ಸಂಘಟಿತ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ತಂಡ 62 ರನ್ ಗಳಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡವನ್ನು ಸೋಲಿಸಿ ಅಗ್ರಸ್ಥಾನಿಯಾಗಿ ಅಧಿಕೃತವಾಗಿ ಐಪಿಎಲ್ -2022 ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಪುಣೆಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ಲಕ್ನೋ ಸೂಪರ್ ಗೈಂಟ್ಸ್ 13,4 ಓವರ್ ಗಳಲ್ಲಿ 82 ರನ್ ಗಳಿಗೆ ಪತನಗೊಂಡಿತು.

ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ 12 ಪಂದ್ಯಗಳಿಂದ 9 ಜಯ ಹಾಗೂ 3 ಸೋಲಿನೊಂದಿಗೆ 18 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಲಕ್ನೋ ಸೂಪರ್ ಗೈಂಟ್ಸ್ ತಂಡ 12 ಪಂದ್ಯಗಳಿಂದ 8 ಜಯ ಹಾಗೂ 4 ಸೋಲಿನೊಂದಿಗೆ 16 ಅಂಕದೊಂದಿಗೆ 2ನೇ ಸ್ಥಾನ ಪಡೆಯಿತು.
ರಶೀದ್ ಖಾನ್ 4 ವಿಕೆಟ್ ಪಡೆದು ಲಕ್ನೋ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಲಕ್ನೋ ಪರ ದೀಪಕ್ ಹೂಡಾ 26 ಎಸೆತಗಳಲ್ಲಿ 3 ಬೌಂಡರಿ ಸೇರಿದ 27 ರನ್ ಗಳಿಸಿದ್ದೇ ವೈಯಕ್ತಿಕ ಗರಿಷ್ಠ ಸಾಧನೆ ಆಯಿತು. ಅವಿಶ್ ಖಾನ್ (12, 2 ಸಿಕ್ಸರ್) ಕ್ವಿಂಟನ್ ಡಿ ಕಾಕ್ (11) ಹೊರತುಪಡಿಸಿ ಉಳಿದವರು ಎರಡಂಕಿಯ ಮೊತ್ತವನ್ನೂ ದಾಖಲಿಸದೇ ನಿರ್ಗಮಿಸಿದರು.