ಹೊಸ ಯುಗಕ್ಕೆ ನಾಂದಿ ಹಾಡಿರುವ 2024ರ ಚುನಾವಣೆಗಳು ಹಲವು ಸವಾಲುಗಳನ್ನೂ ಮುಂದಿಟ್ಟಿದೆ
ಕನ್ನಡಕ್ಕೆ : ನಾ ದಿವಾಕರ
18ನೆಯ ಲೋಕಸಭೆಗೆ ನಡೆದ ಮಹಾ ಚುನಾವಣೆಗಳು ಬಹುಶಃ ಒಂದು ಯುಗಾಂತ್ಯದ ಸೂಚಕವಾಗಿ ಸಮಾಪ್ತಿಯಾಗಿದೆ ಎನಿಸುತ್ತದೆ. ಅಧಿಕಾರ ಹಸ್ತಾಂತರದಲ್ಲಿ ಕೊನೆಗೊಳ್ಳದಿದ್ದರೂ ಈ ಚುನಾವಣೆಗಳು ʼ ನಿರ್ಣಾಯಕ ʼ ಎಂದು ಹೇಳಬಹುದಾದ ದಿಕ್ಕನ್ನು ಅನುಸರಿಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಬಹುಮತ ಕಳೆದುಕೊಂಡಿರುವುದು ಸಮರಂಜಸವಾಗಿದ್ದು, ಬಹುಶಃ ಮುಂಬರುವ ದಿನಗಳಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಯ ಹಾದಿಗಳು ಸುಗಮವಾಗುವ ಮೂಲಕ ಇಡೀ ಪ್ರಕ್ರಿಯೆ ತಾರ್ಕಿಕ ಅಂತ್ಯವನ್ನು ಕಾಣಬಹುದಾಗಿದೆ.
ಹತ್ತು ವರ್ಷಗಳ ಕಾಲ ಭಾರತವು ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುವ ಹಾದಿಯಲ್ಲಿ ಸಾಗಿ ಬಂದಿದ್ದು, ಕೆಲವೇ ವ್ಯಕ್ತಿಗಳ ಹಿಡಿತದಲ್ಲಿ ರಾಜಕೀಯ ಹಾಗೂ ಆರ್ಥಿಕ ಅಧಿಕಾರ ಕೇಂದ್ರೀಕರಣವಾಗಿದ್ದುದು ಇದಕ್ಕೆ ಸಾಕ್ಷಿಯಾಗಿದೆ. ಪ್ರಭುತ್ವದ ಆಡಳಿತ ಯಂತ್ರದ ಮೇಲ್ ಸ್ತರದಲ್ಲಿ ಕೆಲವೇ ವ್ಯಕ್ತಿಗಳು, ಇತರ ಎಲ್ಲರ ಪರವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದ ವಾತಾವರಣದಲ್ಲಿ ಸಂಸತ್ತು ಹಾಗೂ ಸಂಯುಕ್ತ ತತ್ವಗಳು (Federalism) ತೀವ್ರ ಧಕ್ಕೆಗೊಳಗಾಗಿದ್ದವು. ಪ್ರಭುತ್ವದ ಇತರ ಸಾಂಸ್ಥಿಕ ಕೇಂದ್ರಗಳಿಗೂ ಅಷ್ಟೇ ಧಕ್ಕೆ ಉಂಟಾಗಿತ್ತು. ವಾಣಿಜ್ಯ ಪ್ರಪಂಚದಲ್ಲಿ ಕೆಲವೇ ಬೆರಳೆಣಿಕೆಯಷ್ಟು ಆಪ್ತ ಬಂಡವಾಳಿಗರು (Cronies) ದೇಶದ ಬಹುಪಾಲು ಸಂಪತ್ತನ್ನು ವಶಪಡಿಸಿಕೊಳ್ಳುವುದೇ ಅಲ್ಲದೆ ಆರ್ಥಿಕತೆಯ ಮೇಲೆ ಆಧಿಪತ್ಯ ಸಾಧಿಸುವುದರಲ್ಲೂ ಯಶಸ್ವಿಯಾಗಿದ್ದರು.
ಈ ಆಳ್ವಿಕೆಯಲ್ಲಿ ಅಸಮಾನತೆಗಳು ಹೆಚ್ಚಾಗುತ್ತಿದ್ದರೂ ಬಹುಪಾಲು ಬಡ ಜನತೆ ಧರ್ಮದ ಹೆಸರಿನಲ್ಲಿ, ಇತರ ಕಾರಣಗಳಿಗಾಗಿ ಸಿರಿವಂತರ ಪರ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದನ್ನು ಗಮನಿಸಬಹುದು. ಅಲ್ಪಸಂಖ್ಯಾತ ಸಮುದಾಯಗಳಿಗೆ ಧಕ್ಕೆ ಉಂಟುಮಾಡುವ ಅಸ್ಮಿತೆಯ ರಾಜಕಾರಣ ಹಾಗೂ ಕೋಮು ಧೃವೀಕರಣಗಳು ಇತರ ಸಾಮಾಜಿಕ ಸಮಸ್ಯೆಗಳಿಗಿಂತಲೂ ಪ್ರಾಧಾನ್ಯತೆ ಪಡೆದುಕೊಂಡಿದ್ದವು. ಇಂದು ಈ ಎಲ್ಲ ವಲಯಗಳಲ್ಲೂ ವ್ಯಾಪಕವಾದ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಏಕೆಂದರೆ, ಅಧಿಕಾರದ ಸಮತೋಲನ ಬದಲಾಗಿದ್ದು ನಿರೂಪಣೆಗಳು ಬದಲಾಗುವ ಸಾಧ್ಯತೆಗಳಿವೆ. ಆದರೆ ಇದು ಸಾಕಾರಗೊಳ್ಳುವುದೇ ಎಂಬ ಪ್ರಶ್ನೆ ಇದ್ದೇ ಇರುತ್ತದೆ.
ಬದಲಾವಣೆ ಅಲ್ಲ ಹೊರಳುವಿಕೆ ಅಷ್ಟೆ
ವಾಸ್ತವವಾಗಿ ಅಧಿಕಾರದ ಸಮತೋಲನವು ಬದಲಾಗಿಲ್ಲ ಆದರೆ ಕೊಂಚ ಹೊರಳಿದೆ. ಏಕೆಂದರೆ ಬಿಜೆಪಿ ಈಗಲೂ ಸಹ ಪ್ರಧಾನ ಪಕ್ಷವಾಗಿಯೇ ಹೊರಹೊಮ್ಮಿದೆ. ನರೇಂದ್ರ ಮೋದಿ ಈಗ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸಬೇಕಿದೆ. ಮೋದಿಯ ಅಧಿಕಾರ ಕುಂಠಿತವಾಗಿರುವುದರಿಂದ, ಶಿಥಿಲವಾಗಿದ್ದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಕೊಂಚ ಬಲವರ್ಧನೆ ಕಾಣಬಹುದು. ಭಾರತದ ಚುನಾವಣಾ ಆಯೋಗವನ್ನೂ ಒಳಗೊಂಡಂತೆ ಅಧಿಕಾರಶಾಹಿಗಳಿಗೆ, ತಮ್ಮನ್ನು ಆಳುವವರು ಮೊದಲಿನಷ್ಟು ಶಕ್ತಿಯುತವಾಗಿಲ್ಲ ಎನ್ನುವುದು ಮನದಟ್ಟಾಗಬೇಕಿದೆ. ಮುಂದಿನ ದಿನಗಳಲ್ಲಿ ಇದು ಬದಲಾವಣೆ ಕಾಣುವ ಸಾಧ್ಯತೆಗಳೂ ಇವೆ. ಈ ಸನ್ನಿವೇಶದಲ್ಲಿ ಅಧಿಕಾರಶಾಹಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಕಾದುನೋಡಬೇಕಿದೆ. ಇದೇ ಪ್ರಮೇಯವನ್ನು ನ್ಯಾಯಾಂಗಕ್ಕೂ̧ ಮುಖ್ಯವಾಹಿನಿ ಮಾಧ್ಯಮಗಳಿಗೂ ವಿಸ್ತರಿಸಬಹುದು. ಬಿಜೆಪಿ ಸರ್ಕಾರವು ಕಳೆದ ಹತ್ತು ವರ್ಷಗಳಲ್ಲಿ ಜಾರಿಗೊಳಿಸಿದ ಸ್ವಾತಂತ್ರ್ಯಹಂತಕ (liberticised) ಕಾನೂನುಗಳನ್ನು ಈ ಎರಡೂ ವಲಯಗಳು ವಿರೋಧಿಸುತ್ತವೆಯೇ ? ಏಕೆಂದರೆ ನಾವು 1977ರ ಸನ್ನಿವೇಶದಲ್ಲಿ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿಗತ ಹಕ್ಕುಗಳನ್ನು ನಿರ್ಬಂಧಿಸುವಂತಹ ಕರಾಳ ಶಾಸನಗಳನ್ನು ಹಿಂಪಡೆಯಲಾಗುವುದಿಲ್ಲ. ಇದಕ್ಕೆ ಅವಶ್ಯವಾದ ಬಹುಮತ ಇಲ್ಲ.
ಇದೇ ಸಂದರ್ಭದಲ್ಲಿ ಸಂಯುಕ್ತ ತತ್ವವನ್ನೂ ಸಹ ಪುನಶ್ಚೇತನಗೊಳಿಸಬೇಕಿದೆ. ಕೇಂದ್ರ ಸರ್ಕಾರದ ಪ್ರಾಬಲ್ಯವು ಕುಸಿದಿರುವುದಷ್ಟೇ ಅಲ್ಲದೆ ಸರ್ಕಾರಕ್ಕೆ ಆಡಳಿತ ನಡೆಸಲು ಎರಡು–ಮೂರು ಪ್ರಾದೇಶಿಕ ಪಕ್ಷಗಳ ಬೆಂಬಲ ಅತ್ಯವಶ್ಯವಾಗಿದೆ. ತೆಲುಗುದೇಶಂ ಮತ್ತು ಜೆಡಿಯು ಪಕ್ಷಗಳು ಇವುಗಳಲ್ಲಿ ಪ್ರಮುಖವಾಗಿದ್ದು, ಈ ಮುಂಚೆಯೇ ಈ ಎರಡೂ ಪಕ್ಷಗಳು ರಾಜ್ಯಗಳ ಸ್ವಾಯತ್ತತೆಗಾಗಿ ದನಿಎತ್ತಿವೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಆಳ್ವಿಕೆಯಲ್ಲಾದಂತಹ ವಿಕೇಂದ್ರೀಕರಣವನ್ನು ನಾವು ನಿರೀಕ್ಷಿಸಲಾಗುವುದಿಲ್ಲವಾದರೂ, ಯಾವುದೇ ಸಮ್ಮಿಶ್ರ ಸರ್ಕಾರದಲ್ಲಾದರೂ ಮುಖ್ಯಮಂತ್ರಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲೇಬೇಕಾಗುತ್ತದೆ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ನರೇಂದ್ರ ಮೋದಿ ಸರ್ಕಾರವು 2016ರ ನೋಟು ಅಮಾನ್ಯೀಕರಣದ ಸಂದರ್ಭದಲ್ಲಾಗಲೀ, 2020 ಕೋವಿದ್ ಲಾಕ್‌ಡೌನ್ ಪರಿಸ್ಥಿತಿಯಲ್ಲಾಗಲೀ ಮುಖ್ಯಮಂತ್ರಿಗಳನ್ನು ಸಂಪರ್ಕಿಸಲೇ ಇಲ್ಲ.
ಅಧಿಕಾರ ಸಂಬಂಧಗಳ ಹೊರತಾಗಿಯೂ ಕೆಲವು ನಿರೂಪಣೆಗಳು (Narratives) ಮುಖ್ಯವಾಗುತ್ತವೆ. ಇತರ ಜನಪ್ರಿಯ ರಾಷ್ಟ್ರ ನಾಯಕರಂತೆಯೇ ನರೇಂದ್ರ ಮೋದಿ ಸಹ ಸ್ವತಃ ತಮ್ಮನ್ನೇ ದೇಶಕ್ಕೆ ಸಮೀಕರಿಸಿಕೊಂಡಿದ್ದರು. ತಮ್ಮ ವಿರೋಧಿಗಳನ್ನು ಮೋದಿ ದೇಶದ್ರೋಹಿಗಳಂತೆಯೇ ಪರಿಗಣಿಸುತ್ತಿದ್ದರು. ಅನೇಕ ರಾಜಕಾರಣಿಗಳು , ಕೊಟ್ಟಿ ಬುದ್ಧಿಜೀವಿಗಳು (pseudo intellectuals) ಮತ್ತು ಪತ್ರಿಕೋದ್ಯಮಿಗಳು–ಪತ್ರಕರ್ತರು ಈ ರಾಜಕೀಯ ಸಂಕಥನಕ್ಕೆ ಒತ್ತಾಸೆಯಾಗಿ ನಿಂತಿದ್ದರು. ತತ್ಪರಿಣಾಮವಾಗಿ ಭಾರತೀಯತೆ ಮತ್ತು ಹಿಂದುತ್ವವನ್ನು ಒಂದೇ ತಕ್ಕಡಿಯಲ್ಲಿಟ್ಟು ಸಮೀಕರಿಸುವ ಪ್ರಚಾರ ತಂತ್ರವನ್ನು ಬಳಸಲಾಯಿತು. ಇಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ಅಂಚಿಗೆ ತಳ್ಳಲ್ಪಟ್ಟರು. ಈ ರೀತಿಯ ಅಸ್ಮಿತೆಯ ರಾಜಕಾರಣ ಈಗ ರಕ್ಷಣಾತ್ಮಕವಾಗಿ ಬದಲಾಗಬಹುದು ಏಕೆಂದರೆ ಇದಕ್ಕೆ ಪ್ರತಿಯಾಗಿ ಸಾಮಾಜಿಕ ನ್ಯಾಯದ ಸೈದ್ಧಾಂತಿಕ ಕಾರ್ಯಸೂಚಿಗೆ ಆದ್ಯತೆ ನೀಡಬೇಕಾಗುತ್ತದೆ.
1990ರಲ್ಲಿ ವಿ. ಪಿ. ಸಿಂಗ್ ಮಂಡಲ್ ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ ನಂತರ ಅನೇಕ ಬಾರಿ ಸಂಭವಿಸಿದಂತೆ ಈ ಬಾರಿಯೂ ಎರಡು ಪಾಳಯಗಳು ಸ್ಪರ್ಧೆಯಲ್ಲಿರುತ್ತವೆ. 1990ರ ನಂತರದಲ್ಲಿ ಶ್ರೀಸಾಮಾನ್ಯರ ಏಳಿಗೆಯನ್ನು ಎದುರಿಸುವ ಸಲುವಾಗಿ ಸಂಘಪರಿವಾರವು ಜನಾಂಗೀಯ–ಧಾರ್ಮಿಕ ಅಸ್ಮಿತೆಗಳನ್ನು ಮುನ್ನಲೆಗೆ ತಂದಂತೆ ಈ ಬಾರಿ ಹಿಂದುತ್ವವನ್ನು ಎದುರಿಸುವ ಸಲುವಾಗಿ ಸಮಾಜವಾದಿ ಪಕ್ಷ, ಆರ್‌ಜೆಡಿ , ಕಾಂಗ್ರೆಸ್ ಮತ್ತಿತರ ಪಕ್ಷಗಳು ಸಾಮಾಜಿಕ ವಿಷಯಗಳನ್ನಾಧರಿಸಿ ತಮ್ಮ ಬೆಂಬಲಿಗರನ್ನು ಕ್ರೋಢೀಕರಿಸುವ ಸಾಧ್ಯತೆಗಳಿವೆ. ಇದರಲ್ಲಿ ಬಹುಮುಖ್ಯವಾಗಿ ಜಾತಿ ಜನಗಣತಿಯ ವಿಚಾರವು ಸಾಮಾಜಿಕ ನ್ಯಾಯದ ಕೇಂದ್ರ ಬಿಂದು ಅಗಬಹುದು.
ಈ ಕಾರ್ಯಯೋಜನೆಯನ್ನು ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆಗಳ ಮೂಲಕ ಬಹಳ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಆ ಕಾರಣಕ್ಕಾಗಿಯೇ ರಾಹುಲ್, ಮಾಧ್ಯಮಗಳಿಂದ ಅವಗಣನೆಗೊಳಗಾದರೂ ಸಹ, ಎಲ್ಲ ರೀತಿಯಲ್ಲೂ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಪರಿವರ್ತನೆಯನ್ನು ಚುನಾವಣಾ ಫಲಿತಾಂಶಗಳು ಮತ್ತಷ್ಟು ದೃಢೀಕರಿಸಿವೆ. ಇನ್ನುಮುಂದೆ ಯಾರೂ ಸಹ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆಯುವುದಿಲ್ಲ. ಇದಕ್ಕೆ ಈ ಎರಡು ಯಾತ್ರೆಗಳಷ್ಟೇ ಕಾರಣವಲ್ಲ. ಬಹುಮುಖ್ಯವಾಗಿ ರಾಹುಲ್ ಭಾರತದ ಸಂವಿಧಾನವನ್ನು ಸಮರ್ಥಿಸುವ ಮೂಲಕ INDIA ಬಣದ ಸುತ್ತ ಹಲವು ಪಕ್ಷಗಳನ್ನು ಸೇರಿಸಿದ್ದಾರೆ. ಯಾತ್ರೆಯುದ್ದಕ್ಕೂ ಸಾಮಾಜಿಕ ಸಮಸ್ಯೆಗಳನ್ನೇ ಕೇಂದ್ರೀಕರಿಸಿದ ಸಂಕಥನಗಳನ್ನು ಹುಟ್ಟುಹಾಕಿರುವುದು ಜನಾಕರ್ಷಣೆಗೆ ಒಳಗಾಗಿದೆ.
ವಿಭಿನ್ನ ಸನ್ನಿವೇಶಗಳು
ನೀತಿಶ್ ಕುಮಾರ್ ನಾಯಕತ್ವದಲ್ಲಿ ಬಿಹಾರ ಜಾತಿ ಜನಗಣತಿಯನ್ನು ಸಂಯೋಜಿಸಿದ ಮೊಟ್ಟಮೊದಲ ರಾಜ್ಯವಾಗಿದೆ. ಈಗ ಬಿಹಾರದ ಮುಖ್ಯಮಂತ್ರಿಯು ಇದೇ ಪ್ರಯತ್ನವನ್ನು ಮುಂದುವರೆಸುವಂತೆ ಎನ್‌ಡಿಎ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರಬಲ್ಲರೇ ? ಅಥವಾ ಈ ವಿಚಾರವನ್ನು ಪ್ರಸ್ತಾಪಿಸುವುದರಿಂದ ಹಿಂದಕ್ಕೆ ಸರಿಯುತ್ತಾರೆಯೇ ? ಸಾಮಾನ್ಯವಾಗಿ ಹೇಳುವುದಾದರೆ, ಜೆಡಿಯು, ತೆಲುಗು ದೇಶಂ ಮತ್ತಿತರ ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಹಿತಾಸಕ್ತಿ–ಕಾರ್ಯಸೂಚಿಗಳನ್ನು ಸಾಕಾರಗೊಳಿಸಲು ಎಷ್ಟರ ಮಟ್ಟಿಗೆ ಪ್ರಯತ್ನಿಸುತ್ತಾರೆ ? ಈ ವಿಚಾರಗಳೇ ಮುಂಬರುವ ದಿನಗಳಲ್ಲಿ ವಿಭಿನ್ನ ಸನ್ನಿವೇಶಗಳನ್ನು ಸೃಷ್ಟಿಸುತ್ತವೆ.
ಮುಂದಿನ ಕೆಲವು ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ಕಾಣಬಹುದಾದ ಸನ್ನಿವೇಶ ಎಂದರೆ, ಮೋದಿ ಸರ್ಕಾರ ತೆಲುಗುದೇಶಂ ಮತ್ತು ಜೆಡಿಯು ಪಕ್ಷಗಳ ಆಗ್ರಹಗಳನ್ನು ಪೂರೈಸುವ ನಿಟ್ಟಿನಲ್ಲಿ ನೀಡಬಹುದಾದ ಕೆಲವು ವಿನಾಯಿತಿಗಳು ಬಹಳ ಮುಖ್ಯವಾಗಿರುತ್ತವೆ, ಸ್ವೀಕೃತವೂ ಆಗಿರುತ್ತವೆ. ಮತ್ತೊಂದು ನೆಲೆಯಲ್ಲಿ ಯೋಚಿಸುವುದಾದರೆ, ಜೆಡಿಯು ಮತ್ತು ತೆಲುಗು ದೇಶಂ ಪಕ್ಷಗಳು ಕೆಲವು ಅತಿರೇಕದ ಅಗತ್ಯತೆಗಳನ್ನು ರೂಪಿಸಿಕೊಂಡರೆ, ಅದು ಅಧಿಕಾರ ಹಂಚಿಕೆಯ ಹಂತದಲ್ಲಿ ಅಥವಾ ಮೂಲ ಬೆಂಬಲಿಗರ ನೆಲೆಯಲ್ಲಿ ಬಿಜೆಪಿಯನ್ನು ತೀವ್ರವಾಗಿ ಬಾಧಿಸಬಹುದು. ಉದಾಹರಣೆಗೆ ಮೀಸಲಾತಿ ಪ್ರಮಾಣವನ್ನು ಶೇಕಡಾ 49ಕ್ಕಿಂತಲೂ ಹೆಚ್ಚಿಸುವುದು ಅಥವಾ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಆಗ್ರಹಿಸುವುದು.
ಈ ಸಹಭಾಗಿಗಳು ಸರ್ಕಾರದ ಆಪ್ತವಲಯದೊಡನೆ ಸ್ನೇಹಪೂರ್ವಕ ಸಂಬಂಧಗಳನ್ನು ಹೊಂದದೆ ಇರುವ ಸಾಧ್ಯತೆಗಳೂ ಇವೆ. ಒಂದು ಹಂತದಲ್ಲಿ ಗೌತಮ್ ಅದಾನಿಯ ವಾಣಿಜ್ಯ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವಂತೆಯೂ ಒತ್ತಾಯಿಸಬಹುದು. ಜೆಡಿಯು ಮತ್ತು ತೆಲುಗುದೇಶಂ ಪಕ್ಷಗಳ ಚೌಕಾಸಿ ಸಾಮರ್ಥ್ಯವು ಹೆಚ್ಚಾಗಿರುವುದರಿಂದ, ಒಂದು ರಾಜಕೀಯ ವಲಯದಿಂದ ಮತ್ತೊಂದಕ್ಕೆ ಜಿಗಿಯುವ ಮೂಲಕ ಈ ಪಕ್ಷಗಳು ಸರ್ಕಾರದ ಪತನಕ್ಕೂ ಕಾರಣವಾಗಬಹುದು, ತನ್ಮೂಲಕ INDIA ಒಕ್ಕೂಟದ ಸರ್ಕಾರಕ್ಕೆ ಅವಕಾಶವನ್ನೂ ಕಲ್ಪಿಸಬಹುದು.
ಈ ಎರಡೂ ಸಂಭಾವ್ಯ ಸನ್ನಿವೇಶಗಳು ಒಂದರಿಂದ ಮತ್ತೊಂದು ಹೊರತಾದುದಲ್ಲ. ಎರಡನೆಯ ಸನ್ನಿವೇಶವು ಒಂದೆರಡು ತಿಂಗಳು ಕಳೆದು ಅನಾವರಣಗೊಳ್ಳಬಹುದು ಅಥವಾ ಒಂದೆರಡು ವರ್ಷಗಳೂ ಆಗಬಹುದು. ಮೋದಿ ಸರ್ಕಾರವು ಮುಂಬರುವ ರಾಜ್ಯ ಚುನಾವಣೆಗಳಲ್ಲಿ ದುರ್ಬಲವಾದರೆ (ವಿಶೇಷವಾಗಿ ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳನ್ನು ಗಂಭೀರವಾಗಿ ಗಮನಿಸಲಾಗುತ್ತದೆ) ಅಥವಾ ತೆಲುಗು ದೇಶಂ ಮತ್ತು ಜೆಡಿಯು ಒಳಗೊಂಡಂತಹ ಸಮ್ಮಿಶ್ರ ಸರ್ಕಾರವು ಇತರ ರಾಜ್ಯಮಟ್ಟದ ಪಕ್ಷಗಳಿಂದ, ಕಾಂಗ್ರೆಸ್ ಪಕ್ಷದಿಂದ ಒತ್ತಡಗಳಿಗೊಳಗಾದರೆ ಇದು ಸಾಧ್ಯವಾಗಬಹುದು. ವಿರೋಧ ಪಕ್ಷಗಳು ಗೆಲುವಿನ ರುಚಿ ಕಂಡಿವೆ, ತಮ್ಮ ಸಾಮರ್ಥ್ಯವನ್ನು ಅರಿತುಕೊಂಡಿವೆ ಹಾಗಾಗಿ ನಿರಂತರವಾಗಿ ಜನರನ್ನು ಕ್ರೋಢೀಕರಿಸುವಲ್ಲಿ ನಿರತವಾಗಿರುತ್ತವೆ. ತನ್ಮೂಲಕ ತಮ್ಮೊಳಗಿನ ಐಕ್ಯತೆಯನ್ನು ಮತ್ತಷ್ಟು ಬಲಪಡಿಸಿಕೊಂಡು, ಹೆಚ್ಚಿನ ಸಹಭಾಗಿ ಪಕ್ಷಗಳನ್ನು ಒಳಗೊಳ್ಳುತ್ತವೆ. ಹೊಸ ಸರ್ಕಾರದ ಆಳ್ವಿಕೆಯ ಸಂದರ್ಭದಲ್ಲಿ ಮಾಯಾವತಿ ಸಹ ಆಳುವ ಪಕ್ಷದ ಭೀತಿಯಿಂದ ಹೊರಬಂದು, ಬಹುಜನ ಸಮಾಜ ಪಕ್ಷವನ್ನು ಪುನರುಜ್ಜೀವನಗೊಳಿಸಬಹುದು.
ಈ ಪರಿಸ್ಥಿತಿಗಳಲ್ಲಿ ಮೋದಿ ಎನ್‌ಡಿಎ ಮೈತ್ರಿಕೂಟವನ್ನು ಒಗ್ಗಟ್ಟಿನಿಂದ ಕಾಪಾಡಿಕೊಳ್ಳುವುದು ಸಾಧ್ಯವಾಗದೆ ಹೋಗಬಹುದು. ಏಕೆಂದರೆ ಮೈತ್ರಿಕೂಟದ ಸಹಭಾಗಿ ಪಕ್ಷಗಳು ಹೆಚ್ಚಿನ ವಿನಾಯಿತಿಗಳಿಗಾಗಿ ಆಗ್ರಹಿಸುತ್ತಿರುತ್ತವೆ. ಮೇಲಾಗಿ ಒಂದು ತಂಡದ ಭಾಗಿದಾರರಾಗಿ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಹೊಂದಿರದ ಮೋದಿ ಕೆಲವು ರಿಯಾಯಿತಿ, ವಿನಾಯಿತಿಗಳನ್ನು ನೀಡುತ್ತಾ ಮೈತ್ರಿಕೂಟಗಳನ್ನು ನಿಭಾಯಿಸಬಲ್ಲ ತಜ್ಞರೂ ಅಲ್ಲ. ಇಂತಹ ಸನ್ನಿವೇಶದಲ್ಲಿ ಸಂಘಪರಿವಾರವು ಮೋದಿ ಸ್ಥಾನದಲ್ಲಿ ನಿತಿನ್ ಗಡ್ಕರಿ ಅವರಂತಹ ವ್ಯಕ್ತಿಯನ್ನು ಕೂರಿಸಬಹುದು. ಈ ಹಿಂದೆಯೂ ಅನೇಕ ಸನ್ನಿವೇಶಗಳಲ್ಲಿ ಆರೆಸ್ಸೆಸ್ ನಿತಿನ್ ಗಡ್ಕರಿ ಅವರನ್ನು ಬೆಂಬಲಿಸಿದೆ. 2014ರಲ್ಲೂ ನಾಗಪುರ ಕ್ಷೇತ್ರದ ಅಭ್ಯರ್ಥಿಯಾಗಿ ಮೋದಿ ಆಯ್ಕೆಯಾದದ್ದು ಅನಿವಾರ್ಯತೆಯಿಂದಲೇ ಆಗಿದ್ದು, ಈಗಲೂ ಸಹ ಸಂಘಪರಿವಾರದ ಹಿರಿಯ ನಾಯಕರೊಂದಿಗೆ ಮೋದಿಯ ಸಂಬಂಧ ಸುಧಾರಿಸಿಲ್ಲ.
ಆದರೆ ಮೋದಿ ಮತ್ತು ಶಾ ಅಷ್ಟು ಸುಲಭವಾಗಿ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ. ಏಕೆಂದರೆ ಅವರಿಗೆ ಗಳಿಸಬೇಕಾದ್ದು ಬಹಳಷ್ಟಿದೆ. ಮೋದಿ ತಮ್ಮ ಪೀಠವನ್ನು ಉಳಿಸಿಕೊಳ್ಳಲು ಅನುಸರಿಸಬಹುದಾದ ತಂತ್ರಗಳನ್ನು ಯಾರಿಂದಲೂ ಊಹಿಸಲಾಗುವುದಿಲ್ಲ. ಇಲ್ಲಿ ಸಮಯವೇ ನಿರ್ಣಾಯಕವಾಗುತ್ತದೆ. ಭಾರತೀಯ ಗಣತಂತ್ರದ ಸಂಸ್ಥೆಗಳು ಹತ್ತು ವರ್ಷಗಳ ಸತತ ಸವೆತದಿಂದ ಹೊರಬರಲು ಸಾಕಷ್ಟು ಸಮಯ ದೊರೆತರೆ ರಾಜಕೀಯ ಬಿಕ್ಕಟ್ಟು ಅಷ್ಟೇನೂ ಗಂಭೀರ ಪರಿಣಾಮ ಬೀರುವುದಿಲ್ಲ.
ಆದಾಗ್ಯೂ, ರಾಜಕೀಯ ನಾಯಕರ ಹೊರತಾಗಿಯೂ, ನಾಗರಿಕ ಸಮಾಜವು ಭಾರತದ ಪ್ರಜಾಪ್ರಭುತ್ವವನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಈ ಚುನಾವಣೆಯ ಹೊಸ ಯುಗ ಪ್ರವರ್ತಕವಾಗಿ ಪರಿಣಮಿಸಿರುವುದೇ ಆದರೆ, ಪ್ರಭುತ್ವದ ಮಟ್ಟದಲ್ಲಿ ಕೇವಲ ಆಡಳಿತಗಾರರ ಬದಲಾವಣೆಯಿಂದಲೇ ಭಾರತ ಪ್ರಜಾಪ್ರಭುತ್ವದ ಪುನರ್ ಸ್ಥಾಪನೆ ಸಾಧ್ಯವಾಗುವುದಿಲ್ಲ. ಆರೆಸ್ಸೆಸ್ ಸಂಬಂಧಿತ ತುಡುಗುಪಡೆಗಳ ವಿಶಾಲ–ವ್ಯಾಪಕ ನೆಟ್‌ವರ್ಕನ್ನು ಎದುರಿಸಲು ಇದು ಸಾಲುವುದೂ ಇಲ್ಲ.
-೦-೦-೦-
( ಮೂಲ : The roads to Indiaʼs re democratisation, the challenges – Christophe Jafferlot – The Hindu 6 the June 2024)