ಪಶ್ಚಿಮ ಬಂಗಾಳ, ಮಮತಾ ಬ್ಯಾನರ್ಜಿ ಮತ್ತು ಹಿಂಸಾತ್ಮಕ ರಾಜಕೀಯ

[Sassy_Social_Share]

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ರಾಜಕೀಯ ಪ್ರೇರಿತ ಕೊಲೆ ಹಿಂಸಾಚಾರ ಕಂಡುಬರುತ್ತಿದೆ. ಎಡಪಕ್ಷದ ಕಾರ್ಯಕರ್ತರ ಮೇಲೆ, ಕಚೇರಿಗಳ ಮೇಲೆ ಧ್ವಂಸ ಕಾರ್ಯಾಚರಣೆ ನಡೆದಿದೆ. ಬಿಜೆಪಿ ಕಾರ್ಯಕರ್ತರೂ ಕೊಲೆಯಾಗಿದ್ದಾರೆ. ಬಂಗಾಲದ ರಾಜಕಾರಣದಲ್ಲಿ ಈ ಹಿಂಸಾತ್ಮಕ ರಾಜಕೀಯ ಮೇಲಾಟಕ್ಕೆ ಐದು ದಶಕಗಳ ಇತಿಹಾಸವಿದೆ. ರಾಜ್ಯದ ಜನತೆ ಮಮತಾ ದೀದಿಗೆ ಬೆಂಬಲ ನೀಡಿರುವ ಉದ್ದೇಶ ಫ್ಯಾಸಿಸ್ಟ್ ಕೋಮುವಾದಿ ರಾಜಕಾರಣವನ್ನು ಸೋಲಿಸುವುದೇ ಆಗಿದೆ. ಆದರೆ ಹಿಂಸೆ ಮತ್ತು ಗೂಂಡಾಗಿರಿಯೂ ಯಾರ ಸ್ವತ್ತೂ ಅಲ್ಲ. ನಾಗರಿಕ ಪ್ರಜ್ಞೆ ಇಲ್ಲದ ಎಲ್ಲ ಪಕ್ಷಗಳೂ ಹಿಂಸೆಯನ್ನು ಪ್ರತಿಕ್ರಿಯೆಯಾಗಿಯೋ, ಪ್ರಚೋದನೆಯಿಂದಲೋ ಅಥವಾ ಪ್ರಜ್ಞಾಪೂರ್ವಕವಾಗಿಯೋ ಬಳಸುತ್ತಲೇ ಇವೆ. ಮಮತಾ ದೀದಿ ಈ ಹಿಂಸಾತ್ಮಕ ರಾಜಕಾರಣಕ್ಕೆ ಕೊನೆ ಹಾಡುವ ಮೂಲಕ‌ ಮಾದರಿಯಾಗಬಹುದು. 

ದೇಶದ ಉದ್ದಗಲಕ್ಕೂ ಈ ರೀತಿಯ ಹೊಡಿ ಬಡಿ ರಾಜಕಾರಣ ಸಹಜ ಪ್ರಕ್ರಿಯೆಯಾಗಿದೆ. ಅಧಿಕಾರ ಪೀಠ ಏರಲು ಹತ್ತು ಹಲವು ಹೆಣ ಬಿದ್ದರೂ ಅಡ್ಡಿಯೇನಿಲ್ಲ ಎನ್ನುವ ರಾಜಕೀಯ ಪ್ರಜ್ಞೆ ನಮ್ಮಲ್ಲಿ ಬೆಳೆದಿದ್ದರೆ ಅದಕ್ಕೆ ಮೂರು ನಾಲ್ಕು ದಶಕಗಳ ಇತಿಹಾಸವೇ ಇದೆ. ರಾಜಕೀಯ ದ್ವೇಷದಿಂದ ನೂರಾರು ಹೆಣಗಳು ಉರುಳಿದರೂ ಲೆಕ್ಕಿಸದೆ ಅಧಿಕಾರ ಪೀಠದಲ್ಲಿ ವಿರಾಜಮಾನರಾಗುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದೇವೆ. ನೂರಾರು ಸಾವುಗಳಿಗೆ ದಿವ್ಯ ಮೌನದ ಸ್ಪಂದನೆಯನ್ನು ರಾಜಧರ್ಮ ಎಂದು ಪರಿಭಾವಿಸುವ ವಿಕೃತ ಪರಂಪರೆಗೆ 2002ರಲ್ಲೇ ಅಡಿಗಲ್ಲು ಹಾಕಿದ್ದೇವೆ. ಈ ಅಸ್ತಿಭಾರದ ಮೇಲೆ ಒಂದು ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದೇವೆ. ತಾತ್ವಿಕ ನಿಲುವು, ಪಕ್ಷ ನಿಷ್ಠೆ, ಅಂಧಾಭಿಮಾನ, ನಾಯಕರ ಆರಾಧನೆ, ಅಧಿಕಾರ ದಾಹ ಮತ್ತು ಅವಕಾಶವಾದಿ ಸ್ವಾರ್ಥ ರಾಜಕಾರಣ ಇವೆಲ್ಲವೂ ಈ ವಿಕೃತ ಪರಂಪರೆಯನ್ನು ಪೋಷಿಸುತ್ತಿರುವ ಅಂಶಗಳು. ಮತ್ತೊಬ್ಬರ ಜೀವ ಒತ್ತೆ ಇಟ್ಟು ತಮ್ಮ ಅಧಿಕಾರ ಉಳಿಸಿಕೊಳ್ಳುವ ಒಂದು ನಾಯಕತ್ವದ ಪರಂಪರೆಯನ್ನೂ ಬೆಳೆಸಿಕೊಂಡು ಬಂದಿದ್ದೇವೆ. ಬಂಗಾಲದಲ್ಲಿ ಹತ್ಯೆಗೀಡಾದವರು ಈ ಮಾಯಾಲೋಕದ ಭ್ರಮೆಯಲ್ಲಿ ಸಿಲುಕಿದವರೇ ಆಗಿರುತ್ತಾರೆ. 

ಈ ಸಾವು, ನೋವು ಮತ್ತು ಹಿಂಸೆಯ ಮೂಲ ಅಧಿಕಾರ ರಾಜಕಾರಣದಲ್ಲಿ ಅಡಗಿದೆ. ಉತ್ತರದಾಯಿತ್ವ ಯಾರದು? ಲೆಕ್ಕ ಕೇಳುವುದು ಯಾರನ್ನು? ಸಾವಿರಾರು ಅಮಾಯಕ ಹೆಣಗಳು  ಎರಡು ದಶಕಗಳಿಂದಲೂ ಲೆಕ್ಕ ಕೇಳುತ್ತಲೇ ಇವೆ. ಪುಲ್ವಾಮಾದ 50 ಸೇನಾನಿ ಹೆಣಗಳು ಕಿವಿಯಗಲಿಸಿ ಮಲಗಿವೆ. ಕಾಶ್ಮೀರದ ಲಕ್ಷಾಂತರ ಶವಗಳು ಉತ್ತರದ ನಿರೀಕ್ಷೆಯಲ್ಲಿವೆ. ಎನ್ಕೌಂಟರ್ ಹತ್ಯೆಗಳನ್ನು ಅಪ್ಪಿಕೊಂಡ ದೇಶ ನಮ್ಮದು. ಇವೂ ಎನ್ಕೌಂಟರ್ ಹತ್ಯೆಗಳೇ. ಸಮವಸ್ತ್ರದ ಬದಲು ಪಕ್ಷ ನಿಷ್ಠೆ ಎದೆಯಲ್ಲಿ ಹುದುಗಿರುತ್ತದೆ. ಜಾತಿ, ಮತಧರ್ಮ, ಭಾಷೆ ಮತ್ತು ಸಿದ್ಧಾಂತ ಇವೆಲ್ಲವೂ ಸಾವಿನ ರಹದಾರಿಗಳಾಗಿಬಿಟ್ಟಿವೆ. ಹಾಗಾಗಿಯೇ ಹಥ್ರಾಸ್, ಕಥುವಾದ ಆಸಿಫಾ, ಅಕ್ಲಾಖ್  ನಮಗೆ ಸಹಜ ಘಟನೆಯಂತೆ ಕಾಣುತ್ತದೆ. ಬಂಗಾಲದ ರಾಜಕೀಯ ಘಟನೆ ನಮ್ಮ ಸತ್ತ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ. ಸತ್ತವರು  ” ನಮ್ಮವರು ” ಕೊಂದವರು ” ಅವರು “. ಇಷ್ಟು  ಸಾಕು, ಹೆಣಗಳನ್ನು ಎಣಿಸಿ ಪೇರಿಸಿ ವಿಂಗಡಿಸಲು. 

ಈ ಕ್ರೌರ್ಯವನ್ನು ಹೊತ್ತುಕೊಂಡೇ ” ಅವರ ” ಸಾವುಗಳನ್ನು ಸಂಭ್ರಮಿಸುತ್ತಾ ” ನಮ್ಮವರ ” ಸಾವಿಗೆ‌ ಮಿಡಿಯುತ್ತಾ ನಮ್ಮ ಪ್ರಜ್ಞಾ ಮಾಲಿನ್ಯವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿರುತ್ತೇವೆ. ಚಾಮರಾಜನಗರದ 24 ಸಾವುಗಳಿಗೆ ಯಾರಿಂದಲೂ ಉತ್ತರ ಬಯಸದ ನಾವು ಬಂಗಾಲದ ಹತ್ತು ಸಾವುಗಳಿಗೆ ಕರ್ನಾಟಕದ ಪ್ರಗತಿಪರ ಮನಸುಗಳಿಂದ ಪ್ರತಿಕ್ರಿಯೆ ಬಯಸುತ್ತೇವೆ. ಇಲ್ಲಿ ಸಾವು ಬಂಡವಾಳವಾಗುತ್ತದೆ. ಸತ್ತವರು ನಿಮಿತ್ತ ಆಗುತ್ತಾರೆ. ಕೊಂದವರು ಇತರ ಯಾವುದೋ ಒಂದು ಪರದೆಯ ಹಿಂದೆ ಅವಿತುಕೊಳ್ಳುತ್ತಾರೆ. ಸಾವನ್ನು ಸಂಭ್ರಮಿಸುವ ಮನಸುಗಳು ಈಗ ಇನ್ನೂ ಹೆಚ್ಚಿನ ಸಾವುಗಳ ನಿರೀಕ್ಷೆಯಲ್ಲಿರುವಂತಹ ಮಾತುಗಳು ಕೇಳಿಬರುತ್ತಿವೆ. ಆಮ್ಲಜನಕದ ಕೊರತೆಯಿಂದ ಅಸು ನೀಗುವ ಜೀವಗಳು ಇಲ್ಲಿ ನಿಕೃಷ್ಟವಾಗಿಬಿಡುತ್ತವೆ. 

ಓರ್ವ ಮಹಿಳೆಯಾಗಿ, ಮಾದರಿ ನಾಯಕಿಯಾಗಿ ಮಮತಾ ದೀದಿ  ಸಂವೇದನಾಶೀಲ ರಾಜಕಾರಣದ ಮೂಲಕ ತಮ್ಮ ಪಾಳಯದ ಸರದಾರರನ್ನು ಸರಿದಾರಿಗೆ ತರಲು ಯತ್ನಿಸಬೇಕು. ಇನ್ನೂ ಕಾಲ ಮಿಂಚಿಲ್ಲ. ಹಾಗೆಂದ ಮಾತ್ರಕ್ಕೆ ಇತರರಿಗೆ ವಿನಾಯಿತಿ ನೀಡಬೇಕಿಲ್ಲ. ಕ್ರಿಯೆ ಪ್ರತಿಕ್ರಿಯೆಯ ಸಂಕಥನದಿಂದಾಚೆಗೂ ಮಾನವ ಸಮಾಜಕ್ಕೆ ಒಂದು ಬದುಕು ಇದೆ ಅಲ್ಲವೇ ? ಸಾವಿನ ದಲ್ಲಾಳಿಗಳ ನಡುವೆ ಬದುಕುತ್ತಿದ್ದೇವೆ. ಜೀವದ ಮೌಲ್ಯವನ್ನರಿತು ಮುನ್ನಡೆಯೋಣ. ಒಂದು ಸ್ವಸ್ಥ ಸಮಾಜದಲ್ಲಿ ಜೀವ ಬಂಡವಾಳವಾಗಬೇಕು , ಜೀವ ಸೇತುವೆಯಾಗಬೇಕು. ಕೊರೋನಾ ನಮ್ಮ ನಡುವಿನ ಸಾವುಗಳನ್ನು ಹೆಚ್ಚಿಸಿದೆ, ಕೊರೋನಾಗಿಂತಲೂ ಮಾರಕವಾದ ರಾಜಕೀಯ ವೈರಾಣುಗಳು , ಇನ್ನೂ ಹೆಚ್ಚಿನ ಸಾವುಗಳಿಗೆ ಕಾರಣವಾದರೂ, ನಮ್ಮ ನಡುವೆ ಜೀವಂತವಾಗಿವೆ. ಈ ವೈರಾಣುವಿನ ವಿರುದ್ಧ ಹೋರಾಡುವುದು ನಮ್ಮ ಆದ್ಯತೆಯಾಗಬೇಕಿದೆ. ಇದಕ್ಕಿರುವ ಲಸಿಕೆ ಒಂದೇ  “ಮನುಜ ಪ್ರಜ್ಞೆ”.  ಕೂಡಲೇ ಈ ಲಸಿಕೆ ಹಾಕಿಸಿಕೊಳ್ಳೋಣವೇ ?

Related posts

Latest posts

ನೆಹರೂ-ಗಾಂಧಿ ಕುಟುಂಬದಿಂದಲೇ ಭಾರತ ಇಂದು ಉಳಿದುಕೊಂಡಿದೆ: ಕೇಂದ್ರಕ್ಕೆ ಚಾಟಿಯೇಟು ನೀಡಿದ ಶಿವಸೇನೆ

COVID-19 ಅನ್ನು ನಿಭಾಯಿಸಲು ನೆರೆಹೊರೆಯ ಸಣ್ಣ ದೇಶಗಳು ಭಾರತಕ್ಕೆ ಸಹಾಯ ನೀಡುತ್ತಿದ್ದರೆ, ದೆಹಲಿಯಲ್ಲಿ ಬಹುಕೋಟಿ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸುವ ಕನಿಷ್ಟ ಸೌಜನ್ಯವನ್ನೂ ಮೋದಿ ಸರ್ಕಾರ ತೋರುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು...

ರಾಜ್ಯಗಳಿಗೆ ಆಕ್ಸಿಜನ್ ವಿತರಿಸಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿದ ಸುಪ್ರೀಂ ಕೋರ್ಟ್.!

ದೇಶಾದ್ಯಂತ ಕರೋನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಮಧ್ಯೆ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಅದನ್ನು ಸಮರ್ಪಕವಾಗಿ ಎದುರಿಸಲು ಮತ್ತು ವೈಜ್ಞಾನಿಕವಾಗಿ ಮೆಡಿಕಲ್ ಆಕ್ಸಿಜನ್ಗಳನ್ನು ಹಂಚುವ ವಿಧಾನವನ್ನು ರೂಪಿಸಲು...

ಲಾಕ್ ಡೌನ್ ಘೋಷಿಸಿ ಬಡವರ್ಗದವರಿಗೆ ಯಾವುದೇ ಯೋಜನೆ ಘೋಷಿಸದ ರಾಜ್ಯ ಸರ್ಕಾರ

ಕೊರೋನ ಸಾಂಕ್ರಮಿಕವು ದಿನೇ ದಿನೇ ಉಲ್ಪಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಲಾಕ್ ಡೌನ್ ಘೋಷಿಸಿವೆ. ಇದು ಅನಿವಾರ್ಯ ಕ್ರಮವೂ ಕೂಡ ಆಗಿದೆ. ಆದರೆ ಈ ಲಾಕ್ ಡೌನ್ ಘೋಷಣೆಯಿಂದ...