ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನಿತರ ಆರೋಪಿಗಳ ವಿರುದ್ಧ ದೋಷಾರೋಪನೆ ನಿಗದಿ ಪಡಿಸುವುದನ್ನು ನಗರದ 64ನೇ ಸಿಸಿಹೆಚ್ ನ್ಯಾಯಾಲಯವು ಮುಂದೂಡಿದೆ.

ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದ್ದು, ಅಲ್ಲಿಯವರೆಗೂ ಕೊಲೆಯ ಆರೋಪಿಗಳು ಜೈಲಿನಲ್ಲೇ ಕಾಲಕಳೆಯುವಂತಾಗಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಧೀಶರು ಎಲ್ಲಾ ಆರೋಪಿಗಳ ಹಾಜರಿ ಪಡೆದು ದೋಷಾರೋಪವನ್ನು ಪ್ರಕಟಿಸಿದ್ದಾರೆ. ರೇಣುಕಾಸ್ವಾಮಿ ಕಿಡ್ನಾಪ್‌ನಿಂದ ಹಿಡಿದು ಆತನ ಕೊಲೆಯವರೆಗೂ ದೋಷಾರೋಪಪಟ್ಟಿಯಲ್ಲಿ ಸಲ್ಲಿಸಲಾದ ಘಟನೆಯ ವಿವರವನ್ನು ಹಾಗೂ ಎಲ್ಲಾ ಆರೋಪಿಗಳ ಪಾತ್ರವನ್ನು ಪ್ರತ್ಯೇಕವಾಗಿ ನ್ಯಾಯಾಧೀಶರು ತಿಳಿಸಿದರು. ಅಲ್ಲದೇ ಸೆಕ್ಷನ್ಗಳನ್ನು ಕೂಡ ವಿವರಿಸಿದರು. ಈ ವೇಳೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ತಮ್ಮ ಮೇಲಿನ ಆರೋಪಗಳು ಸುಳ್ಳು ಎಂದು ಕೂಗಿ ಹೇಳಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ಇಂದು ಪರಪ್ಪನ ಅಗ್ರಹಾರದಿಂದ ಪೊಲೀಸ್ ವಾಹನದಲ್ಲಿ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ನ್ಯಾಯಾಲಯದ ಬಳಿ ಸೇರಿದ್ದ ದರ್ಶನ್ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು.

