ಆರ್‌ಎಸ್‌ಎಸ್ ಮಾಜಿ ಪ್ರಚಾರಕ ಯಶವಂತ್ ಶಿಂಧೆ ಅವರು ಚುನಾವಣೆಯಲ್ಲಿ ಬಿಜೆಪಿಯ ಗೆಲ್ಲಲು ಬೇಕಾಗಿ 2000 ರ ದಶಕದಲ್ಲಿ ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಯಾದ ವಿಶ್ವ ಹಿಂದೂ ಪರಿಷತ್ ದೇಶದ ವಿವಿಧೆಡೆ ಹಲವಾರು ಬಾಂಬ್ ಸ್ಫೋಟಗಳನ್ನು ನಡೆಸಿವೆ ಎಂದು ಆರೋಪಿಸಿದ್ದಾರೆ. ಆಗಸ್ಟ್ 29 ರಂದು ನಾಂದೇಡ್ ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಆರ್‌ಎಸ್‌ಎಸ್ ವಿರುದ್ಧ ಶಿಂಧೆ ಈ ಆರೋಪಗಳನ್ನು ಮಾಡಿದ್ದಾರೆ.
2006 ರಲ್ಲಿ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಯುವ ಘಟಕವಾದ ಬಜರಂಗ ದಳದ ಕಾರ್ಯಕರ್ತ ಸೇರಿದಂತೆ ಇಬ್ಬರು ವ್ಯಕ್ತಿಗಳು ಬಾಂಬ್ ತಯಾರಿಸುತ್ತಿದ್ದಾಗ ಸ್ಪೋಟಗೊಂಡು ಮೃತಪಟ್ಟಿದ್ದರು. ನಾಂದೇಡ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಮ್ಮನ್ನು ಸಾಕ್ಷಿಯನ್ನಾಗಿ ಮಾಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಶಿಂಧೆ, ತನಗೆ 1990 ರಿಂದ ತನಗೆ ಸಂಘಪರಿವಾರದೊಂದಿಗೆ ಸಂಬಂಧವಿದೆ ಎಂದು ಒಪ್ಪಿಕೊಂಡಿದ್ದಾರೆ.
ನಾಂದೇಡ್ ನಲ್ಲಿ ಸ್ಪೋಟವಾದ ಬಾಂಬನ್ನು ಔರಂಗಾಬಾದ್ ಜಿಲ್ಲೆಯ ಮಸೀದಿಯೊಂದರ ಮೇಲೆ ದಾಳಿ ನಡೆಸಲು ಬಾಂಬ್ ಸಿದ್ಧಪಡಿಸಲಾಗುತ್ತಿತ್ತು ಎಂದು ಶಿಂಧೆ ತಮ್ಮ ಅಫಿಡವಿಟ್‌ನಲ್ಲಿ ಆರೋಪಿಸಿದ್ದಾರೆ. ವಿಶೇಷವೆಂದರೆ, ಈ ಪ್ರಕರಣದಲ್ಲಿ ಅಂದು ಭಯೋತ್ಪಾದನಾ ನಿಗ್ರಹ ದಳ ಸಲ್ಲಿಸಿದ್ದ ಚಾರ್ಜ್ ಶೀಟ್ ತಾಳೆಯಾಗುತ್ತದೆ.
ಮರಣ ಹೊಂದಿದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಾದ ಹಿಮಾಂಶು ಪಾನ್ಸೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನಾಗಿದ್ದ ಎಂದು ಅಫಿಡವಿಟ್ ನಲ್ಲಿ ಅವರು ಹೇಳಿದ್ದಾರೆ.
1999 ರಲ್ಲಿ, ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪದಾಧಿಕಾರಿಯಾದ ಇಂದ್ರೇಶ್ ಕುಮಾರ್ ಅವರ ಸೂಚನೆಯ ಮೇರೆಗೆ ಶಿಂಧೆ ಅವರು “ಹಿಮಾನ್ಶು ಮತ್ತು ಅವರ 7 ಸ್ನೇಹಿತರನ್ನು ಜಮ್ಮುವಿಗೆ ಕರೆದೊಯ್ದರು .. ಅಲ್ಲಿ ಅವರು ಭಾರತೀಯ ಸೇನೆಯ ಜವಾನರಿಂದ ಆಧುನಿಕ ಶಸ್ತ್ರಾಸ್ತ್ರಗಳ ತರಬೇತಿ ಪಡೆದರು” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ, ನಾಲ್ಕು ವರ್ಷಗಳ ನಂತರ, ಅಂದರೆ 2003 ರಲ್ಲಿ, ತಾನು ಮತ್ತು ಪನ್ಸೆ ಪುಣೆಯ ಸಿಂಘಡ್ ಬಳಿ ನಡೆದ ಬಾಂಬ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು ಎಂದು ಶಿಂಧೆ ಹೇಳಿದ್ದಾರೆ.ವಿಶ್ವ ಹಿಂದೂ ಪರಿಷತ್ತಿನ ಈಗಿನ ರಾಷ್ಟ್ರೀಯ ಸಂಘಟಕರಾಗಿರುವ ಮಿಲಿಂದ್ ಪರಾಂಡೆ ಅವರು ಶಿಬಿರದ ಮಾಸ್ಟರ್ ಮೈಂಡ್ ಮತ್ತು ಮುಖ್ಯ ಸಂಘಟಕರು ಎಂದು ಶಿಂಧೆ ಹೇಳಿದ್ದಾರೆ. ಶಿಬಿರದ ಮುಖ್ಯ ಬೋಧಕ “ಮಿಥುನ್ ಚಕ್ರವರ್ತಿ” ಎಂಬ ಹೆಸರಿನ ವ್ಯಕ್ತಿಯಾಗಿದ್ದು, ಆತನ ನಿಜವಾದ ಹೆಸರು, ರವಿ ದೇವ್ ಆನಂದ್ ಆಗಿತ್ತು ಎಂದು ನಂತರ ತಿಳಿದು ಬಂದಿತ್ತು. ಆ ಸಮಯದಲ್ಲಿ ಅವರು ವಿಶ್ವ ಹಿಂದೂ ಪರಿಷತ್ತಿನ ಉತ್ತರಾಖಂಡ ಘಟಕದ ಮುಖ್ಯಸ್ಥರಾಗಿದ್ದರು ಎಂದು ಶಿಂಧೆ ಹೇಳಿದ್ದಾರೆ
ಶಿಂಧೆ ತಮ್ಮ ಅಫಿಡವಿಟ್‌ನಲ್ಲಿ ತರಬೇತಿ ಶಿಬಿರದಲ್ಲಿ ಏನಾಗುತ್ತಿತ್ತು ಎಂದು ವಿವರವಾಗಿ ದಾಖಲಿಸಿದ್ದಾರೆ.
ಮಿಥುನ್ ಚಕ್ರವರ್ತಿ ಶಿಬಿರವನ್ನು ಬೆಳಿಗ್ಗೆ 10 ಗಂಟೆಗೆ ತಲುಪುತ್ತಿದ್ದ. ಬಳಿಕ ಎರಡು ಗಂಟೆಗಳ ಕಾಲ ವಿವಿಧ ಗುಂಪುಗಳಲ್ಲಿ ತರಬೇತಿಯನ್ನು ನೀಡುತ್ತಿದ್ದ. ತರಬೇತಿ ಪಡೆದವರಿಗೆ 3-4 ಬಗೆಯ ಸ್ಫೋಟಕ ಪೌಡರ್‌ಗಳು, ಪೈಪ್‌ಗಳ ತುಂಡುಗಳು, ತಂತಿಗಳು, ಬಲ್ಬ್‌ಗಳು, ವಾಚ್‌ಗಳು ಇತ್ಯಾದಿಗಳನ್ನು ಬಾಂಬ್‌ಗಳನ್ನು ಸಿದ್ಧಪಡಿಸಲು ನೀಡಲಾಗಿತ್ತು. ತರಬೇತಿಯ ನಂತರ ಸಂಘಟಕರು ತರಬೇತಿ ಪಡೆದವರನ್ನು ವಾಹನದಲ್ಲಿ ಏಕಾಂತ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸ್ಫೋಟಗಳ ಪೂರ್ವಾಭ್ಯಾಸವನ್ನು ನಡೆಸುವ ಮೂಲಕ ಬಾಂಬ್‌ಗಳನ್ನು ಪರೀಕ್ಷಿಸಿದರು. ತರಬೇತಿ ಪಡೆದವರು ಸಣ್ಣ ಹೊಂಡವನ್ನು ಅಗೆದು, ಅದರಲ್ಲಿ ಟೈಮರ್ ಇರುವ ಬಾಂಬ್ ಅನ್ನು ಹಾಕಿ, ಅದನ್ನು ಮಣ್ಣು ಮತ್ತು ದೊಡ್ಡ ಬಂಡೆಗಳಿಂದ ಮುಚ್ಚಿ ಬಾಂಬ್ ಸ್ಫೋಟಿಸುತ್ತಾರೆ. ಅವರ ಪರೀಕ್ಷೆಗಳು ಯಶಸ್ವಿಯಾಗಿದ್ದು, ದೊಡ್ಡ ಸ್ಫೋಟಗಳು ಸಂಭವಿಸಿದವು ಎಂದು ಶಿಂಧೆ ವಿವರಿಸಿದ್ದಾರೆ.
“ತರಬೇತಿ ನಂತರ ಹಿಮಾಂಶು ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಮೂರು ಸ್ಫೋಟಗಳನ್ನು ಮಾಡಿದರು. ಅವರು ಔರಂಗಾಬಾದ್‌ನ ಮುಖ್ಯ ಮಸೀದಿಯಲ್ಲಿ ದೊಡ್ಡ ಸ್ಫೋಟವನ್ನು ಉಂಟುಮಾಡುವ ಯೋಜನೆಯನ್ನು ಹೊಂದಿದ್ದರು. ಆ ಸ್ಫೋಟಕ್ಕಾಗಿ ಬಾಂಬ್ ತಯಾರಿಸುವಾಗ ಅವರು 2006 ರಲ್ಲಿ ನಾಂದೇಡ್‌ನಲ್ಲಿ ಪ್ರಾಣ ಕಳೆದುಕೊಂಡರು” ಎಂದು ಅವರು ಹೇಳಿದ್ದಾರೆ.
ಶಿಂಧೆ ಅವರು ತಮ್ಮ ಅಫಿಡವಿಟ್‌ನಲ್ಲಿ ಆರೋಪಿಸಿರುವ ಹೆಚ್ಚಿನವು ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮೊದಲ ಚಾರ್ಜ್‌ಶೀಟ್ ಗೆ ತಾಳೆಯಾಗುತ್ತಿದೆ. 2003ರಲ್ಲಿ ಮಿಥುನ್ ಚಕ್ರವರ್ತಿ ಎಂಬ ವ್ಯಕ್ತಿಯಿಂದ ಪೈಪ್ ಬಾಂಬ್ ತಯಾರಿಸುವ ತರಬೇತಿಗಾಗಿ ಪನ್ಸೆ ಅವರು ಪುಣೆ ಬಳಿಯ ಸಿಂಹಗಡದಲ್ಲಿರುವ ರೆಸಾರ್ಟ್‌ಗೆ ಹೋಗಿದ್ದರು ಎಂದು ಎಟಿಎಸ್ ಆರೋಪಪಟ್ಟಿಯಲ್ಲಿ ನೀಡಿತ್ತು. ಇದಲ್ಲದೆ, ಪುಣೆಯ ನಿವೃತ್ತ ನೌಕಾಪಡೆಯ ಅಧಿಕಾರಿ ಸನತ್‌ಕುಮಾರ್ ರಾಗ್ವಿಠಲ್ ಭಾಟೆ ಅವರು ಭಯೋತ್ಪಾದನಾ ನಿಗ್ರಹ ದಳಕ್ಕೆ “ನಗರದ ಶಿಬಿರದಲ್ಲಿ ತಮ್ಮ ಕಾರ್ಯಕರ್ತರಿಗೆ ಜಿಲೆಟಿನ್ ಸ್ಟಿಕ್‌ಗಳ ಬಳಕೆಯ ತರಬೇತಿ ನೀಡುವಂತೆ ಪರಾಡೆ ಕೇಳಿಕೊಂಡಿದ್ದ” ಎಂದು ಬಹಿರಂಗಪಡಿಸಿದ್ದ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿತ್ತು.
ಅಲ್ಲದೆ, ಪನ್ಸೆ ತನ್ನ ಜೀವವನ್ನು ಕಳೆದುಕೊಂಡ ಸ್ಫೋಟ ಸಂಭವಿಸಿದ ಮನೆಯಿಂದ ಔರಂಗಾಬಾದ್‌ನಲ್ಲಿರುವ ಮಸೀದಿಯನ್ನು ಹೊಡೆಯುವ ಯೋಜನೆ ಇತ್ತು ಎಂದು ಸೂಚಿಸುವ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದರೆ, 2013 ರಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡ ಕೇಂದ್ರೀಯ ತನಿಖಾ ದಳ, ಸ್ಫೋಟವು ಒಂದು ಪ್ರತ್ಯೇಕ ಘಟನೆ ಎಂದು ಹೇಳಿತ್ತು. ಆದರೆ ಶಿಂಧೆ ಅವರ ಅಫಿಡವಿಟ್ ಈ ಪ್ರತಿಪಾದನೆಯನ್ನು ಅಲ್ಲಗೆಳೆದಿದೆ. ಅವರ ಪ್ರಕಾರ, ಬಾಂಬ್ ತಯಾರಿಕೆ ಶಿಬಿರದಲ್ಲಿದ್ದ ಇತರ ಜನರಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ರಾಕೇಶ್ ಧಾವಡೆ ಕೂಡ ಇದ್ದರು.
2007ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ಮತ್ತು 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಸೇರಿದಂತೆ 2000ನೇ ಇಸವಿಯಲ್ಲಿ ದೇಶದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳು ನಾಂದೇಡ್ ಸ್ಫೋಟದ ರೀತಿಯ ಪಿತೂರಿಯಿಂದ ಹುಟ್ಟಿಕೊಂಡಿವೆ, “ನಾಂದೇಡ್ ಕೇವಲ ಒಂದು ಸಣ್ಣ ಭಾಗವಾಗಿತ್ತು” ಎಂದು ಶಿಂಧೆ Scroll.in ಗೆ ತಿಳಿಸಿದ್ದಾರೆ.
ಶಿಂಧೆ ಅವರು ಪಡಾರೆಯವ ಕುತಂತ್ರಗಳ ಬಗ್ಗೆ ಎಚ್ಚರಿಕೆ ನೀಡಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವಾರು ಹಿರಿಯ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ, ಆದರೆ ಪ್ರಸ್ತುತ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದಾರೆ.
“ಆರ್‌ಎಸ್‌ಎಸ್ ಮತ್ತು ವಿಎಚ್‌ಪಿಯ ಹಿರಿಯ ನಾಯಕರು ಭಯೋತ್ಪಾದಕ ಚಟುವಟಿಕೆಗಳನ್ನು ಮೌನವಾಗಿ ಬೆಂಬಲಿಸುತ್ತಾರೆ ಮತ್ತು 2014 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಚಟುವಟಿಕೆಗಳಲ್ಲಿ ಮತ್ತಷ್ಟು ತೊಡಗಿದ್ದಾರೆ ಎಂಬುದನ್ನು ಶಿಂಧೆ ಮನಗಂಡರು,” ಎಂದು ಅವರು ತಿಳಿಸಿದ್ದಾರೆ.
ಶಿಂಧೆ ಹೃದಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವ್ಯಕ್ತಿ ಮತ್ತು ಹಿಂದುತ್ವ ಸಿದ್ಧಾಂತದಲ್ಲಿ ದೃಢವಾದ ನಂಬಿಕೆಯುಳ್ಳವರು, ಆದ್ದರಿಂದ ಅವರು ಸಂಘಟನೆಗೆ ಕೆಟ್ಟ ಹೆಸರು ತರಲು ಬಯಸಿರಲಿಲ್ಲ, ಹಾಗಾಗಿ ಇದುವರೆಗೂ ಆ ಬಗ್ಗೆ ಮೌನವಾಗಿದ್ದುದಾಗಿ ಅವರು ಹೇಳಿದ್ದಾರೆ.