ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಆ ಎರಡು ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ.
ಕೇರಳ ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿದೆ. ಸತತ ಮೂರನೇ ದಿನವೂ 20 ಸಾವಿರಕ್ಕೂ ಅಧಿಕ ಹೊಸ ಪ್ರಕರಣ ದಾಖಲಾಗುತ್ತಿದ್ದು, ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಎರಡು ಡೋಸ್ ಲಸಿಕೆ ಪಡೆದಿದ್ದರೂ, ಪಡೆಯದೆ ಇದ್ದರು ರಾಜ್ಯಕ್ಕೆ ಬರುವ 72 ಗಂಟೆಗಳ ಮೊದಲು ಮಾಡಿಸಿದ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಲಾಗಿದೆ.
ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಸೇರಿದಂತೆ ಗಡಿ ಜಿಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ಪ್ರಯಾಣಿಕರ ಕಟ್ಟು ನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಹೊರ ರಾಜ್ಯದಿಂದ ರಾಜ್ಯಕ್ಕೆ ಬರುವವರಿಗೆ ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ಅಥವಾ ಎರಡು ಬಾರಿ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.
ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಮೈಸೂರು ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಬೀದರ್ ಮೂಲಕ ರಾಜ್ಯಕ್ಕೆ ಬರುವ ವಾಹನ ಚಾಲಕರು, ಸಹಾಯಕರು ಮತ್ತು ಪ್ರಯಾಣಿಕರು ಮೇಲೆ ತಿಳಿಸಿರುವ ನಿಯಮದ ಅನುಪಾಲನೆಗೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪನೆ ಮತ್ತು ಸಿಬ್ಬಂದಿ ನಿಯೋಜನೆಗೆ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

ವಿಮಾನದ ಬೊರ್ಡ್ ಪಾಸ್ಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.
ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರ ಆರ್.ಟಿ.ಪಿ.ಆರ್ ವರದಿ ಕಡ್ಡಾಯವಾಗಿರಬೇಕು ಇದನ್ನು ರೈಲ್ವೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು.
ಬಸ್ ನಲ್ಲಿ ಪ್ರಯಾಣಿಸುವವರಿಗೂ ಆರ್.ಟಿ.ಪಿ.ಸಿ.ಆರ್ ಕಡ್ಡಾಯ, ಇದನ್ನು ಖಚಿತಪಡಿಸಿಕೊಳ್ಳವ ಜವಾಬ್ದಾರಿ ಬಸ್ ಕಂಡಕ್ಟರ್ ದ್ದಾಗಿದೆ.
ಕೇಳರಕ್ಕೆ ವಿದ್ಯಾಭ್ಯಾಸ, ಬಿಸಿನೆಸ್ ಸಂಬಂಧ ಬರುವವರಿಗೆ 15 ದಿನಕ್ಕೆ ಒಮ್ಮೆ ಆರ್‌ಟಿಪಿಸಿಆರ್ ಟೆಸ್ಟ್ ವರದಿ ಕಡ್ಡಾಯ.
ಸಂವಿಧಾನಿಕ ಕಾರ್ಯಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ, ಎರಡು ವರ್ಷಕಿಂತ ಕಡಿಮೆ ವಯಸ್ಸಿಬ ಮಕ್ಕಳಿಗೆ ಮತ್ತು ಕೇರಳದಿಂದ ಕರ್ನಾಟಕಕ್ಕೆ ತುರ್ತು ಸಂದರ್ಭಗಳಿಗೆ ಆರ್.ಟಿ.ಪಿ.ಸಿ.ಆರ್ ವರದಿ ಹೊಂದುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಕ್ಕ ಪಕ್ಕ ರಾಜ್ಯದಲ್ಲಿ ಕರೋನ ಹೆಚ್ಚಳದ ಕುರಿತು ದೆಹಲಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಈಗಾಗಲೇ ಕೇರಳ ಮತ್ತು ಕರ್ನಾಟಕ ಗಡಿಭಾಗದಲ್ಲಿ ಎಚ್ಚರಿಕೆ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು.
ರಾಜ್ಯಕ್ಕೆ ವಾಪಸಾದ ನಂತರ, ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಾಗುವುದು. ಮತ್ತಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

