ಬೆಂಗಳೂರು: ರಾಜ್ಯದಲ್ಲಿ ನಕಲಿ ಔಷಧಗಳ ಹಾವಳಿಗೆ ತಡೆ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ನಕಲಿ ಔಷಧಗಳ ತಯಾರಿಕೆ, ಮಾರಾಟ ಅಥವಾ ಸಂಗ್ರಹದ ಬಗ್ಗೆ ಖಚಿತ ಮಾಹಿತಿ ನೀಡುವವರಿಗೆ ₹10 ಸಾವಿರದಿಂದ ₹50 ಸಾವಿರದವರೆಗೆ ನಗದು ಬಹುಮಾನ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.

ಸಾರ್ವಜನಿಕರು ಅನುಮಾನಾಸ್ಪದ ಔಷಧಗಳು ಅಥವಾ ಮೆಡಿಕಲ್ ಸ್ಟೋರ್ಗಳ ಬಗ್ಗೆ ಔಷಧ ನಿಯಂತ್ರಣ ಇಲಾಖೆಯ ಸಹಾಯವಾಣಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಗುರುತನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸಿಕ್ಕ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸಿ, ನಕಲಿ ಔಷಧ ದಂಧೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಜಾಲ ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ದಂಧೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಜನರು ಅನುಮಾನಾಸ್ಪದ ಔಷಧಗಳ ಬಗ್ಗೆ ತಕ್ಷಣ ಮಾಹಿತಿ ನೀಡಿ, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕೈಜೋಡಿಸುವಂತೆ ಇಲಾಖೆ ವತಿಯಿಂದ ಮನವಿ ಮಾಡಲಾಗಿದೆ.







