ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವರ್ಷ ಪೂರ್ತಿ ಸಮರ್ಥಿಸಿಕೊಂಡು, ಆ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಮಾಡಿದ ರೈತರನ್ನು ಭಯೋತ್ಪಾದಕರು ಎಂದು ಟೀಕಿಸಿದ್ದ ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಪಕ್ಷ, ಇದೀಗ ದಿಢೀರನೇ ಯೂ ಟರ್ನ್ ಹೊಡೆದು, ರೈತ ಪರ ಕಾಳಜಿಯ ಮಂತ್ರ ಪಠಿಸುತ್ತಿದ್ದಾರೆ.
ಹಾಗೇ ರೈತಪರವಾದ ಮತ್ತು ರೈತರ ಬದುಕು ಸುಧಾರಣೆಯ ಗುರಿ ಹೊಂದಿದ್ದ ಮೂರು ಕೃಷಿ ಕಾಯ್ದೆಗಳ ಕುರಿತು ದೇಶದ ಕೆಲವು ರೈತರಿಗೆ ಮನವರಿಕೆ ಮಾಡುವಲ್ಲಿ ತಾವು ಸೋತಿದ್ದಾಗಿ ಹೇಳಿಕೊಂಡಿರುವ ಮೋದಿಯವರು, ಆ ಹಿನ್ನೆಲೆಯಲ್ಲಿ ವಿವಾದಿತ ಕಾಯ್ದೆಗಳನ್ನು ವಾಪಸು ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ಆ ಮೂಲಕ ದೇಶದ ಬಹುಸಂಖ್ಯಾತ ಸಮುದಾಯವಾದ ಕೃಷಿಕರ ವಿಶ್ವಾಸ ಗಳಿಸುವಲ್ಲಿ ತಾವು ವಿಫಲರಾಗಿರುವುದಾಗಿ ಪರೋಕ್ಷವಾಗಿ ಅವರು ಒಪ್ಪಿಕೊಂಡಂತಾಗಿದೆ.
ಇಂತಹ ವಿಶ್ವಾಸವಿಲ್ಲದ ಅಪನಂಬಿಕೆಯ ಕಾರಣಕ್ಕಾಗಿಯೇ ರೈತ ಹೋರಾಟದ ನೇತೃತ್ವದ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು, ಪ್ರಧಾನಿಯವರು ಏನೇ ಹೇಳಿದರೂ ಅಧಿಕೃತವಾಗಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಸಂಬಂಧ ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸುವವರೆಗೆ ತಮ್ಮ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೋರಾಟ ಯಥಾ ಪ್ರಕಾರ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಆ ಮೂಲಕ ದೇಶದ ಪ್ರಧಾನಮಂತ್ರಿಗಳ ಆಶ್ವಾಸನೆ, ಭರವಸೆಗಳನ್ನೇ ನೆಚ್ಚಿ ತಾವು ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದ್ದು, ರೈತ ನಾಯಕರ ಈ ನಿಲುವು, ಪ್ರಧಾನಿ ಮೋದಿಯವರ ವಿಶ್ವಾಸ ಮತ್ತು ನಂಬಿಕೆಯ ವಿಷಯಕ್ಕೆ ತಾಳೆಯಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಲ್ಲಿ ಒಬ್ಬೊರಾದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಸಿಂಗ್ ಟಿಕಾಯತ್, ಮೂರು ವಿವಾದಿತ ಕಾಯ್ದೆಗಳನ್ನು ಸಂಸತ್ತಿನಲ್ಲಿ ಅಧಿಕೃತವಾಗಿ ರದ್ದುಪಡಿಸಿದ ಬಳಿಕವೇ ತಾವು ಹೋರಾಟ ಕೈಬಿಡುವುದಾಗಿ ಹೇಳಿದ್ದಾರೆ. ಜೊತೆಗೆ ತಮ್ಮ ಹೋರಾಟ ಕೇವಲ ಮೂರು ವಿವಾದಿತ ಕಾಯ್ದೆಗಳ ಕುರಿತಾಗಿ ಮಾತ್ರವಲ್ಲ; ಕನಿಷ್ಟ ಬೆಂಬಲ ಬೆಲೆ(ಎಂಎಸ್ ಪಿ) ಕುರಿತ ಕಾಯ್ದೆ ಜಾರಿಯಾಗಬೇಕು ಎಂಬುದು ಕೂಡ ತಮ್ಮ ಪ್ರಮುಖ ಬೇಡಿಕೆ. ಹಾಗಾಗಿ ಮೂರು ಕಾಯ್ದೆಗಳನ್ನು ವಾಪಸ್ ಪಡೆದ ಮಾತ್ರಕ್ಕೆ ರೈತರ ಬೇಡಿಕೆಗಳೆಲ್ಲಾ ಈಡೇರಿಬಿಟ್ಟಿವೆ ಎಂದೇನಲ್ಲ ಎಂದು ಟಿಕಾಯತ್ ಹೇಳಿದ್ದಾರೆ.
ಟಿಕಾಯತ್ ಅವರ ಈ ಮಾತುಗಳ ಬೆನ್ನಲ್ಲೇ, ರೈತ ಹೋರಾಟದ ಒಂದು ವರ್ಷಾಚರಣೆಯ ಹಿನ್ನೆಲೆಯಲ್ಲಿ ನವೆಂಬರ್ 29ರಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ದಿನದಿಂದ ಪ್ರತಿ ದಿನವೂ ಸಂಸತ್ ಭವನಕ್ಕೆ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ತಮ್ಮ ಈ ಮೊದಲಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈತ ನಾಯಕರು ಸ್ಪಷ್ಟಪಡಿಸಿದ್ದಾರೆ. ಹಾಗೇ ಟಿಕ್ರಿ ಮತ್ತು ಇತರೆ ದೆಹಲಿ ಗಡಿ ಪ್ರದೇಶಗಳಲ್ಲಿ ಕಳೆದ ಒಂದು ವರ್ಷದಿಂದ ಬೀಡುಬಿಟ್ಟಿರುವ ರೈತರು ಎಂದಿನಂತೆ ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ಸಂಸತ್ತಿನಲ್ಲಿ ಅಧಿಕೃತವಾಗಿ ಮೂರು ಕಾಯ್ದೆಗಳನ್ನು ರದ್ದುಮಾಡುವವರೆಗೆ ಹೋರಾಟದ ಸ್ವರೂಪದಲ್ಲಾಗಲೀ, ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಯೋಜಿಸಿರುವ ರ್ಯಾಲಿಗಳಾಗಲೀ ಯಾವುದೂ ಬದಲಾಗದು ಎಂದು ಶನಿವಾರ ಹೇಳಿದ್ದಾರೆ.
ಹಾಗೇ ನವೆಂಬರ್ 26ರಂದು ಹೋರಾಟ ಆರಂಭದ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೆಹಲಿ ಗಡಿಯಲ್ಲಿ ಹಮ್ಮಿಕೊಂಡಿರುವ ರೈತ ಶಕ್ತಿ ಪ್ರದರ್ಶನದ ಪ್ರತಿಭಟನೆಯ ನಿರ್ಧಾರದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದೂ ಹೋರಾಟಗಾರರು ಹೇಳಿದ್ದಾರೆ.
ಈ ನಡುವೆ, ಕೃಷಿ ಕಾಯ್ದೆಗಳನ್ನು ವಾಪಸು ಪಡೆಯುವ ಮೋದಿಯವರ ಹೇಳಿಕೆಯಲ್ಲಿ ತಮಗೆ ನಂಬಿಕೆಯೂ ಇಲ್ಲ. ಈ ಹಿಂದೆ ಅವರು ಯೋಧರ ವೇತನದ ವಿಷಯದಲ್ಲಿ(ಒನ್ ರ್ಯಾಂಕ್ ಒನ್ ಪೆನ್ಷನ್) ಕೂಡ ಇಂತಹದ್ದೇ ಭರವಸೆಗಳನ್ನು ನೀಡಿ ದೇಶ ಕಾಯುವ ಯೋಧರನ್ನೂ, ದೇಶದ ಜನರನ್ನು ಯಾಮಾರಿಸಿದ್ದಾರೆ. ಹಾಗಾಗಿ ಅವರ ಮಾತಿನ ಮೇಲೆ ನಂಬಿಕೆ ಇಲ್ಲ, ಸಂಸತ್ತಿನಲ್ಲಿ ಕಾಯ್ದೆಗಳು ರದ್ದಾಗಿ ಅಧಿಕೃತ ಆದೇಶ ಹೊರಬಿದ್ದ ಬಳಿಕವೂ ತಮ್ಮ ಹೋರಾಟದ ಕುರಿತ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ರೈತ ನಾಯಕ ಸುದೇಶ್ ಗೋಯತ್ ಹೇಳಿದ್ದಾರೆ. ಈ ಮಾತುಗಳಿಗೆ ದನಿಗೂಡಿಸಿರುವ ಮತ್ತೊಬ್ಬ ರೈತ ನಾಯಕ ಯಧುವೀರ್ ಸಿಂಗ್ ಕೂಡ “ಹೋರಾಟದ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಈ ಮೊದಲೇ ಪೂರ್ವನಿರ್ಧಾರಿತವಾದಂತೆ ಭಾನುವಾರ, ಹೋರಾಟದ ವರ್ಷಾಚರಣೆಯ ಕುರಿತ ರೈತ ನಾಯಕರ ಸಮಾಲೋಚನಾ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು” ಎಂದೂ ಹೇಳಿದ್ದಾರೆ.
ಒಟ್ಟಾರೆ, ರೈತ ಹೋರಾಟದ ಬಿಸಿ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಬಾರೀ ಬಿಸಿಯೇರಿಸಲಿದೆ. ಮತ್ತು ರಾಜಧಾನಿ ಅಧಿಕಾರದ ಪಡಸಾಲೆಯಲ್ಲಿ ಏಳಬಹುದಾದ ಆ ಬಿಸಿ ಇನ್ನೇನು ಚುನಾವಣೆಗೆ ತಯಾರಾಗುತ್ತಿರುವ ಬಿಜೆಪಿ ಹಿಂದುತ್ವ ಬ್ರಾಂಡ್ ರಾಜಕಾರಣದ ಪ್ರಯೋಗಶಾಲೆ ಉತ್ತರಪ್ರದೇಶ ಮತ್ತು ರೈತರ ಹೋರಾಟದ ಕುದಿನೆಲ ಪಂಜಾಬಿನಲ್ಲಿ ಭರ್ಜರಿ ಕಾಳ್ಗಿಚ್ಚನ್ನೇ ಹೊತ್ತಿಸುವ ಸೂಚನೆ ನೀಡಿದೆ. ಆ ಕಾಳ್ಗಿಚ್ಚಿನ ಭೀತಿಯಲ್ಲೇ ಮೋದಿಯವರು ಬೆಚ್ಚಿಬಿದ್ದಿದ್ದಾರೆ. ಹಾಗೆ ಬೆಚ್ಚಿದ್ದರಿಂದಲೇ ದಿಢೀರನೇ ಕೃಷಿ ಕಾಯ್ದೆ ರದ್ದು ಘೋಷಣೆಯ ಮೂಲಕ ಚುನಾವಣಾ ಕಣದಲ್ಲಿ ಎದ್ದಿರುವ ಬಿರುಗಾಳಿಯನ್ನು ಶಮನ ಮಾಡುವ ಯತ್ನ ಮಾಡಿದ್ದಾರೆ.
ಆದರೆ, ರೈತ ನಾಯಕರು ಮೋದಿಯವರ ನಿರೀಕ್ಷೆಯಂತೆ ಕಾಯ್ದೆ ವಾಪಸ್ಸಿನ ನಿರ್ಧಾರಕ್ಕೆ ಸ್ಪಂದಿಸುವ ಬದಲಾಗಿ ಎಂದಿನಂತೆ ಹೋರಾಟ ಮುಂದುವರಿಸುವ ಮಾತನಾಡಿದ್ದಾರೆ. ಜೊತೆಗೆ, ಚುನಾವಣಾ ಹೊಸ್ತಿಲಲ್ಲಿರುವ ಉತ್ತರಪ್ರದೇಶದಲ್ಲಿ ತಮ್ಮ ರೈತ ಮಹಾ ಪಂಚಾಯತ್ ಮತ್ತೆ ಪುರಾರಂಭಿಸುವ ಮಾತುಗಳನ್ನೂ ಆಡಿದ್ದಾರೆ. ಸಹಜವಾಗೇ ರೈತ ನಾಯಕರ ಈ ನಿಲುವು ಪ್ರಧಾನಿ ಮೋದಿ ಮತ್ತು ಆಡಳಿತ ಪಕ್ಷ ಬಿಜೆಪಿಯಲ್ಲಿ ಸೃಷ್ಟಿಸಲಿರುವ ತಳಮಳ ಕುತೂಹಲ ಹುಟ್ಟಿಸಿದೆ.