ರಾಜ್ಯದಲ್ಲಿ ಮತಾಂತರ ನಿಷೇಧ ಜಾರಿಗೆ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಸದ್ಯದಲ್ಲೇ ಮತಾಂತರ ನಿಷೇಧ ಕುರಿತು ಚರ್ಚೆಗೆ ಸಮನ್ವಯ ಬೈಠಕ್ ಕರೆಯಲಾಗಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಮನ್ವಯ ಬೈಠಕ್ ಆಯೋಜನೆ ಮಾಡಲಾಗಿದೆ. ನಗರದ ಬಿಜೆಪಿ ಕಚೇರಿಯಲ್ಲೇ ಸಮನ್ವಯ ಬೈಠಕ್ ನಿಗದಿ ಮಾಡಲಾಗಿದೆ.
ಒಂದು ಕಡೆ ಮತಾಂತರ ನಿಷೇಧ ಕಾಯಿದೆ ಜಾರಿಯಾಗಬೇಕು ಎಂದು ಒತ್ತಾಯ ಕೇಳಿ ಬಂದರೆ, ಇನ್ನೊಂದೆಡೆ ಕ್ರೈಸ್ತ ಸಮುದಾಯದವರು ರಸ್ತೆಗಿಳಿಯುತ್ತಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಷ್ಟಕ್ಕೆ ಕ್ರೈಸ್ತ ಸಮುದಾಯದ ಮುಖಂಡರು ಬೀದಿಗೆ ಇಳಿಯುತ್ತಾರಾ? ಎಂಬ ಬಗ್ಗೆ ಪ್ರತಿಧ್ವನಿಗೆ ಮಾಹಿತಿ ಲಭ್ಯವಾಗಿದೆ.
ಮತಾಂತರ ನಿಷೇಧ ಜಾರಿಗೆ ಮುಂದಾದ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೋ ಕೆಂಡಕಾರುತ್ತಲೇ ಇದ್ದಾರೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೂ ರಾಜ್ಯ ಸರ್ಕಾರ ಕ್ರೈಸ್ತ ಮಿಷನರಿಗಳ ಗಣತಿ ಮಾಡಲು ಆದೇಶಿಸಿದೆ. ಈ ಸಂಬಂಧ ಸಭೆಯೂ ನಡೆಸಲಾಗಿದೆ. ಇದನ್ನ ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಇದೊಂದು ಅನವಶ್ಯಕ ಕ್ರಮವೆಂದೇ ನಾವು ಭಾವಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ರಾಜ್ಯಕ್ಕೆ ಎಳ್ಳಷ್ಟು ಪ್ರಯೋಜನವಿಲ್ಲ. ಮತಾಂತರ ಮಿಥ್ಯ ಹಾಗೂ ಕೋಮು ವಿರೋಧಿ ವಾತಾವರಣವು ತೀವ್ರವಾಗಿರುವ ಸಮಯದಲ್ಲಿ ಗಣತಿಯನ್ನು ಮಾಡುವುದು ಅತ್ಯಂತ ಅಪಾಯಕಾರಿ. ಈ ಗಣತಿಯನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಚರ್ಚುಗಳು, ಪಾದ್ರಿಗಳು ಮತ್ತು ಕ್ರೈಸ್ತ ಸನ್ಯಾಸಿನಿಯರನ್ನು ಕೋಮುವಾದಿ ಶಕ್ತಿಗಳು ಅನಗತ್ಯವಾಗಿ ಟಾರ್ಗೆಟ್ ಮಾಡುವುದು ಸರಿಯಲ್ಲ. ಕ್ರೈಸ್ತ ಸಮುದಾಯದ ಚರ್ಚ್‌ಗಳು ಹಾಗೂ ಧಾರ್ಮಿಕ ವ್ಯಕ್ತಿಗಳ ಗಣತಿಯನ್ನು ಮಾತ್ರ ಮಾಡಲು ಸರ್ಕಾರ ಆಸಕ್ತಿ ತೋರಿಸುತ್ತಿರುವು ಏಕೆ? ಎಂದು ಪ್ರಶ್ನಿಸಿದರು.
ನಾವು ಬಹಳ ಗೌರವಿಸುವ ಸಿಎಂ ಬಸವರಾಜ ಬೊಮ್ಮಾಯಿಯವರು. ಇವರು ಸಹ ಸಮಾಜವನ್ನು ಧಾರ್ಮಿಕವಾಗಿ ವಿಭಜಿಸಿ, ಶಾಂತಿ ಮತ್ತು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೋಮುವಾದಿ ಗುಂಪುಗಳ ಒತ್ತಡಕ್ಕೆ ಮಣಿದಿರುವುದು ಅತ್ಯಂತ ಖೇದಕರ ಹಾಗೂ ಬೇಸರದ ಸಂಗತಿ. ಈ ನಮ್ಮ ಸಂಸ್ಥೆಗಳಲ್ಲಿ ಎಷ್ಟು ಜನರನ್ನು ಮತಾಂತರಗೊಳಿಸಲಾಗಿದೆ? ಕೆಲವರು ಹೇಳುವ ಪ್ರಕಾರ ಕ್ರೈಸ್ತರು ಮತಾಂತರ ಮಾಡುವುದೇ ಆಗಿದ್ದರೆ, ಕ್ರೈಸ್ತರ ಜನಸಂಖ್ಯೆ ಏಕೆ ಪ್ರತಿ ವರ್ಷವೂ ಸಹ ಕಡಿಮೆಯಾಗುತ್ತಾ ಬರುತ್ತಿದೆ? ನಾವು ಎಂದಿಗೂ ಸಹ ಬಲವಂತದ, ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರದ ಕಡು ವಿರೋಧಿಗಳಾಗಿದ್ದೇವೆ ಎಂದು ಹೇಳಿದರು.
ತಪ್ಪುಮಾಡುವವರನ್ನು ಶಿಕ್ಷಿಸಲು ಸಂವಿಧಾನದಲ್ಲೇ ಹಲವು ರೀತಿಯ ಕ್ರಮಗಳನ್ನು ನೀಡಿರುವಾಗ, ಈ ಕಾಯ್ದೆಯ ಪ್ರಸ್ತುತತೆಯಾದರೂ ಏನು? ಕ್ರೈಸ್ತ ಸಮುದಾಯವು ಸದಾ ದೇಶಪ್ರೇಮಿಯಾಗಿದೆ ಮಾತ್ರವಲ್ಲದೇ ಈ ನೆಲದ ಕಾನೂನುಗಳನ್ನು ಚಾಚೂ ತಪ್ಪದೆ ಪಾಲಿಸುತ್ತದೆ. ಅದಲ್ಲದೆ ಈ ದೇಶದಲ್ಲಿನ ಬಡವರ ಮತ್ತು ಹಿಂದುಳಿದವರ ಸೇವೆಗೆ ಸದಾ ಸಿದ್ಧವಿದೆ. ಈ ನಿಟ್ಟಿನಲ್ಲಿ ನಮಗೆ ಸರ್ಕಾರದಿಂದ ಬೆಂಬಲ ಹಾಗೂ ಪ್ರೋತ್ಸಾಹದ ಅಗತ್ಯತೆ ಇದೆ ಎಂಬುದನ್ನು ಹೇಳಲಿಚ್ಛಿಸುತ್ತೇನೆ ಎಂದಿದ್ದಾರೆ.
ಇನ್ನೊಂದೆಡೆ ಕಳೆದೊಂದು ವಾರದಿಂದ ರಾಜ್ಯದ ವಿವಿಧ ಸ್ಥಳದಲ್ಲಿ ಮತಾಂತರ ಹೆಚ್ಚಾಗುತ್ತಿದೆ ಎಂದು ಬಿಜೆಪಿಗರು ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ, ಮತಾಂತರ ನಿಷೇಧ ಕಾಯಿದೆ ಜಾರಿಯಾಗಬೇಕು ಎಂದು ಆರ್‌ಎಸ್‌ಎಸ್ ಪಟ್ಟು ಹಿಡಿದಿದೆ. ಇತ್ತ ಕ್ರಿಶ್ಚಿಯನ್ ಸಮುದಾಯ ಯಾರನ್ನು ಬಲವಂತವಾಗಿ ಮತಾಂತರ ಮಾಡುತ್ತಿಲ್ಲ ಎಂಬ ಉತ್ತರ ನೀಡಿದೆ.