ಬಿ ಎಸ್ ಯಡಿಯೂರಪ್ಪ ಅವರ ರಾಜಿನಾಮೆಯಿಂದ ಮನನೊಂದ ಯುವಕನೊಬ್ಬ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.
ಯಡಿಯೂರಪ್ಪ ಅವರ ಅಭಿಮಾನಿಯಾಗಿದ್ದ ರವಿ ಮೃತಪಟ್ಟ ದುರ್ದೈವಿ.
ಬಿ.ಎಸ್.ಯುಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ವೇಳೆ ಕಣ್ಣೀರು ಹಾಕಿದ್ದು ನೋಡಿ ಅಭಿಮಾನಿ ರವಿ ಆತೀವ್ರ ಮನನೊಂದಿದ್ದ ಎನ್ನಲಾಗಿದೆ.
ರಾಜೀನಾಮೆ ಘೋಷಣೆಯ ವೇಳೆ ಬಿಎಸ್‌ವೈ ಗದ್ಗದಿತರಾದ ವಿಡಿಯೋವನ್ನು ಪದೇ ಪದೇ ನೋಡುತ್ತಿದ್ದ, ಬಿ.ಎಸ್.ವೈ ಕಣ್ಣೀರು ಸುರಿಸಿದ್ದು ಆತನಿಗೆ ಬೇಸರ ತಂದಿದೆ ಎಂದು ಗ್ರಾಮದ ಗುರುಸ್ವಾಮಿ ಎಂಬವರ ಬಳಿ ರವಿ ಹೇಳಿಕೊಂಡಿದ್ದ. ರಾತ್ರಿವರೆಗೂ ಇದೇ ಬೇಸರದಲ್ಲಿದ್ದ. ಬೆಳಗ್ಗೆ ಆತನ ಕ್ಯಾಂಟೀನ್ ಬಳಿಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
2017ರಲ್ಲಿ ನಡೆದ ಉಪಚುನಾವಣೆಗೆ ಹಾಲಿ ಶಾಸಕ ನಿರಂಜನ್ ಕುಮಾರ್ ಪರ ಬಿ.ಎಸ್.ಯಡಿಯೂರಪ್ಪ ಪ್ರಚಾರ ಮಾಡಲು ಗುಂಡ್ಲುಪೇಟೆಗೆ ಆಗಮಿಸಿದ್ದ ಈ ವೇಳೆ ರವಿ ಅವರ ಜತೆಗೆ ಊರುಕೇರಿಗಳನ್ನು ಸುತ್ತಿದ್ದ. ಮಾತು ಮಾತಿಗೂ ಯಡಿಯೂರಪ್ಪ ಜಪಮಾಡುತ್ತಿದ್ದ ಈತನ ಅಭಿಮಾನ ಕಂಡು ಊರವರು ರಾಜಾಹುಲಿ ಎಂದು ಈತನನ್ನು ಕರೆಯುತ್ತಿದ್ದರು.
ಬಿಎಸ್ ಯಡಿಯೂರಪ್ಪ ಸಂತಾಪ
ರವಿ ಆತ್ಮಹತ್ಯೆಗೆ ಬಿಎಸ್ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದು, ರಾಜಪ್ಪ (ರವಿ) ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ.ರಾಜಕಾರಣದಲ್ಲಿ ಏರಿಳಿತಗಳು ಸಹಜ ,ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು, ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು. ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿನೊಂದಿಗೆ ನಾನಿರುವೆ ಎಂದು ಹೇಳಿದ್ದಾರೆ.