ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಜೂನ್ 10 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 13 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ, ಪ್ರವಾದಿ ವಿರುದ್ಧದ ಹೇಳಿಕೆಗಾಗಿ ಅಮಾನತುಗೊಂಡ ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತ್ತು, ಘಟನೆ ಸಂಬಂಧಿಸಿದಂತೆ ಒಟ್ಟು 237 ಜನರನ್ನು ಬಂಧಿಸಲಾಗಿದೆ.
”ರಾಜ್ಯದಲ್ಲಿ ಈ ಸಂಬಂಧ 237 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಅಲಹಾಬಾದ್ನಿಂದ 68, ಹತ್ರಾಸ್ನಿಂದ 50, ಸಹರಾನ್ಪುರದಿಂದ 55, ಅಂಬೇಡ್ಕರ್ನಗರದಿಂದ 28, ಮೊರಾದಾಬಾದ್ನಿಂದ 25, ಅಲಿಗಢದಲ್ಲಿ ಮೂರು ಮತ್ತು ಫಿರೋಜಾಬಾದ್ನಲ್ಲಿ ಎಂಟು ಜನರು ಸೇರಿದ್ದಾರೆ” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ರಾಜಧಾನಿ ಲಕ್ನೋದಲ್ಲಿ ಹೇಳಿದ್ದಾರೆ.
ಅಲಹಾಬಾದ್ ಮತ್ತು ಸಹರಾನ್ಪುರದಲ್ಲಿ ತಲಾ ಮೂರು ಎಫ್ಐಆರ್ಗಳನ್ನು ದಾಖಲಿಸುವುದರ ಜೊತೆಗೆ ಫಿರೋಜಾಬಾದ್, ಅಲಿಗಢ, ಹತ್ರಾಸ್, ಮೊರಾದಾಬಾದ್, ಅಂಬೇಡ್ಕರ್ ನಗರ, ಖೇರಿ ಮತ್ತು ಜಲೌನ್ನಲ್ಲಿ ತಲಾ ಒಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಹರಾನ್ಪುರ ಮತ್ತು ಅಲಹಾಬಾದ್ನಲ್ಲಿ ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಲಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಹಿಂಸಾಚಾರದ ದುಷ್ಕರ್ಮಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮೃತ್ಯುಂಜಯ್ ಕುಮಾರ್ ಅವರು ಶನಿವಾರ ಟ್ವೀಟ್ ಮಾಡಿದ್ದು, “ಗಲಭೆಕೋರರರೇ ನೆನಪಿಡಿ, ಪ್ರತಿ ಶುಕ್ರವಾರದ ನಂತರ ಶನಿವಾರವಿದೆ” ಎಂದು ಹೇಳಿದ್ದಾರೆ. ಕುಮಾರ್ ತಮ್ಮ ಟ್ವೀಟ್ ಜೊತೆಗೆ ಬುಲ್ಡೋಜರ್ ಕಟ್ಟಡವನ್ನು ಕೆಡವುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡುತ್ತಾ, “ಈ ಹಿಂದೆ ರಾಜ್ಯದ ವಿವಿಧ ನಗರಗಳಲ್ಲಿ ವಾತಾವರಣವನ್ನು ಹಾಳುಮಾಡುವ ಅವ್ಯವಸ್ಥೆಯ ಪ್ರಯತ್ನಗಳಲ್ಲಿ ತೊಡಗಿರುವ ಸಮಾಜವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆರು. ಸುಸಂಸ್ಕೃತ ಸಮಾಜದಲ್ಲಿ ಇಂತಹ ಸಮಾಜವಿರೋಧಿಗಳಿಗೆ ಜಾಗವಿಲ್ಲ. ಯಾವುದೇ ನಿರಪರಾಧಿ ಕಿರುಕುಳಕ್ಕೊಳಗಾಗುವುದಿಲ್ಲ, ಆದರೆ ಒಬ್ಬ ಅಪರಾಧಿಯೂ ಉಳಿದಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ಹೇಳಿದ್ದಾರೆ.
ಪ್ರವಾದಿ ವಿರುದ್ಧದ ಹೇಳಿಕೆಗಳಿಗಾಗಿ ಅಮಾನತುಗೊಂಡ ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಜೂನ್ 10 ರಂದು ದೇಶಾದ್ಯಂತ ಹಲವಾರು ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರತಿಭಟನೆಗಳು ನಡೆದವು.
ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಅಲಹಾಬಾದ್ ಮತ್ತು ಪಶ್ಚಿಮ ಬಂಗಾಳದ ಹೌರಾದಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು. ದೆಹಲಿ ಮತ್ತು ಮಧ್ಯಪ್ರದೇಶ, ಶ್ರೀನಗರದಲ್ಲಿ ಬಂದ್ ಹೊರತುಪಡಿಸಿ, ತೆಲಂಗಾಣ, ಗುಜರಾತ್, ಬಿಹಾರ ಮತ್ತು ಮಹಾರಾಷ್ಟ್ರದ ಭಾಗಗಳಲ್ಲಿ ಪ್ರತಿಭಟನೆಗಳು ಶಾಂತಿಯುತವಾಗಿವೆ.
ಅಲಹಾಬಾದ್ ಮತ್ತು ಸಹರಾನ್ಪುರ ಸೇರಿದಂತೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ, ಶುಕ್ರವಾರದ ಪ್ರಾರ್ಥನೆಯ ನಂತರ, ಅಮಾನತುಗೊಂಡಿರುವ ಬಿಜೆಪಿ ನಾಯಕ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಮಾಡಿದ ಹೇಳಿಕೆಗಳಿಗೆ ಜನರು ಘೋಷಣೆಗಳನ್ನು ಕೂಗಿದ್ದು, ಕಲ್ಲು ತೂರಾಟ ಕೂಡಾ ನಡೆದಿದೆ.
ಸಹರಾನ್ಪುರದಿಂದ ಬಂದ ಮಾಹಿತಿಯ ಪ್ರಕಾರ, ನಮಾಜ್ನ ನಂತರ ಕೆಲವರು ತಮ್ಮ ಕೈಯಲ್ಲಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಎತ್ತಿದರು. ನೆಹರು ಬಜಾರ್ ಪ್ರದೇಶದಲ್ಲಿ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರೆ, ದೇವಬಂದ್ನಲ್ಲೂ ಮದರಸಾದ ಕೆಲವು ವಿದ್ಯಾರ್ಥಿಗಳು ಪ್ರಾರ್ಥನೆಯ ನಂತರ ಪೋಸ್ಟರ್-ಬ್ಯಾನರ್ಗಳೊಂದಿಗೆ ಘೋಷಣೆಗಳನ್ನು ಕೂಗಿ ಪ್ರತಿಭಟನೆ ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ಜೂನ್ 3 ರಂದು ಶುಕ್ರವಾರದ ಪ್ರಾರ್ಥನೆಯ ನಂತರ ಕಾನ್ಪುರದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು, ಟಿವಿ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಮಾಡಿದ ಟೀಕೆಗಳನ್ನು ವಿರೋಧಿಸಿ ಸಮುದಾಯಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಾಗಿ ಜೂನ್ 5 ರಂದು ಬಿಜೆಪಿ ತನ್ನ ರಾಷ್ಟ್ರೀಯ ವಕ್ತಾರ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಿತು ಮತ್ತು ದೆಹಲಿ ಘಟಕದ ವಕ್ತಾರ ನವೀನ್ ಜಿಂದಾಲ್ ಅವರನ್ನು ಉಚ್ಚಾಟಿಸಿತು. ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆಗಳನ್ನು ಕತಾರ್, ಇರಾನ್ ಮತ್ತು ಕುವೈತ್ ಸೇರಿದಂತೆ ಗಲ್ಫ್ ಪ್ರದೇಶದ ಪ್ರಮುಖ ದೇಶಗಳು ವಿರೋಧಿಸಿದ ಬೆನ್ನಲ್ಲೇ ಬಿಜೆಪಿ ಈ ಕ್ರಮ ಕೈಗೊಂಡಿತ್ತು.
ಏತನ್ಮಧ್ಯೆ, ಜೂನ್ 9 ರಂದು, ದೆಹಲಿ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ವಕ್ತಾರರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮೂಲಭೂತ ಹಿಂದುತ್ವದ ಸಂತ ಯತಿ ನರಸಿಂಹಾನಂದ ಸೇರಿದಂತೆ 31 ಜನರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಮತ್ತು ಜನರನ್ನು ಪ್ರಚೋದಿಸುವ ಸಂದೇಶಗಳನ್ನು ಪೋಸ್ಟ್ ಮಾಡಲು ಮತ್ತು ಹಂಚಿಕೊಂಡಿದ್ದಕ್ಕಾಗಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ.









