ಬೆಂಗಳೂರು, ಏ. 09:
ರಾಜ್ಯದಲ್ಲಿ ಗೃಹ ರಕ್ಷಕದಳ ಹಾಗೂ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳಿಂದ ನಡೆಯುತ್ತಿರುವ ನಿಯಮಬಾಹಿರ ವಾಹನ ತಪಾಸಣೆಗಳನ್ನು ತಕ್ಷಣ ನಿಲ್ಲಿಸುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಡಿಜಿ ಮತ್ತು ಐಜಿಪಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಮೋಟಾರ್ ವಾಹನ ಕಾಯ್ದೆ-1988 ಮತ್ತು ಕರ್ನಾಟಕ ಮೋಟಾರ್ ವಾಹನಗಳ ನಿಯಮಗಳು-1989ರ ಪ್ರಕಾರ, ಸಹಾಯಕ ಪೊಲೀಸ್ ಉಪ ನಿರೀಕ್ಷಕ (ಎಎಸ್‌ಐ) ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ಮಾತ್ರ ವಾಹನ ತಪಾಸಣೆ ನಡೆಸುವ ಹಾಗೂ ನಿಯಮ ಉಲ್ಲಂಘನೆಗೆ ದಂಡ ವಿಧಿಸುವ ಅಧಿಕಾರವಿದೆ.

ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಹೆಡ್ ಕಾನ್ಸ್‌ಟೇಬಲ್‌ಗಳಿಗೆ ಎಫ್‌ಟಿವಿಆರ್ ವರದಿ ಆಧಾರದ ಮೇಲೆ ಟ್ರಾಫಿಕ್ ಚಾಲನ್ ನೀಡುವ ಅವಕಾಶವಿದ್ದರೂ, ಗೃಹ ರಕ್ಷಕದಳದ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಯ ಕೆಲವು ಸಿಬ್ಬಂದಿಗಳಿಗೆ ಈ ಅಧಿಕಾರ ಅನ್ವಯಿಸುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಆದರೂ, ಕೆಲವೆಡೆ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗೃಹ ರಕ್ಷಕದಳ ಮತ್ತು ಸಶಸ್ತ್ರ ಪೊಲೀಸ್ ಸಿಬ್ಬಂದಿಗಳು ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುವುದು, ವಾಹನ ಚಾಲಕರಿಗೆ ಬೆದರಿಕೆ ಹಾಕುವುದು, ಕೀಲಿಗಳನ್ನು ಕಿತ್ತುಕೊಳ್ಳುವುದು ಹಾಗೂ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಗ್ರಾಮಾಂತರ ಪ್ರದೇಶಗಳು, ಚೆಕ್‌ಪೋಸ್ಟ್‌ಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ ಎನ್ನಲಾಗಿದೆ.

ಇದಲ್ಲದೆ, ಸಾರ್ವಜನಿಕರಿಂದ ಅನಧಿಕೃತ ಹಣ ವಸೂಲಿ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದೂ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರವಾಣಿ ಮೂಲಕ ಹಾಗೂ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾನೂನಿನ ಪ್ರಕಾರ ಅಧಿಕಾರ ಹೊಂದಿರುವವರ ಹೊರತು ಇತರ ಸಿಬ್ಬಂದಿಗಳು ಯಾವುದೇ ವಾಹನಗಳನ್ನು ತಡೆದು ತಪಾಸಣೆ ನಡೆಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಜೊತೆಗೆ, ಇಂತಹ ದುರ್ನಡತೆಗಳು ಮರುಕಳಿಸದಂತೆ ಪ್ರತಿದಿನ ರೋಲ್ ಕಾಲ್ ವೇಳೆ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.






