ಕರೋನಾ ಸಂಕಷ್ಟದಲ್ಲಿ ಲಕ್ಷಾಂತರ ಜನರ ಕಷ್ಟಗಳಿಗೆ ಸ್ಪಂದಿಸಿದ್ದ ಸೋನು ಸೂದ್ ಮೇಲೆ ಆದಾಯ ತೆರಿಗೆ ಇಲಾಖೆ ಗುರುತರವಾದ ಆಪಾದನೆ ಮಾಡಿದೆ. ಸೋನು ಸೂದ್ ಅವರು ರೂ. ಇಪ್ಪತ್ತು ಕೋಟಿ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಇಲಾಖೆ ಹೇಳಿದೆ.
ಕಳೆದ ಮೂರು ದಿನಗಳಿಂದ ಮುಂಬೈನ ಸೋನು ಸೂದ್ ನಿವಾಸ ಹಾಗೂ ಅವರ ಆಪ್ತರ ನಿವಾಸದ ಮೇಲೆ ದಾಳಿ ನಡೆಸಿರುವ ಐಟಿ ಇಲಾಖೆಯು, ತೀವ್ರವಾದ ಶೋಧ ನಡೆಸಿದೆ. ಸೋನು ಸೂದ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರನ್ನು ಭೇಟಿಯಾಗಿ ಸರ್ಕಾರದ ರಾಯಭಾರಿಯಾಗಲು ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳ ಬಳಿಕ ಈ ಐಟಿ ದಾಳಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿತ್ತು.

ದಾಳಿಯ ಕುರಿತು ಪ್ರಕಟಣೆ ಹೊರಡಿಸಿರುವ ಆದಾಯ ತೆರಿಗೆ ಇಲಾಖೆಯು, “ನಟ ಸೋನು ಸೂದ್ ಅವರ ನಿವಾಸ ಹಾಗು ಅವರ ಆಪ್ತರ ನಿವಾದಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ತೆರಿಗೆ ವಂಚನೆ ನಡೆದಿರುವ ಕುರಿತು ನಮಗೆ ಸಾಕ್ಷ್ಯಗಳು ಲಭಿಸಿವೆ,” ಎಂದು ಹೇಳಿದೆ.
ಹಲವು ನಕಲಿ ಮೂಲಗಳಿಂದ ಅಸುರಕ್ಷಿತ ಸಾಲವನ್ನು ಪಡೆದು ಆದಾಯವನ್ನು ಮುಚ್ಚಿಡಲಾಗಿದೆ. ಇದು ತೆರಿಗೆಯನ್ನು ವಂಚಿಸಲು ಬಳಸಿದ ದಾರಿಯಾಗಿದೆ. ತನಿಖೆಯ ವೇಳೆ ಇಂತಹ 20 ಸಾಕ್ಷ್ಯಗಳು ಲಭಿಸಿವೆ. ಈ ಕುರಿತು ವಿಚಾರಣೆ ನಡೆಸಿದಾಗಿ ತೆರಿಗೆ ವಂಚನೆ ನಡೆದಿರುವುದು ಖಚಿತವಾಗಿ ತಿಳಿದು ಬಂದಿದೆ, ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
“ಚೆಕ್ ಪಡೆದು ನಗದು ರೂಪದಲ್ಲಿ ಹಣವನ್ನು ನೀಡಿರುವುದಾಗಿ ಹಲವು ಒಪ್ಪಿಕೊಂಡಿದ್ದಾರೆ. ತೆರಿಗೆ ಪಾವತಿಯನ್ನು ತಪ್ಪಿಸಲು ನೈಜ ರಶೀದಿಗಳನ್ನು ಮರೆಮಾಚಿ ಸಾಲವೆಂದು ದಾಖಲೆಗಳಲ್ಲಿ ಬರೆಯಲಾಗಿದೆ. ಈ ರೀತಿ ತೆರಿಗೆ ವಂಚಿಸಿದ ಹಣವನ್ನು ಹೂಡಿಕೆ ಹಾಗೂ ಆಸ್ತಿ ಖರೀದಿಗಾಗಿ ಬಳಸಿಕೊಳ್ಳಲಾಗಿದೆ. ಈವರೆಗೆ ಸುಮಾರು ಇಪ್ಪತ್ತು ಕೋಟಿಗೂ ಮಿಕ್ಕಿ ತೆರಿಗೆಯನ್ನು ವಂಚಿಸಲಾಗಿದೆ,” ಎಂದು ಆದಾಯ ಇಲಾಖೆ ತಿಳಿಸಿದೆ.












