“ಕುಲವಂ ಪೇಳ್ವುದು ನಾಲ್ಗೆ” ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದನ್ನು ನೀವಾಡಿರುವ ಮಾತು ಪ್ರತಿಬಿಂಬಿಸುತ್ತಿದೆ. ಇದೇ ಏನು @BJP4India, @RSSorg ನಿಮ್ಮ ತಂದೆ-ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ. ಇದೇ ಏನು ನಿಮ್ಮ ಆಚಾರ-ವಿಚಾರ, ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ’ ಎಂಬ ದಾಸರವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ನೀವು ಬಂದು ನಿಂತಿರುವುದು ದುರಂತ ಎಂದು ಅನಂತ್ ಕುಮಾರ್ ಹೆಗ್ಡೆ (Ananthkumar hegde) ವಿರುದ್ಧ ರಾಮಲಿಂಗಾರೆಡ್ಡಿ (Ramalingareddy) ಎಕ್ಸ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಾತು ಆಡಿದರೆ ಹೋಯಿತು,ಮುತ್ತು ಉದುರಿದರೆ ಹೋಯಿತು ಎಂಬಂತೆ ನೀವು ಮುಖ್ಯಮಂತ್ರಿಗಳ (CM) ಬಗ್ಗೆ ಬಳಸಿರುವ ಪದ 6.50 ಕೋಟಿ ಕರ್ನಾಟಕದ ಜನತೆಯನ್ನು ಕುರಿತು ಆಡಿದ ಮಾತಾಗಿರುತ್ತದೆ. ಅವರಿಗೆ ಮಾಡಿದ ಅವಮಾನವಾಗಿತ್ತದೆ.ನೀವು ಆಡಿರುವ ಮಾತು, ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸಚಿವರಾಗಿದ್ದಾಗ (Central minister) ಸಂವಿಧಾನ (Constitution) ಬದಲಿಸುತ್ತೇವೆ, ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ. ಈಗ ಇಂತಹ ಮಾತು. ನಿಮಗಿದು ಮರ್ಯಾದೆ ತರುವುದಿಲ್ಲ. ಬಿಜೆಪಿ (BJP) ಪಕ್ಷಕ್ಕೆ ಕಿಂಚಿತ್ತಾದರೂ ಮಾನ-ಮರ್ಯಾದೆ, ಆಚಾರ ವಿಚಾರ ಇದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ನೀವು ನಾಡಿನ ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.
ನಿಮಗೆ ಸಂಸದರಲ್ಲ, ಯಾವುದೇ ಚುನಾಯಿತ ಪ್ರತಿನಿಧಿ ಆಗುವ ಯೋಗ್ಯತೆಯೂ ಇಲ್ಲ.ಬೇರೆಯವರಿಗೂ ಮಾತಾಡಲು ಬರುತ್ತದೆ. ಆದರೆ ನಿಮ್ಮ ಮಟ್ಟಕ್ಕೆ ಇಳಿಯುವುದು ಅನಾಗರಿಕತೆ ಆಗುತ್ತದೆ. ಇಷ್ಟು ದಿನ ಅಡ್ರೆಸ್ ಇಲ್ಲದಂತೆ ಕಳೆದು ಹೋಗಿದ್ದ ತಾವು ಈಗ ಚುನಾವಣೆ ಸಮಯದಲ್ಲಿ ಮತ ಗಳಿಸಲು ರೋಷ, ಆವೇಶದ ಮಾತುಗಳನ್ನು ಆಡುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಇರುವಷ್ಟು ಜನ ದಡ್ಡರಲ್ಲ ಎಂದು ಎಕ್ಸ್ ನಲ್ಲಿ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.