ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ ತನಿಖೆ ಪ್ರಾಮಾಣಿಕವಾಗಿರಲಿ. ಆರೋಪಿಗಳಿಗೆ ಶಿಕ್ಷೆ ಸಿಗುವವರೆಗೂ ಅಧಿಕಾರಿಗಳು ಚುರುಕುತನ, ನಿಯತ್ತಿನ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಎಷ್ಟೇ ದೊಡ್ಡವರಿರಲಿ ಮೃಗೀಯ ರೀತಿ, ಅಮಾನವೀಯ ರೀತಿ ವರ್ತಿಸಬಾರದು. ಹಣ ಇದ್ದವರೂ ಆಗಿರಬಹುದು. ಸೆಲೆಬ್ರಿಟಿ ಆಗಿರಬಹುದು. ಯಾರಿಗೂ ವಿಶೇಷ ಅಧಿಕಾರ ಇಲ್ಲ. ಕಾನೂನಿನ ಮುಂದೆ ನಾವೆಲ್ಲರೂ ಸಮಾನರು. ಕಾನೂನನ್ನು ಕೈಗೆತ್ತಿಕೊಳ್ಳುವುದೇ ಅಪರಾಧ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೇಣುಕಾಸ್ವಾಮಿ ಪ್ರಕರಣ ಗಂಭೀರವಾದದ್ದು. ದರ್ಶನ್ (Actor Darshan) ಪ್ರಕರಣದಲ್ಲಿ ಆರಂಭದಲ್ಲಿ ತನಿಖೆ ಚುರುಕಾಗಿ ನಡೆಯುತ್ತಿದೆ. ಕೊನೆಯವರೆಗೂ ಇದೇ ಚುರುಕುತನ, ನಿಯತ್ತು ತನಿಖೆಯಲ್ಲಿರಬೇಕು. ಹಾಗಾದಾಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದ ಆಗ್ರಹಿಸಿದ್ದಾರೆ.