ಬೆಂಗಳೂರು: ಬಿಹಾರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಎನ್ ಡಿಎ ಮೈತ್ರಿಕೂಟದಲ್ಲಿ ಇದೀಗ ಖಾತೆ ಹಂಚಿಕೆ ಬಿಕ್ಕಟ್ಟು ಮುಂದುವರಿದಿದೆ.

10 ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ನವೆಂಬರ್ 20ರಂದು ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಯಾಣ ವಚನ ಸ್ವೀಕಾರಕ್ಕೆ ಮುಹೂರ್ತ ನಿಗದಿಯಾಗಿದೆ. ಈ ನಡುವೆಯೇ ನಿತೀಶ್ ಬೇಡಿಕೆಯಿಂದ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.
ಚುನಾವಣೆಯಲ್ಲಿ ಒಂದಾಗಿ ಮಹಾಘಟಬಂಧನ್ ಗೆ ಸೋಲಿನ ರುಚಿ ತೋರಿಸಿರುವ ಎನ್ ಡಿಎ ಮೈತ್ರಿಕೂಟ ಸಿಎಂ ಸ್ಥಾನದ ಅಭ್ಯರ್ಥಿ ಘೋಷಣೆ ಮಾಡದೆ ಚುನಾವಣೆ ನಡೆಸಿ ಗಮನ ಸೆಳೆದಿತ್ತು.

ಆದರೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಬಳಿಕ ಮೈತ್ರಿಕೂಟದಲ್ಲಿ ಖಾತೆ ಹಂಚಿಕೆ ಹಗ್ಗ ಜಗ್ಗಾಟ ಮುಂದುವರಿದಿದೆ.
ಗೃಹ ಸೇರಿದಂತೆ ಇನ್ನಿತರ ಪ್ರಬಲ ಖಾತೆ ನಮಗೆ ಬಿಟ್ಟುಕೊಡಬೇಕೆಂದು ನಿತೀಶ್ ಕುಮಾರ್ ಪಟ್ಟು ಹಿಡಿದಿದ್ದಾರೆ. ಬೇಕಾಗಿಯೇ ಅಧಿಕಾರದ ಆಸೆಯಿಂದ ನಿತೀಶ್ ಜೊತೆ ಸೇರಿರುವ ಬಿಜೆಪಿ ನಾಯಕರಿಗೆ ಇದು ದೊಡ್ಡ ತಲೆನೋವಾಗಿದೆ.

ಜೆಡಿಯು 85 ಹಾಗೂ ಬಿಜೆಪಿ 89 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಆದರೂ ಸಹ ಜೆಡಿಯು ಪಟ್ಟಿಗೆ ಬಿಜೆಪಿ ಅನಿವಾರ್ಯವಾಗಿ ಒಪ್ಪಲೇಬೇಕಾದ ಸ್ಥಿತಿಯಲ್ಲಿದೆ. ಸ್ವಂತ ಬಲದ ಸರ್ಕಾರ ರಚಿಸೋಕೆ ಕೇಸರಿ ಕಲಿಗಳಿಗೆ ಸಾಧ್ಯವಿಲ್ಲ. ಹೀಗಾಗಿ ಮೈತ್ರಿ ಧರ್ಮ ಪಾಲನೆಗಾಗಿ ನಿತೀಶ್ ಕುಮಾರ್ ಬೆಂಬಲ ಪಡೆಯಲೇಬೇಕಾಗಿದೆ. ನಿತೀಶ್ ಕುಮಾರ್ ಮೋದಿ ಜೋಡಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ನಿತೀಶ್ ಡಿಮ್ಯಾಂಡಿಗೆ ಬಿಜೆಪಿ ನಾಯಕರು ಯಾವ ರೀತಿ ನಿರ್ಧಾರ ಮಾಡುತ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.













