ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ನಿವೃತ್ತ ಐಪಿಎಸ್ ಅಧಿಕಾರಿ ಎಂ ನಾಗೇಶ್ವರ ರಾವ್ ಅವರು ಈಗ ಹೊಸತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 2019ರಲ್ಲಿ ಸಣ್ಣ ಅವಧಿಗೆ ಸಿಬಿಐ ಹಂಗಾಮಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಇವರು, ಭಾರತವನ್ನು ಆರ್ಎಸ್ಎಸ್ ಮುಕ್ತ ರಾಷ್ಟ್ರವಾಗಿಸಬೇಕು ಎಂದು ಕರೆ ನೀಡಿದ್ದಾರೆ. RSS ಒಂದು ‘ಕಪಟ ಹಿಂದುತ್ವವಾದಿ ವಂಚಕ’ ಸಂಸ್ಥೆ ಎಂದು ಟೀಕಿಸಿದ್ದಾರೆ.
ಸರಣಿ ಟ್ವೀಟ್’ಗಳ ಮೂಲಕ RSS ಮೇಲೆ ಬೆಂಕಿಯುಗುಳಿರುವ ನಾಗೇಶ್ವರ ರಾವ್, ದೇಶದಲ್ಲಿ RSS ಅನ್ನು ಬಹಿಷ್ಕರಿಸಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದಾರೆ. ಟ್ವಿಟರ್’ನಲ್ಲಿ ತಮ್ಮ ಬಯೋ ಕೂಡಾ ಬದಲಾಯಿಸಿರುವ ನಾಗೇಶ್ವರ ರಾವ್ ಅವರು, ‘ಹಿಂದೂಗಳಿಗೆ ಸಮಾನ ಹಕ್ಕು ಹಾಗೂ ಕಪಟ ಹಿಂದುತ್ವವನ್ನು ಬಹಿರಂಗಪಡಿಸುವುದು’ ಎಂದು ಬರೆದುಕೊಂಡಿದ್ದಾರೆ.
ನಾಗೇಶ್ವರ್ ರಾವ್ ಅವರ ಈ ಟೀಕೆಗೆ ಕಾರಣವಾಗಿದ್ದು ಮುಂಬೈಯಲ್ಲಿ ಆರ್ಎಸ್ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಅವರು ಮಾಡಿದ್ದ ಭಾಷಣ. ಮುಂಬೈನಲ್ಲ ಏರ್ಪಡಿಸಿದ್ದ ವಿಚಾರಗೊಷ್ಠಿಯಲ್ಲಿ ಮಾತನಾಡುತ್ತ, “ಹಿಂದೂ ಮತ್ತು ಮುಸ್ಲೀಮರ ನಡುವ ವೈಮನಸ್ಯ ಉಂಟು ಮಾಡಿ ಪರಸ್ಪರರು ಜಗಳವಾಡುವಂತೆ ಮಾಡಿದ್ದು ಬ್ರಿಟೀಷರು,” ಎಂದು ಮೋಹನ್ ಭಾಗವತ್ ಹೇಳಿದ್ದರು.
ಈ ಹೇಳಿಕೆಯಿಂದಾಗಿ ಅಸಮಾಧಾನಗೊಂಡ ನಾಗೇಶ್ವರ ರಾವ್, “RSS ಮುಸ್ಲೀಮರಿಗೆ ಧೈರ್ಯ ತುಂಬುತ್ತಿದೆ. ಹಿಂದೂಗಳನ್ನು ಹಾಗೂ ಹಿಂದುತ್ವವನ್ನು ವಿನಾಶದ ಹಾದಿಯಲ್ಲಿ ಕೊಂಡೊಯ್ಯುತ್ತಿದೆ. ಇಸ್ಲಾಂ ಗೆಲ್ಲುತ್ತದೆ, ಏಕೆಂದರೆ ಅದು ಎಂದಿಗೂ ಬಗ್ಗದ ಮನಸ್ಥಿತಿಯನ್ನು ಸೃಷ್ಟಿಸುತ್ತದೆ,” ಎಂದು ಹೇಳಿದ್ದಾರೆ.
“RSS’ನಲ್ಲಿ ಇರುವಂತಹ ದೌರ್ಬಲ್ಯವನ್ನು ಇಸ್ಲಾಂ ಮನಗಂಡಿದೆ. ಇದು ಅವರಿಗೆ ಇನ್ನೂ ಹೆಚ್ಚಿನ ಹಿಂಸೆ ಸೃಷ್ಟಿಸಲು ಪ್ರಚೋದನೆ ನಿಡಿದಂತಿದೆ,” ಎಂದು ರಾವ್ ಹೇಳಿದ್ದಾರೆ.

ವಿವಾದಗಳಿಗೇ ಹೆಸರುವಾಸಿಯಾದ ನಿವೃತ್ತ ಅಧಿಕಾರಿ:
ವಿವಾದಗಳನ್ನು ಸೃಷ್ಟಿಸುವುದು ರಾವ್ ಅವರಿಗೆ ಹೊಸ ವಿಚಾರವೇನಲ್ಲ. ಕಳೆದ ಕೆಲವು ವರ್ಷಗಳಿಂದ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಅಭ್ಯಾಸ ಇವರಿಗಿದೆ. ಐಪಿಎಸ್ ಅಧಿಕಾರಿಯಾಗಿದ್ದಾಗ ಸೇವೆಯುದ್ದಕ್ಕೂ ಅಕ್ರಮವೆಸಗಿದ ದೂರು ಹಾಗೂ ಅವರ ಮೇಲಿನ ತನಿಖೆಯಿಂದಲೇ ಹೆಚ್ಚಾಗಿ ಸುದ್ದಿಯಾಗಿದ್ದರು. ಪ್ರಭಾವಿ ವ್ಯಕ್ತಿಗಳ ಪ್ರಕರಣಗಳನ್ನು ಹಳ್ಳ ಹಿಡಿಸಿದ ‘ಕೀರ್ತಿ’ ಇವರಿಗೆ ಸಲ್ಲುತ್ತದೆ.
ಸಂಜಯ್ ಭಂಡಾರಿ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಭಾರತೀಯ ಕಂದಾಯ ಸೇವೆ ವಿಭಾಗ ಎಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ದ ವಿಚಾರಣೆಯನ್ನೇ ನಿಲ್ಲಿಸಿದ್ದರು. ಇದರೊಂದಿಗೆ ಸಿಬಿಐಗೆ ವಹಿಸಲಾಗಿದ್ದ ಹಲವು ಪ್ರಕರಣಗಳನ್ನು ತಮ್ಮ ಪ್ರಭಾವ ಬೀರಿ ಮುಚ್ಚಿ ಹಾಕಲು ಪ್ರಯತ್ನಿಸಿದ್ದ ಆರೋಪವು ಇವರ ಮೇಲೆ ಇತ್ತು. ಸಿಬಿಐ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ಅವರು ತಮ್ಮ ಅಧಿಕಾರದ ದುರಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿದ್ದಾರೆ ಹಾಗೂ ಶೆಲ್ ಕಂಪೆನಿಗಳಿಂದ ನಡೆದ ಅಕ್ರಮದಲ್ಲಿ ಅವರ ಪತ್ನಿಯ ಕೈವಾಡವು ಇದೆ ಎಂಬ ದೂರುಗಳೂ ಕೇಳಿ ಬಂದಿದ್ದವು.
ಸಾಮಾಜಿಕ ಕಾರ್ಯಕರ್ತರಾಗಿದ್ದ ಸ್ವಾಮಿ ಅಗ್ನಿವೇಶ್ ಅವರ ಸಾವನ್ನು ವಿಕೃತ ರೀತಿಯಲ್ಲಿ ಸಂಭ್ರಮಿಸಿದ್ದರು. ಅಗ್ನಿವೇಶರನ್ನು ಹಿಂದೂ ವಿರೋಧಿ ಎಂದು ಜರೆದಿದ್ದ ರಾವ್, ಅವರ ಸಾವು ವಿಡಂಬನಾತ್ಮಕ ಸಾವು ಎಂದು ಹೇಳಿದ್ದರು. ಹಿಂದುತ್ವಕ್ಕೆ ಅಪಾರ ಪ್ರಮಾಣದ ಧಕ್ಕೆ ಉಂಟು ಮಾಡಿದ್ದರು ಎಂದು ಅಗ್ನಿವೇಶ್ ಅವರ ಸಾವಿನ ನಂತರ ಕಿಡಿಕಾರಿದ್ದರು.
“ಉತ್ತಮ ವಿಡಂಬನೆ ಸ್ವಾಮಿ ಅಗ್ನಿವೇಶ್. ನೀವು ಕಾವಿ ಧರಿಸಿದ ಹಿಂದೂ ವಿರೋಧಿ ವ್ಯಕ್ತಿ. ನೀವು ತೆಲುಗು ಬ್ರಾಹ್ಮಣರಾಗಿ ಹುಟ್ಟಿದ್ದಿರಿ ಎಮದು ಹೇಳಲು ನನಗೆ ನಾಚಿಕೆ ಆಗುತ್ತದೆ. ನಿಮಗೆ ಮುಂಚೆಯೇ ಏಕೆ ಸಾವು ಬಂದಿಲ್ಲ ಎಂಬ ಕಾರಣಕ್ಕೆ ನನಗೆ ಯಮರಾಜನ ವಿರುದ್ದ ಸಿಟ್ಟಿದೆ,” ಎಂದು ರಾವ್ ಹೇಳಿದ್ದರು.





