ಬಿಜೆಪಿಯ ಬಂಡಾಯ ಪಡೆ ದೆಹಲಿಯಲ್ಲಿ ಬೀಡು ಬಿಟ್ಟಿದೆ. ರೆಬೆಲ್ಸ್ ನಾಯಕರು ಇಂದು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ.ಎಲ್ ಸಂತೋಷ್ ಸೇರಿದಂತೆ ಹಲವು ನಾಯಕರನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೂ ರೆಬೆಲ್ಸ್ ನಾಯಕರು ಯತ್ನಿಸಿದ್ದಾರೆ. ವಿಜಯೇಂದ್ರ ನಾಯಕತ್ವದ ವಿರುದ್ಧ ಸಮರ ಸಾರಿದ್ದು, ವಿಜಯೇಂದ್ರ ವಿರುದ್ಧ ಹಲವು ವಿಚಾರಗಳ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಬಣ ಬಡಿದಾಟ ಮುಂದುವರಿದಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ರೆಬೆಲ್ಸ್ ನಾಯಕರು ಸಿದ್ಧತೆ ನಡೆಸಿದ್ದಾರೆ. ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ನಿನ್ನೆ ಹೈಕಮಾಂಡ್‌ನ ಹಲವು ನಾಯಕರನ್ನ ಭೇಟಿ ಮಾಡಿದ್ದೇವೆ. ಹೈಕಮಾಂಡ್ಗೆ ಎಲ್ಲವನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಕೊನೆಯದಾಗಿ ಹೈಕಮಾಂಡ್ ನಾಯಕರು ಏನು ತೀರ್ಮಾನ ಕೈಗೊಳ್ತಾರೋ ಅದನ್ನು ನಾವು ತಲೆ ಬಾಗಿ ಸ್ವೀಕಾರ ಮಾಡ್ತೇವೆ ಎಂದಿದ್ದಾರೆ.
ಬಿಜೆಪಿ ರೆಬೆಲ್ ನಾಯಕರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳದ ವಿಚಾರದ ಬಗ್ಗೆ ಮಾತನಾಡಿದ ಸಿ.ಟಿ ರವಿ, ಪಕ್ಷದ ಬಗ್ಗೆ ನಮಗೆ ಗೌರವ ಇದೆ. ಸೈದ್ದಾಂತಿಕ ಕಾರಣಕ್ಕೆ ಬಿಜೆಪಿಯನ್ನ 35 ವರ್ಷಗಳಿಂದ ಆಯ್ಕೆ ಮಾಡಿಕೊಂಡಿದ್ದೇವೆ. ಪಕ್ಷವನ್ನ ಸರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ. ಅವರ ಮನಸ್ಸಿನಲ್ಲಿ ಏನಿದೆ ಅಂತ ನಾನು ಹೇಳೋಕೆ ಆಗೊಲ್ಲ. ಹೈಕಮಾಂಡ್ ನಾಯಕರೇ ಹೇಳಬೇಕು. ಪಕ್ಷದ ಆಂತರಿಕ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಸಂಕಷ್ಟ ಕೂಡ ನಮ್ಮ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಬರುವುದು ಎಂದಿದ್ದಾರೆ.
ದೆಹಲಿಯಲ್ಲಿರುವ ಬಿಜೆಪಿ ಅತೃಪ್ತ ಬಣ ಸೇರಿಕೊಂಡಿದ್ದಾರೆ ಮತ್ತೊಬ್ಬ ಬಿಜೆಪಿ ಹಿರಿಯ ನಾಯಕ, ಮಾಜಿ ಸಂಸದ ಜಿಎಂ ಸಿದ್ದೇಶ್ವರ್. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದ್ದಾರೆ ಸಿದ್ದೇಶ್ವರ್. ದೆಹಲಿಗೆ ತೆರಳುವ ಮುನ್ನಾ ಏರ್ಪೊರ್ಟ್‌ನಲ್ಲಿ ಸಿದ್ದೇಶ್ವರ್ ಮಾತನಾಡಿ, ಹೈಕಮಾಂಡ್‌ನವರು ನನ್ನ ಕೇಳಿದ್ರೆ ಖಂಡಿತಾ ಏನ್ ಹೇಳಬೇಕು ಹೇಳ್ತಿನಿ ಎಂದಿದ್ದಾರೆ.
ಒಬ್ಬಬ್ಬರು ಒಂದು ಹೇಳಿಕೆ ಅನ್ನೋ ರೀತಿ ನಾವು ಹೇಳಿಕೆ ಕೊಡೋದಿಲ್ಲ. ನಮ್ಮ ಲೀಡರ್ ಯತ್ನಾಳ್, ಅವರು ಮಾತನಾಡ್ತಾರೆ ಎಂದಿರುವ ಸಿದ್ದೇಶ್ವರ್, ಅವರು ಏನ್ ಹೇಳ್ತಾರೋ ಅದನ್ನ ನಾವು ಹೇಳ್ತೇವೆ. ನಾನು ಮಾಜಿ ಎಂಪಿ ಸದ್ಯಕ್ಕೆ ಮಾತ್ರ ರಾಜಕೀಯ ನಿವೃತ್ತಿಯಾಗಿದ್ದೇನೆ. ಯಾವುದೇ ಪಾರ್ಟಿಯಲ್ಲಿ ಆಗಲಿ ಇದು ಒಳ್ಳೆಯ ಬೆಳವಣಿಗೆಯಲ್ಲ, ಮೊದಲೇ ಹೈಕಮಾಂಡ್ ಇದನ್ನ ದಮನ ಮಾಡಬೇಕಿತ್ತು. ಇಲ್ಲಿವರೆಗೆ ಬಿಟ್ಟು ಏನೇ ಮಾಡಿದ್ರು, ಮುಂದೆ ಪಾರ್ಟಿಯಲ್ಲಿ ಕಷ್ಟ ಹಾಗುತ್ತದೆ. ರಾಜ್ಯದಲ್ಲಿರೋ ಹಿರಿಯ ನಾಯಕರು ಇದನ್ನ ತಣ್ಣಗೆ ಮಾಡಬೇಕಿತ್ತು, ಆದ್ರೆ ಮಾಡಲಿಲ್ಲ ಎಂದಿದ್ದಾರೆ.