ಭಾರೀ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ ಅಕ್ಷಯ್ ಕುಮಾರ್ ನಟಿಸಿದ ರಾಮ್ ಸೇತು ಹಾಗೂ ಅಜಯ್ ದೇವಗನ್ ನಟಿಸಿದ ಥ್ಯಾಂಕ್ ಗಾಡ್ ಚಿತ್ರಗಳಲ್ಲಿ ಮೊದಲ ದಿನವೇ ಗ್ರಹಣ ಬಡಿದಿದೆ.
ಹಿಂದಿನ ಸಂಪ್ರದಾಯ ಮುರಿದು ಮಂಗಳವಾರ ದೀಪಾವಳಿಯ ಪ್ರಯುಕ್ತ ಬಿಡುಗಡೆ ಆದ ಎರಡೂ ಚಿತ್ರಗಳು ಪ್ರೇಕ್ಷಕರಿಗೆ ಭ್ರಮನಿರಸನ ಮೂಡಿಸಿದ್ದು, ಪೈಪೋಟಿಗೆ ಬಿದ್ದು ಒಂದೇ ದಿನ ಎರಡು ಚಿತ್ರಗಳು ಬಿಡುಗಡೆ ಆಗಿದ್ದು ಸೋಲಿನಲ್ಲೂ ಪೈಪೋಟಿಗೆ ಬಿದ್ದಿವೆ.
ರಾಮ್ ಸೇತು ಚಿತ್ರವನ್ನು ರಾಮ ಬಂದರೂ ಕಾಪಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ವಿವಾದಾತ್ಮಕ ರಾಮಸೇತು ಸೇತುವೆ ವಿವಾದ ಕಥೆ ಹೊಂದಿದೆ ಎಂದು ಹೇಳಲಾಗಿದ್ದ ಈ ಚಿತ್ರ ಫ್ಯಾಂಟಸಿ ಚಿತ್ರವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಿದೆ.
ಅಕ್ಷಯ್ ಕುಮಾರ್ ಮತ್ತು ಜಾಕ್ವೆಲಿನ್ ಫೆರ್ನಾಂಡೀಸ್ ಅವರಿದ್ದರೂ ಈ ಚಿತ್ರವನ್ನು ಕಾಪಾಡಲು ಸಾಧ್ಯವಿಲ್ಲ. ಚಿತ್ರದ ನಿರೂಪಣೆ ಅತ್ಯಂತ ಕಳಪೆಯಾಗಿದ್ದು, ಟ್ರೇಲರ್ ನಲ್ಲಿ ಎಲ್ಲಾ ಅಂಶಗಳನ್ನು ತೋರಿಸಲಾಗಿದ್ದು, ಚಿತ್ರದಲ್ಲಿ ಹೊಸತೇನೂ ಕಾಣುವುದಿಲ್ಲ.
ಮತ್ತೊಂದೆಡೆ ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿದ ಕಾಮಿಡಿ ಚಿತ್ರ ಜನರನ್ನು ನಗಿಸಲು ವಿಫಲವಾಗಿದೆ. ಚಿತ್ರದಲ್ಲಿ ಹಾಡುಗಳು ಕೂಡ ಗಮನ ಸೆಳೆಯದೇ ಇರುವುದು ಚಿತ್ರದ ಮೈನಸ್ ಪಾಯಿಂಟ್ ಎಂದು ಹೇಳಲಾಗಿದೆ. ಸಿನಿಮಾ ನಿರ್ದೇಶಕರೊಬ್ಬರು ಈ ಚಿತ್ರ ಹೋಂಮೇಡ್ ಚಿತ್ರದಂತಿದೆ. ಯಾವುದೇ ಭರವಸೆ ಮೂಡಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಮ್ ಸೇತು ಚಿತ್ರ ಮೊದಲ ದಿನ ಶೇ.17ರಿದ 22ರಷ್ಟು ಪಾಲು ಗಳಿಸಿದ್ದರೆ, ಥ್ಯಾಂಕ್ ಗಾಡ್ ಚಿತ್ರ ಶೇ.18ರಷ್ಟು ಪಾಲು ಗಳಿಸಿದೆ. ಚಿತ್ರದ ಮೊದಲ ದಿನದ ಪ್ರತಿಕ್ರಿಯೆ ಗಮನಿಸಿ ಪ್ರೇಕ್ಷಕರು ಸಿನಿಮಾ ಥಿಯೇಟರ್ ಗಳತ್ತ ಬರಬಹುದು ಎಂದು ನಿರೀಕ್ಷಿಸಲಾಗಿದೆ.