ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಜಹಾಂಗೀರ್‌ಪುರಿಯಲ್ಲಿ ಕೆಡವಲಾದ ಅತಿಕ್ರಮಣ ಕಟ್ಟಡಗಳಿಗೆ ಬಿಜೆಪಿಯನ್ನು ಹೊಣೆ ಮಾಡಿದೆ. ಮಾತ್ರವಲ್ಲ, ದೇಶದಲ್ಲಿ ಗೂಂಡಾಗಿರಿಯನ್ನು ಕೊನೆಗೊಳಿಸಬೇಕಾದರೆ, ಬಿಜೆಪಿ ಕಛೇರಿಯನ್ನು ನೆಲಸಮಗೊಳಿಸಬೇಕು ಎಂದು ಎಎಪಿ ನಾಯಕ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಧ್ವಂಸ ಕಾರ್ಯಾಚರಣೆಯನ್ನು “ನಾಟಕ” ಎಂದು ಕರೆದಿದ್ದು, 15 ವರ್ಷಗಳಿಂದ ಲಂಚ ಪಡೆದು ಈ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡಿದ ನಾಯಕರ ಮನೆಗಳ ಮೇಲೆ ಬಿಜೆಪಿ ಬುಲ್ಡೋಜರ್‌ಗಳನ್ನು ಯಾವಾಗ ಬಳಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಆ ನಾಯಕರ ಮನೆಗಳನ್ನೂ ಕೆಡವಿ, ಅವರ ಮನೆಗಳು ಯಾವಾಗ ಬುಲ್ಡೋಜರ್ ಆಗುತ್ತವೆ ಎನ್ನುವುದನ್ನು ಬಿಜೆಪಿಯೇ ಹೇಳಬೇಕು ಎಂದು ಅವರ ಕೇಳಿದ್ದಾರೆ. ಆ ಮೂಲಕ ದಶಕಕ್ಕೂ ಹೆಚ್ಚು ಕಾಲದಿಂದ ದಿಲ್ಲಿ ಪೌರ ಸಂಸ್ಥೆಗಳನ್ನು ನಡೆಸುತ್ತಿರುವ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅವರು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಅಶಾಂತಿ ಎಬ್ಬಿಸಿರುವುದೇ ಬಿಜೆಪಿ ಎಂಬುದು ಎಎಪಿಯ ನಿಲುವಾಗಿದೆ ಎಂದು ಹೇಳಿದ ಸಿಸೋಡಿಯಾ, ಗೂಂಡಾಗಿರಿಯನ್ನು ಕೊನೆಗೊಳಿಸಲು ನಾವು ಬಿಜೆಪಿ ಕೇಂದ್ರ ಕಚೇರಿಯನ್ನು ನೆಲಸಮಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂದು ಪ್ರಶ್ನಿಸಿದ ಅವರು, ಇಂದು ಆರೋಗ್ಯ, ಶಿಕ್ಷಣ ಅಥವಾ ಐಟಿ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಗೂಂಡಾಗಿರಿ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದರು.
ಈ ಹಿಂದೆ ಎಎಪಿ ಸಂಸದ ರಾಘವ್ ಚಡ್ಡಾ ಅವರು ಗೃಹ ಸಚಿವ ಅಮಿತ್ ಶಾ ಕೋಮುಗಲಭೆಗಳನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. “ಗೃಹ ಸಚಿವರೇ ಈ ಗಲಭೆಗಳನ್ನು ರೂಪಿಸುತ್ತಿದ್ದಾರೆ. ನೀವು ಬುಲ್ಡೋಜರ್ ಅನ್ನು ಬಳಸಲು ಬಯಸಿದರೆ, ಗೃಹ ಸಚಿವರ ಮನೆಯನ್ನು ಕೆಡವಲು ಅದನ್ನು ಬಳಸಿ. ಹಾಗಾಗಿ ಗಲಭೆಗಳು ನಿಲ್ಲುತ್ತವೆ” ಎಂದು ಎಎಪಿ ನಾಯಕ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಬಿಜೆಪಿ ಆಡಳಿತದ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಜಹಾಂಗೀರ್‌ಪುರಿಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಒಂಬತ್ತು ಬುಲ್‌ಡೋಜರ್‌ಗಳನ್ನು ಬಳಸಿ ಗಲಭೆಯ ಶಂಕಿತ ಆರೋಪಿಗಳಿಗೆ ಸೇರಿದ ಮನೆ, ಆಸ್ತಿಗಳನ್ನು ಕೆಡವಲು ಪ್ರಾರಂಭಿಸಿತ್ತು. ಸ್ವಲ್ಪ ಸಮಯದ ನಂತರ, ತುರ್ತು ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ತ್ರಿಸದಸ್ಯ ಸುಪ್ರೀಂ ಕೋರ್ಟ್ ಪೀಠ, ಮುಂದಿನ ವಿಚಾರಣೆ ನಡೆಯುವವರೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿತ್ತು.
ಆದರೆ, ಜಹಾಂಗೀರ್‌ಪುರಿಯಲ್ಲಿನ ಎಂಸಿಡಿ ಅಧಿಕಾರಿಗಳು, ಆದೇಶದ ಪ್ರತಿಯನ್ನು ಸ್ವೀಕರಿಸಿಲ್ಲ ಎಂದು ಹೇಳಿ ಹಲವಾರು ಅಂಗಡಿಗಳನ್ನು ಮಾತ್ರವಲ್ಲದೆ ಮಸೀದಿಯ ಗೇಟ್‌ಗಳು ಮತ್ತು ಗೋಡೆಯನ್ನು ಸಹ ಧ್ವಂಸಗೊಳಿಸಲು ಮುಂದಾದರು ಎಂದು ವರದಿಯಾಗಿದೆ.