ಬೆಂಗಳೂರು, ಆ. 20: ತಾಯಿ–ಮಗುವಿನ ನಡುವಿನ ಸಾರ್ವತ್ರಿಕ ಮಮತೆ ಮತ್ತು ಕಾಳಜಿಯ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡು ಭಾರತ ಮತ್ತು ಇಟಲಿಯ ಕಲಾ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ತಾಯಿಯೊಬ್ಬಳು, ಮಾತೃಭಾಷೆ ಹಲವು’ ವಿಶೇಷ ಕಲಾ ಪ್ರದರ್ಶನ ಬೆಂಗಳೂರಿನಲ್ಲಿ ಆರಂಭಗೊಂಡಿದೆ.ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA)ನಲ್ಲಿ ಆಯೋಜಿಸಿರುವ ಪ್ರದರ್ಶನವನ್ನು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಭಿನ್ನ ಭಾಷೆ, ಭೌಗೋಳಿಕತೆ ಮತ್ತು ಕಾಲಘಟ್ಟಗಳ ಕಲಾ ಪರಂಪರೆಗಳನ್ನು ಒಂದೆಡೆ ಸೇರಿಸಿರುವ ಈ ಪ್ರದರ್ಶನ ಭಾರತ–ಇಟಲಿ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಹೇಳಿದರು.

ಪ್ರದರ್ಶನದಲ್ಲಿ ಇಟಲಿಯ ಪುನರುಜ್ಜೀವನ ಕಾಲದ ಖ್ಯಾತ ಕಲಾವಿದ ಸ್ಯಾಂಡ್ರೊ ಬೊಟಿಚೆಲ್ಲಿ ಅವರ ‘ಮಡೊನ್ನಾ ಅಂಡ್ ಚೈಲ್ಡ್’ ಕಲಾಕೃತಿಯ ಜೊತೆಗೆ ಪ್ರಾಚೀನ ಎಟ್ರಸ್ಕನ್ ಶಿಲ್ಪಗಳು, ಕುಷಾಣ ಕಾಲದ ‘ಹಾರಿತಿ’ ಶಿಲ್ಪಗಳು ಹಾಗೂ ರಾಜಸ್ಥಾನದ ‘ಸ್ಕಂದಮಾತಾ’ ಶಿಲ್ಪ ಸೇರಿದಂತೆ ಅಪರೂಪದ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.

ಬೆಂಗಳೂರು ತಂತ್ರಜ್ಞಾನ ಮತ್ತು ನವೋದ್ಯಮದ ಕೇಂದ್ರವಾಗಿರುವುದರ ಜೊತೆಗೆ ಕಲೆ, ಪರಂಪರೆ ಮತ್ತು ಸಾಂಸ್ಕೃತಿಕ ಸಂವಾದಕ್ಕೂ ಪ್ರಮುಖ ವೇದಿಕೆಯಾಗಿ ಬೆಳೆಯುತ್ತಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.ಅಂತರರಾಷ್ಟ್ರೀಯ ಮಟ್ಟದ ಇಂತಹ ಕಲಾ ಪ್ರದರ್ಶನಗಳು ಬೆಂಗಳೂರಿನ ಸಾಂಸ್ಕೃತಿಕ ಪ್ರವಾಸೋದ್ಯಮದ ಮಹತ್ವವನ್ನು ಹೆಚ್ಚಿಸುವುದರ ಜೊತೆಗೆ, ರಾಜ್ಯದ ಶ್ರೀಮಂತ ಪರಂಪರೆಯನ್ನು ಜಾಗತಿಕ ಪ್ರವಾಸಿಗರಿಗೆ ಪರಿಚಯಿಸಲು ಸಹಕಾರಿಯಾಗಲಿದೆ ಎಂದರು.

ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಕೇಂದ್ರ ಸಂರಕ್ಷಿತ ಸ್ಮಾರಕಗಳು ಹಾಗೂ ನಾಲ್ಕು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿದ್ದು, ಅವುಗಳನ್ನು ಸಾಂಸ್ಕೃತಿಕ ಪ್ರವಾಸೋದ್ಯಮದೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಜೋಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.2027ರ ಭಾರತ–ಇಟಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ವರ್ಷದ ಪೂರ್ವಭಾವಿಯಾಗಿ ಈ ಪ್ರದರ್ಶನ ವಿಶೇಷ ಮಹತ್ವ ಪಡೆದಿದೆ ಎಂದು ಸಚಿವರು ಹೇಳಿದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಇಟಲಿ ಕಾನ್ಸುಲೇಟ್ ಜನರಲ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಇದರಿಂದ ಕರ್ನಾಟಕ ಹಾಗೂ ದಕ್ಷಿಣ ಭಾರತದ ಕಲಾಭಿಮಾನಿಗಳು ವಿಶ್ವಮಟ್ಟದ ಕಲಾಕೃತಿಗಳನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ.

“ಸಾಂಸ್ಕೃತಿಕ ಪ್ರವಾಸೋದ್ಯಮವು ದೇಶಗಳು ಮತ್ತು ಸಮಾಜಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. ವಿಭಿನ್ನ ಸಂಸ್ಕೃತಿಗಳ ಕಲಾಕೃತಿಗಳ ಮೂಲಕ ಒಂದೇ ರೀತಿಯ ಮಾನವೀಯ ಭಾವನೆಗಳನ್ನು ಅನುಭವಿಸಲು ಇಂತಹ ಪ್ರದರ್ಶನಗಳು ಅವಕಾಶ ಮಾಡಿಕೊಡುತ್ತವೆ. ಕರ್ನಾಟಕದಲ್ಲಿ ಮತ್ತಷ್ಟು ಅಂತರರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡಲಾಗುವುದು,” ಎಂದು ಕೆ.ಜೆ. ಜಾರ್ಜ್ ಹೇಳಿದರು.ಸೆಪ್ಟೆಂಬರ್ 20ರವರೆಗೆ ಪ್ರದರ್ಶನ ನಡೆಯಲಿದ್ದು, ಕಲಾಭಿಮಾನಿಗಳು, ವಿದ್ಯಾರ್ಥಿಗಳು, ಕುಟುಂಬಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಸಚಿವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಇಟಲಿಯ ಬೆಂಗಳೂರಿನ ಕಾನ್ಸುಲ್ ಜನರಲ್ ಜಿಯಾಂಡೊಮೆನಿಕೊ ಮಿಲಾನೊ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಪ್ರೆಸ್ಟಿಜ್ ಗ್ರೂಪ್‌ನ ರಿಜ್ವಾನ್ ರಜಾಕ್, ಎನ್‌ಜಿಎಂಎ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಕ್ಯುರೇಟರ್‌ಗಳಾದ ಪ್ರೊ. ನಾಮನ್ ಅಹುಜಾ ಮತ್ತು ಆಂಡ್ರಿಯಾ ಅನಸ್ತಾಸಿಯೊ ಉಪಸ್ಥಿತರಿದ್ದರು.






