ ಸ್ಪಂದಿಸಲು ಮುಂದಾಗದಿರುವುದು ಬಹುಶಃ ಒಂದು ಪರಂಪರೆಯಾಗಿ ಮುಂದುವರೆಯುವ ಸಾಧ್ಯತೆಗಳಿವೆ.

ಇದರ ಒಂದಂಶವನ್ನು ಕರ್ನಾಟಕದ ಸಾರಿಗೆ ನೌಕರರ ಮುಷ್ಕರದಲ್ಲಿ ಕಾಣುತ್ತಿದ್ದೇವೆ. ರಸ್ತೆ ಸಾರಿಗೆಯನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದಲೇ ಶಕುನಿಯ ತಂತ್ರಗಳನ್ನು ಬಳಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಸಾರಿಗೆ ನೌಕರರ ಐಕ್ಯತೆಯನ್ನು ಭಂಗಗೊಳಿಸಲು ವಾಮಮಾರ್ಗಗಳನ್ನು ಅನುಸರಿಸುತ್ತಿದೆ. ಇದರ ಫಲವೇ ರಾತ್ರೋರಾತ್ರಿ ಉದಯವಾದ ಮತ್ತೊಂದು ಕಾರ್ಮಿಕ ಸಂಘಟನೆ ಮತ್ತು ಸಾರಿಗೆ ನೌಕರರ ಹಠಾತ್ ಮುಷ್ಕರಗಳು. ಏನೇ ಆದರೂ ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾದದ್ದು. ಕೋವಿದ್ ಸಂದರ್ಭದಲ್ಲೂ ತಮ್ಮ ಜೀವ ಒತ್ತೆಯಿಟ್ಟು ದುಡಿದ ಲಕ್ಷಾಂತರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಆಲಿಸಲೂ ಸಿದ್ಧವಿಲ್ಲದ ರಾಜ್ಯ ಸರ್ಕಾರ, ಖಾಸಗಿ ಬಸ್ಸುಗಳನ್ನು ಪರ್ಯಾಯವಾಗಿ ಬಳಸುವ ಮೂಲಕ ತನ್ನ ಕುತಂತ್ರವನ್ನು ಪ್ರದರ್ಶಿಸಿದೆ. ಮುಷ್ಕರ ನಿರತ ನಾಗರಿಕರನ್ನು, ರೈತ ಕಾರ್ಮಿಕರನ್ನು ಮಾತುಕತೆಗೂ ಆಹ್ವಾನಿಸದೆ, ನಿರ್ಲಕ್ಷಿಸುವುದು ಹಾಲಿ ಕೇಂದ್ರ ಸರ್ಕಾರದಿಂದ ಪಡೆದ ಮಾರ್ಗದರ್ಶನದ ಫಲ.

#ಆತ್ಮನಿರ್ಭರ ಭಾರತದ ನೂತನ ಆರ್ಥಿಕ ನೀತಿಗಳ ಪರಿಣಾಮ ಮುಂದಿನ ದಿನಗಳಲ್ಲಿ ದುಡಿಮೆಯ ಕೈಗಳು ಹೆಚ್ಚು ಕಾಲ ಮುಷ್ಕರಗಳಲ್ಲೇ ಕಳೆಯಬೇಕಾಗಬಹುದು. ಹೊಸ ಕಾರ್ಮಿಕ ಸಂಹಿತೆಗಳು ದುಡಿಮೆಗಾರರ ಎಲ್ಲ ಹಕ್ಕುಗಳನ್ನೂ ಕಸಿದುಕೊಂಡು ವಸಾಹತುಕಾಲದ ಮಾರುಕಟ್ಟೆ ವಾತಾವರಣವನ್ನು ಸೃಷ್ಟಿಮಾಡಲಿದೆ. ಈ ಹಣಕಾಸು ವರ್ಷದಲ್ಲೇ ದೇಶದ ಹಲವು ಸಾರ್ವಜನಿಕ ಉದ್ದಿಮೆಗಳು ಮಾರುಕಟ್ಟೆ ಪ್ರವೇಶಿಸಲಿದ್ದು ಕ್ರಮೇಣ ಖಾಸಗಿ ಪಾಲಾಗಲಿವೆ. ಬಿಪಿಸಿಎಲ್, ಬಿಇಎಂಲ್, ಎಲ್‍ಐಸಿ, ರೈಲ್ವೆ ಸಾರಿಗೆ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕಾರ್ಮಿಕರು ಅನಿಶ್ಚಿತತೆಯನ್ನು ಎದುರಿಸಲಿದ್ದಾರೆ. ನಿಸ್ಸಂಶಯವಾಗಿ ಕಾರ್ಮಿಕ ಹೋರಾಟಗಳೂ ತೀವ್ರತೆ ಪಡೆದುಕೊಳ್ಳುತ್ತವೆ. ತನ್ನ ಸೂರು ಮತ್ತು ಅಡಿಪಾಯ ಸುಭದ್ರವಾಗಿದೆ ಎಂಬ ಭ್ರಮೆಯಲ್ಲಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ಈ ವಾಸ್ತವದ ಅರಿವು ಇರಬೇಕು ಇಲ್ಲವಾದಲ್ಲಿ ಜಾಗೃತಿ ಮೂಡಿಸುವುದು ಕಾರ್ಮಿಕ ಸಂಘಟನೆಗಳ ಆದ್ಯತೆಯಾಗಬೇಕು.

ಈ ಸಂಭಾವ್ಯ ಹೋರಾಟಗಳನ್ನೂ ರೈತ ಮುಷ್ಕರದಂತೆಯೇ ನಿರ್ಲಕ್ಷಿಸುವ, ತಂತಾನೇ ಶಿಥಿಲವಾಗಿ, ಅಂತ್ಯಗಾಣುವಂತೆ ಮಾಡುವ ಅಥವಾ ಮುಷ್ಕರ ನಿರತ ದುಡಿಮೆಗಾರರ ಮೇಲೆ ಅನಗತ್ಯ ಆರೋಪಗಳನ್ನು ಹೊರಿಸಿ, ಸುಪ್ತ ಹತಾಶೆ ಮತ್ತು ಅಸಮಧಾನ ಸ್ಫೋಟಿಸುವಂತೆ ಮಾಡುವ ಸಾಧ್ಯತೆಗಳೂ ಇವೆ. ಈಗಾಗಲೇ ದೆಹಲಿಯಲ್ಲಿ ಮುಷ್ಕರ ಹೂಡಿರುವ ರೈತ ನಾಯಕರ ವಿರುದ್ಧ ಹಲವು ಮೊಕದ್ದಮೆಗಳನ್ನು ಹೂಡಲಾಗಿದೆ. ಕೆಲವು ರಾಜ್ಯಗಳಲ್ಲಿ ರೈತರು ತಾಳ್ಮೆ ಕಳೆದುಕೊಂಡು ಹಲ್ಲೆ ನಡೆಸಿರುವುದೂ ಇದೆ. ಆದರೂ ಈ ರೈತ ಮುಷ್ಕರ ಸುದೀರ್ಘಕಾಲ ಶಾಂತಿಯುತವಾಗಿಯೇ ನಡೆದುಬಂದಿದೆ. ಸಮೂಹ ಪ್ರಜ್ಞೆಯನ್ನು ಮತ್ತು ಜನಸಮೂಹಗಳ ಸಂಯಮವನ್ನು ಹೆಚ್ಚು ಕಾಲ ದಿಗ್ಬಂಧನಕ್ಕೊಳಪಡಿಸಿ ಹಿಡಿದಿಡಲಾಗುವುದಿಲ್ಲ ಎಂದು ಇತಿಹಾಸ ನಿರೂಪಿಸಿದೆ. ಆಳುವವರಿಗೆ ಈ ಪರಿಜ್ಞಾನ, ಪರಿವೆ ಇರಬೇಕು.

ಎಲ್ಲ ಹೋರಾಟಗಳೂ ರೈತ ಮುಷ್ಕರದಂತೆಯೇ ನಡೆಯುವುದಿಲ್ಲ ಎಂಬ ವಾಸ್ತವವನ್ನೂ ಸರಕಾರ ಅರಿತಿರಬೇಕು. ಹಸಿವು, ಬಡತನ ಮತ್ತು ಜೀವನೋಪಾಯದ ಸಂಕಷ್ಟಗಳ ಅರಿವಿದ್ದವರಿಗೆ ಮಾತ್ರವೇ ಅದರಿಂದುಂಟಾಗುವ ಹತಾಶೆ, ಆಕ್ರೋಶದ ಪರಿವೆಯೂ ಇರಲು ಸಾಧ್ಯ. #ಆತ್ಮನಿರ್ಭರ ಭಾರತ ಎರಡನ್ನೂ ಕಳೆದುಕೊಂಡಿದೆ. ರಾಜ್ಯ ಬಿಜೆಪಿ ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ, ಪರ್ಯಾಯ ಮಾರ್ಗಗಳ ಮೂಲಕ ಮುಷ್ಕರವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಇದನ್ನೇ ಬಿಂಬಿಸುತ್ತದೆ. ನಿರುದ್ಯೋಗ ತಾಂಡವಾಡುತ್ತಿರುವ ಭಾರತದಂತಹ ದೇಶದಲ್ಲಿ ಪರ್ಯಾಯ ಮಾರ್ಗಗಳು ಸುಲಭವಾಗಿ ಕಂಡುಬರುತ್ತವೆ. ಆದರೆ ಇದರಿಂದ ಸಮಸ್ಯೆ ಉಲ್ಬಣಿಸುತ್ತದೆಯೇ ಹೊರತು ಬಗೆಹರಿಯುವುದಿಲ್ಲ.

ನೊಂದ ಜನತೆಯ, ಶೋಷಿತ ಜನಸಮುದಾಯಗಳ ದನಿಯನ್ನು ಕುಳಿತು ಆಲಿಸುವ ವ್ಯವಧಾನವೇ ಸರಕಾರಗಳಲ್ಲಿ ಇಲ್ಲದೆ ಹೋದರೆ ಹತಾಶೆ ಆಕ್ರೋಶವಾಗಿ ಪರಿವರ್ತನೆಯಾಗುತ್ತದೆ. ಭಾರತದ ಶ್ರಮಜೀವಿಗಳ ಬದುಕಿಗೆ ಸಂಬಂಧವೇ ಇಲ್ಲದ ಮಂದಿರ ಮಸೀದಿ ವಿವಾದಗಳಲ್ಲೇ ಈ ಸ್ಫೋಟ ಉಂಟಾದುದನ್ನು ನಾವು ಕಂಡಿದ್ದೇವೆ. ಇಂದು ಜನತೆಯ ಮುಂದೆ ಬದುಕಿನ ಪ್ರಶ್ನೆ ಪ್ರಧಾನವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ, ಎನ್‍ಆರ್‍ಸಿ, ಎನ್‍ಪಿಆರ್, ಕೃಷಿ ಮಸೂದೆಗಳು, ಕಾರ್ಮಿಕ ಸಂಹಿತೆಗಳು ಇವೆಲ್ಲವೂ ಈ ಶ್ರಮಜೀವಿಗಳ, ದುಡಿಮೆಯ ಕೈಗಳ ನಾಳಿನ ಬದುಕಿಗೆ ನೇರವಾಗಿ ಸಂಬಂಧಿಸಿದ ಪ್ರಶ್ನೆಗಳಾಗಿವೆ. ಶಹೀನ್‍ಭಾಗ್ ಅಂತಿಮವಾಗಿ ಆಳುವವರ ಕುತಂತ್ರಕ್ಕೆ ಬಲಿಯಾಗಿ ಹಿಂಸಾತ್ಮಕ ಸ್ವರೂಪ ಪಡೆದರೂ, ಆ ಹೋರಾಟದ ಹಿಂದಿನ ಆಶಯದ ಕಿಡಿಗಳು ಇನ್ನೂ ಜೀವಂತವಾಗಿವೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇಂದಿನ ರೈತ ಮುಷ್ಕರವನ್ನೂ ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ.

ಇತ್ತೀಚೆಗೆ ಛತ್ತಿಸ್‍ಘಡದಲ್ಲಿ 22 ಯೋಧರು ಮಾವೋವಾದಿಗಳ ದಾಳಿಗೆ ಬಲಿಯಾಗಿದ್ದಾರೆ. ಇಡೀ ದೇಶದ ನಾಗರಿಕ ಸಮಾಜ ಈ ಯೋಧರ ಸಾವಿಗೆ ಕಂಬನಿ ಮಿಡಿದಿದೆ. ಇದು ಸಹಜ. ಆದರೆ ಕಳೆದ 134 ದಿನಗಳಲ್ಲಿ 200ಕ್ಕೂ ಹೆಚ್ಚು ರೈತರು ಪ್ರಾಣ ತೆತ್ತಿದ್ದಾರೆ. ಯೋಧರು ದೇಶದ ರಕ್ಷಣೆಗಾಗಿ ಹುತಾತ್ಮರಾಗಿದ್ದರೆ ಈ ರೈತರು ಈ ದೇಶದ ಭವಿಷ್ಯದ ಆಹಾರ ಹಕ್ಕಿನ ರಕ್ಷಣೆಗಾಗಿ ಹುತಾತ್ಮರಾಗಿದ್ದಾರೆ. ಆದರೆ ಈ ದೇಶದ ಒಂದು ವರ್ಗದ ಪ್ರಜ್ಞಾವಂತ ಸಮಾಜ ಮಡಿದ ರೈತರ ಸಾವನ್ನು ಸ್ವಾಗತಿಸುವ, ಕೆಲವೊಮ್ಮೆ ಸಂಭ್ರಮಿಸುವ ವಿಕೃತ ಮನಸ್ಥಿತಿಗೆ ತಲುಪಿರುವುದು ನಮ್ಮ ನಡುವಿನ ದುರಂತ. ನಾಳೆ ಸಾರಿಕೆ ನೌಕರರು, ಕಾರ್ಖಾನೆಯ ನೌಕರರು ಮಡಿದರೂ ಇದೇ ಮನಸ್ಥಿತಿಯುಳ್ಳವರೇ ಯಥಾಸ್ಥಿತಿಗಾಗಿ ಹಂಬಲಿಸುತ್ತಾರೆ. ಸಂಯಮ, ಸಂವೇದನೆ ಕಳೆದುಕೊಂಡು ಬೆತ್ತಲಾಗಿರುವ ಮಾಧ್ಯಮಗಳು ಇವರನ್ನು ಬೌದ್ಧಿಕವಾಗಿ ಪೋಷಿಸುತ್ತಲೇ ಇರುತ್ತವೆ.

22 ಯೋಧರ ಸಾವಿಗೆ ಪ್ರತಿಯಾಗಿ ಇನ್ನೂ ಹೆಚ್ಚಿನ ಮಾವೋವಾದಿಗಳ ಹತ್ಯೆ ಮಾಡುವುದು ಸಮಸ್ಯೆಗೆ ಪರಿಹಾರವಾಗಲಾರದು. ಪುಲ್ವಾಮದಲ್ಲಿ ಮಡಿದ ಐವತ್ತು ಯೋಧರ ಕುಟುಂಬಗಳು ಇನ್ನೂ ನ್ಯಾಯಾಂಗದತ್ತ ಕಣ್ಣರಳಿಸಿ ನೋಡುತ್ತಲೇ ಇವೆ. ಈ ಯೋಧರ ಕುಟುಂಬಗಳೂ ಭಿನ್ನವಾಗಿರಲು ಸಾಧ್ಯವಿಲ್ಲ. ಇದು ದಶಕಗಳಿಂದ ನಡೆದುಬಂದಿರುವ ವಿದ್ಯಮಾನ. ಸಮಸ್ಯೆ ಇರುವುದು ಭೂಮಿಯ ಪ್ರಶ್ನೆಯಲ್ಲಿ. ಆದಿವಾಸಿಗಳ ಹಕ್ಕುಗಳು, ಅರಣ್ಯ ಹಕ್ಕುಗಳು, ಪರಿಸರ ರಕ್ಷಣೆ ಮತ್ತು ಭೂ ಹಂಚಿಕೆಯ ಪ್ರಶ್ನೆಯಲ್ಲಿ. ಈ ನಿಟ್ಟಿನಲ್ಲಿ ಯಾವುದೇ ಪರಿಹಾರ ಮಾರ್ಗಗಳನ್ನು ಸೂಚಿಸದೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಭೂಮಿಯನ್ನು ಗಣಿಗಾರಿಕೆಗಾಗಿ, ಔದ್ಯಮಿಕ ವಿಸ್ತರಣೆಗಾಗಿ, ವಿಮಾನ ನಿಲ್ದಾಣ, ರಸ್ತೆ ಮೇಲ್ಸೇತುವೆ, ಶ್ರೀಮಂತರ ಮೋಜು ಮಸ್ತಿಗಾಗಿ ಕಾರ್ಪೋರೇಟ್ ಉದ್ಯಮಿಗಳಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುವ ಒಂದು ವ್ಯವಸ್ಥೆ ಈ ಪ್ರಕ್ರಿಯೆಯಲ್ಲಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡು ಬೀದಿಪಾಲಾಗುವ ಆದಿವಾಸಿ ಸಮುದಾಯಗಳು ಮತ್ತು ಅರಣ್ಯ ಉತ್ಪನ್ನವನ್ನೇ ನಂಬಿ ಬದುಕುವ ಜನರತ್ತ ಕಣ್ಣೆತ್ತಿಯೂ ನೋಡದಿದ್ದಾಗ, ಮಾವೋವಾದದಂತಹ ಹಿಂಸಾತ್ಮಕ ಹೋರಾಟಗಳು ತೀವ್ರವಾಗುತ್ತವೆ. ಇದು ಚಾರಿತ್ರಿಕ ನೆಲೆಯಲ್ಲಿ ಚರ್ಚೆಗೊಳಗಾಗಬೇಕಾದ ಸಮಸ್ಯೆಯೇ ಹೊರತು ಸಂಘಟನಾತ್ಮಕ ನೆಲೆಯಲ್ಲಿ ಅಲ್ಲ.

ಮೈಸೂರಿನ ಬಳಿ ಇರುವ ಕೋಚನಹಳ್ಳಿ ಗ್ರಾಮದಲ್ಲಿ ನಾನ್ನೂರು ಎಕರೆಗೂ ಹೆಚ್ಚು ಭೂಮಿಯನ್ನು ರೈತರಿಂದ ಅತಿ ಅಗ್ಗದ ಬೆಲೆಗೆ ಖರೀದಿಸಿರುವ ಸರಕಾರದ ಒಂದು ಸಂಸ್ಥೆ ಈಗ ಹೆರಿಟೇಜ್ ಗಾಲ್ಫ್ ಕಂಪನಿಯೊಂದಕ್ಕೆ ಲಕ್ಷಾಂತರ ರೂಗಳಿಗೆ ಮಾರಾಟ ಮಾಡುತ್ತಿದ್ದು ಅಲ್ಲಿ ಶ್ರೀಮಂತರಿಗಷ್ಟೇ ನಿಲುಕುವ ಗಾಲ್ಫ್ ಮೈದಾನ ನಿರ್ಮಾಣಕ್ಕೆ ಮುಂದಾಗಿದೆ. ಕಳೆದ ಹದಿನೈದು ದಿನಗಳಿಂದ ಈ ಗ್ರಾಮದ ರೈತರು ಧರಣಿ ಮುಷ್ಕರ ನಡೆಸುತ್ತಿದ್ದಾರೆ. ಮೈಸೂರು ನಗರದಲ್ಲಿ ಲಲಿತಮಹಲ್ ಸುತ್ತಲಿನ 640 ವೃಕ್ಷಗಳನ್ನು ಕಡಿದು ಹೆಲಿಪ್ಯಾಡ್ ನಿರ್ಮಿಸುವ ಯೋಜನೆಗೂ ಸರಕಾರ ಮುಂದಾಗಿದೆ. ಕೃಷಿ ಸಂಪತ್ತನ್ನು, ಅರಣ್ಯ ಸಂಪತ್ತನ್ನು ನಾಶಪಡಿಸಿ ಅಭಿವೃದ್ಧಿಯತ್ತ ಸಾಗುವ ನವ ಉದಾರವಾದಿ ನೀತಿಗಳು ಭವಿಷ್ಯದ ಪೀಳಿಗೆಗೆ ಮರುಭೂಮಿಗಳನ್ನಷ್ಟೇ ಉಳಿಸಲು ಸಾಧ್ಯ.

ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಇಂತಹ ಜನಹಿತ ವಿರೋಧಿ ಯೋಜನೆಗಳಿಗೆ ಹಾಸುಗಲ್ಲುಗಳನ್ನು ಸಿದ್ಧಪಡಿಸುತ್ತದೆ. ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳು ಅನ್ನ ಬೆಳೆಯುವ ರೈತನನ್ನು ಭೂಮಿಯಿಂದ ಬೇರ್ಪಡಿಸಿ, ದುಡಿಮೆಗಾರನನ್ನಾಗಿ ಮಾಡುತ್ತವೆ. ಮೂಲತಃ ಈ ಭೂಮಿಯ ಪ್ರಶ್ನೆಯೇ ಭಾರತದ ಬಹುಪಾಲು ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ನಕ್ಸಲ್‍ಬಾರಿಯ ಉಗಮ ಮತ್ತು ಏಳುಬೀಳುಗಳನ್ನೂ ಈ ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. ಬಂದೂಕಿನ ನಳಿಕೆಯಿಂದಲೇ ಕ್ರಾಂತಿಯಾಗುವುದಿಲ್ಲ ಎನ್ನುವುದು ಸತ್ಯ ಆದರೆ ಬಂದೂಕಿನ ನಳಿಕೆಯಿಂದ ಜನಾಂದೋಲನಗಳನ್ನು ಹತ್ತಿಕ್ಕುವುದೂ ಸಾಧ್ಯವಿಲ್ಲ ಎಂಬ ವಾಸ್ತವವನ್ನು ಆಳುವ ವರ್ಗಗಳು ಅರ್ಥಮಾಡಿಕೊಳ್ಳಬೇಕಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಮಾರ್ಗಗಳನ್ನೇ ಅನುಸರಿಸಿ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ಶಾಂತಿಯುತ ಹೋರಾಟಗಳನ್ನು ನಡೆಸುವ ದುಡಿಮೆಗಾರರ ದನಿಗೆ ದನಿಯಾಗುವುದು ಚುನಾಯಿತ ಸರಕಾರಗಳ ಆದ್ಯತೆಯಾಗಬೇಕು.

ದುರಂತ ಎಂದರೆ #ಆತ್ಮನಿರ್ಭರ ಭಾರತ ಈ ಹಾದಿಯಿಂದ ವಿಮುಖವಾಗಿದೆ. ದೇಶದ ಕೋಟ್ಯಂತರ ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂದು ಬೋಧಿಸುವ ಮುನ್ನ, ಈ ದೇಶದ ರೈತ ಸಮುದಾಯ ಮತ್ತು ಕಾರ್ಮಿಕರು, ತಮ್ಮ ಜೀವನೋಪಾಯಕ್ಕೆ ಎದುರಾಗಲಿರುವ ಕಂಟಕಗಳ ಹಿನ್ನೆಲೆಯಲ್ಲಿ, ಪ್ರಭುತ್ವದ ಮುಂದಿಟ್ಟಿರುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂದು ಯೋಚಿಸುವುದು ವಿವೇಚನೆಯುಳ್ಳ ಸರಕಾರದ ಆದ್ಯತೆಯಾಗಿರಬೇಕು. ಇದು ಇಂದಿನ ತುರ್ತು. ಮಕ್ಕಳಿಗೆ ಪರೀಕ್ಷೆ ಎದುರಿಸುವುದು ಹೇಗೆ ಎಂದು ಅರ್ಥಮಾಡಿಸಲು ಸಾವಿರಾರು ಶಿಕ್ಷಕರಿದ್ದಾರೆ, ಸಂಸ್ಥೆಗಳಿವೆ. ಆದರೆ ಸಾರ್ವಭೌಮ ಪ್ರಜೆಗಳ ಸಮಸ್ಯೆಗಳನ್ನು ನಿವಾರಿಸಲು ಇರುವುದು ಒಂದೇ ಸರಕಾರ, ಅದೂ ಚುನಾಯಿತ ಪ್ರಾತಿನಿಧಿಕ ಸರಕಾರ. ನಮ್ಮ ಪ್ರಭುತ್ವದ ಕಿವಿಗಳು ಯಾರಿಗಾಗಿ ತೆರೆದಿರಬೇಕು ?

ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಸಮಸ್ಯೆಗಳನ್ನು ಆಲಿಸಿ, ಅರ್ಥಮಾಡಿಕೊಂಡು ನಂತರ ನಿರ್ಲಕ್ಷಿಸುವುದು ಹೊಣೆಗೇಡಿತನ. ಸಮಸ್ಯೆಯ ಪರಿಹಾರಕ್ಕೆ ಶ್ರಮಿಸಿ ಜನತೆಯ ಆಶಯಗಳಿಗೆ ತದ್ವಿರುದ್ಧವಾದ ಪರಿಹಾರ ಸೂಚಿಸುವುದು ಅವಿವೇಕದ, ವಿವೇಚನೆಯಿಲ್ಲದ ಧೋರಣೆ. ಸಮಸ್ಯೆಗಳನ್ನು ಕಂಡೂ ಕಾಣದಂತಿದ್ದು ಅನ್ಯಮನಸ್ಕ ಸ್ಥಿತಿಯಲ್ಲಿರುವುದು ಅಪ್ರಬುದ್ಧತೆಯ ಲಕ್ಷಣ. ಈ ಮೂರೂ ಪ್ರಕಾರಗಳನ್ನು ಸ್ವತಂತ್ರ ಭಾರತ ಕಂಡಿದೆ, ಅರಗಿಸಿಕೊಂಡಿದೆ. ಆದರೆ ಪ್ರಜೆಗಳ ಸಮಸ್ಯೆಗಳನ್ನು ಆಲಿಸಲೂ ಒಪ್ಪದೆ, ನೊಂದ ಪ್ರಜೆಗಳ ಬವಣೆಯತ್ತ ಕಣ್ಣೆತ್ತಿಯೂ ನೋಡದೆ ಇರುವುದು ಕ್ರೌರ್ಯ. ಈ ಪ್ರಕಾರವನ್ನು ಭಾರತ ಈಗ ಕಾಣುತ್ತಿದೆ. 70 ವರ್ಷಗಳಲ್ಲಿ ಕಂಡಿರದ ಅಮಾನುಷ ಬೌದ್ಧಿಕ ಕ್ರೌರ್ಯವನ್ನು ಇಂದು ಕಾಣುತ್ತಿದ್ದೇವೆ. #ಆತ್ಮನಿರ್ಭರ ಭಾರತ ಇದಕ್ಕೆ ಉತ್ತರ ಕಂಡುಕೊಳ್ಳಲೇಬೇಕಲ್ಲವೇ ?

Previous Post

ವಾರಣಾಸಿ: ಮಸೀದಿ ಅಡಿಯಲ್ಲಿ ದೇವಾಲಯವಿದೆಯೇ ಎಂದು ಸರ್ವೇ ನಡೆಸಲು ಆದೇಶ ನೀಡಿದ ಕೋರ್ಟ್

Next Post

ಕೋವಿಡ್ ಲಸಿಕೆ ರಫ್ತು ಮಾಡಬೇಕಾದ ಭಾರತದ ಅನಿವಾರ್ಯತೆ ಮತ್ತು ಲಸಿಕಾ ರಾಜಕಾರಣ

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

“ರಸ್ತೆ ಗುಂಡಿ ಮುಚ್ಚಿಲ್ಲ, ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ, ಕೇವಲ ಜಾಹೀರಾತಿನಿಂದಷ್ಟೇ ಯಶಸ್ಸನ್ನು ಬಿಚ್ಚಿಡುವ ಕೆಲಸ”

May 19, 2026
Next Post
ಕೋವಿಡ್ ಲಸಿಕೆ ರಫ್ತು ಮಾಡಬೇಕಾದ ಭಾರತದ ಅನಿವಾರ್ಯತೆ ಮತ್ತು ಲಸಿಕಾ ರಾಜಕಾರಣ

ಕೋವಿಡ್ ಲಸಿಕೆ ರಫ್ತು ಮಾಡಬೇಕಾದ ಭಾರತದ ಅನಿವಾರ್ಯತೆ ಮತ್ತು ಲಸಿಕಾ ರಾಜಕಾರಣ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada