ದಾವಣಗೆರೆ : ಕೆಎಸ್ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಎಸಗಲು ಹೋಗಿ ಲೋಕಾಯುಕ್ತ ಪೊಲೀಸರ ಬಳಿ ಸಿಕ್ಕಿಬಿದ್ದ ಪ್ರಶಾಂತ್ ಮಾಡಾಳ್ ತಂದೆ ಬಿಜೆಪಿ ಶಾಸಕ ಹಾಗೂ ಈ ಪ್ರಕರಣದ ಎ 1 ಆರೋಪಿ ಮಾಡಾಳ್ ವಿರೂಪಾಕ್ಷಪ್ಪ ಇಂದು ಪ್ರತ್ಯಕ್ಷರಾಗಿದ್ದಾರೆ. ರಾಜ್ಯ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದ ಬಳಿಕ ತಮ್ಮ ಚನ್ನಗಿರಿ ನಿವಾಸದ ಸಮೀಪ ಮಾಡಾಳ್ ವಿರೂಪಾಕ್ಷಪ್ಪ ಕಾಣಿಸಿಕೊಂಡಿದ್ದಾರೆ.
ಮಾರ್ಚ್ 3ರಂದು ಮಾಡಾಳ್ ವಿರೂಪಾಕ್ಷಪ್ಪ ಕುಟುಂಬದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬರ್ತಿದ್ದಂತೆಯೇ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದರು . ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ವಿರೂಪಾಕ್ಷಪ್ಪ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆರು ದಿನಗಳ ಬಳಿಕ ಇಂದು ಮಧ್ಯಂತರ ಜಾಮೀನು ಸಿಗುತ್ತಲೇ ಮಾಡಾಳ್ ವಿರೂಪಾಕ್ಷಪ್ಪ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಚೆನ್ನಗಿರಿ ನಿವಾಸದ ಸಮೀಪ ಕಾಣಿಸಿಕೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪಗೆ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಮಾಡಾಳು ಹುಲಿಗೆ ಜೈ ಎಂಬ ಘೋಷಣೆಗಳು ಎಲ್ಲೆಡೆ ಕೇಳಿ ಬಂದಿದೆ. ಇದೇ ವೇಳೆ ತಮ್ಮ ಮನೆಯಲ್ಲಿ 7 ಕೋಟಿ ರೂಪಾಯಿ ನಗದು ಸಿಕ್ಕ ವಿಚಾರವಾಗಿ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಚೆನ್ನಗಿರಿ ಅಡಿಕೆ ಬೆಳೆಯ ನಾಡು. ಇಲ್ಲಿ ಸಾಮಾನ್ಯ ಕೃಷಿ ಕುಟುಂಬದ ಮನೆಯಲ್ಲಿ 3 ಕೋಟಿ ರೂಪಾಯಿ ನಗದು ಇರುತ್ತೆ. ಅಂತದ್ರಲ್ಲಿ ನಮ್ಮದು 124 ಎಕರೆ ತೋಟವಿದೆ, ಅಲ್ಲದೇ ಅಡಿಕೆ ಮಂಡಿ ಕೂಡ ಇದೆ. ಹೀಗಿರುವಾಗ ಅಷ್ಟು ಹಣ ಮನೆಯಲ್ಲಿ ಇರೋದು ಕಾಮನ್ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ಆರೋಪದ ಅಡಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗೆ ಇಷ್ಟೊಂದು ಅದ್ಧೂರಿ ಸ್ವಾಗತ ಸಿಕ್ಕಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.