ವಸಾಹತುಶಾಹಿ ಪ್ರತಿರೋಧದ ವೀರ ಎಂದು ಇತಿಹಾಸ ಗುರುತಿಸುವ ಟಿಪ್ಪು ಸುಲ್ತಾನ್ ಮೇ 4, 1799 ರಂದು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪಡೆಗಳಿಂದ ಸೋಲಿಸಲ್ಪಟ್ಟ ಮತ್ತು ಕೊಲ್ಲಲ್ಪಟ್ಟ. ಅವನ ರಾಜವಂಶದ ಅಂತ್ಯವನ್ನು ಖಚಿತಪಡಿಸಿಕೊಳ್ಳಲು ಈ ಮೂಲಕ ಮುಂದೆಂದೂ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಅವನ ವಂಶಸ್ಥರಿಂದ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಆಸ್ಥಾನದ ಮಹಿಳೆಯರನ್ನು ಮೈಸೂರು ರಾಜ್ಯದಿಂದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿದ್ದ ವೆಲ್ಲೂರಿನಲ್ಲಿರುವ ಕೋಟೆಗೆ ಗಡಿಪಾರು ಮಾಡಲಾಯಿತು. ಟಿಪ್ಪುವಿನ ಆಸ್ಥಾನದಲ್ಲಿ ನರ್ತಕಿಯಾಗಿದ್ದ ರೋಶನಿ ಬೇಗಂ ಸಹ ಈಸ್ಟ್ ಇಂಡಿಯಾ ಕಂಪೆನಿ ಗೃಹಬಂಧನದಲ್ಲಿಟ್ಟ ನೂರಾರು ಮಹಿಳೆಯರಲ್ಲಿ ಒಬ್ಬಳು.
ಮೂಲತಃ ಪಮ್ ಕುಸುರ್ ಎಂಬ ಹೆಸರಿನ ಈಕೆ ಇಂದಿನ ಆಂಧ್ರಪ್ರದೇಶದ ಅದೋನಿಯ ನರ್ತಕಿಯಾಗಿದ್ದಳು. ಟಿಪ್ಪು ರಾಜಕುಮಾರನಾಗಿದ್ದಾಗಲೇ ಅವಳು ತನ್ನ ಸಹೋದರಿಯೊಂದಿಗೆ ರಾಜ ಪರಿವಾರವನ್ನು ಸೇರಿಕೊಂಡಳು. ರೋಷನಿ ಬೇಗಂ ಅವರು ಟಿಪ್ಪುವಿನ ಹಿರಿಯ ಮಗ ಫತೇ ಹೈದರ್ ಅವರ ತಾಯಿ. 1801 ರಲ್ಲಿ ಚಿತ್ರಿಸಲ್ಪಟ್ಟ ಪೈಟಿಂಗ್ ಒಂದರಲ್ಲಿ 20 ರ ಹರೆಯದ ಯುವಕನೊಬ್ಬನ ಚಿತ್ರವಿದೆ. ಅದು ಆಕೆಯ ಮಗನ ಅಂದರೆ ಫತೇ ಹೈದರ್‌ನ ಭಾವಚಿತ್ರವೆಂದು ಇತಿಹಾಸಕಾರರು ಹೇಳುತ್ತಾರೆ.
1799ರಲ್ಲೇ ಬ್ರಿಟಿಷರು ಟಿಪ್ಪು ಸುಲ್ತಾನನ್ನು ಕೊಂದರೂ ಟಿಪ್ಪುವಿನ ವಂಶಸ್ಥರ ಬಗ್ಗೆ ಭಯವಿದ್ದ ಅವರು 550 ಇತರ ಮಹಿಳೆಯರೊಂದಿಗೆ ರೋಶನಿ ಬೇಗಂರನ್ನೂ ಮೈಸೂರು ರಾಜ್ಯದಿಂದ ವೆಲ್ಲೂರು ಕೋಟೆಗೆ ಸ್ಥಳಾಂತರಿಸಿದರು.1802 ರಲ್ಲಿ, ಸುಮಾರು 550 ಇತರ ಮಹಿಳೆಯರೊಂದಿಗೆ, ರೋಶನಿ ಬೇಗಂ ಅವರನ್ನು ಮೈಸೂರು ರಾಜ್ಯದಿಂದ ವೆಲ್ಲೂರು ಕೋಟೆಗೆ ಸಾಗಿಸಲಾಯಿತು ಮತ್ತು ಅವರ ಕೊನೆಯ ಉಸಿರಿನ ವರೆಗೂ ಈಸ್ಟ್ ಇಂಡಿಯಾ ಕಂಪನಿಯ ವಶದಲ್ಲೇ ಇದ್ದರು.
ಸ್ವಭಾವತಃ ಬಂಡಾಯ ಮನೋವೃತ್ತಿಯ ರೋಶನಿ 1804 ರಲ್ಲಿ ಗೂಜೈಬ್ ಎಂಬ ಹುಡುಗಿಯನ್ನು ದತ್ತು ಪಡೆದರು ಮತ್ತು ಆ ಹುಡುಗಿಗೆ ನೃತ್ಯ ತರಬೇತಿ ನೀಡಿದರು. ಈ ವೇಳೆಗಾಗುವಾಗ ವೆಲ್ಲೂರು ಕೋಟೆಯೊಳಗೆ ಟಿಪ್ಪು ಅರಮನೆಯವರಲ್ಲದೆ ಇತರ ಹೊಸಬರನ್ನೂ ಬ್ರಿಟಿಷರು ಸಾಗಿಸಿದ್ದರು. ಪರಿಣಾಮ, 1802 ರಲ್ಲಿ 550 ಮಹಿಳೆಯರಿದ್ದ ಕೋಟೆಯಲ್ಲಿ 1806 ರ ವೇಳೆಗೆ ಒಟ್ಟು 790 ಜನರಾದರು.
ಈ ಹೆಚ್ಚಳವನ್ನು ಮದ್ರಾಸಿನ ಗವರ್ನರ್ ವಿಲಿಯಂ ಬೆಂಟಿಂಕ್ ಅವರಿಗೆ ವರದಿ ಮಾಡಲಾಯಿತು, ಅವರು 1806ರ ಫೆಬ್ರವರಿಯಲ್ಲಿ ಕೋಟೆಯ ಖರ್ಚುವೆಚ್ಚಗಳನ್ನು ಕಡಿತಗೊಳಿಸಲು ಸೂಚನೆಗಳನ್ನು ನೀಡಿದರು. ಇದು ಕೋಟೆಯೊಳಗಿನ ಜನಸಂಖ್ಯೆ ಕಡಿಮೆ ಮಾಡಲು ಬ್ರಿಟಿಷರು ಕೈಗೊಂಡ ಪ್ರಾಯೋಗಿಕ ಕ್ರಮವಾಗಿತ್ತು. ಆದರೆ ತಮ್ಮ ಸಂಪ್ರದಾಯ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ರೋಶನಿ ಬೇಗಂರವರಂಥವರಿಗೆ ಈ ಕ್ರಮ ಸಹ್ಯವಾಗಲಿಲ್ಲ.
ಫೆಬ್ರವರಿ ಮತ್ತು ಜೂನ್ 1806 ರ ನಡುವೆ ವಿಲಿಯಂ ಬೆಂಟಿಂಕ್ ಬಜೆಟ್ ಕಡಿತಕ್ಕೆ ಆದೇಶ ನೀಡಿದ ತಕ್ಷಣವೇ ಟಿಪ್ಪು ಸುಲ್ತಾನನ ನಾಲ್ಕು ಹೆಣ್ಣುಮಕ್ಕಳ ವಿವಾಹವನ್ನು ವೆಲ್ಲೂರಿನಲ್ಲಿ ನೆರವೇರಿಸಲಾಯಿತು. ಪ್ರತಿ ಮದುವೆಯು ಕೋಟೆಯೊಳಗೆ ಹಲವಾರು ದಿನಗಳ ಸಂಗೀತ ಮತ್ತು ನೃತ್ಯ ಪ್ರದರ್ಶನಗಳನ್ನು ಒಳಗೊಂಡಿತ್ತು. ಈ ಪ್ರದರ್ಶನಗಳನ್ನು ಟಿಪ್ಪುವಿನ ಆಸ್ಥಾನದ ಸಂಗೀತಗಾರರು ಮತ್ತು ನರ್ತಕಿಯರಾದ ರೋಶನಿ ಬೇಗಂ ಅವರು ಯೋಜಿಸಿದ್ದರು. ಈ ಮದುವೆಗಳಲ್ಲಿ ಕಟ್ಟಿದ ಹಾಡು ಮತ್ತು ಪ್ರದರ್ಶಿಸಿದ ನೃತ್ಯಗಳಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಭಾರತೀಯ ಸೈನಿಕರ ಬಗ್ಗೆ ‘ಹಾನಿಕಾರಕ ಕಥೆಗಳ’ನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿತ್ತು. ವಿಶೇಷವಾಗಿ ಅವರ ಸಮವಸ್ತ್ರಗಳು ಮತ್ತು ಶಿರಸ್ತ್ರಾಣವನ್ನು ಅವರ ಕುಟುಂಬಗಳಿಗೆ ಅವಮಾನವೆಂಬಂತೆ ಬಿಂಬಿಸಲಾಯಿತು. ಅವುಗಳನ್ನು ಧರಿಸುವ ಅವರಿಗೆ ಆಹಾರ, ನೀರು ಮತ್ತು ಮದುವೆಯಾಗುವ ಹಕ್ಕನ್ನು ನಿರಾಕರಿಸಲಾಗುತ್ತದೆ ಎಂದು ಹಾಡು ಕಟ್ಟಲಾಯಿತು.
ದೇಶೀಯ ಬಹಿಷ್ಕಾರದ ಈ ಬೆದರಿಕೆಗಳು ಸೈನಿಕರ ಮೇಲೆ ಎಷ್ಟು ಆಳವಾದ ಪರಿಣಾಮವನ್ನು ಬೀರಿತು ಎಂದರೆ ಜುಲೈ 9, 1806 ರ ಸಂಜೆ ಕೋಟೆಯಲ್ಲಿ ನೃತ್ಯ ಪ್ರದರ್ಶನದ ನಂತರ, ಮದ್ರಾಸ್ ಸ್ಥಳೀಯ ಪದಾತಿದಳದ ಸಿಪಾಯಿಗಳು ದಂಗೆ ಎದ್ದರು. 129 ಜನರನ್ನು ಕೊಂದು, ಮೈಸೂರು ಸಾಮ್ರಾಜ್ಯದ ಧ್ವಜವನ್ನು ಏರಿಸಿ ರೋಷನಿ ಬೇಗಂ ಅವರ ಮಗ ಫತೇ ಹೈದರ್ ಅವರನ್ನು ತಮ್ಮ ರಾಜ ಎಂದು ಘೋಷಿಸಿದರು.
ದಂಗೆಕೋರರನ್ನು ನಿಯಂತ್ರಿಸಲು ವೆಲ್ಲೂರಿಗೆ ಸೈನಿಕ ಪಡೆಯನ್ನು ಕಳುಹಿಸದೇ ಬೇರೆ ದಾರಿಯೇ ಇರಲಿಲ್ಲ ಬ್ರಿಟಿಷರಿಗೆ. ಈ ದಂಗೆಯಲ್ಲಿ ಸುಮಾರು 350ರಷ್ಟು ಮಂದಿ ಹತರಾದರು. ವೆಲ್ಲೂರಿನ ದಂಗೆಯನ್ನು ಇವತ್ತಿಗೂ ಬ್ರಿಟಿಷ್ ಸಾಮ್ರಾಜ್ಯಶಾಹಿ ಸಂಪೂರ್ಣವಾಗಿ ಮಿಲಿಟರಿ ಘಟನೆ ಎಂದೇ ನೋಡುತ್ತದೆ. ಆದರೆ ರೋಶನಿ ಬೇಗಂ ಅವರಂತಹ ಮಹಿಳೆಯರು ತಮ್ಮ ಸಂಪ್ರದಾಯಗಳ ಮೂಲಕವೇ ಜನರನ್ನು ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ದಂಗೆಯೇಳುವಂತೆ ಪ್ರೇರೇಪಿಸಿದ್ದರು. ಯಾವ ಟಿಪ್ಪುವಿನ ವಂಶಸ್ಥರ ಮೇಲಿನ ಭಯದಿಂದ ಮೈಸೂರಿನಿಂದ ಬ್ರಿಟಿಷರು ಅವರನ್ನು ಗಡೀಪಾರು ಮಾಡಿದ್ದರೋ ಅದೇ ಟಿಪ್ಪುವಿನ ವಂಶಸ್ಥರು ಸೀಮಿತ ಅವಕಾಶದಲ್ಲೇ ಬ್ರಿಟಿಷರನ್ನು ಮತ್ತೆ ಕಾಡಿದ್ದರು. ಬ್ರಿಟಿಷ್ ಇತಿಹಾಸ ಈ ಘಟನೆಯನ್ನು ಕೇವಲ ಮಿಲಿಟರಿ ದಂಗೆ ಎಂದೇ ಕರೆದರೂ ಜಗತ್ತಿನ ಇತಿಹಾಸದಲ್ಲಿ ಮಹಿಳೆಯೊಬ್ಬರ ಅಸಾಮಾನ್ಯ ಸಾಧನೆಯೆಂದೇ ಗುರುತಿಸಲ್ಪಡುತ್ತದೆ.