ಮಂಗಳೂರು: ಹಾರೆ ಗುದ್ದಲಿ ಹಿಡಿದು ನಂತೂರು ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಅಧಿಕಾರಿಗಳು ಆ್ಯಕ್ಸಿಡೆಂಟ್ ಸ್ಪಾಟ್ ಎಂದು ಕುಖ್ಯಾತಿ ಹೊಂದಿರುವ ನಂತೂರು ಜಂಕ್ಷನ್ ರಸ್ತೆ ಹೊಂಡ ಗುಂಡಿಗಳಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಈ ಹಿಂದೆ ಗುಂಡಿಗಳಿಂದಲೇ ಆ್ಯಕ್ಸಿಡೆಂಟ್ ಆಗಿ ಜೀವಗಳು ಬಲಿಯಾಗಿತ್ತು. ಈ ಸಂಭಾವ್ಯ ಅಪಾಯ ಹಾಗೂ ಸಂಚಾರ ಅಡಚಣೆಯನ್ನು ತಪ್ಪಿಸಲು ನಂತೂರಿನ ರಸ್ತೆ ಗುಂಡಿಗಳನ್ನು ಮಂಗಳೂರು ನಗರ ಪೊಲೀಸ್ ಅಧಿಕಾರಿಗಳೇ ಸ್ವತಃ ಮುಚ್ಚುವ ಕಾರ್ಯ ಮಾಡಿದ್ದಾರೆ.

ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಈಶ್ವರ ಸ್ವಾಮಿ, ಎಎಸ್‌ಐ ವಿಶ್ವನಾಥ ರೈ ಹಾರೆ, ಗುದ್ದಲಿ ಹಿಡಿದು ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ. ಒಂದೆರಡು ಬಾರಿ ಇಲ್ಲಿ ರಸ್ತೆ ಗುಂಡಿಯನ್ನು ತೇಪೆ ಹಾಕುವ ಕಾರ್ಯ ನಡೆದಿದೆ. ಸ್ವಲ್ಪ ಸಮಯದ ಬಳಿಕ ಗುಂಡಿ ಯಥಾರೀತಿ ಬಾಯಿತೆರೆದು ನಿಂತಿದೆ. ಇಲ್ಲಿ ವಾಹನ ಸವಾರರು ಅದರಲ್ಲೂ ದ್ವಿಚಕ್ರ ಸವಾರರು ಜೀವ ಕೈಯಲ್ಲಿ ಹಿಡಿದೇ ವಾಹನ ಚಲಾಯಿಸಬೇಕಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ನಂತೂರಿನ ತಿರುವಿನ ರಸ್ತೆ ಕಳೆದ ಕೆಲವು ತಿಂಗಳುಗಳಿಂದ ಹೊಂಡ ಗುಂಡಿಗಳು ಸೃಷ್ಟಿಯಾಗಿತ್ತು. ನಗರದ ರಸ್ತೆಗಳೊಂದಿಗೆ 2 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಕೂಡ ಇಲ್ಲಿ ಹಾದು ಹೋಗುತ್ತದೆ. ಇದರಿಂದ ಸಂಚಾರ ವ್ಯವಸ್ಥೆಗೂ ಭಾರಿ ತೊಂದರೆ ಆಗುತ್ತಿತ್ತು. ಇದೀಗ ಪೊಲೀಸ್ ಅಧಿಕಾರಿಗಳೇ ಹೊಂಡ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ.