ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಕನ್ನಡದ ಜಲ-ನೆಲ-ಧನ ಬಳಸಿ ಕಟ್ಟಿದ ಸಂಸ್ಥೆಯಲ್ಲಿ ಕನ್ನಡಿಗರ ದುಸ್ಥಿತಿ ಇದು. ರಾಜ್ಯದ ಬಿಜೆಪಿ ಸಂಸದರೇ ಇದರ ಬಗ್ಗೆ ಪ್ರಶ್ನೆ ಮಾಡಲು ನಿಮಗೆ ಧಮ್ಮು – ತಾಕತ್ತು ಇಲ್ಲವೆ? ಎಂದು ಜಾತ್ಯಾತೀತ ಜನತಾ ದಳ ತೀವ್ರ ವಾಗ್ದಾಳಿ ನಡೆಸಿದೆ.
ರಾಷ್ಟ್ರೀಯ ಕಾನೂನು ಶಾಲೆಯ ಆಡಳಿತ ಮಂಡಳಿ ಕೋರ್ಸ್’ಗಳ ಪ್ರವೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಮೀಸಲಾತಿ ನೀಡಬೇಕೆಂಬ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸಲು ಮತ್ತೆ ಹಿಂದೇಟು ಹಾಕುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ದೂರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷ, ಉತ್ತರದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಈ ವಂಚನೆ ನಮ್ಮ ಮೂಗಿನ ಕೆಳಕ್ಕೆ ನಡೆಯುತ್ತಿದೆ. ಉತ್ತರದವರ ಮುಂದೆ ಬೇಡಲು ನಾವೇನು ಅವರ ಗುಲಾಮರೆ? ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ ಹೊರತು ಭಿಕ್ಷೆಯಲ್ಲ ಎಂದು ಕಿಡಿಕಾರಿದೆ.
ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ಬೊಬ್ಬೆ ಹಾಕುತ್ತಿದ್ದರು. ಆದರೆ, ಈಗ ನಮ್ಮ ಮಕ್ಕಳಿಗೆ ಮೋಸವಾಗುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೆ, ಈ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತನ್ನಿ. ನಡುಬಗ್ಗಿಸಿ ಇನ್ನೆಷ್ಟು ದಿನ ನಿಲ್ಲುವಿರಿ? ಅಧಿಕಾರದ ಕೊನೆಯಲ್ಲಾದರೂ ಸ್ವಾಭಿಮಾನಿಯಾಗಿ ಧ್ವನಿ ಎತ್ತಿ ಎಂದು ಜೆಡಿಎಸ್ ಒತ್ತಾಯಿಸಿದೆ.