ಸಾಮೂಹಿಕ ಹತ್ಯಾಕಾಂಡಗಳ ಮತ್ತು ಸಮೂಹ ಹಿಂಸಾಕಾಂಡಗಳ ಸ್ಮರಣೆಯ ಮೂಲಕ ಒಂದು ಸಮಾಜವು, ತಾನು ಮನುಕುಲದ ವಿರುದ್ಧ ನಡೆಸಿದ ದೌರ್ಜನ್ಯಗಳಿಗೆ ಪಶ್ಚಾತ್ತಾಪ ಪಡುತ್ತಲೇ, ಮತ್ತೊಮ್ಮೆ ಅಂತಹ ವಿದ್ರಾವಕ ಘಟನೆಗಳು ಮರುಕಳಿಸದಂತೆ ದೃಢ ನಿಶ್ಚಯ ಮಾಡಲು ಸಾಧ್ಯ. ಯಹೂದಿಗಳು ಭೀಕರ ಹತ್ಯಾಕಾಂಡವನ್ನು ನೆನೆಯಲು ಹಲವು ವಿಭಿನ್ನ ಕಾರಣಗಳಿವೆ. ಜರ್ಮನಿಯೂ ಸಹ ಶಾಲಾ ಪಠ್ಯಗಳ ಮೂಲಕ, ಸಂವಾದಗಳ ಮೂಲಕ, ಚರ್ಚೆಗಳ ಮೂಲಕ ಭೀಕರ ಹತ್ಯಾಕಾಂಡವನ್ನು ನೆನೆಯುತ್ತದೆ. ಜಪಾನ್ ಹಿರೋಷಿಮಾ ಮತ್ತು ನಾಗಸಾಕಿಯನ್ನು ಸ್ಮರಿಸುವುದರ ಮೂಲಕ, ಈ ಎರಡು ನಗರ ಮೇಲೆ ಅಣು ಬಾಂಬ್ ದಾಳಿಯಿಂದ ಉಂಟಾದ ವಿನಾಶಕಾರಿ ಪರಿಣಾಮಗಳನ್ನು ಜಗತ್ತಿಗೆ ಪ್ರತಿಕ್ಷಣವೂ ನೆನಪಿಸುವಂತೆ ಸ್ಮರಿಸುತ್ತಿರುತ್ತದೆ. ಆದರೆ ವಿಶ್ವದ ಎಲ್ಲ ದೇಶಗಳೂ ಹೀಗೆ ಇತಿಹಾಸವನ್ನು ಸ್ಮರಿಸುವುದಿಲ್ಲ. ಉದಾಹರಣೆಗೆ ಅಮೆರಿಕ 18 ಮತ್ತು 19ನೆಯ ಶತಮಾನದಲ್ಲಿ ಅಲ್ಲಿನ ಸ್ಥಳೀಯ ಅಮೆರಿಕನ್ ಜನಾಂಗಗಳ ಮೇಲೆ ನಡೆದ ಭೀಕರ ಹತ್ಯಾಕಾಂಡವನ್ನು ನೆನೆಯುವುದೇ ಇಲ್ಲ.
20ನೆಯ ಶತಮಾನದಲ್ಲಿ ನಡೆದ ಭೀಕರ ಹತ್ಯಾಕಾಂಡಗಳನ್ನು ಸ್ಮರಿಸದೆಯೇ ಇರುವ ದೇಶಗಳಲ್ಲಿ ಭಾರತವೂ ಒಂದು. ಭಾರತ ಸ್ವಾತಂತ್ರ್ಯ ಗಳಿಸುವ ಮುನ್ನ ಬ್ರಿಟೀಷರ ಭಾರತದಲ್ಲಿ ಉದ್ದೇಶಿತ ಕೊಲೆ, ಸುಲಿಗೆ ಮತ್ತು ಹಿಂಸಾಕಾಂಡದಲ್ಲಿ ಮಡಿದ ಮತ್ತು ನಿರಾಶ್ರಿತರಾದ 20 ಲಕ್ಷಕ್ಕೂ ಹೆಚ್ಚು ಹಿಂದೂ, ಮುಸ್ಲಿಂ ಮತ್ತು ಸಿಖ್ ಬಾಂಧವರನ್ನು ಸಾಮೂಹಿಕವಾಗಿ ಸ್ಮರಿಸಲು ಸ್ವತಂತ್ರ ಭಾರತ ಎಂದೂ ಪ್ರಯತ್ನಿಸಿಲ್ಲ. ಹೆಚ್ಚೆಂದರೆ ಭಾರತದ ವಿಭಜನೆಯ ಸಂದರ್ಭದಲ್ಲಿ ನಡೆದ ಭೀಕರ ಹತ್ಯಾಕಾಂಡಗಳು ಬ್ರಿಟೀಷರ ಕುತಂತ್ರ ರಾಜಕಾರಣ ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ಪಿತೂರಿಯಿಂದ ನಡೆದ ಘಟನೆಗಳು ಎಂದಷ್ಟೇ ಸ್ಮರಿಸಲಾಗುತ್ತದೆ. ಒಂದು ಸಮಾಜವಾಗಿ ನಮ್ಮ ಹೊಣೆಗಾರಿಕೆಯೇ ಇಲ್ಲ ಎಂದೇ ನಾವು ಭಾವಿಸಿದ್ದೇವೆ. ಆದರೆ ಈ ಭೀಕರ ಘಟನೆ ಏಕೆ ಮತ್ತು ಹೇಗೆ ನಡೆಯಿತು ಎಂದು ನೆನೆಯುವ ಮೂಲಕವೇ ನಾವು ಆ ಕಾಲಘಟ್ಟದ ಸಾಮೂಹಿಕ ಹತ್ಯಾಕಾಂಡಗಳ ಒಳಸುಳಿಗಳನ್ನು ಗ್ರಹಿಸಲು ಸಾಧ್ಯವಾದೀತು.
ವಿಭಜನೆಯ ಸಂದರ್ಭದಲ್ಲಿ ಕೊಲೆಗೀಡಾದ ಲಕ್ಷಾಂತರ ಅಮಾಯಕರಿಗೆ, ಲೈಂಗಿಕ ದೌರ್ಜನ್ಯಕ್ಕೀಡಾದವರಿಗೆ, ನಿರಾಶ್ರಿತರಾದವರಿಗೆ ಒಂದು ರಾಷ್ಟ್ರೀಯ ಸ್ಮಾರಕವನ್ನೂ ನಿರ್ಮಿಸಲಾಗಿಲ್ಲ. ಶಾಲಾ ಪಠ್ಯಗಳಲ್ಲಿ ಮಡಿದವರ ಬಗ್ಗೆ ಮಾಹಿತಿ ಇದೆಯೇ ಹೊರತು ಅದು ನೆನಪಿನಲ್ಲಿ ಉಳಿಯುವಂತಹುದಲ್ಲ. ಮಡಿದ, ನೊಂದ ಮತ್ತು ನಾಶವಾದ ಲಕ್ಷಾಂತರ ಜನರ ಹೆಸರುಗಳಾಗಲೀ, ಚಹರೆಗಳಾಗಲೀ ನಮಗೆ ನೆನಪೇ ಆಗುವುದಿಲ್ಲ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಸಹ ಇಂತಹ ಪ್ರಯತ್ನಗಳು ವಿರಳ ಎಂದೇ ಹೇಳಬಹುದು. ಇದು ನಮ್ಮ ರಾಷ್ಟ್ರೀಯ ಮನಸ್ಥಿತಿಯನ್ನು ಬಿಂಬಿಸುವಂತಹುದು. ಸಾದತ್ ಹಸನ್ ಮಾಂಟೋ ಅವರ ಕತೆಗಳು, ಭೀಷ್ಮ ಸಹಾನಿಯವರ ತಮಸ್ ಕಾದಂಬರಿ, ಭಾಗ್ ಮಿಲ್ಕಾ ಭಾಗ್ ಚಲನ ಚಿತ್ರ ಹೀಗೆ ಕೆಲವು ಪ್ರಯತ್ನಗಳ ಮೂಲಕ ಈ ಭೀಕರತೆಯನ್ನು ಸ್ಮರಿಸುವ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಬೌದ್ಧಿಕ ವಲಯದಲ್ಲಿ ಕೆಲವು ಪ್ರಾಮಾಣಿಕ ಪ್ರಯತ್ನಗಳಾಗಿವೆ. ವಿಭಜನೆಯ ದಾಖಲೆಗಳನ್ನು ಸಂಗ್ರಹಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಅಮೃತ್‍ಸರದಲ್ಲಿ ಒಂದು ವಿಭಜನೆಯ ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಇದು ಖಾಸಗಿ ಟ್ರಸ್ಟ್ ಪ್ರಯತ್ನವೇ ಹೊರತು, ಸರ್ಕಾರದಿಂದ ನಡೆದಿರುವುದಲ್ಲ. ಆದರೂ ಈ ಪ್ರಯತ್ನಗಳು ಸಮಾಜದಲ್ಲಿ ವ್ಯಾಪಕವಾದ ಪ್ರಭಾವ ಬೀರಿಲ್ಲ.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಹತ್ಯಾಕಾಂಡಗಳನ್ನು ಸ್ಮರಿಸುವ ಮೂಲಕ, ಸಮಾಜ ತನ್ನ ಕ್ಷಮಾಶೀಲತೆಯನ್ನು ಪ್ರದರ್ಶಿಸದೆ ಇರಲು ಕಾರಣ 1947ರ ನಂತರದ ಸರ್ಕಾರಗಳ ನಿರ್ಲಕ್ಷ್ಯ ಎಂದೇ ಹೇಳಬಹುದು. ಎರಡು ರಾಷ್ಟ್ರಗಳ ತತ್ವವನ್ನೇ ನಿರಾಕರಿಸುವ ಭರದಲ್ಲಿ ಭಾರತದ ಪ್ರಭುತ್ವ ವಿಭಜನೆಯ ಸಂದರ್ಭದಲ್ಲಿ ಸಂಭವಿಸಿದ ಸಾಮೂಹಿಕ ಹತ್ಯಾಕಾಂಡದ ಭೀಕರತೆಯನ್ನೇ ಮರೆಮಾಚಲು ಪ್ರಯತ್ನಿಸಿದೆ. ಸಾಮೂಹಿಕ ಹತ್ಯೆಗಳನ್ನು ನೆನಪಿಸಿಕೊಳ್ಳುತ್ತಲೇ ಇದ್ದರೂ, ಅದರಿಂದ ಸೃಷ್ಟಿಯಾದ ಭಯಾನಕ ಸನ್ನಿವೇಶಗಳನ್ನು ಸ್ಮರಿಸಲು ಮುಂದಾಗಿಲ್ಲ.
ಸ್ವತಂತ್ರ ಭಾರತದ ಘೋಷಣೆ “ ಕೋಮು ಸೌಹಾರ್ದತೆಯನ್ನು ಮೆರೆಯುವ ಒಂದು ರಾಷ್ಟ್ರ ನಿರ್ಮಾಣಕ್ಕಾಗಿ ಮುನ್ನಡೆಯೋಣ ” ಎಂದೇ ಆಗಿತ್ತು. ಆದರೆ ಇದಕ್ಕೆ ತದ್ವಿರುದ್ಧವಾದ ರೀತಿಯಲ್ಲೇ ದೇಶ ನಡೆದುಬಂದಿದೆ. ಸಾಮೂಹಿಕ ಸ್ಮರಣೆಯನ್ನೇ ಕಳೆದುಕೊಂಡಿರುವುದರ ಪರಿಣಾಮ, ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದ ಸಾಮೂಹಿಕ ಹಿಂಸಾಕಾಂಡದ ನೆನಪುಗಳು ಕೋಮು ದ್ವೇಷದ ದಳ್ಳುರಿಗೆ ಇಂಧನವಾಗಿ ಪರಿಣಮಿಸಿದ್ದವಷ್ಟೇ. ವಿಭಜನೆಯ ಸಂದರ್ಭದಲ್ಲಿ ನಡೆದ ಹತ್ಯಾಕಾಂಡ ಮತ್ತು ಸಾಮೂಹಿಕ ಕಗ್ಗೊಲೆಗಳನ್ನು ಒಪ್ಪಿಕೊಂಡು ಪಶ್ಚಾತ್ತಾಪ ವ್ಯಕ್ತಪಡಿಸಲು ನಿರಾಕರಿಸಿದ ಪರಿಣಾಮವೇ 1947ರ ನಂತರದ ಅನೇಕ ಕೋಮು ಗಲಭೆಗಳ ಹಿಂಸಾಕಾಂಡಗಳಿಗೆ ಪ್ರೇರಣೆಯಾಯಿತು. 1961ರ ಜಬಲ್ಪುರ, 1969ರ ಅಹಮದಾಬಾದ್, 1979ರ ಜಮ್‍ಷೆಡ್‍ಪುರ, 1980ರ ಮೊರಾದಾಬಾದ್, 1984ರ ಭಿವಂಡಿ, 1989ರ ರಥಯಾತ್ರೆಯ ಹತ್ಯಾಕಾಂಡಗಳು, 1989ರ ಭಗಲ್ಪುರ, 1992-93ರ ಬಾಬ್ರಿ ಮಸೀದಿ ಧ್ವಂಸದ ನಂತರದ ಹಿಂಸಾಕಾಂಡಗಳು, 1993ರ ಮುಂಬಯಿ ಹಿಂಸಾಕಾಂಡ, 2002ರ ಗೋದ್ರೋತ್ತರ ಹತ್ಯಾಕಾಂಡ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ಹಿಂಸಾಕಾಂಡಗಳು ಮತ್ತು ಹತ್ಯಾಕಾಂಡಗಳು, ವಿಭಜನೆಯ ಸಂದರ್ಭದಲ್ಲಿ ಬಿತ್ತಲಾದ ಮತಭೇದಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ.
ಮುಚ್ಚಿದ ಗಾಯಗಳನ್ನು ತೆರೆಯುವ ಪ್ರಯತ್ನ
ಇತಿಹಾಸವನ್ನು ಸ್ವೀಕರಿಸಿ, ಚಾರಿತ್ರಿಕ ಘಟನೆಗಳನ್ನು ಅಳಿಸದೆಯೇ ಸ್ಮರಿಸಲು ಇನ್ನೂ ಕಾಲ ಮಿಂಚಿಲ್ಲ. ಆದರೆ ಈ ಸ್ಮರಣೆಯ ಚೌಕಟ್ಟಿನಲ್ಲಿ ಅವಿಭಜಿತ ಭಾರತದ ಸಮಸ್ತ ಜನತೆಯೂ ಇರಬೇಕಾಗುತ್ತದೆ. ಈ ವಿನಾಶಕಾರಿ ಘಟನೆಗೆ ಸಾಕ್ಷಿಯಾಗಿರುವ, ಇಂದಿನ ಗಡಿರೇಖೆಗಳ ಪೂರ್ವ ಮತ್ತು ಪಶ್ಚಿಮದ ಎರಡೂ ಬದಿಯಲ್ಲಿರುವ ಎಲ್ಲ ಸಮುದಾಯಗಳು , ಹಿಂದೂಗಳು, ಮುಸಲ್ಮಾನರು, ಸಿಖ್ಖರು ನಮ್ಮ ಸ್ಮರಣೆಯ ಒಂದು ಭಾಗವಾಗಿ ಇರಬೇಕಾಗುತ್ತದೆ. ಈ ಸ್ಮರಣೆಯು ಕ್ಷಮಾಶೀಲತೆಯ ಒಂದು ಮಾರ್ಗವಾಗಿ ‘ಮತ್ತೊಮ್ಮೆ ಹೀಗಾಗದು’ ಎಂಬ ಸಂಕಲ್ಪದೊಂದಿಗೆ ಮುನ್ನಡೆಯುವ ಒಂದು ಪಯಣವಾಗಬೇಕಾಗುತ್ತದೆ. ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ “ ಆಗಸ್ಟ್ 14ರ ದಿನವನ್ನು ವಿಭಜನೆಯ ಕರಾಳತೆಯ ಸ್ಮರಣಾರ್ಹ ” ಆಚರಿಸಲು ಕರೆ ನೀಡಿರುವುದು ಈ ರೀತಿಯ ಒಂದು ಪ್ರಯತ್ನವಲ್ಲ. ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಕರೆಯಲ್ಲಿ ಯಾವುದೇ ಒಂದು ಸಮುದಾಯವನ್ನು ಉಲ್ಲೇಖಿಸಿಲ್ಲ ಆದರೂ ಈ ಸ್ಮರಣೆಯನ್ನು ಆಚರಿಸಲು ನಿರ್ಧರಿಸಿರುವ ದಿನ ಎಲ್ಲವನ್ನೂ ಬಿಂಬಿಸುತ್ತದೆ. ಈ ಭೀಕರ ಘಟನೆಯಲ್ಲಿ ಎಲ್ಲ ಧರ್ಮಗಳ 20 ಲಕ್ಷಕ್ಕೂ ಹೆಚ್ಚು ಜನರು. ಆದರೂ ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನ ಎಂದು ಆಚರಿಸುವ ಈ ದಿನವನ್ನೇ ವಿಭಜನೆಯ ಕ್ರೌರ್ಯವನ್ನು ಸ್ಮರಿಸಲು ಆಯ್ಕೆ ಮಾಡಲಾಗಿದೆ. .
ಈ ರೀತಿಯ ಸ್ಮರಣೆ ಮಾಸಿರುವ ಗಾಯಗಳನ್ನು ಮತ್ತೊಮ್ಮೆ ಕೆರೆದಂತಾಗುವುದೇ ಅಲ್ಲದೆ, ವಿಭಜನೆಯ ಸಂದರ್ಭದ ಸಾವುಗಳಿಗೆ ಕಾರಣವಾದ ವಿಭಜಕ ಮನಸ್ಥಿತಿಗೆ ಹೊಸ ಆಯಾಮವನ್ನು ನೀಡಿದಂತಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಸಾಮೂಹಿಕ ಹತ್ಯಾಕಾಂಡಗಳನ್ನು ಮರೆತಿದ್ದು ಒಂದು ಪ್ರಮಾದವಾಗಿದ್ದರೆ ಈ ನಿರ್ಧಾರವು ಆ ಕರಾಳ ಘಟನೆಯನ್ನು ಜೀವಂತವಾಗಿರಿಸುತ್ತದೆ. ಇದು ಚರಿತ್ರೆಯ ಗಾಯಗಳನ್ನು ವ್ರಣವಾಗಿಸುವ ಪ್ರಯತ್ನವೇ ಆಗಿದೆ. ಈ ನಿರ್ಧಾರದಿಂದ ನಾವೇನೂ ಅಚ್ಚರಿ ಪಡಬೇಕಿಲ್ಲ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಯೋಜನೆಯ ಒಂದು ಭಾಗವೇ ಇದು. 1947ರ ಆಗಸ್ಟ್ 14ರಂದು ರಾಷ್ಟ್ರದ ಒಂದು ಭೂಭಾಗ ಪಾಕಿಸ್ತಾನವಾಗಿ ರೂಪುಗೊಂಡಿತ್ತು. ಹಾಗಾಗಿ ಕಲ್ಪಿತ ಅಖಂಡ ಭಾರತವನ್ನು ಹೋಳಾಗಿಸಿದ ಈ ದಿನದಂದು ಪ್ರಾಣ ತೆತ್ತವರನ್ನೇ ನಾವು ಸ್ಮರಿಸಬೇಕು ಎನ್ನುವ ಇಂಗಿತವನ್ನು ಈ ನಿರ್ಧಾರದಲ್ಲಿ ಕಾಣಬಹುದಾಗಿದೆ.
ಇದು ಕೇವಲ ಉತ್ತರ ಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಕೈಗೊಂಡ ಮುಂಜಾಗ್ರತೆಯ ಹೆಜ್ಜೆ ಎಂದು ಭಾವಿಸಬೇಕಿಲ್ಲ. ಇನ್ನೂ ಹೆಚ್ಚು ಅಪಾಯಕಾರಿಯಾದುದು. ಎರಡು ರಾಷ್ಟ್ರಗಳು ಉಗಮಿಸಿ 75 ವರ್ಷಗಳು ಕಳೆದ ನಂತರ ದೇಶದ ಪ್ರಧಾನ ಮಂತ್ರಿಗಳು ಈ ನಿರ್ಧಾರವನ್ನು ಕೈಗೊಳ್ಳುವುದರ ಹಿಂದೆ, 1947ರಲ್ಲಿ ಒಂದು ಸ್ವತಂತ್ರ ರಾಷ್ಟ್ರದ ಬದಲು ಎರಡು ರಾಷ್ಟ್ರಗಳು ರೂಪುಗೊಂಡಿದ್ದ ಪ್ರಮಾದವನ್ನು ನಾವು ಮರೆಯಬಾರದು ಎನ್ನುವ ಸಂದೇಶವೂ ಇರುವುದನ್ನು ಗಮನಿಸಬೇಕಿದೆ. ಹಾಗಾಗಿ “ ವಿಭಜನೆಯ ಕರಾಳತೆಯ ಸ್ಮರಣಾ ದಿನಾಚರಣೆ ” ಆಚರಿಸುವ ಮೂಲಕ ನಾವು ಅಂದು ಮಡಿದ ಲಕ್ಷಾಂತರ ಜನರನ್ನು ಸ್ಮರಿಸುವುದಿಲ್ಲ , ಇದಕ್ಕೆ ವ್ಯತಿರಿಕ್ತವಾಗಿ ವಿಭಜನೆಯ ಸಂದರ್ಭದಲ್ಲಿ ಸೃಷ್ಟಿಯಾದ ಆಕ್ರೋಶವನ್ನು ಜೀವಂತವಾಗಿಡುವ ಪ್ರಯತ್ನವನ್ನು ಮಾಡುತ್ತೇವೆ. ಈ ಉದ್ದೇಶಪೂರ್ವಕ ನಿರ್ಧಾರ ಭವಿಷ್ಯದ ಭಾರತಕ್ಕೆ ಮಾರಕವಾಗಲಿದೆ ಎನ್ನುವುದು ನಿಶ್ಚಿತ.
ಚರಿತ್ರೆಯ ಆ ಕಾಲಘಟ್ಟದ ಭೀಕರತೆಯನ್ನು, ಕರಾಳತೆಯನ್ನು ನಾವು ಪ್ರಾಮಾಣಿಕವಾಗಿ ಸ್ಮರಿಸುವುದೇ ಆದರೆ, ರಾಜಧಾನಿ ದೆಹಲಿಯಲ್ಲಿ ವಿಭಜನೆಯನ್ನು ಸ್ಮರಿಸುವ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಬೇಕು. ಈಗಿನ ರಾಷ್ಟ್ರಪತಿ ಭವನವನ್ನು (ಅವತ್ತಿನ ವೈಸ್‍ರಾಯ್ ನಿವಾಸ) ಆಸ್ಪತ್ರೆಯನ್ನಾಗಿ ಪರಿವರ್ತಿಸುವಂತೆ ಮಹಾತ್ಮ ಗಾಂಧಿ ಸಲಹೆ ನೀಡಿದ್ದರು. ಆದರೆ ಈ ಸಲಹೆಯನ್ನು ನಿರ್ಲಕ್ಷಿಸಲಾಯಿತು. ಬಹುಶಃ, ಈಗ ಕೇಂದ್ರ ಸರ್ಕಾರ ನಿರ್ಮಿಸಲು ಯೋಚಿಸುತ್ತಿರುವ ಸೆಂಟ್ರಲ್ ವಿಸ್ತಾ ಸಂಸತ್ ಭವನದಲ್ಲಿ ಪ್ರಧಾನ ಮಂತ್ರಿಗಳ ಉದ್ದೇಶಿತ ನಿವಾಸವನ್ನು 75 ವರ್ಷಗಳ ಹಿಂದೆ ಹಿಂಸಾಕಾಂಡದಲ್ಲಿ ಮಡಿದ ಲಕ್ಷಾಂತರ ಜನರ ಸ್ಮರಣಾರ್ಥ ಸ್ಮಾರಕವನ್ನಾಗಿ ಮಾಡಬಹುದು.
ಇಂತಹ ಒಂದು ರಾಷ್ಟ್ರೀಯ ಸ್ಮಾರಕವು, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸರ್ಕಾರಗಳಿಗೂ ಪ್ರೇರಣೆಯಾಗಿ, ಬ್ರಿಟೀಷರ ಭಾರತದಲ್ಲಿ ಮಡಿದ ಜನತೆಗೆ ಸ್ಮಾರಕಗಳನ್ನು ನಿರ್ಮಿಸಲು ಪೂರಕವಾಗಬಹುದು. ಹೀಗೆ ಮಾಡುವುದರ ಮೂಲಕ, ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ಯಾವುದೇ ಪ್ರದೇಶಕ್ಕೆ ಸೇರಿದವರಾಗಿರಲಿ, ವಿಭಜನೆಯ ಸಂದರ್ಭದ ಹಿಂಸಾಕಾಂಡಗಳಲ್ಲಿ ಬಲಿಯಾದ ಎಲ್ಲ ಸಮುದಾಯದ ಅಮಾಯಕ ಜನತೆಯನ್ನು ಸ್ಮರಿಸುವ ಒಂದು ಪ್ರಕ್ರಿಯೆಗೆ ದಕ್ಷಿಣ ಏಷ್ಯಾದಲ್ಲಿ ಚಾಲನೆ ನೀಡಲು ಸಾಧ್ಯ. ಚರಿತ್ರೆಯ ಭೀಕರ ಘಟನೆಗಳಿಗೆ ಸಾಮೂಹಿಕವಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಪ್ರಾಮಾಣಿಕ ಹೆಜ್ಜೆಯಾಗಬಹುದು.
ಮೂಲ : Remembering the horrors of partition
ಸಿ ರಾಮಮನೋಹರ್ ರೆಡ್ಡಿ- ದ ಹಿಂದೂ 18-8-21
ಅನುವಾದ : ನಾ ದಿವಾಕರ