ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಮನೆಗೆ ನುಗ್ಗಿದ ಖದೀಮರು ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾದ ಘಟನೆಯೊಂದು ಬೆಳಕಿಗೆ ಬಂದಿದೆ. ಭಾನುವಾರ ತಡರಾತ್ರಿ ಮೊಹಮ್ಮದ್ ಹಫೀಜ್ ನಿವಾಸದಲ್ಲಿ ಕಳ್ಳತನ ನಡೆದಿದೆ ಎಂದು ವರದಿಯಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಮನೆಗೆ ನುಗ್ಗಿದ ಖದೀಮರು 55 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
![](https://pratidhvani.com/wp-content/uploads/2023/03/mohammad-hafeez-with-wife-nazia-hafeez-1.jpg)
ಈ ಘಟನೆ ಸಂಬಂಧ ಮೊಹಮ್ಮದ್ ಹಫೀಜ್ ಪತ್ನಿಯ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ ಎನ್ನಲಾಗಿದೆ. ದರೋಡೆಕೋರರು 20 ಸಾವಿರ ಯುಎಸ್ ಡಾಲರ್, 4 ಸಾವಿರ ಪೌಂಡ್ಗಳು, 3 ಸಾವಿರ ಯುರೋಗಳು ಹಾಗೂ 5000 AEDಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಮೊಹಮ್ಮದ್ ಹಫೀಜ್ ಪ್ರಸ್ತುತ ರಾವಲ್ಪಿಂಡಿಯಲ್ಲಿದ್ದು ಪಾಕಿಸ್ತಾನ ಸೂಪರ್ ಲೀಗ್ ಸೀಸನ್ ಎಂಟರಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.ಹೀಗಾಗಿ ಹಫೀಜ್ ಪತ್ನಿ ಕೂಡ ಪಾಕ್ ರಾಜಧಾನಿಯಲ್ಲಿದ್ದು ಹಫೀಜ್ ಮನೆಗೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ದರೋಡೆಕೋರರು ಲಕ್ಷಾಂತರ ಹಣ ದೋಚಿ ಪರಾರಿಯಾಗಿದ್ದಾರೆ/ ಈ ಪ್ರಕರಣ ಸಂಬಂಧ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪಾಕ್ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.