• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಧರ್ಮ ಮತ್ತು ಸಂಸ್ಕೃತಿ – ಅಂತರ ಅರಿವಿಲ್ಲದ ಸಮಾಜದಲ್ಲಿ !!!

ನಾ ದಿವಾಕರ by ನಾ ದಿವಾಕರ
September 1, 2025
in Top Story, ಕರ್ನಾಟಕ, ದೇಶ, ರಾಜಕೀಯ
0
ಧರ್ಮ ಮತ್ತು ಸಂಸ್ಕೃತಿ – ಅಂತರ ಅರಿವಿಲ್ಲದ ಸಮಾಜದಲ್ಲಿ !!!
Share on WhatsAppShare on FacebookShare on Telegram

ಸಾಂಸ್ಕೃತಿಕ ಉತ್ಸವವೊಂದನ್ನು ಧರ್ಮಕ್ಕೆ ಕಟ್ಟಿಹಾಕುವುದು ಬೌದ್ದಿಕ ದಾರಿದ್ರ್ಯದ ಸಂಕೇತ

ADVERTISEMENT

ನಾ ದಿವಾಕರ

.ಸಾಂಸ್ಥಿಕವಾಗಲೀ, ಗ್ರಾಂಥಿಕವಾಗಲೀ ಯಾವುದೇ ಧರ್ಮವಾದರೂ ತನ್ನದೇ ಆದ ಸಂಹಿತೆಗಳನ್ನು ಅಳವಡಿಸಿಕೊಂಡಿರುತ್ತವೆ. ಗ್ರಾಂಥಿಕ ಧರ್ಮಗಳು ನಿರ್ದಿಷ್ಟ ತಾತ್ವಿಕ ನೆಲೆಗಳಿಗೆ ಅಂಟಿಕೊಂಡಿರುವುದು ಸಹಜವಾಗಿ ಕಾಣಬಹುದಾದ ವಿದ್ಯಮಾನ. ಇಲ್ಲಿ ಕರ್ಮಠ ಧೋರಣೆಯೇ ಪ್ರಧಾನವಾಗಿ ಭಿನ್ನ ಆಲೋಚನೆಗಳಿಗೆ ಅವಕಾಶ ನೀಡದ ಒಂದು ಕಟ್ಟುಪಾಡುಗಳ ಸಂಹಿತೆಗಳು ಇಡೀ ಸಮಾಜವನ್ನು ನಿಯಂತ್ರಿಸಿ, ನಿರ್ದೇಶಿಸುತ್ತವೆ. ಯಾವುದೇ ಗ್ರಾಂಥಿಕ ಆಕರವಿಲ್ಲದ ಹಿಂದೂ ಧರ್ಮದಂತಹ ಧರ್ಮಗಳಲ್ಲಿ, ಸಾಂಸ್ಥಿಕವಾಗಿ ಕಟ್ಟುಪಾಡುಗಳನ್ನು, ಕಟ್ಟಳೆಗಳನ್ನು ವಿಧಿಸಲಾಗುವುದಾದರೂ, ಇದನ್ನೂ ಮೀರಿ ನಡೆಯುವ ಸ್ವಾಯತ್ತತೆ, ಸ್ವಾತಂತ್ರ್ಯ ಸಮಾಜದ ಎಲ್ಲ ವರ್ಗಗಳಿಗೂ ಇರುತ್ತದೆ. ಹಾಗಾಗಿಯೇ ಹಿಂದೂ ಸಮಾಜದಲ್ಲಿ ಶತಮಾನಗಳಿಂದಲೂ ಭಿನ್ನ ತಾತ್ವಿಕ ದನಿಗಳು, ಸುಧಾರಣಾವಾದಿಗಳಾಗಿ, ಪ್ರತಿರೋಧದ ದನಿಯಾಗಿ ತನ್ನದೇ ಆದ ಪ್ರಶಸ್ತ ಸ್ಥಾನವನ್ನು ಗಳಿಸಿವೆ.

ಹಿಂದೂ ಧರ್ಮದಲ್ಲಿ ಕಾಣುವ ಈ ಚಿತ್ರಣಕ್ಕೆ ಕರ್ಮಠ ಸಂಪ್ರದಾಯವಾದಿಗಳ ಔದಾರ್ಯವೇನೂ ಕಾರಣವಲ್ಲ, ಬದಲಾಗಿ ಭಾರತದ ಬಹುಸಾಂಸ್ಕೃತಿಕ ನೆಲೆಗಳು ಮತ್ತು ಪ್ರತಿ 200 ಕಿಲೋಮೀಟರ್‌ ಕ್ರಮಿಸಿದರೆ ಕಾಣಬಹುದಾದ ಭಿನ್ನ ಸಂಸ್ಕೃತಿ, ಭಾಷೆ, ಜೀವನಶೈಲಿ, ಆಹಾರ ಪದ್ದತಿ ಇತ್ಯಾದಿ. ಈ ಬಹುಸಾಂಸ್ಕೃತಿಕ ನೆಲೆಗಳಲ್ಲೇ ವಿಭಿನ್ನ ಸಮಾಜಗಳು ಅಳವಡಿಸಿಕೊಳ್ಳುವ ಸ್ಥಳೀಯ ಆಚರಣೆಗಳು, ದೈವತ್ವದ ಕಲ್ಪನೆಗಳು, ಅತೀತ ಶಕ್ತಿಗಳ ಮೇಲಿನ ಶ್ರದ್ಧಾ ನಂಬಿಕೆಗಳು ಹಾಗೂ ಅವುಗಳನ್ನು ಅನುಸರಿಸುವ ವಿಶಾಲ ಸಮಾಜದ ಜೀವನ ದರ್ಶನಗಳು ಭಾರತವನ್ನು ಇಂದಿಗೂ ಸಹ ಸಮನ್ವಯತೆಯ ಪ್ರಶಸ್ತ ಭೂಮಿಯಾಗಿ ಕಾಪಾಡಿಕೊಂಡು ಬಂದಿದೆ. ಆಧುನಿಕ ಯುಗದಲ್ಲಿರುವ ಭಾರತ ಇದನ್ನು ಉಳಿಸಿಕೊಂಡು ಹೋಗುವುದು ಭವಿಷ್ಯದ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತದೆ.

Elumale : ಸಿನಿಮಾದೂರು ಅಂದ್ರೆ ಮದ್ವೆ ಆಗೋಕೆ ಹೆಣ್ಣು ಕೊಡಲ್ಲ #pratidhvani #Elumale #officialtrailer

ಸಾಂಸ್ಕೃತಿಕ ರಾಜಕಾರಣದ ಪರಿಣಾಮ

ಆದರೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ದೇಶ ಕಂಡಿರುವ ಸಾಂಸ್ಕೃತಿಕ ರಾಜಕಾರಣದಲ್ಲಿ ಈ ಸಮನ್ವಯತೆಯನ್ನು, ಸೌಹಾರ್ದತೆಯನ್ನು ಭಂಗಗೊಳಿಸುವಂತಹ ತಡೆಗೋಡೆಗಳನ್ನು ಕಟ್ಟುವ ಪ್ರಕ್ರಿಯೆ ತೀವ್ರವಾಗುತ್ತಿದ್ದು, ಅಧಿಕಾರ ರಾಜಕಾರಣ, ಸಾಂಸ್ಥಿಕ ಹಿತಾಸಕ್ತಿ, ಜಾತಿ ಶ್ರೇಷ್ಠತೆ ಮತ್ತು ಮೇಲರಿಮೆ ಹಾಗೂ ಯಜಮಾನಿಕೆಯ ಊಳಿಗಮಾನ್ಯ ಸಂಸ್ಕೃತಿಯ ಪ್ರಭಾವದಿಂದ , ಶತಮಾನಗಳ ಸಾಂಸ್ಕೃತಿಕ ಬೇರುಗಳು ಕ್ರಮೇಣ ಸಡಿಲವಾಗುತ್ತಿವೆ. 12ನೆ ಶತಮಾನದಲ್ಲಿ ಕರ್ನಾಟಕವೇ ಸಾಕ್ಷಿಯಾದ ಶರಣ ಸಂಸ್ಕೃತಿ, ವಚನ ಚಳುವಳಿಯ ಬಹುಸಾಂಸ್ಕೃತಿಕ ನೆಲೆಗಳು ಇಂದಿಗೂ ಉಸಿರಾಡುತ್ತಿದ್ದರೂ, 21ನೆ ಶತಮಾನದಲ್ಲಿ ಸಮಾಜವನ್ನು ವಿರುದ್ಧ ದಿಕ್ಕಿನಲ್ಲಿ ಕರೆದೊಯ್ಯುವ ಸಾಂಸ್ಥಿಕ ಪ್ರಯತ್ನಗಳಿಂದ, ಭಾರತದ ಬಹುತ್ವದ ನೆಲೆಗಳು ಕ್ರಮೇಣವಾಗಿ ವಿಘಟನೆಗೊಳಗಾಗುತ್ತಿವೆ.

ಈ ಸಾಮಾಜಿಕ ಬೆಳವಣಿಗೆಯ ನಡುವೆಯೇ ಬೌದ್ಧಿಕವಾಗಿಯೂ ಸಹ ಸಾಂಸ್ಥಿಕ ಧರ್ಮ ಮತ್ತು ತಳಸಮಾಜದ ಜನಸಂಸ್ಕೃತಿಯ ನಡುವೆ ಇರುವ ಅಪಾರ ಅಂತರವನ್ನೂ ಕಿರಿದಾಗಿಸುವ ಪ್ರಯತ್ನಗಳು , ಎಲ್ಲ ಸ್ತರಗಳಲ್ಲೂ, ಎಲ್ಲ ವಲಯಗಳಲ್ಲೂ ನಡೆಯುತ್ತಿವೆ. ರಾಜಕೀಯ, ಸಂವಹನ ಮಾಧ್ಯಮ, ಶೈಕ್ಷಣಿಕ-ಬೌದ್ಧಿಕ ವಲಯ, ಅಧ್ಯಾತ್ಮ ಹಾಗೂ ಸಾರ್ವಜನಿಕ ಸಂಸ್ಥೆಗಳ ನಡುವೆ ಬಲವಾಗಿ ಬೇರೂರಿರುವ ಈ ಸಾಂಸ್ಥಿಕ ಹಿತಾಸಕ್ತಿಗಳು ಉತ್ಪಾದಿಸುತ್ತಿರುವ ಹೊಸ ನಿರೂಪಣೆಗಳೇ ಧರ್ಮ ಮತ್ತು ಸಂಸ್ಕೃತಿಯ ನಡುವೆ ಇರುವ ಅಂತರವನ್ನು ಕಿರಿದಾಗಿಸುತ್ತಾ, ಎರಡೂ ಒಂದೇ ಎಂಬ ವ್ಯಾಖ್ಯಾನವನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ , ಭಾರತದ ಮೂಲ ಸಂಸ್ಕೃತಿ ಎಂದು ಪರಿಗಣಿಸಬಹುದಾದ ನೂರಾರು ಜನಸಾಂಸ್ಕೃತಿಕ ಆಚರಣಾತ್ಮಕ ನೆಲೆಗಳೂ ಸಹ, ವಿಶಾಲ ಧರ್ಮದ ಆವರಣದೊಳಗೆ ಸಿಲುಕಿ, ತಮ್ಮ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿವೆ.

 ಮೈಸೂರು ದಸರಾ ಉತ್ಸವ ಇದರ ಒಂದು ಪ್ರತ್ಯಕ್ಷ ಉದಾಹರಣೆ. ಶತಮಾನಗಳಿಂದ, ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗೂ ಕರ್ನಾಟಕದ ಇತಿಹಾಸದಲ್ಲಿ ಸಮಾಜದ ಎಲ್ಲ ವರ್ಗಗಳನ್ನೂ ಪ್ರತಿನಿಧಿಸುವ, ಭಿನ್ನ ಸಂಸ್ಕೃತಿಗಳನ್ನು ಮೇಳೈಸಿಕೊಂಡು ನಡೆಯುತ್ತಿರುವ ಮೈಸೂರು ದಸರಾ ಈಗ ಹಿಂದೂ ಧಾರ್ಮಿಕ ಉತ್ಸವ ಎಂದು ಬಿಂಬಿಸಲ್ಪಡುತ್ತಿದೆ. ದಸರಾ ಉತ್ಸವಕ್ಕೆ ಪ್ರತಿಯೊಂದು ರಾಜ್ಯದಲ್ಲೂ ತನ್ನದೇ ಆದ ಸಾಂಸ್ಕೃತಿಕ ಸೊಗಡು ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ದೇಶವ್ಯಾಪಿಯಾಗಿ ಆಚರಿಸಲ್ಪಟ್ಟರೂ, ಇದರ ಆಚರಣಾತ್ಮಕ ವಿಧಾನಗಳು ಸಾಂಸ್ಕೃತಿಕ ವೈವಿಧ್ಯತೆಯ ಚೌಕಟ್ಟಿನಲ್ಲಿ ಪ್ರತ್ಯೇಕ ರೂಪಗಳನ್ನು ಪಡೆದುಕೊಳ್ಳುತ್ತವೆ. ಪೌರಾಣಿಕ ಅಥವಾ ಧಾರ್ಮಿಕ ಕಥನಗಳ ಹೊರತಾಗಿ, ಒಂದು ಸಾರ್ವಜನಿಕ ಉತ್ಸವವಾಗಿ ಜರುಗುವ ಮೈಸೂರು ದಸರಾ ಜಗದ್ವಿಖ್ಯಾತವಾಗಿರುವುದಕ್ಕೆ ಕಾರಣವೇ ಈ ಬಹುಸಾಂಸ್ಕೃತಿಕ ರೂಪ.

 ಅನಗತ್ಯ ವಿವಾದ ಮತ್ತು ಸಂಘರ್ಷ

2025ರ ದಸರಾ ಉತ್ಸವ ವಿವಾದಾಸ್ಪದವಾಗಿರುವುದು ಈ ಯಾವುದೇ ಕಾರಣಗಳಿಗಾಗಿ ಅಲ್ಲ. ಬದಲಾಗಿ ಈ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಲು , ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವ ಕಾರಣಕ್ಕಾಗಿ. ದಸರಾ ಉತ್ಸವದ ಸಂದರ್ಭದಲ್ಲಿ ಸಾಂಕೇತಿಕವಾಗಿ ಆರಾಧಿಸಲ್ಪಡುವ ಚಾಮುಂಡೇಶ್ವರಿ ಮತ್ತು ಬಾನು ಮುಷ್ತಾಕ್‌ ಅವರ ಮುಸ್ಲಿಂ ಅಸ್ಮಿತೆ , ಆಕೆಯ ಆಯ್ಕೆಯನ್ನು ವಿರೋಧಿಸಲು ಪ್ರಧಾನ ಕಾರಣವಾಗಿದೆ. ಪರ ವಿರೋಧ ಎರಡೂ ಸಹಜ ಪ್ರಕ್ರಿಯೆ ಆದರೆ, ಬಿಜೆಪಿ ನಾಯಕರು  “ ದನ ತಿನ್ನುವ ಹೆಣ್ಣು ದಸರಾ ಉದ್ಭಾಟಿಸುವುದು ಬೇಡ  ”,  “ ಮುಸ್ಲಿಂ ಮಹಿಳೆ ಚಾಮುಂಡಿ ಬೆಟ್ಟ ಹತ್ತಕೂಡದು ”, “ಇದು ಹಿಂದೂಗಳ ಹಬ್ಬ ಸಾಬರಿಗೇನು ಕೆಲಸ ”, ಇವೇ ಮುಂತಾದ ಹೇಳಿಕೆಗಳನ್ನು ನೀಡಿರುವುದು ನಾಗರಿಕತೆಯ ಚೌಕಟ್ಟುಗಳನ್ನು ಮೀರಿದ ಮಾತುಗಳಾಗಿಯೇ ಕೇಳಿಸಲು ಸಾಧ್ಯ.

 ಇವೆಲ್ಲವನ್ನೂ ಮೀರಿಸುವ ಹಾಗೆ ಸರ್ಕಾರಕ್ಕೆ ದಸರಾ ಉದ್ಘಾಟಿಸಲು ಹಿಂದೂ ಸಾಹಿತಿ ಯಾರೂ ಕಾಣಲಿಲ್ಲವೇ ಎಂಬ ಪ್ರಶ್ನೆ , ಇಡೀ ಕನ್ನಡ ಸಾಹಿತ್ಯ ಪರಂಪರೆಯನ್ನು ಅವಮಾನಿಸುವ ಒಂದು ಮಾತು. ಸಮಕಾಲೀನ ಕನ್ನಡ ಸಾಹಿತ್ಯದ ಓದು, ಅಧ್ಯಯನ  ಬೇಡ, ಅದರ ಚಾರಿತ್ರಿಕ ನಡಿಗೆಯ ಪರಿಚಯವಿದ್ದವರೂ ಸಹ ಈ ಮಾತುಗಳನ್ನು ಆಡಲು ಸಾಧ್ಯವಿಲ್ಲ. ಸಾಹಿತ್ಯದಲ್ಲಿ ಹಿಂದೂ-ಮುಸ್ಲಿಂ ವಿಭಜನೆ ಮಾಡುವ ರಾಜಕೀಯ ನಾಯಕರಿಗೆ ಕನ್ನಡದ ನಿತ್ಯೋತ್ಸವ ಕವಿ ನಿಸ್ಸಾರ್‌ ಅಹಮದ್‌ ಹೇಗೆ ಕಾಣುತ್ತಾರೆ ? “ ನಟವರ ಗಂಗಾಧರ ಉಮಾಶಂಕರ ” ಮೊದಲಾದ ಹಲವು ದೈವಸ್ತುತಿಯ ಹಾಡುಗಳನ್ನು ಬರೆದು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಕರೀಂಖಾನ್‌ ಹೇಗೆ ಕಾಣುತ್ತಾರೆ ? ವರ್ತಮಾನದಲ್ಲೂ ಕರ್ನಾಟಕದ ನಾಥಪಂಥಗಳು ಮತ್ತು ಸೂಫಿ ಪರಂಪರೆಗಳ ಬಗ್ಗೆ ಆಳವಾದ ಅಧ್ಯಯನ ಸಂಶೋಧನೆ ಮಾಡಿರುವ ರಹಮತ್‌ ತರೀಕೆರೆ, ವಚನ ಸಾಹಿತ್ಯದಲ್ಲಿ ಅಪ್ರತಿಮ ಸಾಧನೆ ಮಾಡಿರುವ ರಂಜಾನ್‌ ದರ್ಗಾ ಮೊದಲಾದವರು ಹೇಗೆ ಕಾಣಲು ಸಾಧ್ಯ ?

 ಪದೇ ಪದೇ “ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ” ಎಂಬ ಪಾರಂಪರಿಕ ಗಾದೆಗೆ ಆತುಕೊಂಡು, ಈ ಡಿಜಿಟಲ್‌ ಯುಗದಲ್ಲೂ ಸಾಹಿತಿಯೊಬ್ಬರನ್ನು ʼ ಮುಸ್ಲಿಂ ಸಾಹಿತಿ ʼ ಎಂದು ಪರಿಗಣಿಸಿ, ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರಿಗೆ ದಸರಾ ಉದ್ಘಾಟನೆ ಮಾಡುವ ಸಾಂವಿಧಾನಿಕ ಸ್ವಾತಂತ್ರ್ಯವನ್ನು ಪ್ರಶ್ನಿಸುವುದು, ಕನ್ನಡದ ಶ್ರೇಷ್ಠ ಸಾಹಿತ್ಯ ಪರಂಪರೆಯನ್ನು ಅಪಮಾನಿಸಿದಂತೆ ಮಾತ್ರವೇ ಅಲ್ಲ, ನಮ್ಮ ಸಮಾಜ ಮತ್ತು ದೇಶ ಸಾಗುತ್ತಿರುವ ಅಪಾಯಕಾರಿ ಹಾದಿಯ ಸಂಕೇತವಾಗಿ ಕಾಣುತ್ತದೆ. 21ನೆ ಶತಮಾನದ ಚರಿತ್ರೆಯನ್ನೇ ಗಮನಿಸಿದರೆ, ದಸರಾ ಉತ್ಸವವನ್ನು  ವೈಚಾರಿಕ ಚಿಂತನೆಯ ಸಾಹಿತಿಗಳು, ದೈವ ನಂಬಿಕೆ ಇಲ್ಲದ ನಾಡಿನ ಚೇತನಗಳು, ಅನ್ಯ ಧರ್ಮವನ್ನು ಪ್ರತಿನಿಧಿಸುವವರು ಉದ್ಘಾಟಿಸಿರುವುದನ್ನು ಕಾಣಬಹುದು.  2017ರಲ್ಲಿ ನಿತ್ಯೋತ್ಸವ ಕವಿ ಕೆ. ಎಸ್.‌ ನಿಸಾರ್‌ ಅಹಮದ್‌ ಉದ್ಘಾಟಿಸಿದ್ದಾರೆ. ನಿಸಾರ್‌ ಅಹಮದ್‌ ಅವರನ್ನಾಗಲೀ, ಬಾನು ಮುಷ್ತಾಕ್‌ ಅವರನ್ನಾಗಲೀ ʼ ಮುಸ್ಲಿಂ ಸಾಹಿತಿ ʼ ಎಂಬ ಸಂಕುಚಿತ ಚೌಕಟ್ಟಿನೊಳಗೆ ಸಿಲುಕಿಸುವುದು, ಸಮಾಜದ ಸಾಂಸ್ಕೃತಿಕ ಅವನತಿಯ ಸಂಕೇತವಾಗಿಯೇ ಕಾಣುತ್ತದೆ.

ಬಹುತ್ವದ ಸಾಂಸ್ಕೃತಿಕ ಚಹರೆ ದಸರಾ

ಏಕೆಂದರೆ ದಸರಾ ಉತ್ಸವದ ಸಂದರ್ಭದಲ್ಲಿ, ಅಂಬಾರಿ ಹೊರುವ ಮತ್ತು ಅದರೊಂದಿಗೆ ಮೆರವಣಿಗೆಯಲ್ಲಿ ಸಾಗುವ ಆನೆಗಳ ಮಾವುತರಿಂದ ಹಿಡಿದು, ನವರಾತ್ರಿಯ ಉದ್ದಕ್ಕೂ ಪ್ರತಿಯೊಂದು ಹಂತದಲ್ಲೂ ಕಾಣಬಹುದಾದ ಸಂಭ್ರಮ-ಉತ್ಸಾಹದಲ್ಲಿ, ಯಾವುದೇ ಜನಾಂಗೀಯ ಕುರುಹುಗಳನ್ನು ಗುರುತಿಸಲಾಗುವುದಿಲ್ಲ. ಅಂಬಾರಿ ಆನೆಗಳಿಗೆ ಅಲಂಕಾರಿಕ ವಸ್ತ್ರ ಇತ್ಯಾದಿಗಳನ್ನು ತಯಾರಿಸುವಲ್ಲಿ ಮುಸ್ಲಿಂ ಸಮುದಾಯದ ಪಾತ್ರ ಇರುವುದನ್ನು ಮೈಸೂರಿನ ಸಮಸ್ತರೂ ಅರಿತಿರುತ್ತಾರೆ. ನಮ್ಮ ಪುಣ್ಯ ಎಂದರೆ ಆನೆಗಳಿಗೆ ಜಾತಿ-ಧರ್ಮಗಳ ಗೊಡವೆ ಇಲ್ಲ. ಇದ್ದಿದ್ದರೆ, ಮುಸ್ಲಿಂ ಆನೆ, ಹಿಂದೂ ಆನೆ ಎಂಬ ವಿಭಜನೆಯ ರೇಖೆಗಳು ರಂಗೋಲಿಗಳಾಗಿ ಹಾದಿಯುದ್ದಕ್ಕೂ ರಾರಾಜಿಸಿಬಿಡುತ್ತಿದ್ದವು. ಈ ಆನೆಗಳನ್ನು ಸಾಕಿ, ಪಳಗಿಸಿ, ದಸರಾ ದಿನಕ್ಕೆ ಸಜ್ಜುಗೊಳಿಸುವ ಮಾವುತರು, ನಗರ ನಾಗರಿಕತೆಗೆ ಒಡ್ಡಿಕೊಂಡವರಲ್ಲ. ಈ ಸಾಧಾರಣ ಜನರಲ್ಲಿರುವುದು ದಸರಾ ಉತ್ಸವದ ಹೆಮ್ಮೆ, ದೈವ ಶ್ರದ್ಧೆ ಮತ್ತು ತಮ್ಮ ಕಾಯಕದಲ್ಲಿ ಪ್ರಾಮಾಣಿಕತೆ.

ಈ ಅರೆ ಅಕ್ಷರಸ್ಥ ಸಮಾಜದಲ್ಲಿ ಇರುವ ಪರಿವೆ, ವಿವೇಕ, ವಿವೇಚನೆ, ಪರಿಜ್ಞಾನವೂ , ನಾಗರಿಕರು ಎನಿಸಿಕೊಂಡ ನಮ್ಮ ಸಮಾಜದಲ್ಲಿ ಇಲ್ಲವಲ್ಲಾ ಎಂಬ ವ್ಯಥೆ ಕಾಡುತ್ತದೆ. ರಾಜಕೀಯ ಲಾಭಕ್ಕಾಗಿಯೇ ಆದರೂ, ವಿಭಜನೆಗೂ ಒಂದು ಮಿತಿ ಇದೆ, ಕಟ್ಟುವ ಬೇಲಿಗಳಿಗೂ ಒಂದು ಸೀಮಿತ ರೇಖೆ ಇರುತ್ತದೆ. ಎಲ್ಲಿಯವರೆಗೆ ನಮ್ಮ ಸಮಾಜವನ್ನು ವಿಭಜಿಸಲು ಸಾಧ್ಯ ? ಎಷ್ಟು ಆಳದವರೆಗೆ ಸಾಂಸ್ಕೃತಿಕ ಅಸ್ತಿತ್ವಗಳನ್ನು ಹೂತುಹಾಕಲು ಸಾಧ್ಯ ? ಸಮಸ್ತ ಕನ್ನಡ ಜನತೆಯನ್ನು ಆಕರ್ಷಿಸುವ ಮತ್ತು ಪ್ರತಿನಿಧಿಸುವ ಒಂದು ಸಾರ್ವಜನಿಕ ಸಾಂಸ್ಕೃತಿಕ ಉತ್ಸವವನ್ನು ತಮ್ಮದೇ ಆದ ಸ್ವಾರ್ಥ ರಾಜಕಾರಣಕ್ಕಾಗಿ, ಮತ ವಿಭಜನೆಯ ಸೇತುವೆಯಾಗಿ ಬಳಸುವುದನ್ನು ನೋಡಿದಾಗ ಈ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಚಾಮುಂಡೇಶ್ವರಿ ಯಾರಿಗೆ ಸೇರಿದವಳು ಎಂಬ ಪ್ರಶ್ನೆ ಉದ್ಭವಿಸಿರುವುದೇ ನಮ್ಮ ಸಮಾಜದ ಹಿಮ್ಮುಖ ಚಲನೆಗೆ ಸಾಕ್ಷಿಯಾಗಿ ಕಾಣುತ್ತದೆ.

 ಸಾಂಸ್ಕೃತಿಕ ಜಗತ್ತಿನ ಬಹುವೈವಿಧ್ಯತೆ

ಡಾ. ರಾಜ್‌ ನಟನೆಯ ಕಲಾತ್ಮಕ ʼ ಸನಾದಿ ಅಪ್ಪಣ್ಣ ʼ ಚಿತ್ರದಲ್ಲಿ , ಕಥಾ ಹಂದರದ ಒಂದು ಭಾಗವಾಗಿ ಚಿತ್ರದುದ್ದಕ್ಕೂ ನಾದ ಸುಧೆಯನ್ನು ಹರಿಸುವ ಶಹನಾಯ್‌ ವಾದಕ ಬಿಸ್ಮಿಲ್ಲಾ ಖಾನ್‌ ಅವರನ್ನು ಹುಟ್ಟಿನಿಂದ ಮುಸ್ಲಿಂ ಎನ್ನಬಹುದು ಆದರೆ ಅವರ ವಾದ್ಯದಿಂದ ಹೊರಬರುವ ಸುಸ್ವರ-ಆಲಾಪನೆಗಳನ್ನು ಹೀಗೆ ವಿಭಜಿಸಿ ನೋಡಲು ಸಾಧ್ಯವೇ ? ಇಲ್ಲಿ ಒಂದು ಪ್ರಸಂಗವನ್ನು ಉಲ್ಲೇಖಿಸಬಹುದು. ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರು ನಿತ್ಯ ಮುಂಜಾನೆ ಸೂರ್ಯೋದಯದ ವೇಳೆಗೆ ವಾರಣಾಸಿಯ ವಿಶ್ವನಾಥ ದೇವಾಲಯದ ಮುಂದೆ, ಗಂಗಾ ತಟದಲ್ಲಿ ಕುಳಿತು ಶಹನಾಯ್‌ ನುಡಿಸುತ್ತಿದ್ದರು. ಒಮ್ಮೆ ಒಬ್ಬ ಮುಸ್ಲಿಂ ವ್ಯಕ್ತಿ “ ನಿಮ್ಮ ಇಸ್ಲಾಂ ಧರ್ಮ ಸಂಗೀತವನ್ನು ಸ್ವೀಕರಿಸುವುದಿಲ್ಲ, ನೀವು ಹೇಗೆ ಇಲ್ಲಿ ಕುಳಿತು ನುಡಿಸುತ್ತೀರಿ ” ಎಂದು ಕೇಳಿದಾಗ, ಖಾನ್‌ ಸಾಹೇಬರ ಉತ್ತರ ಹೀಗಿತ್ತು : “ ನಾನು ನುಡಿಸುವ ಸಂಗೀತದ ಸ್ವರಗಳಿಗೆ ಧರ್ಮದ ಹಂಗಿಲ್ಲ , ಇಷ್ಟಕ್ಕೂ ನೀವು ನಿತ್ಯ ಐದುಬಾರಿ ಮಸೀದಿಯಲ್ಲಿ ಕೂಗುವ ಅಜಾನ್‌ನಲ್ಲೂ ಸಂಗೀತ ಇದೆಯಲ್ಲವೇ ? ” ಈ ಸಾಂಸ್ಕೃತಿಕ ಪ್ರೌಢಿಮೆಯೇ ಭಾರತದ ಬಹುತ್ವದ ಬಹುದೊಡ್ಡ ಆಸ್ತಿ.

ಇಂದಿಗೂ ಸಹ ನಮ್ಮ ನಡುವೆ ರಷೀದ್‌ ಖಾನ್‌, ಫಯಾಜ್‌ ಖಾನ್‌ ಅವರ ಮಧುರ ಕಂಠದಿಂದ ಹೊರಡುವ ಕೃಷ್ಣ ಭಜನೆಗಳು, ಸುಶ್ರಾವ್ಯ ಸಂಗೀತ ನಮ್ಮ ನಡುವಿನ ಸಾಂಸ್ಕೃತಿಕ ಚೈತನ್ಯವನ್ನು ಶ್ರೀಮಂತಗೊಳಿಸುತ್ತಿದೆ ಅಲ್ಲವೇ ? ಜಾನ್‌ ಹಿಗಿನ್ಸ್‌ ಅವರ ಕರ್ನಾಟಕ ಸಂಗೀತ, ಅವರ ಕಂಠದಲ್ಲಿ ಬರುತ್ತಿದ್ದ “ಕೃಷ್ಣಾ ನೀ ಬೇಗನೆ ಬಾರೋ” ಗಾಯನ ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸಿದ್ದನ್ನು ಮರೆಯಲಾಗುವುದೇ ? ಕೆ ಜೆ ಏಸುದಾಸ್‌ ಅವರ ಅಯ್ಯಪ್ಪ ಸ್ತುತಿ ಗೀತೆ               “ಹರಿವರಾಸನಂ” ಇಂದಿಗೂ ಅಯ್ಯಪ್ಪ ಭಕ್ತರ ನಡುವೆ ಹರಿಯುತ್ತಿರುವುದನ್ನು ಅಲ್ಲಗಳೆಯಲಾಗುವುದೇ ? ದನ ತಿನ್ನುವುದಕ್ಕೂ, ಸಾಂಸ್ಕೃತಿಕ ಕಲಾಭಿವ್ಯಕ್ತಿಗೂ ಎತ್ತಣಿಂದೆತ್ತ ಸಂಬಂಧ ?  ಈ ಎಲ್ಲ ಸಾಂಸ್ಕೃತಿಕ ದನಿಗಳ ಒಂದು ಚಾರಿತ್ರಿಕ-ಸಮಕಾಲೀನ ಸಮ್ಮಿಲನವಾಗಿ ದಸರಾ ಉತ್ಸವವನ್ನು ನಾವು ನೋಡಬೇಕಲ್ಲವೇ ?

ಇಂದು ಬಾನು ಮುಷ್ತಾಕ್‌ ನಾಳೆ ಮತ್ತೊಬ್ಬರು. ಸಾಹಿತ್ಯವನ್ನೂ ಧರ್ಮಾಧಾರಿತವಾಗಿ ವಿಭಜಿಸುವ ವಿಕೃತಿ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ. ಇದಕ್ಕೆ ರಾಜಕೀಯ ಉತ್ತರಕ್ಕಿಂತಲೂ, ಮೈಸೂರಿನ ನಾಗರಿಕ ಪ್ರಜ್ಞೆ ನೀಡುವ ಉತ್ತರ ಮೌಲ್ಯಯುತವಾಗಿರುತ್ತದೆ. ಚಾಮುಂಡಿ ಬೆಟ್ಟ ನಾಗರಿಕರಿಗೆ ಸೇರಿದ ಆಸ್ತಿ. ಅಲ್ಲಿರುವ ದೇವಸ್ಥಾನ ಮುಜರಾಯಿ ಇಲಾಖೆಯ ಆಸ್ತಿ. ನಾಡಹಬ್ಬ ಎಂದೇ ಹೆಸರಾಗಿರುವ ದಸರಾ ಉತ್ಸವ, ಈ ಎರಡೂ ತಾಣಗಳನ್ನು ಒಳಗೊಂಡು ನಡೆಯುವ ಒಂದು ಜನಸಂಸ್ಕೃತಿಯ ಸಂಕೇತ. ನಾಡಿನ ಸಮಸ್ತ ಜನತೆಯೂ ಸಂಭ್ರಮಿಸುವ, ನಾಸ್ತಿಕರಾದಿಯಾಗಿ ಸಮಸ್ತ ನಾಗರಿಕರೂ ನಿರಪೇಕ್ಷತೆಯಿಂದ ವೀಕ್ಷಿಸುವ ಈ ಸಾಂಸ್ಕೃತಿಕ ಉತ್ಸವಕ್ಕೆ ಸಂಕುಚಿತ ರಾಜಕೀಯ ಉದ್ದೇಶಗಳಿಗಾಗಿ  ಧರ್ಮದ ಲೇಪನ ಮಾಡುವುದು ನಾಗರಿಕತೆಯ ಲಕ್ಷಣವಲ್ಲ. ಸಾಂಸ್ಕೃತಿಕ ಜಗತ್ತನ್ನು ವಿಭಜಿಸುವ ಪ್ರಯತ್ನಗಳು ಸಾಹಿತ್ಯ, ಕಲೆ, ಸಂಗೀತ ಎಲ್ಲವನ್ನೂ ಆವರಿಸಿದೆ, ಮೈಸೂರು ರಂಗಾಯಣದಲ್ಲಿ ರಂಗಭೂಮಿಯನ್ನೂ ಸೋಂಕಿದ ಗಳಿಗೆಗಳನ್ನು ನೋಡಿದ್ದೇವೆ.

ಇದರಿಂದಾಚೆಗೂ ವಿಶಾಲ ಸಮಾಜ ಎನ್ನುವುದೊಂದಿದೆ. ಆ ಸಮಾಜ ದಸರಾ ಉತ್ಸವವನ್ನು ಸಾಂಸ್ಕೃತಿಕ ಹಬ್ಬವಾಗಿ ಅಚರಿಸಿ, ಸಂಭ್ರಮಿಸುತ್ತದೆ. ಅದರ ಪಾಡಿಗೆ ಅದು ನಡೆಯಲಿ ಬಿಟ್ಟುಬಿಡಿ.

-೦-೦-೦-

Tags: are jews an ethnicity or religionBJPcancel culturechinese cultural revolutioncomparative religionCongress Partygod and moralitygod and scienceheaven and hellhow to be a mature man in a relationshipjewish culturejewish religionjewish religion explainedjudaism religionkings and generalsmorality and ethicsorigins of the word quranReligionscience and faithscience and religionscience vs religionthe origins of the quranwhat is religionಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ದಸರಾ ಧರ್ಮಾತೀತ, ಜಾತ್ಯಾತೀತ ಹಬ್ಬ

Next Post

ದೇವನಹಳ್ಳಿ ಭೂ ಹೋರಾಟ ರೈತರಿಗೆ ಆಘಾತ ಸುದ್ದಿ ಕೊಟ್ಟ KIADB

Related Posts

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
0

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪ್ರದೋಶ್ ತಂದೆ ಸುಬ್ಬರಾವ್ ವಿಧಿವಶರಾಗಿದ್ದಾರೆ. ಹೀಗಾಗಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರದೋಶ್ ಗೆ ಕೋರ್ಟ್ ಅನುಮತಿ ನೀಡಿದೆ.ತಂದೆ ನಿಧನರಾದ...

Read moreDetails
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

ದೀಪಾವಳಿ ಹಬ್ಬದ ಪಟಾಕಿ ಎಫೆಕ್ಟ್: ಎಷ್ಟು ಜನರಿಗೆ ಕರಾಳ..?

October 23, 2025
Next Post
ದೇವನಹಳ್ಳಿ ಭೂ ಹೋರಾಟ ರೈತರಿಗೆ ಆಘಾತ ಸುದ್ದಿ ಕೊಟ್ಟ KIADB

ದೇವನಹಳ್ಳಿ ಭೂ ಹೋರಾಟ ರೈತರಿಗೆ ಆಘಾತ ಸುದ್ದಿ ಕೊಟ್ಟ KIADB

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada