ರಾಯಚೂರು: ಬಿಸಿಲನಾಡು ಎಂದೇ ಖ್ಯಾತಿಯಾಗಿರುವ ರಾಯಚೂರು ಜಿಲ್ಲೆಯ ಜನರು ಕಳೆದ 15 ವರ್ಷಗಳಲ್ಲಿಯೇ ದಾಖಲಾಗದ ಉರಿ ಬಿಸಿಲನ್ನು ಅನುಭವಿಸಿದ್ದಾರೆ.
ರಾಯಚೂರಿನಲ್ಲಿ (Raichur) 15 ವರ್ಷಗಳಲ್ಲೇ ಈ ಬಾರಿ ದಾಖಲೆಯ ಅತೀ ಹೆಚ್ಚು ತಾಪಮಾನ ಕಂಡು ಬಂದಿದೆ. ರಾಯಚೂರು ತಾಲೂಕಿನಲ್ಲಿ 45 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಅಲ್ಲದೇ, ಮುಂದಿನ ಮೂರು ದಿನಗಳಲ್ಲಿ 43 ರಿಂದ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರ್ನಾಟಕದ ಭಾಗದ ಬಹುತೇಕ ಎಲ್ಲ ಜಿಲ್ಲೆ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಮುಂದಿನ 5 ದಿನ ಬಿಸಿ ಗಾಳಿ (Heat Wave) ಬೀಸಲಿದೆ ಎಂದು ಮುನ್ಸೂಚೆ ನೀಡಲಾಗಿದೆ.
ಬಿಸಿಗಾಳಿಯಿಂದಾಗಿ ತಾಪಮಾನ ಹೆಚ್ಚಾಗಿದೆ. ಹೀಗಾಗಿ ಬೆಳಗ್ಗೆ 11:30 ರಿಂದ ಮಧ್ಯಾಹ್ನ 3 ರ ವರೆಗೆ ಅನಗತ್ಯವಾಗಿ ಮನೆಯಿಂದ ಯಾರೂ ಹೊರ ಬರದಂತೆ ಹವಾಮಾನ ಇಲಾಖೆ ಹಾಗೂ ರಾಯಚೂರು ಕೃಷಿ ವಿವಿ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.