ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಪ್ರಸ್ತುತ ರೆಪೋದರ ಶೇ.4ರಷ್ಟು, ರಿವರ್ಸ್ ರೆಪೋದರವು ಶೇ.3.35ರಷ್ಟಿದೆ. ಬ್ಯಾಂಕುಗಳು ಆರ್ಬಿಐನಿಂದ ತುರ್ತು ಬಳಕೆಗೆ ಪಡೆಯುವ ಎಂಎಸ್ಎಫ್ ದರವೂ ಶೇ.4.25 ರಷ್ಟು ಮುಂದುವರೆಯಲಿದೆ. ಆರು ಸದಸ್ಯರ ಹಣಕಾಸು ನೀತಿ ಸಮಿತಿಯಲ್ಲಿ ಐದು ಮಂದಿ ಯಥಾಸ್ಥಿತಿ ಕಾಯ್ದುಕೊಳ್ಳುವ ಪರವಾಗಿ ಮತಹಾಕಿದ್ದಾರೆ. ಬಡ್ಡಿದರ ನೀತಿಯನ್ನು ಪರಿಸ್ಥಿತಿಗೆ ಅನುಗುಣವಾಗಿ ಏರಿಳಿಸುವ ಮುಕ್ತ ಅವಕಾಶ ಇರುವ ನಿಲುವನ್ನು ಮುಂದುವರೆಸಿದೆ. ಹಣಕಾಸು ನೀತಿ ಸಮಿತಿ ಸಭೆಯ ನಂತರ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನಿರ್ಧಾರಗಳನ್ನು ಪ್ರಕಟಿಸಿದರು.
ಹಣಕಾಸು ಮಾರುಕಟ್ಟೆಯ ತಜ್ಞರು ಡಿಸೆಂಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ 20 ರಿಂದ 50 ಅಂಶಗಳಷ್ಟು (ಅಂದರೆ ಶೇ. 0.20ರಿಂದ 0.50ರಷ್ಟು) ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದರು. ಮಾರುಕಟ್ಟೆಯ ನಿರೀಕ್ಷೆಗೆ ವ್ಯತಿರಿಕ್ತವಾಗಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡಿದೆ. ಆರ್ಬಿಐ ನಿರ್ಧಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಷೇರುಪೇಟೆ ದಿನದ ವಹಿವಾಟಿನಲ್ಲಿ ಸುಮಾರು ಸೆನ್ಸೆಕ್ಸ್ 1000 ಅಂಶಗಳು ಮತ್ತು ನಿಫ್ಟಿ ಬ್ಯಾಂಕ್ 550 ಅಂಶಗಳಷ್ಟು ಏರಿಕೆ ದಾಖಲಿಸಿದವು.
ಓಮಿಕ್ರಾನ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ದರ ಏರಿಕೆ ಮಾಡದಿರುವ ನಿರ್ಧಾರವನ್ನು ಆರ್ಬಿಐ ಹಣಕಾಸು ಸಮಿತಿಯು ಕೈಗೊಂಡಿದೆ. ಇದರೊಂದಿಗೆ ಆರ್ಬಿಐ ಸತತ ಒಂಭತ್ತನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಡ್ಡಿದರ ಇಷ್ಟು ಸುಧೀರ್ಘ ಅವಧಿಗೆ ಸ್ಥಿರವಾಗಿರುವುದು ಇದೇ ಮೊದಲಾಗಿದೆ. 2020 ಮೇ 22ರಂದು ಆರ್ಬಿಐ ಬಡ್ಡಿದರವನ್ನು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿಕೆ ಮಾಡಿತ್ತು.
ಪ್ರಸ್ತುತ ಬಡ್ಡಿದರ ಕನಿಷ್ಠ ಮಟ್ಟದಲ್ಲೇ ಇರುವುದರಿಂದ ಕೋವಿಡ್ ಸಂಕಷ್ಟದ ನಡುವೆಯೂ ವಿವಿಧ ವಲಯಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಗೃಹಸಾಲ, ವಾಹನಸಾಲ, ವೈಯಕ್ತಿಕ ಸಾಲ ಸೇರಿದಂತೆ ಸಾಲಗಳ ಮೇಲಿನ ಬೇಡಿಕೆ ಕೋವಿಡ್ ಪೂರ್ವದ ಮಟ್ಟಕ್ಕೆ ಏರಿದೆ. ಒಂದು ವೇಳೆ ಬಡ್ಡಿದರ ಏರಿಕೆಯಾದರೆ ಸಾಲದ ಮೇಲಿನ ಬೇಡಿಕೆ ಕುಸಿಯುವ ಸಾಧ್ಯತೆಯನ್ನೂ ಆರ್ಬಿಐ ನಿರೀಕ್ಷಿಸಿದೆ. ಈ ಕಾರಣಕ್ಕಾಗಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಡಿಪಿ ಬೆಳವಣಿಗೆ ದರವನ್ನು ಶೇ.9.5ರಷ್ಟಾಗಲಿದೆ ಎಂಬ ಹಿಂದಿನ ಮುನ್ನಂದಾಜನ್ನು ಕಾಯ್ದುಕೊಂಡಿದೆ. 2022ನೇ ವಿತ್ತೀಯ ವರ್ಷದ ಮೂರನೇ ತ್ರೈಮಾಸಿಕದ ಜಿಡಿಪಿ ಬೆಳವಣೆಯನ್ನುಶೇ.6.8ರಿಂದ ಶೇ.6.6ಕ್ಕೆ ಪರಿಷ್ಕರಿಸಿದೆ. ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಮುನ್ನಂದಾಜನ್ನು ಶೇ.6.1ರಿಂದ ಶೇ.6ಕ್ಕೆ ತಗ್ಗಿಸಿದೆ.
2023ನೇ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ.17.2ರಷ್ಟಾಗಲಿದೆ ಎಂದು ಮುನ್ನಂದಾಜು ಮಾಡಿದೆ. ಎರಡನೇ ತ್ರೈಮಾಸಿಕದಲ್ಲಿ ಬೆಳವಣಿಗೆಯು ಶೇ.7.8 ಎಂದು ಅಂದಾಜಿಸಿದೆ. 2022ನೇ ವಿತ್ತೀಯ ವರ್ಷದ ಹಣದುಬ್ಬರ ಪ್ರಮಾಣವನ್ನು ಶೇ.5.3ರ ಮುನ್ನಂದಾಜನ್ನು ಕಾಯ್ದುಕೊಳ್ಳಲಾಗಿದೆ.
2023ನೇ ಸಾಲಿನ ಮೊದಲ ತ್ರೈಮಾಸಿಕದ ಹಣದುಬ್ಬರ ಗ್ರಾಹಕದರ ಸೂಚ್ಯಂಕವನ್ನು ಹಿಂದಿನ ಮುನ್ನಂದಾಜು ಶೇ.5.2ರ ಬದಲಿಗೆ ಶೇ.5ಕ್ಕೆ ತಗ್ಗಿಸಲಾಗಿದೆ. ದ್ವಿತೀಯ ತ್ರೈಮಾಸಿಕದಲ್ಲೂ ಶೇ.5ರಷ್ಟು ಇರಲಿದೆ ಮುನ್ನಂದಾಜು ಮಾಡಲಾಗಿದೆ.
ತೈಲದರಗಳು ಸ್ಥಿರಗೊಳ್ಳುತ್ತಿವೆ, ಉಪಭೋಗ ಪ್ರಮಾಣವು ವೃದ್ಧಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆಯು ತ್ವರಿತವಾಗಿ ಚೇತರಿಸಿಕೊಳ್ಳುತ್ತಿದೆ. ಭಾರತದ ಆರ್ಥಿಕತೆ ಚೇತರಿಕೆ ಏರುಹಾದಿಗೆ ಬಂದಿದೆ. ಸರ್ಕಾರದ ಉಪಭೋಗವು ಅಕ್ಟೋಬರ್ 2021ರಲ್ಲಿ ವೃದ್ಧಿಸಿದೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕ ಕಡಿತವು ಖಾಸಗಿ ವಲಯದ ಹೂಡಿಕೆಗೆ ಉತ್ತೇಜನ ನೀಡಿದೆ. ಕಾರ್ಪೊರೆಟ್ ಗಳು ತಮ್ಮ ಬಂಡವಾಳವನ್ನು ಹೂಡಿಕೆಯನ್ನು ಪರಿಷ್ಕರಿಸುತ್ತಿವೆ. ಸರ್ಕಾರದ ಬಂಡವಾಳ ವೆಚ್ಚ ಪ್ರಮಾಣ ಹೆಚ್ಚುತ್ತಿರುವುದರಿಂದ ಖಾಸಗಿ ವಲಯದ ಹೂಡಿಕೆಯೂ ವೃದ್ದಿಸಲಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.





