ನಮ್ಮದು ಅತ್ಯಂತ ದೊಡ್ಡ ಪ್ರಜಾತಂತ್ರ ಹೊಂದಿರುವ ದೇಶವಾಗಿದ್ದರೂ ಹಣ ಬಲ ಮತ್ತು ತೋಳ್ಬಲ ಹೊಂದಿರುವವರು ಸಾಕಷ್ಟು ಸಂದರ್ಭಗಳಲ್ಲಿ ದುರ್ಬಲರ ಮೇಲೆ ದೌರ್ಜನ್ಯ ನಡೆಸುವದನ್ನು ನೋಡುತ್ತಲೇ ಇರುತ್ತೇವೆ. ಇಂತಹ ಘಟನೆಗಳು ಹೆಚ್ಚಾಗಿ ವರದಿ ಆಗುತ್ತಿರುವುದು ಉತ್ತರ ಭಾರತದ ರಾಜ್ಯಗಳಿಂದ. ಆದರೆ ಈ ಬಾರಿ ನಮ್ಮದೇ ರಾಜ್ಯದ ಕರಾವಳಿ ನಗರಿ ಮಂಗಳೂರಿನಲ್ಲಿ ಇಂತಹ ದೌರ್ಜನ್ಯ ಪ್ರಕರಣವೊಂದು ವರದಿ ಅಗಿದೆ.
ಬೆಂಗಳೂರು ಮೂಲದ ಭೂಮಿ ರಾಮಚಂದ್ರ ಅವರು ಮಂಗಳೂರಿನ ಅತ್ತಾವರ ರಸ್ತೆಯ ಕೆ.ಎಂ.ಸಿ ಆಸ್ಪತ್ರೆ ಸಮೀಪ ಬಹು ಮಹಡಿ ವಾಣಿಜ್ಯ ಕಟ್ಟಡವನ್ನು ಹೊಂದಿದ್ದಾರೆ. ಭೂಮಿ ಅವರ ಪಾಲಕರಾದ ಶ್ರೀಮತಿ ಸುಶೀಲಾದೇವಿ ಮತ್ತು ಎಂ. ರಾಮಚಂದ್ರ ಅವರಿಗೆ ಸೇರಿದ ಖಾತಾ ನಂ. 86 ರಲ್ಲಿ 1 ಎಕರೆ 33 ಸೆಂಟ್ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಕಟ್ಟಡವಿದೆ. ಈ ಕಟ್ಟಡದ ಮೂಲ ಮಾಲೀಕರಾದ ಶಂಕರ್ ವಿಠ್ಠಲ್ ಮೋಟರ್ಸ್ ಎಂಬುವರಿಂದ 2013 ರಲ್ಲಿಯೇ ಭೂಮಿ ರಾಮಚಂದ್ರ ಜಂಟಿ ಮಾಲಿಕತ್ವದಲ್ಲಿ ಈ ಕಟ್ಟಡವನ್ನು ಕ್ರಯ ಪತ್ರದ ಮೂಲಕ ಖರೀದಿ ಮಾಡಿದ್ದರು. ಈ ಬಹು ಮಹಡಿ ಕಟ್ಟಡದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ನಾಲ್ಕನೇ ಮಹಡಿಯ ಕೊಟಡಿಗಳಲ್ಲಿ ಟೈಲರಿಂಗ್ ಯಂತ್ರಗಳನ್ನು ಹಾಕಿಡಲಾಗಿತ್ತು. ನಾಲ್ಕನೇ ಮಹಡಿಯಲ್ಲಿರುವ ಬಾಡಿಗೆದಾರರ ಬಾಡಿಗೆ ಕರಾರು ನವೀಕರಣಗೊಳಿಸಿಲ್ಲ , ಅವರನ್ನು ಖಾಲಿ ಮಾಡಿಸುತ್ತೇನೆ ಎಂದು ಮೂಲ ಮಾಲೀಕರು ತಿಳಿಸಿದ್ದರು. ಆದರೆ ಖಾಲಿ ಮಾಡಿಸಿರಲಿಲ್ಲ.
ಈ ನಾಲ್ಕನೇ ಮಹಡಿಯ ಬಾಡಿಗೆದಾರನಾಗಿರುವುದೇ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ನಾಗರಾಜ ಶೆಟ್ಟಿ. ಇವರಿಗೆ ಮಾಲೀಕರು ಕಟ್ಟಡವನ್ನು ಖಾಲಿ ಮಾಡಿ ಎಂದು ಅನೇಕ ಬಾರಿ ಒತ್ತಾಯಿಸಿದ್ದರೂ ಖಾಲಿ ಮಾಡಿರಲಿಲ್ಲ. ಈ ಅನಧಿಕೃತ ಬಾಡಿಗೆದಾರ ನಾಗರಾಜಶೆಟ್ಟಿ ಪಾಲುದಾರಿಕೆಯಲ್ಲಿ MIFT ( Mangalore institute of fashion technology) ಎಂಬ ಕಾಲೇಜು ನಡೆಸುತ್ತಿದ್ದರು. ವಿಪರ್ಯಾಸವೆಂದರೆ ಇದೇ ಕಾಲೇಜನ್ನು ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಎಂದು ತೋರಿಸಿ ರಾಜ್ಯದ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯವನ್ನೂ ಪಡೆದುಕೊಂಡಿದ್ದಾರೆ.
2013 ರಲ್ಲಿ ಕಟ್ಟಡ ಮಾಲೀಕರು ಬದಲಾಗಿದ್ದಾರೆ ಆದರೆ 2015 ರಲ್ಲಿ ನಾಗರಾಜ ಶೆಟ್ಟಿ ಕಾಲೇಜನ್ನು ಖರೀದಿ ಮಾಡಿದ್ದಾರೆ. ಮಾಲೀಕರ ಬಾಡಿಗೆ ಕರಾರು ಇಲ್ಲದ ಕಾರಣ ಶೆಟ್ಟಿ ಅವರು ನಿಯಮದ ಪ್ರಕಾರ ಜಾಗ ಖಾಲಿ ಮಾಡಬೇಕಿತ್ತು.ಆದರೆ ಆಳುವ ಪಕ್ಷದ ಪ್ರಭಾವಿ ಆಗಿರುವ ಶೆಟ್ಟಿ ಬಿಲ್ಡಿಂಗ್ ಮಾಲಿಕತ್ವ ಅಥವಾ ಲೀಸ್ ಬಗ್ಗೆ ಯಾವುದೇ ದಾಖಲೆಗಳು ಇಲ್ಲದಿದ್ದರೂ, ನಕಲಿ ದಾಖಲೆಗಳನ್ನು ಮಂಗಳೂರು ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿ ಅಕ್ರಮವಾಗಿ ಕಾಲೇಜು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕಟ್ಟಡದ ಬಾಡಿಗೆ ಮಾಸಿಕ 6.50 ಲಕ್ಷ ರೂ. ನಂತೆ ಎಂಟು ವರ್ಷದಿಂದ ಒಂದು ರೂಪಾಯಿ ಬಾಡಿಗೆ ಕೂಡ ನೀಡಿಲ್ಲ. ಈ ಕುರಿತು ಮಾಹಿತಿ ನೀಡಿದ ಭೂಮಿ ರಾಮಚಂದ್ರಪ್ಪ ಅವರು ನಾನು ಅಸಹಾಯಕ ಹೆಣ್ಣು ಮಗಳು ಎಂದು ಭಾವಿಸಿ ಇದೀಗ ಕಟ್ಟಡವನ್ನೇ ಕಬ್ಜಾ ಮಾಡಲಿಕ್ಕೆ ರೌಡಿಗಳನ್ನು ಬಿಟ್ಟಿದ್ದಾನೆ ಎಂದು ದೂರುದಾರು ಆರೋಪಿಸಿದ್ದಾರೆ.
ಸೋಮವಾರ ಮೇ. 3 ರಂದು ಬೆಳಗ್ಗೆ ಇಬ್ಬರು ಅಪರಿಚಿತ ಯುವಕರು ವಾಣಿಜ್ಯ ಕಟ್ಟಡದ ಶೆಟರನ್ನು ಸುತ್ತಿಗೆಯಿಂದ ಹೊಡೆದು ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ಇದಾದ ಬಳಿಕ ವಿದ್ಯಾರ್ಥಿಗಳಂತೆ ಬ್ಯಾಗು ಹಾಕಿಕೊಂಡು ಲೋಕಲ್ ರೌಡಿಗಳು ಬಂದಿದ್ದಾರೆ. ಈ ವೇಳೆ ಬಿಜೆಪಿ ಮಾಜಿ ಸಚಿವ ನಾಗರಾಜಶೆಟ್ಟಿ ತನ್ನ ಹಿಂಬಾಲಕರ ಜೊತೆಗೆ ಅನಧಿಕೃತವಾಗಿ ವಾಣಿಜ್ಯ ಕಟ್ಟಡಕ್ಕೆ ಪ್ರವೇಶಿಸಿದ್ದಾರೆ.
ನನ್ನ ಲ್ಯಾಪ್ಟಾಪ್, ವಜ್ರದ ಒಡವೆಗಳು, ಅತ್ತಾವರ ಅಪಾರ್ಟ್ ಮೆಂಟ್ ಮತ್ತು ಬಹುಮಹಡಿ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು, ಇಂಡಮಿಟಿ ಬಾಂಡ್, ಚೆಕ್ ಬುಕ್, ಇತರೆ ದಾಖಲೆಗಳನ್ನು ನಾಗರಾಜಶೆಟ್ಟಿ ಜೊತೆ ಬಂದವರು ದೋಚಿಕೊಂಡು ಹೋಗಿದ್ದಾರೆ. ಅತಿಕ್ರಮ ಪ್ರವೇಶ ಮಾಡುವ ಜೊತೆಗೆ ಸ್ಥಳೀಯ ಗುಂಡಾಗಳ ನೆರವಿನಿಂದ ಈ ಹಿಂದೆ ಹಾಕಿದ್ದ ಬೀಗ ಮುರಿದು ತನ್ನದೇ ಬೀಗ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಪೋಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ನಾಗರಾಜ ಶೆಟ್ಟಿ ಗ್ಯಾಂಗ್ಬೀಗ ಒಡೆಯುವುದನ್ನು ಪ್ರಶ್ನಿಸಿದ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಗೋಬಿಂದ್ ಎಂಬುವವರಿಗೆ ನಾನು ಬಾಂಬ್ಹಾಕಿ ಈ ಕಟ್ಟಡವನ್ನೇ ಉರುಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಶೆಟ್ಟಿ ಗ್ಯಾಂಗ್ನಿಯಮ ಬಾಹಿರವಾಗಿ ಕಟ್ಟಡಕ್ಕೆ ಅತಿಕ್ರಮ ಪ್ರವೇಶ ಮಾಡಿ ಬೀಗ ಒಡೆದು ಅಲ್ಲಿನ ಲ್ಯಾಪ್ಟಾಪ್ ಸಮೇತ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಸಿಟಿವಿ ಆಧರಿಸಿ ದೂರು ಸಲ್ಲಿಸಿದ್ದಾರೆ.
ನಾಗರಾಜಶೆಟ್ಟಿ ದಬ್ಬಾಳಿಕೆ ಹಾಗೂ ರೌಡಿ ಗ್ಯಾಂಗ್ ವಿರುದ್ಧ ಭೂಮಿ ಅವರು ಕಳೆದ ಏಪ್ರಿಲ್ 17 ರಂದು ಕೂಡ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾನು ಹಾಕಿದ್ದ ಬೀಗವನ್ನು ಹೊಡೆದು ಅನಧಿಕೃತವಾಗಿ ನಾಗರಾಜಶೆಟ್ಟಿ ಕಡೆಯವರು ಪ್ರವೇಶಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಟೈಲರಿಂಗ್ ಯಂತ್ರಗಳನ್ನು ಜಪ್ತಿ ಮಾಡುತ್ತಿದ್ದ ಪೊಲೀಸರನ್ನು ನಾಗರಾಜ್ ಶೆಟ್ಟಿ ತಡೆದಿದ್ದರು. ಸೂಕ್ತ ದಾಖಲೆ ನೀಡಿ ಯಂತ್ರಗಳನ್ನು ತೆಗೆದುಕೊಂಡು ಹೋಗುವುದಾಗಿ ಪೊಲೀಸರಿಗೆ ನಾಗರಾಜ್ ಶೆಟ್ಟಿ ತಿಳಿಸಿದ್ದರು. ಈ ವೇಳೆ ಪೊಲೀಸರೇ ಕಟ್ಟಡಕ್ಕೆ ಬೀಗ ಹಾಕಿ ಕೀ ಅವರ ಬಳಿ ಇಟ್ಟುಕೊಂಡಿದ್ದರು.
ಆದರೆ ತನ್ನ ರಾಜಕೀಯ ಪ್ರಭಾವ ಬಳಿಸಿ ಗೂಂಡಾಗಳನ್ನು ಕರೆಸಿ ಇದೀಗ ಏಕಾಏಕಿ ಕಟ್ಟಡಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ನನ್ನ ಕಚೇರಿಯಲ್ಲಿಟ್ಟಿದ್ದ ದಾಖಲೆಗಳನ್ನು ಕದ್ದೊಯ್ದಿದ್ದಾರೆ. ಮಾಜಿ ಸಚಿವನಾಗಿ ಕಟ್ಟಡಕ್ಕೆ ಬಾಡಿಗೆ ನೀಡದೇ, ಇದೀಗ ಕಟ್ಟಡವನ್ನೇ ಕಬ್ಜಾ ಮಾಡಲು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಭೂಮಿ ರಾಮಚಂದ್ರ ಆರೋಪಿಸಿದ್ದಾರೆ.