ಬೀದರ್: ‘ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಾಜಿ ಅಧ್ಯಕ್ಷ ಬಾಬುವಾಲಿ ವಿರುದ್ಧ ನಾನು ಬಹಿರಂಗಪಡಿಸಿರುವ ಅವ್ಯವಹಾರ ಟ್ರೈಲರ್ ಮಾತ್ರ. ಇನ್ನೂ ಪಿಕ್ಚರ್ ಬಾಕಿ ಇದೆ. ಅವರ ಕರ್ಮಕಾಂಡದ ದಾಖಲೆಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇನೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ತಿಳಿಸಿದ್ದಾರೆ.
ಒಂದೊಂದೇ ದಾಖಲೆಗಳನ್ನು ಸಮಯಕ್ಕೆ ತಕ್ಕಂತೆ ಬಹಿರಂಗ ಪಡಿಸುತ್ತೇನೆ. ಬಿಜೆಪಿ ಸರ್ಕಾರವಿದ್ದಾಗ ಅವರು ಮುಖ್ಯಮಂತ್ರಿ ಬಗ್ಗೆ ಏನು ಹೇಳಿದರು. ಅವರ ಸಚಿವರ ಬಗ್ಗೆ ಎಂತಹ ಅಭಿಪ್ರಾಯ ವ್ಯಕ್ತಪಡಿಸಿದರು ಎಂಬುದನ್ನು ಕೂಡ ಬಹಿರಂಗಪಡಿಸುತ್ತೇನೆ’ ಎಂದು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ವೈಯಕ್ತಿಕ ದ್ವೇಷದಿಂದ ಅರಳಿ ಅವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ಧಾರೆ ಎಂದು ಬಾಬುವಾಲಿ ಹೇಳಿರುವುದು ಹಾಸ್ಯಾಸ್ಪದ. ಸುಳ್ಳು ಹೇಳಲು ನಾನೇನೂ ಅವರ ಸಹೋದರ ಸಂಬಂಧಿಯಲ್ಲ. ಸರ್ಕಾರ ನೇಮಿಸಿದ ತನಿಖಾ ತಂಡದವರು ಅವರ ವಿರುದ್ಧ ವರದಿ ನೀಡಿದ್ದಾರೆ. ಅವ್ಯವಹಾರವಾಗಿದ್ದು, ಐಪಿಸಿ ಕಲಂ 409ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದ್ದಾರೆ. ಅದು ನನ್ನ ಆದೇಶವಲ್ಲ, ಸರ್ಕಾರದ ಆದೇಶ. ಇದನ್ನು ನಾನು ಬಹಿರಂಗ ಪಡಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ಸಾಕ್ಷ್ಯ ಇಲ್ಲದೆ ನನ್ನ ಸಹೋದರರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರಿಗೆ ದಮ್ಮು, ತಾಕತ್ತು ಇದ್ದರೆ ಸಾಕ್ಷ್ಯ ಬಿಡುಗಡೆಗೊಳಿಸಲಿ. ಹಿಂದೊಮ್ಮೆ ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿದೆ ಎಂದು ಹೇಳಿದ್ದರು. ಆದರೆ, ಅದನ್ನು ರುಜುವಾತು ಮಾಡಲಿಲ್ಲ. ಬಾಬುವಾಲಿ ಪತ್ರಕರ್ತರಿಗೆ ಮೋಸ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಸೈಟ್ ಕೇಳಿದ್ದಕ್ಕೆ ಪುರಾವೆ ಒದಗಿಸಲಿ: ‘ಪ್ರಾಧಿಕಾರದ ಯಾವುದೇ ನಡಾವಳಿ ಮೇಲೆ ಸದಸ್ಯರು ಯಾರು ಸಹಿ ಮಾಡುವುದಿಲ್ಲ. ಸದಸ್ಯರು ಸಹಿ ಮಾಡುವುದು ಹಾಜರಾತಿ ಪುಸ್ತಕದಲ್ಲಿ. ಆದರೆ, ಬಾಬುವಾಲಿ ದಿಕ್ಕು ತಪ್ಪಿಸುತ್ತಿದ್ದಾರೆ. ಅರಳಿಯವರು ಉದ್ಯಾನದ ಜಾಗದಲ್ಲಿ ಸೈಟ್ ಕೇಳಿದ್ದಾರೆ ಎಂದು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅದರ ಬಗ್ಗೆ ಏನಾದರೂ ಪುರಾವೆಗಳಿದ್ದರೆ ಬಹಿರಂಗಪಡಿಸಲಿ. ನಾನು ಬ್ಲ್ಯಾಕ್‌ಮೇಲ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದರ ಸಾಕ್ಷ್ಯ ಇದ್ದರೆ ತೋರಿಸಲಿ. ತನಿಖಾ ತಂಡದ ವರದಿ ಪ್ರಕಾರ ಬಾಬುವಾಲಿ ವಿರುದ್ಧ ಕಾನೂನು ಕ್ರಮ ಆಗಬೇಕೆಂದು ಆಗ್ರಹಿಸಿದವನು ನಾನು. ಇದರಲ್ಲಿ ದ್ವೇಷ ಎಲ್ಲಿಂದ ಬಂತು’ ಎಂದು ಪ್ರಶ್ನಿಸಿದ್ದಾರೆ.