ಬೆಂಗಳೂರು : ಸಚಿವೆ ಶಶಿಕಲಾ ಜೊಲ್ಲೆ ನಿವಾಸದ ಎದುರೇ ರೌಡಿಶೀಟರ್ ಮೇಲೆ ಕೊಲೆ ಯತ್ನ ನಡೆದಂತಹ ಆಘಾತಕಾರಿ ಘಟನೆಯೊಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದೆ .ರೌಡಿಶೀಟರ್ ಮೇಲೆ ಆತನ ಸ್ನೇಹಿತರೇ ಮೂರ್ನಾಲ್ಕು ಬಾರಿ ಕಾರನ್ನು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ . ಸಾವು ಬದುಕಿನ ನಡುವೆ ಹೋರಾಡುತ್ತಿರುವ ರೌಡಿಶೀಟರ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಮಾರ್ಚ್ 21ರ ಬೆಳಗ್ಗೆ 5:30ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಹೌಗ್ರೌಂಡ್ ಠಾಣೆಯ ರೌಡಿಶೀಟರ್ ಗಗನ್ ಶರ್ಮಾ ಎಂಬಾತನ ಮೇಲೆ ಸುನೀಲ್ ಕುಮಾರ್, ಅರುಣ್ ಹಾಗೂ ಕೃಷ್ಣ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ. ರೌಡಿಶೀಟರ್ ಗಗನ್ ಹಾಗೂ ಆರೋಪಿ ಸುನೀಲ್ ಕುಮಾರ್ ಮೊದಲಿನಿಂದಲೂ ಸ್ನೇಹಿತರು. ವೃತ್ತಿಯಲ್ಲಿ ಬಿಬಿಎಂಪಿ ಟ್ಯಾಕ್ಸ್ ಕಲೆಕ್ಟರ್ ಆಗಿದ್ದ ಸುನೀಲ್ ಕುಮಾರ್ ಹಾಗೂ ಗಗನ್ ನಡುವೆ ಆಸ್ತಿ ವಿಚಾರಕ್ಕೆ ಕಲಹ ಏರ್ಪಟ್ಟಿತ್ತು. ಇದೇ ವಿಚಾರವಾಗಿ ಮಾತನಾಡಬೇಕು ಅಂತಾ ಗಗನ್ಗೆ ಸುನೀಲ್ ಬುಲಾವ್ ನೀಡಿದ್ದ.

20ನೇ ತಾರೀಖು ರಾತ್ರಿ ಗಗನ್ ಸುನೀಲ್ ಭೇಟಿ ಮಾಡಲು ಫ್ರೇಜರ್ ಟೌನ್ಗೆ ಬಂದಿದ್ದ. ಕಾರಿನಲ್ಲಿ ಕೂತು ಸ್ನೇಹಿತರು ಸಿಟಿ ರೌಂಡ್ಸ್ ಹಾಕಿದ್ದಾರೆ. ಕಾರಿನ ಒಳಗೆ ಇವರ ನಡುವೆ ಜಗಳ ಏರ್ಪಟ್ಟಿದೆ. ಸುನೀಲ್ ಹಾಗೂ ಆತನ ಸ್ನೇಹಿತರು ಗಗನ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ 21ನೇ ತಾರೀಖು ಮುಂಜಾನೆ ಸುಮಾರಿಗೆ ಗಗನ್ನನ್ನು ಕಾರಿನಿಂಧ ತಳ್ಳಿ ಆತನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ.
ಸ್ಥಳೀಯರು ನೀಡಿದ ಮಾಹಿತಿ ಆಧರಿಸಿದ ಜೆಸಿ ನಗರ ಠಾಣಾ ಪೊಲೀಸರು ಗಾಯಾಳು ಗಗನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತದಲ್ಲಿ ಗಗನ್ ಕಾಲು ಹಾಗೂ ಪಕ್ಕೆಲುಬು ತುಂಡಾಗಿದೆ. ಕಣ್ಣು, ಮುಖಗಳಿಗೂ ಗಂಭೀರ ಗಾಯಗಳಾಗಿದೆ. ಆರೋಪಿ ಸುನೀಲ್ನನ್ನು ಬಂಧಿಸಿದ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ನಾಪತ್ತೆಯಾಗಿರುವ ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರಿದಿದೆ.