- ನಾ ದಿವಾಕರ
ಭಾರತದಂತಹ ಒಂದು ಬೃಹತ್ ರಾಷ್ಟ್ರದ ಬೌದ್ಧಿಕ ವಲಯವನ್ನು ಉಸಿರುಗಟ್ಟುವಂತೆ ಮಾಡುವುದು ಸಾಧ್ಯವೇ ? ಇದು ಸಾಧ್ಯ ಎನ್ನುವುದನ್ನು ನಮ್ಮ ಮುಖ್ಯವಾಹಿನಿ ಮಾಧ್ಯಮಗಳು, ಮತಗಟ್ಟೆ ಸಮೀಕ್ಷೆಯ ತಜ್ಞರು-ವಿದ್ವಾಂಸರು ಜೂನ್ 2ರಂದು ಸಾಬೀತುಪಡಿಸಿದ್ದರು. ಬಹುಶಃ ಕಾರ್ಪೋರೇಟ್ ಮಾರುಕಟ್ಟೆಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳನ್ನು ನಿಗ್ರಹದಲ್ಲಿಡುವ ಉದ್ದೇಶದಿಂದಲೇ ತಯಾರಾಗಿರಬಹುದಾದ ಫಲಿತಾಂಶಪೂರ್ವ ಮತಗಟ್ಟೆ ಸಮೀಕ್ಷೆಗಳು ಬಿಜೆಪಿಯ ಚಾರ್ ಸೌ ಪಾರ್ ಘೋಷಣೆ ಇನ್ನೇನು ಸಾಕಾರಗೊಳ್ಳಲಿದೆ ಎನ್ನುವಂತಹ ಅಂಕಿ ಅಂಶಗಳನ್ನು ಒದಗಿಸಿದ್ದೇ ಅಲ್ಲದೆ, ಬಹುತೇಕ ಮಾಧ್ಯಮಗಳು ತಮ್ಮ ಸ್ವ-ವಿವೇಚನೆಯನ್ನೂ ಬಳಸದೆ ಅದೇ ಅಂಕಿಅಂಶಗಳನ್ನು 48 ಗಂಟೆಗಳ ಕಾಲ ಚರ್ಚೆಗೊಳಪಡಿಸಿದ್ದವು. ಕೆಲವು ವಾಹಿನಿಗಳ ಚರ್ಚೆಯ ಪರಿ ಗಮನಿಸಿದಾಗ ನರೇಂದ್ರ ಮೋದಿ ಸಂಪುಟ ರಚನೆಯಾಗುವುದೊಂದೇ ಬಾಕಿ ಎನ್ನುವಂತಿತ್ತು. ಭಾರತದ ಮುಖ್ಯವಾಹಿನಿ ಮಾಧ್ಯಮಗಳ ಬೌದ್ಧಿಕ ದಾರಿದ್ರ್ಯ ಹಾಗೂ ವಂದಿಮಾಗಧ ಧೋರಣೆಯ ನಗ್ನ ಪ್ರದರ್ಶನವನ್ನು ಈ ಎರಡು ದಿನಗಳಲ್ಲಿ ಕಾಣಬಹುದಿತ್ತು.
ಈ ಅತಿರೇಕದ ಭಾವಾತಿರೇಕಗಳ ಹೊರತಾಗಿಯೂ ಭಾರತದ ಮತದಾರರು ಜೂನ್ 4ರ ಸಂಜೆಗೆ ಸಮಸ್ತ ಜನತೆಯೂ ನೆಮ್ಮದಿಯಿಂದ ಉಸಿರಾಡುವಂತಹ ಫಲಿತಾಂಶವನ್ನು ನೀಡಿದ್ದಾರೆ. ಒಂದು ರೀತಿಯಲ್ಲಿ ಭಾರತದ ಪ್ರಜಾಸತ್ತೆಯೇ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ತೀವ್ರ ಒತ್ತಡಕ್ಕೊಳಗಾಗಿದ್ದ ಭಾರತದ ಸಂವಿಧಾನ ಇಂದು ಸುರಕ್ಷಾವಲಯದಲ್ಲಿದೆ ಎಂದು ಹೇಳಬಹುದು. ಬಿಜೆಪಿಯ ಕೋಮು ಧೃವೀಕರಣ ಮತ್ತು ಮುಸ್ಲಿಂ ದ್ವೇಷದ ರಾಜಕಾರಣವು ಯಾವುದೇ ಅಡೆತಡೆಯಿಲ್ಲದೆ ದೇಶಾದ್ಯಂತ ಆವರಿಸಿಕೊಳ್ಳುತ್ತದೆ ಎಂಬ ಭ್ರಮೆ ಮರೆಯಾಗಿದ್ದು ಆತಂಕ ಕಡಿಮೆಯಾಗಿದೆ. 18ನೆಯ ಲೋಕಸಭೆಗೆ ಪ್ರತಿನಿಧಿಗಳ ಆಯ್ಕೆಯಲ್ಲಿ ಭಾರತದ ಸಾರ್ವಭೌಮ ಜನತೆ/ಮತದಾರರು ಬದಲಾವಣೆಯ ಆಕಾಂಕ್ಷೆಯನ್ನು ಸ್ಪಷ್ಟವಾಗಿ ಹೊರಗೆಡಹಿದ್ದಾರೆ.
ಸಮ್ಮಿಶ್ರ ಸರ್ಕಾರದ ಅನಿವಾರ್ಯತೆಗಳು
ಆದರೆ ಬಿಜೆಪಿ ನೇತೃತ್ವದಲ್ಲೇ ರಚನೆಯಾಗಿರುವ ಎನ್‌ಡಿಎ ಸರ್ಕಾರ ಅನಿಶ್ಚಿತತೆ, ಅಭದ್ರತೆಯಲ್ಲಿ ಮುನ್ನಡೆದರೂ ಪುನಃ ಆಳ್ವಿಕೆಯ ನೊಗವನ್ನು ಬಿಜೆಪಿಯ ಹೆಗಲಿಗೇ ಹೊರಿಸಿರುವುದು ವಿರೋಧಾಭಾಸವಾಗಿಯೇ ಕಾಣುತ್ತದೆ. ಆದಾಗ್ಯೂ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 72 ಸಚಿವರೊಂದಿಗೆ ಕಳೆದ ಹತ್ತು ವರ್ಷಗಳಲ್ಲಿ ಕಳೆದುಕೊಂಡ ಮೌಲ್ಯಗಳನ್ನು ಹೇಗೆ ಮರುಸ್ಥಾಪಿಸುತ್ತದೆ ಎಂಬ ಪ್ರಶ್ನೆಯೊಂದಿಗೇ ಭವಿಷ್ಯದ ದಿನಗಳತ್ತ ನೋಡಬೇಕಿದೆ. ನೆಹರೂ ಮತ್ತು ಇಂದಿರಾಗಾಂಧಿಯವರ ನಂತರ ಮೂರನೆಯ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಪ್ರಥಮ ನಾಯಕರಾಗಿ ನರೇಂದ್ರ ಮೋದಿ ತಮ್ಮ ಮೊದಲಿನ ಅಧಿಕಾರ ಸೂತ್ರಗಳನ್ನು ಕಳೆದುಕೊಂಡು ಆಡಳಿತ ನಡೆಸಬೇಕಿರುವುದು ವಾಸ್ತವ. ಅತಿಯಾದ ಕೇಂದ್ರೀಕರಣದ ಮೂಲಕ ಆಡಳಿತ ಯಂತ್ರದ ಎಲ್ಲ ವಲಯಗಳಲ್ಲೂ ತಮ್ಮ ಪರಮಾಧಿಕಾರವನ್ನು ಸ್ಥಾಪಿಸಿದ್ದ ನರೇಂದ್ರ ಮೋದಿ ಈಗ ಮಿತ್ರಪಕ್ಷಗಳ ಪ್ರತಿಪಾದನೆಗಳಿಗೆ, ಹಕ್ಕೊತ್ತಾಯಗಳಿಗೆ ಅನುಗುಣವಾಗಿ ಸರ್ಕಾರವನ್ನು ಮುನ್ನಡೆಸಬೇಕಾಗುತ್ತದೆ.
ಈ ಪರಮಾಧಿಕಾರವು ಕ್ಷೀಣಿಸಿರುವುದು ಮತ್ತು ಏಕವ್ಯಕ್ತಿಯ ಘನತೆ ಕೊಂಚಮಟ್ಟಿಗೆ ಕುಸಿದಿರುವುದು ಭಾರತದ ರಾಜಕಾರಣದಲ್ಲಿ ಹಲವು ಬದಲಾವಣೆಗೆ ಎಡೆಮಾಡಿಕೊಡುತ್ತದೆ. ಮೋದಿ ಯುಗ ಎಂದೇ ಬಣ್ಣಿಸಲಾಗುತ್ತಿದ್ದ ಹತ್ತು ವರ್ಷಗಳ ಆಳ್ವಿಕೆಯ ಅಂತ್ಯವಾಗಿದ್ದು ಬಿಜೆಪಿಯ ಏಕಾಧಿಪತ್ಯವೂ ಕೊನೆಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ರಾಜಕೀಯ ಭೂಪಟದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ನಿಶ್ಚಿತವಾಗಿ ನಿರೀಕ್ಷಿಸಬಹುದು. ಒಂದು ರೀತಿಯಲ್ಲಿ ಅತಂತ್ರ ಸಂಸತ್ತಿನ ಅಭದ್ರತೆಯಿಂದ ಪಾರಾಗಿರುವ ಭಾರತದ ಪ್ರಜಾಪ್ರಭುತ್ವ ಕೊಂಚಮಟ್ಟಿನ ಸುಸ್ಥಿರ ಆಳ್ವಿಕೆಯನ್ನು ನಿರೀಕ್ಷಿಸಬಹುದು. ಆದಾಗ್ಯೂ ಅಬ್ ಕಿ ಬಾರ್ ಚಾರ್ ಸೌ ಪಾರ್ ( ಈ ಬಾರಿ ನಾನ್ನೂರು ದಾಟುತ್ತೇವೆ ) ಎಂಬ ಘೋಷಣೆಯೊಂದಿಗೆ ಚುನಾವಣಾ ಕಣವನ್ನು ಪ್ರವೇಶಿಸಿದ ಬಿಜೆಪಿ ನಾಯಕರಿಗೆ ಮತದಾರರು ತಕ್ಕ ಪಾಠ ಕಲಿಸಿರುವುದನ್ನು ಅಲಕ್ಷಿಸಲಾಗುವುದಿಲ್ಲ.
ಆಡಳಿತ ಯಂತ್ರದ ಸುಧಾರಣೆಯೊಂದಿಗೇ ಹಿಂದಿನ ಹತ್ತು ವರ್ಷಗಳ ನರೇಂದ್ರಮೋದಿ-ಅಮಿತ್ ಶಾ ಆಳ್ವಿಕೆಯಲ್ಲಿ ಆಗಿರುವಂತಹ ಕೆಲವು ಗಾಯಗಳನ್ನು ಶಮನ ಮಾಡುವ ಜವಾಬ್ದಾರಿಯೂ ಎನ್‌ಡಿಎ ಮಿತ್ರಪಕ್ಷಗಳ ಮೇಲಿದೆ. ಹಿಂದಿನ ಅವಧಿಯಂತೆ ಪ್ರಧಾನಿ ಮೋದಿ ತಮ್ಮ ಏಕಾಧಿಪತ್ಯವನ್ನು ಸ್ಥಾಪಿಸಲಾಗುವುದಿಲ್ಲ ಅಥವಾ ಅಮಿತ್ ಶಾ ಮತ್ತೊಮ್ಮೆ ಗೃಹಸಚಿವರಾದರೂ ಸಿಬಿಐ, ಆದಾಯತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮುಂತಾದ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಇಚ್ಛಾನುಸಾರ ನಿಯಂತ್ರಿಸಲಾಗುವುದಿಲ್ಲ. ಭ್ರಷ್ಟಾಚಾರ ನಿಯಂತ್ರಣದ ಹೆಸರಿನಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಮಣಿಸುವ ಸಾಂಸ್ಥಿಕ ತಂತ್ರಗಳಿಗೆ ಮುಂದಿನ ಐದು ವರ್ಷಗಳು ವಿರಾಮ ನೀಡುತ್ತವೆ. ರಾಜ್ಯಪಾಲರ ಕಚೇರಿ, ಕೆಳಹಂತದ ನ್ಯಾಯಾಂಗ ಹಾಗೂ ಚುನಾವಣಾ ಆಯೋಗದಂತಹ ಸಾಂಸ್ಥಿಕ ನೆಲೆಗಳು ಬಹುಶಃ ರಾಜಕೀಯ ಒತ್ತಡಗಳಿಂದ ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಬಹುದು.
ಮತ್ತೊಂದೆಡೆ ಸರ್ಕಾರದ ಒತ್ತಡಗಳಿಗೆ ಮಣಿದು ಅಥವಾ ತಮ್ಮ ಕಾರ್ಪೋರೇಟ್ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ ಸ್ವಾರ್ಥಪರತೆಯಿಂದ ಆಡಳಿತಾರೂಢ ಪಕ್ಷದ ಭಟ್ಟಂಗಿಗಳಂತೆ ವರ್ತಿಸುತ್ತಿದ್ದ ಬಹುತೇಕ ಸುದ್ದಿ ಮಾಧ್ಯಮ ಸಮೂಹಗಳು ತಮ್ಮ ಸ್ವಂತಿಕೆ ಮತ್ತು ಸ್ವ-ಗೌರವವನ್ನು ಮರಳಿ ಪಡೆಯಲು ಈಗ ಅವಕಾಶ ಲಭಿಸಿದೆ. ಹತ್ತು ವರ್ಷಗಳ ಕಾಲ ಒಮ್ಮುಖ ದೃಷ್ಟಿಯಿಂದ ತಮ್ಮ ಸ್ವಂತ ಒಳನೋಟವನ್ನೇ ಕಳೆದುಕೊಂಡಿದ್ದ ಮುಖ್ಯವಾಹಿನಿ ಮಾಧ್ಯಮಗಳು, ಸುದ್ದಿಮನೆಯ ನೀರೂಪಕರು ಹಾಗೂ ಪತ್ರಿಕೋದ್ಯಮಿಗಳು ಬಹುಶಃ ತಮ್ಮ ವೃತ್ತಿಧರ್ಮಪಾಲನೆಯ ಮೂಲಭೂತ ಸಂಹಿತೆಗಳನ್ನು ಪುನರ್ ಮನನ ಮಾಡಿಕೊಳ್ಳಲು ಭಾರತದ ಮತದಾರರು ಅವಕಾಶ ಕಲ್ಪಿಸಿದ್ದಾರೆ. ಈಗಲಾದರೂ ಸುದ್ದಿಮನೆಗಳ ಕ್ಯಾಮರಾಗಳು ತಳಮಟ್ಟದ ಸಮಾಜದಲ್ಲಿ ನಾಳೆಗಳನ್ನು ಎಣಿಸುತ್ತಿರುವ ಕೋಟ್ಯಂತರ ಜನರೊಡನೆ ಸೆಲ್ಫಿ ತೆಗೆದುಕೊಳ್ಳಲು ಸಜ್ಜಾಗುತ್ತವೆಯೇ ಕಾದು ನೋಡಬೇಕಿದೆ.
ನಿರೀಕ್ಷೆ ಆಕಾಂಕ್ಷೆಗಳ ನಡುವೆ
“ ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ” ಎಂಬ ಘೋಷಣೆಯೊಂದಿಗೆ 2014ರಲ್ಲಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವತಂತ್ರ ಭಾರತದ ಇತಿಹಾಸದಲ್ಲೇ ಕಾಣದಂತಹ ಆಡಳಿತ ಹಸ್ತಕ್ಷೇಪದಲ್ಲಿ ತೊಡಗಿದ್ದುದು ಈಗ ಇತಿಹಾಸ. 17ನೆಯ ಲೋಕಸಭೆಯಲ್ಲಿ 57 ಸದಸ್ಯರ ಸಚಿವ ಸಂಪುಟದೊಂದಿಗೆ ಆಡಳಿತ ಆರಂಭಿಸಿದ್ದ ನರೇಂದ್ರ ಮೋದಿ ಈ ಬಾರಿ 72 ಸಚಿವರೊಡನೆ ಮುಂದೆ ಸಾಗಬೇಕಿದೆ. ಸಮ್ಮಿಶ್ರ ಸರ್ಕಾರದ ಅನಿವಾರ್ಯತೆಗಳು ಸಚಿವ ಸಂಪುಟದ ಗಾತ್ರವನ್ನೂ ನಿರ್ಧರಿಸುವುದು ಸಹಜ. ಆದರೆ 2014ರಲ್ಲಿ ನೀಡಿದ್ದ ಕನಿಷ್ಠ ಹಸ್ತಕ್ಷೇಪದ ಭರವಸೆ 2024ರಲ್ಲಾದರೂ ಈಡೇರುವುದೇ ? ಈ ಪ್ರಶ್ನೆಗೆ ಎನ್‌ಡಿಎ ಮೈತ್ರಿಕೂಟದ ಮಿತ್ರ ಪಕ್ಷಗಳು ಉತ್ತರ ನೀಡಬೇಕಿದೆ. ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಸಾಂಸ್ಥಿಕ ಉಪಕ್ರಮಗಳನ್ನು ತಡೆಗಟ್ಟುವಲ್ಲಿ ಟಿಡಿಪಿ, ಜೆಡಿಯು, ಆರ್‌ಎಲ್‌ಡಿ ಮುಂತಾದ ಮಿತ್ರಪಕ್ಷಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತವೆ ಕಾದುನೋಡಬೇಕಿದೆ.
ಕಳೆದ ಹತ್ತು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ದೇಶದ ಆಡಳಿತ ವ್ಯವಸ್ಥೆಯ ಮೇಲೆ ಹಾಗೂ ಮಧ್ಯಮ ವರ್ಗದ ಬೌದ್ಧಿಕ ವಲಯದ ಮೇಲೆ ತಮ್ಮದೇ ಆದ ಪ್ರಭಾವಶಾಲಿ ಛಾಯೆಯನ್ನು ಹರಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಗೃಹಸಚಿವ ಅಮಿತ್ ಶಾ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಚುನಾವಣೆಗಳಲ್ಲಿ ಮತದಾರ ಅವಕೃಪೆಗೆ ಪಾತ್ರರಾಗಿರುವುದು ಪ್ರಜಾಸತ್ತೆಯ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ. ದೇಶದ ಅತಿ ದೊಡ್ಡ ರಾಜ್ಯಗಳಾದ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದ ಮತದಾರರು ಬಿಜೆಪಿಯ ಪರಮಾಧಿಕಾರಕ್ಕೆ ನೀಡಿರುವ ಪೆಟ್ಟು ಅಗಾಧವಾಗಿದ್ದು, ಯೋಗಿ ಮಾಡೆಲ್‌ನ ಬುಲ್ಡೋಜರ್ ರಾಜಕಾರಣ ಕೊಂಚಮಟ್ಟಿಗಾದರೂ ಹಿಂದಕ್ಕೆ ಸರಿಯುತ್ತದೆ. ಅಯೋಧ್ಯೆಯ ರಾಮಮಂದಿರ ತನ್ನ ರಾಜಕೀಯ ಪ್ರಸ್ತುತತೆಯನ್ನು ಕಳೆದುಕೊಂಡಿದ್ದು, ಮುಸ್ಲಿಂ ದ್ವೇಷವು ಎಲ್ಲ ಹಿಂದೂಗಳನ್ನೂ ಸಂತೃಪ್ತಗೊಳಿಸುವುದಿಲ್ಲ ಎಂಬ ಸಂದೇಶವನ್ನು ಎರಡೂ ರಾಜ್ಯಗಳ ಮತದಾರರು ನೀಡಿದ್ದಾರೆ. ಇದು ಸಂಘಪರಿವಾರದ ಕಾರ್ಯತಂತ್ರಗಳ ಮೇಲೆ ಪರಿಣಾಮ ಬೀರುವುದೇ ಕಾದು ನೋಡಬೇಕಿದೆ.
ಆದರೆ ಸಕಾರಾತ್ಮಕವಾಗಿ ಕಾಣುವ ಈ ಬೆಳವಣಿಗೆಗಳು ಭಾರತದ ತಳಸಮುದಾಯಗಳು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಪ್ರಜಾಪ್ರಭುತ್ವವಾದಿಗಳು ನಿರೀಕ್ಷಿಸುವಂತಹ ಬದಲಾವಣೆಗಳನ್ನು ತರುತ್ತವೆಯೇ ಎಂಬ ಪ್ರಶ್ನೆ ಉಳಿದೇ ಇದೆ. ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚು ಚೈತನ್ಯ ಗಳಿಸಿ ಸಕ್ರಿಯವಾಗಿರುವ ಫ್ಯಾಸಿಸ್ಟ್ ಶಕ್ತಿಗಳು ಸಾರ್ವಜನಿಕ ಅಭಿಪ್ರಾಯಗಳನ್ನು ಲೆಕ್ಕಿಸುವುದಿಲ್ಲ. ಇದು ಸಾರ್ವತ್ರಿಕ ಸತ್ಯ. ಘಾಸಿಗೊಂಡ ಮತಾಂಧ-ಕೋಮುವಾದಿ ಪಡೆಗಳು ಅನುಕೂಲಕರ ಆಳ್ವಿಕೆಯನ್ನೇ ಅವಲಂಬಿಸುವುದೂ ಇಲ್ಲ. ಪ್ರಸ್ತುತ ಅಭದ್ರತೆಯ ಹಿನ್ನೆಲೆಯಲ್ಲಿ ಕೇಂದ್ರ ಎನ್‌ಡಿಎ ಸರ್ಕಾರವು ಕೊಂಚಮಟ್ಟಿಗೆ ನಿಬಂಧನೆಗಳನ್ನು, ನಿಯಂತ್ರಣ ಸೂತ್ರಗಳನ್ನು ಅನುಸರಿಸಿದರೂ ತಳಮಟ್ಟದಲ್ಲಿ ಮತಾಂಧ-ಕೋಮುವಾದಿ ತುಡುಗು ಪಡೆಗಳು (Fringe elements) ತಮ್ಮ ಕಾರ್ಯಚಟುವಟಿಕೆಗಳನ್ನೇನೂ ನಿಲ್ಲಿಸುವುದಿಲ್ಲ. ಇದು ತಳಸಮಾಜವನ್ನು ಕಾಡಬಹುದಾದ ಪ್ರಮುಖ ಸವಾಲಾಗಿರುತ್ತದೆ.
ಆಡಳಿತ ವೈಪರೀತ್ಯಗಳ ನಡುವೆ
ಸರ್ಕಾರದ ಮಟ್ಟದಲ್ಲಿ ಸಿಎಎ, ಸಮಾನ ನಾಗರಿಕ ಸಂಹಿತೆ, ಗೋಹತ್ಯೆ ನಿಷೇದ, ಮತಾಂತರ ನಿಷೇದ ಮೊದಲಾದ ಕಾಯ್ದೆಗಳಿಗೆ ವಿರಾಮ ದೊರೆಯಬಹುದಾದರೂ, ದೇಶದ ಮೂಲೆಮೂಲೆಯನ್ನೂ ಆವರಿಸಿರುವ ಗೋರಕ್ಷಕ ಪಡೆಗಳ, ಲವ್ ಜಿಹಾದ್ ಕಲ್ಪನೆಯ ಸುತ್ತ ನಿರ್ಮಾಣವಾಗಿರುವ ಘಾತುಕ ಪಡೆಗಳ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಹೊಸ ಸರ್ಕಾರ ಎಷ್ಟರಮಟ್ಟಿಗೆ ಕ್ರಮ ಕೈಗೊಳ್ಳಬಹುದು ? ಜಾತ್ಯತೀತತೆ (Secularism) ಮತ್ತು ಸಂಯುಕ್ತತೆ (federalism) ತತ್ವಗಳಿಗೆ ತಮ್ಮ ಬದ್ಧತೆಯನ್ನು ಇಂದಿಗೂ ಪ್ರತಿಪಾದಿಸುವ ಜೆಡಿಯು, ಟಿಡಿಪಿ ಹಾಗೂ ಕರ್ನಾಟಕದ ಜೆಡಿಎಸ್ ಪಕ್ಷಗಳು ಈ ಉಪಕ್ರಮಗಳಿಗಾಗಿ ಎಷ್ಟರಮಟ್ಟಿಗೆ ಆಗ್ರಹಿಸುತ್ತವೆ ಎಂದು ಕಾದುನೋಡಬೇಕಿದೆ. ಮತ್ತೊಂದೆಡೆ “ ಒಂದು ದೇಶ-ಒಂದು ಭಾಷೆ-ಒಂದು ಚುನಾವಣೆ “ಯ ಸೂತ್ರದಡಿ ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಶಿಥಿಲಗೊಳಿಸುವ ಕಳೆದ ಒಂದು ದಶಕದ ಪ್ರಯತ್ನಗಳಿಗೆ ಬ್ರೇಕ್ ಬೀಳುವುದಾದರೂ, ಭಾರತದ ಸಂಯುಕ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಿತ್ರಪಕ್ಷಗಳು ಎಷ್ಟು ಆಸ್ಥೆ ವಹಿಸುತ್ತವೆ ಎಂದೂ ಕಾದುನೋಡಬೇಕಿದೆ.
ಬಿಜೆಪಿ-ಸಂಘಪರಿವಾರ ಅತಿಯಾಗಿ ಅವಲಂಬಿಸಿದ್ದ ಧರ್ಮರಾಜಕಾರಣದ ಹಿನ್ನಡೆ ಅಯೋಧ್ಯೆಯಿಂದಲೇ ಚಾಲ್ತಿ ಪಡೆದಿರುವುದು ಸ್ವಾಗತಾರ್ಹವೇ ಆದರೂ, ಪ್ರಜಾಪ್ರಭುತ್ವದ ಬುನಾದಿಯನ್ನು ಮತ್ತಷ್ಟು ಶಿಥಿಲಗೊಳಿಸುವ ಜಾತಿ ರಾಜಕಾರಣ ಬಲವಾಗಿರುವುದನ್ನು ಪ್ರಸ್ತುತ ಫಲಿತಾಂಶಗಳಲ್ಲಿ ಕಾಣಬಹುದು. ಕೋಮು ಧೃವೀಕರಣದಷ್ಟೇ ಅಪಾಯಕಾರಿಯಾದ ಜಾತಿ ಧೃವೀಕರಣ ರಾಜಕಾರಣವು ಒಂದು ಹಂತದವರೆಗೆ ತಳಸಮುದಾಯಗಳಿಗೆ ಪ್ರಚೋದಕವಾಗಿ ಕಾಣಬಹುದಾದರೂ, ಚುನಾವಣೆಗಳಲ್ಲಿ ಪ್ರಾಮುಖ್ಯತೆ ವಹಿಸುವ ಜಾತಿ ಸಮೀಕರಣಗಳು ಪ್ರಧಾನ, ಪ್ರಬಲ ಜಾತಿಗಳ ಹಿತಾಸಕ್ತಿಗಳನ್ನೇ ಪ್ರತಿನಿಧಿಸುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಧರ್ಮರಾಜಕಾರಣದ ಕಡೆಗಣನೆಗೆ ಸಮಾನಾಂತರವಾಗಿ ಶೋಷಿತ ತಳಸಮುದಾಯಗಳ ಸಾಮಾಜಿಕ ಆರ್ಥಿಕ ಬಲವರ್ಧನೆಯಾಗದೆ ಹೋದರೆ, ಧರ್ಮ ರಾಜಕಾರಣವು ಕಂಡುಕೊಂಡಿದ್ದಂತಹ ಅಧಿಕಾರ ರಾಜಕಾರಣದ ಸಾಂಸ್ಥಿಕ ನೆಲೆಗಳನ್ನು ಪ್ರಬಲ/ಪ್ರಧಾನ ಜಾತಿಗಳು ಆಕ್ರಮಿಸುತ್ತವೆ. ಈ ವೈರುಧ್ಯವನ್ನು ಸಮಾಜ ಶಾಸ್ತ್ರೀಯ ನೆಲೆಯಲ್ಲಿ ವಿಶ್ಲೇಷಣೆಗೊಳಪಡಿಸಬೇಕಿದೆ.
ಈ ದೃಷ್ಟಿಯಿಂದ ನೋಡಿದಾಗ 2024ರ ಮಹಾ ಚುನಾವಣೆಗಳು ಭಾರತದ ಪ್ರಜಾಪ್ರಭುತ್ವಕ್ಕೆ ಹಾಗೂ ಪ್ರಜಾಸತ್ತಾತ್ಮಕ ಜನಪರ ಚಳುವಳಿಗಳಿಗೆ ಒಂದು ಹೊಸ ಅವಕಾಶವನ್ನು ಕಲ್ಪಿಸಿವೆ. ಶೋಷಿತ ತಳಸಮುದಾಯಗಳ ಜೀವನ-ಜೀವನೋಪಾಯಗಳಿಗೆ ಮಾರಕವಾದ ನವ ಉದಾರವಾದ, ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆ ಹಾಗೂ ಆಡಳಿತ ವಲಯವನ್ನು ಇಂದಿಗೂ ನಿರ್ದೇಶಿಸುವ ಪಿತೃಪ್ರಧಾನತೆಯ ವಿರುದ್ಧ ನಡೆಯುತ್ತಿರುವ ಜನಪರ ಹೋರಾಟಗಳನ್ನು ಮತ್ತಷ್ಟು ಚೈತನ್ಯಪೂರ್ಣವನ್ನಾಗಿ ಮಾಡುವ ಜವಾಬ್ದಾರಿ ನಾಗರಿಕ ಸಮಾಜದ ಸಂಘಟನೆಗಳ ಮೇಲಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಹಿಳಾ ದೌರ್ಜನ್ಯಗಳು, ಅಸ್ಪೃಶ್ಯರ ಮೇಲಿನ ಸಾಮಾಜಿಕ ಬಹಿಷ್ಕಾರ-ದಾಳಿಗಳು, ಅತ್ಯಾಚಾರಗಳು, ಗುಂಪು ಥಳಿತಗಳು ಒಮ್ಮೆಲೆ ಕಡಿಮೆಯಾಗುತ್ತವೆ ಎಂಬ ಭ್ರಮೆಗೆ ಯಾವುದೇ ಅವಕಾಶ ಇರಬೇಕಿಲ್ಲ. ಈ ಚಟುವಟಿಕೆಗಳನ್ನು ನಿರ್ದೇಶಿಸುವ ಸಮಾಜಘಾತುಕ ಸಾಂಸ್ಕೃತಿಕ ಶಕ್ತಿಗಳೇನೂ ಸೋತಿಲ್ಲ.
ಈ ಎಲ್ಲ ಆತಂಕಗಳ ನಡುವೆಯೂ 2024ರ ಚುನಾವಣೆಗಳು ಪ್ರಜಾಪ್ರಭುತ್ವದ ಗೆಲುವಿಗೆ ಕಾರಣವಾಗಿವೆ. ಪ್ರಜಾಪ್ರಭುತ್ವ ಎಂಬ ವಿಶಾಲ ಪರಿಕಲ್ಪನೆಯನ್ನು ಪರಿಗಣಿಸಿದಾಗ 330 ಕೋಟ್ಯಧೀಶ್ವರ ಸಂಸದರನ್ನು ಹೊಂದಿರುವ ಹೊಸ ಭಾರತ ಸಂವಿಧಾನ ಬಯಸುವ ʼಸಮ ಸಮಾಜ ʼವನ್ನು ಬಿಂಬಿಸುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಈ ವಿಶಾಲ ಕಲ್ಪನೆಯ ತಳಮಟ್ಟದಲ್ಲಿರುವ ಶೋಷಿತ, ಅವಕಾಶವಂಚಿತ, ಅಂಚಿಗೆ ತಳ್ಳಲ್ಪಟ್ಟ, ಅಪಮಾನಿತ ಜನಸಮುದಾಯಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಒಂದು ವಿಶ್ವಾಸವನ್ನು ಮೂಡಿಸಿರುವುದು ಸತ್ಯ. ಈ ತಳಸಮಾಜದ ಜನತೆಯ ಪ್ರಜಾಸತ್ತಾತ್ಮಕ ಆಶಯಗಳು ಹಾಗೂ ನಿರೀಕ್ಷೆಗಳನ್ನು ಜೀವಂತವಾಗಿರಿಸುವ ಮಟ್ಟಿಗೆ 2024ರ ಫಲಿತಾಂಶಗಳು ಯಶಸ್ವಿಯಾಗಿವೆ. ಇದು ಈ ಪ್ರಜಾಸತ್ತಾತ್ಮಕ ಆಶಯಗಳ ಗೆಲುವು ಎಂದು ವ್ಯಾಖ್ಯಾನಿಸುವುದು ಸೂಕ್ತ.
ಈ ಜನಾಭಿಪ್ರಾಯದ ಹಿಂದಿರುವ ಉದಾತ್ತ ಸಾಂವಿಧಾನಿಕ ಆಶಯಗಳನ್ನು, ಕನಸುಗಳನ್ನು ಸಾಕಾರಗೊಳಿಸಲು ಅಹರ್ನಿಶಿ ದುಡಿಯುವ ಜವಾಬ್ದಾರಿ ಪ್ರಜಾಪ್ರಭುತ್ವವನ್ನು ಪ್ರೀತಿಸುವ-ಗೌರವಿಸುವ ವ್ಯಕ್ತಿ-ಸಂಘಟನೆ-ಸಂಸ್ಥೆ-ಪಕ್ಷ-ಗುಂಪುಗಳ ಮೇಲಿದೆ. ಅಸ್ಮಿತೆ ಅಸ್ತಿತ್ವಗಳ ಹಂಗು ತೊರೆದು ಈ ಜವಾಬ್ದಾರಿಯನ್ನು ತಮ್ಮ ಹೆಗಲೇರಿಸಿಕೊಳ್ಳುವ ಮೂಲಕ ಸಂವಿಧಾನದ ಫಲಾನುಭವಿ ಜನತೆ ವಂಚಿತ ಜನತೆಯ ಭವಿಷ್ಯದತ್ತ ದೃಷ್ಟಿ ಹಾಯಿಸಬೇಕಿದೆ. ಆಗ ಮಾತ್ರ ನಾವು ಭಾರತದ ಪ್ರಜಾಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯನ್ನು ಕಾರ್ಪೋರೇಟ್ ಮಾರುಕಟ್ಟೆ, ಪಿತೃಪ್ರಧಾನತೆ, ಮತಾಂಧತೆ ಮತ್ತು ಜಾತಿ ಯಜಮಾನಿಕೆಯ ಹಿಡಿತದಿಂದ ಮುಕ್ತಗೊಳಿಸಬಹುದು. 2024ರ ಚುನಾವಣೆಗಳಲ್ಲಿ ಸಾರ್ವಭೌಮ ಮತದಾರರು ಈ ಅವಕಾಶವನ್ನಂತೂ ಕಲ್ಪಿಸಿಕೊಟ್ಟಿದ್ದಾರೆ. ನೊಗ ಹೊತ್ತು ಮುಂದಿನ ಹಾದಿಯನ್ನು ಸುಗಮಗೊಳಿಸುವ ಹೊಣೆ ನಮ್ಮದು. ಕಲಿತ-ಬಲಿತ-ಅರಿತ ಜನತೆಯದು.
-೦-೦-೦-೦-