ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಹಾಕದ ತೆರಿಗೆಗಳನ್ನು ಈಗ ಹಾಕಿದ್ದಾರೆ. ಬಡವರು ಬಳಸುವ ಆಹಾರ ಪದಾರ್ಥ, ಮೊಸರು, ಅಕ್ಕಿ, ಬೆಲ್ಲ, ಜೇನುತುಪ್ಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುವ ನಕ್ಷೆ, ಪೆನ್ಸಿಲ್, ರೈತರು ಬಳಸುವ ಪಂಪ್ ಸೆಟ್, ಮೋಟಾರ್ ಸೇರಿದಂತೆ ಚೆಕ್ ಬುಕ್ ಸೇರಿದಂತೆ ಎಲ್ಲದಕ್ಕೂ ತೆರಿಗೆ ಹಾಕಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಕಿಡಿಕಾರಿದ್ದಾರೆ.
25 ಕೆಜಿ ಮೇಲ್ಪಟ್ಟ ಪದಾರ್ಥಗಳಿಗೆ ತೆರಿಗೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಜನ 25 ಕೆ.ಜಿಯಷ್ಟು ಹಾಲು, ಮೊಸರು, ಬೆಲ್ಲ, ಜೇನುತುಪ್ಪ, ಮಕ್ಕಳು ಪುಸ್ತಕ, ಪೆನ್ಸಿಲ್ ಗಳನ್ನು ಖರೀದಿ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಮೋದಿ 8 ವರ್ಷಗಳ ಹಿಂದೆ ಬಣ್ಣ ಬಣ್ಣದ ಮಾತುಗಳನ್ನು ಆಡಿದ್ದರು. ಆ ಮೂಲಕ ಗಿಮಿಕ್ ಮಾತುಗಳನ್ನು ಹೇಳಿದ್ದರು. ಈಗ. ಅಚ್ಛೇ ದಿನ ಕೊಡುತ್ತೇವೆ ಎಂದು ಹೇಳಿದ್ದರು. ಇದೇನಾ ಅಚ್ಛೇ ದಿನ? ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 25 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲಕ್ಕೆ ಎತ್ತಿದ್ದರು. ಆದರೆ ಮೋದಿ ಅವರು ಬಂದ ನಂತರ 24 ಲಕ್ಷ ಜನ ಬಡತನ ಕೂಪಕ್ಕೆ ಹೋಗಿದ್ದಾರೆ. ಈಗ ಈ ತೆರಿಗೆ ಮೂಲಕ ಬಡವರನ್ನು ಪಾತಾಳಕ್ಕೆ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಸರ್ಕಾರಗಳು ಅನೇಕ ಸುಧಾರಣೆಗಳನ್ನು ತಂದಿದ್ದು, ಈ ಸರ್ಕಾರ ಯಾವುದೇ ಸುಧಾರಣೆ ತಂದಿಲ್ಲ. ಇದು ಶ್ರೀಮಂತರ ಪರವಾದ ಸರ್ಕಾರ. ಶ್ರೀಮಂತರು ಮತ್ತಷ್ಟು ಶ್ರೀಮಂತರಾದರೆ, ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಬಡವರನ್ನು ಪಾತಾಳಕ್ಕೆ ತುಳಿಯುತ್ತಿದ್ದಾರೆ.

ಮೋದಿ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಈ ತೆರಿಗೆಗಳನ್ನು ಹಿಂಪಡೆಯಬೇಕು. ಅವರು ಅದಾನಿ ಅಂಬಾನಿಯಂತಹ ಶ್ರೀಮಂತ್ರಿಗೆ ಎಷ್ಟಾದರೂ ತೆರಿಗೆ ಹಾಕಲಿ. ಆದರೆ ಸರ್ಕಾರ ಇಂತಹ ದೊಡ್ಡ ಶ್ರೀಮಂತರ 12.5 ಲಕ್ಷ ಕೋಟಿಯಷ್ಟು ಸಾಲವನ್ನು ಮನ್ನಾ ಮಾಡುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 1947ರಿಂದ 2014ರವರೆಗೂ ದೇಶದ ಮೇಲೆ 53 ಲಕ್ಷ ಕೋಟಿ ಸಾಲ ಇತ್ತು. ಆದರೆ ಮೋದಿ ಅವರು ಕಳೆದ 8 ವರ್ಷಗಳಲ್ಲಿ 100 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿ ದೇಶದ ಸಾಲದ ಪ್ರಮಾಣವನ್ನು 153 ಲಕ್ಷ ಕೋಟಿಗೂ ಹೆಚ್ಚಾಗಿದೆ. ಆ ಮೂಲಕ ದೇಶದ ಪ್ರಜೆಯ ಮೇಲೆ ಒಂದು ಮುಕ್ಕಾಲು ಲಕ್ಷ ಸಾಲವನ್ನು ಹಾಕಲಾಗಿದೆ.
ಇಂತಹ ಕೆಟ್ಟ ಸರ್ಕಾರ ತೊಲಗಬೇಕು. ಈ ಸರ್ಕಾರ ಇದ್ದಷ್ಟು ದಿನ ಬಡವರು ರೈತರು, ಕಾರ್ಮಿಕರು ಸೇರಿದಂತೆ ಯಾವುದೇ ವರ್ಗ ನೆಮ್ಮದಿಯಾಗಿ ಇರುವುದಿಲ್ಲ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಯಾವುದೂ ಇಲ್ಲವಾಗಿದೆ. ಹೀಗಾಗಿ ಇಷ್ಟು ಕಠೋರವಾಗಿ ನಡೆದುಕೊಳ್ಳುತ್ತಿದೆ.
ಇನ್ನು ಪಕ್ಷದಲ್ಲಿ ಸಿಎಂ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಮಲಿಂಗ ರೆಡ್ಡಿ, ‘ಪ್ರತಿಯೊಂದು ಸಮಾಜದ ಸಮಾವೇಶಗಳಲ್ಲಿ ಆಯಾ ಸಮಾಜದ ಬೆಂಬಲವನ್ನು ಕೇಳುವುದು ಸಹಜ. ಅದೇ ರೀತಿ ಪ್ರತಿಯೊಂದು ಸಮಾಜ ತಮ್ಮ ಸಮಾಜದವರು ಸಿಎಂ ಆಗಬೇಕು ಎಂದು ಅಪೇಕ್ಷಿಸುತ್ತಾರೆ. ಆಸೆ ಪಡುವುದು ತಪ್ಪಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪ್ರಯತ್ನಿಸುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಶಾಸಕರು ಹಾಗೂ ಹೈಕಮಾಂಡ್ ಸೇರಿ ತೀರ್ಮಾನ ಕೈಗೊಳ್ಳಲಿದೆ. ಬಡವರ ಕಲ್ಯಾಣ, ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ. ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಇದಕ್ಕಿಂತಲೂ ಹೀನಾಯವಾಗಲಿದೆʼ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಹೇಳಿದ್ದಾರೆ.