ಶನಿವಾರ ಚುನಾವಣೆಯ ವೇಳೆ ನಡೆದ ಘರ್ಷಣೆಯಲ್ಲಿ ನಾಲ್ವರು ಮೃತಪಟ್ಟ ಕೂಛ್ ಬೆಹರ್ ಕ್ಷೇತ್ರಕ್ಕೆ ರಾಜಕೀಯ ನೇತಾರರ ಪ್ರವೇಶವನ್ನು ನಿರ್ಬಂಧಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.
ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಟೀಕಿಸಿರುವ ಮಮತಾ, ಮಾದರಿ ನೀತಿ ಸಂಹಿತೆಯನ್ನು ʼಮೋದಿʼ ನೀತಿ ಸಂಹಿತೆ ಎಂದು ಬದಲಾಯಿಸುವಂತೆ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆಯನ್ನು ಮೋದಿ ನೀತಿ ಸಂಹಿತೆಯೆಂದು ಮರುನಾಮಕರಣ ಮಾಡಬೇಕು. ಬಿಜೆಪಿ ತನ್ನೆಲ್ಲಾ ಬಲವನ್ನು ಪ್ರಯೋಗಿಸಿದರೂ, ನನ್ನ ಜನರ ನೋವನ್ನು ಹಂಚಿಕೊಳ್ಳುವದರಿಂದ ನನ್ನ ತಡೆಯಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಾಗುವುದಿಲ್ಲ. ಅವರು ಕೂಚ್ ಬೆಹರ್ ನ ನನ್ನ ಸಹೋದರ-ಸಹೋದರಿಯರನ್ನು ಭೇಟಿಯಾಗದಂತೆ 3 ದಿನಗಳ ಕಾಲ ದಿಗ್ಬಂಧನ ವಿಧಿಸಿದ್ದಾರೆ. ನಾಲ್ಕನೇ ದಿನ ಅಲ್ಲಿರುತ್ತೇನೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಹೇಳಿದ್ದಾರೆ.
ಕೂಛ್ ಬೆಹರ್‌ನಲ್ಲಿ ನಡೆದ ಶೂಟೌಟ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿರುವ ಮಮತಾ, ಮೃತರ ಮನೆಗಳಿಗೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ವೇಲೆ ಅಹಿತಕರ ಘಟನೆಗೆ ಸಾಕ್ಷಿಯಾದ ಕೂಛ್ ಬೆಹರ್ ಕ್ಷೇತ್ರ ವ್ಯಾಪ್ತಿಗೆ 72 ಗಂಟೆಗಳ ಕಾಲ ಯಾವುದೇ ರಾಜಕೀಯ ವ್ಯಕ್ತಿಗಳೂ ಪ್ರವೇಶಿಸಬಾರದೆಂದು ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು.
ಕೂಛ್ ಬೆಹರ್‌ನ ಮತಗಟ್ಟೆ ಒಂದಕ್ಕೆ ಉದ್ರಿಕ್ತ ಜನರ ಗುಂಪು ದಾಳಿ ನಡೆಸುವುದನ್ನು ತಡೆಯಲು CISF ಪಡೆ ಅನಿವಾರ್ಯವಾಗಿ ಬಂದೂಕು ಬಳಸಬೇಕಾಯಿತೆಂದು ಮತದಾನ ಸಮಿತಿಯ ಮಧ್ಯಂತರ ವರದಿ ಹೇಳಿದೆ. ಈ ಘರ್ಷಣೆಯಲ್ಲಿ ಕನಿಷ್ಟ ನಾಲ್ರವು ಗುಂಡೇಟು ತಗುಲಿ ಮೃತಪಟ್ಟಿದ್ದಾರೆಂದು ವರದಿಯಾಗಿದೆ.