ಬೈಕ್ ಟ್ಯಾಕ್ಸಿ ವಿರೋಧಿಸಿ ಇಂದು ಹಲವು ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ 2.5 ಲಕ್ಷ, ರಾಜ್ಯದಲ್ಲಿ 3.5 ಲಕ್ಷ ಮಂದಿ ಆಟೋ ಚಾಲಕರಿದ್ದಾರೆ. ಬೈಕ್ ಟ್ಯಾಕ್ಸಿ ಬಂದರೆ ಆಟೋ ಚಾಲಕರಿಗೆ ತೊಂದರೆಯಾಗುತ್ತದೆ ಎಂದು ಇಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಚಳಿಗಾಲದ ಅದಿವೇಶನ ನಿನ್ನೆ ಮುಕ್ತಾಯವಾಗಿದ್ದು, ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ವಿಧಾನ ಮಂಡಲ ಅಧಿವೇಶನ ಮತ್ತೆ ಪ್ರಾರಂಭವಾಗಲಿದೆ ನಾನು ಈ ವಿಚಾರವನ್ನ ಸದನದಲ್ಲಿ ಪ್ರಶ್ನಿಸುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೈಕ್ ಟ್ಯಾಕ್ಸಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಮುಂಬರುವ ಚುನಾವಣೆ ನಂತರ ಬಿಜೆಪಿ ಸರ್ಕಾರ ಇರುವುದಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಆಗ ನಾವೇ ನಿಮಗೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳುತ್ತೇವೆ. ನಾನು ಕೂಡ ಸಾರಿಗೆ ಸಚಿವನಾಗಿದ್ದೆ. ಆಗ ನೀವು 10 ಬೇಡಿಕೆ ಇಟ್ಟರೆ ಅವುಗಳಲ್ಲಿ ಒಂಬತ್ತು ಬೇಡಿಕೆಗಳನ್ನಾದರೂ ನಾನು ಈಡೇರಿಸುತ್ತಿದ್ದೆ. ಆಟೋ ಚಾಲಕರಿಗೆ ಪರವಾನಿಗೆಗೆ 8ನೇ ತರಗತಿ ಮಾನದಂಡವಿತ್ತು. ಅದನ್ನು ವಿನಾಯಿತಿಗೊಳಿಸಿದ್ದು ನಾವೇ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜನರಪರವಾಗಿ, ಬಡವರು, ಶ್ರಮಿಕ ವರ್ಗದ ಪರವಾಗಿದೆ. ನಿಮ್ಮ ಜತೆ ನಾವು ಸದಾ ಜತೆಗಿದ್ದೇವೆ ಎಂದು ಕೆಲಸದ ಮೂಲಕ ತೋರಿಸಿದ್ದೇವೆ ಎಂದು ಹೇಳಿದ್ದಾರೆ.
ಬಿಜೆಪಿಯವರು ಬಣ್ಣ ಬಣ್ಣದ ಬಾಯಿ ಮಾತುಗಳನ್ನು ಹೇಳುತ್ತಾರೆ. ನಮ್ಮ ದೇಶದ ಜನ 9 ವರ್ಷಗಳಿಂದ ಅವರ ಮಾತು ನಂಬಿ ಯಾಮಾರಿದ್ದಾರೆ. ಇಲ್ಲೂ ಕಳೆದ 3 ವರ್ಷಗಳಿಂದ ಆಡಳಿತದಲ್ಲಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಕ್ಕೆ ತಂದವರನ್ನು ಬಿಜೆಪಿ ಸರ್ಕಾರ ಮರೆತಿದೆ. ಬಿಜೆಪಿಯವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು, ಮಾಡಲಿಲ್ಲ. ಕಾರ್ಮಿಕ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ.
ಬೆಲೆ ಏರಿಕೆ ಹೆಚ್ಚಾಗಿದ್ದು, ಮಧ್ಯಮ ವರ್ಗದ ಜನರ ಜೀವನ ದುಸ್ಥರವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಇಂಧನ ಬೆಲೆ ಏರಿಕೆ ಮಾಡಿದ ಪರಿಣಾಣ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಇವರು ಬಂದ ಮೇಲೆ ನೋಟ್ ಬ್ಯಾನ್ ಮಾಡಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಟ್ಟರು. ಚುನಾವಣೆಗೂ ಮುನ್ನ ವಿದೇಶದಲ್ಲಿನ ಕಪ್ಪು ಹಣ ತಂದು ಎಲ್ಲರ ಖಾತೆಗೂ 15 ಲಕ್ಷ ಹಾಕುವುದಾಗಿ ಹೇಳಿದ್ದರು. ನಿಮ್ಮಲ್ಲಿ ಯಾರಿಗಾದರೂ 15 ಲಕ್ಷ ಹಣ ಬಂತಾ? ಜಿಎಸ್ ಟಿ ಜಾರಿಗೆ ತಂದು ಎಲ್ಲ ವಸ್ತುಗಳ ಮೇಲೆ ಅಧಿಕ ತೆರಿಗೆ ಹಾಕಿ ದಿನ ನಿತ್ಯ ಬರೆ ಎಳೆಯುತ್ತಿದ್ದಾರೆ. ಬಿಜೆಪಿಯ ದುಬಾರಿ ದುನಿಯಾದಲ್ಲಿ ಬದುಕು ಸಾಗಿಸುವುದೇ ಕಷ್ಟವಾಗಿದೆ.
ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಇವರು ಅಧಿಕಾರಕ್ಕೆ ಬಂದು 8 ವರ್ಷ ವಾಗಿದೆ ಅಂದರೆ 16 ಕೋಟಿ ಉದ್ಯೋಗ ನೀಡಬೇಕಿತ್ತು. 16 ಕೋಟಿ ಉದ್ಯೋಗ ನೀಡುವುದಿರಲಿ, ಇದ್ದ ಉದ್ಯೋಗಗಳನ್ನು ಕಸಿಯುತ್ತಿದ್ದಾರೆ. ದೇಶದ ಜನರಿಗೆ ಅಚ್ಛೇ ದಿನ ಕೊಡುತ್ತೇವೆ ಎಂದು ನರಕದ ಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಇನ್ನು ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆ ಹೆಚ್ಚಾಗಿದೆ. ಎಲ್ಲಾ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದಾರೆ. ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಅವುಗಳನ್ನು ಸರ್ಕಾರ ತುಂಬಲು ಸಾಧ್ಯವಾಗಿಲ್ಲ. ಮಾತೆತ್ತಿದರೆ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಇವರ ಯೋಗ್ಯತೆಗೆ ಒಂದು ಹುದ್ದೆಯನ್ನು ಪ್ರಾಮಾಣಿಕವಾಗಿ ನೇಮಕ ಮಾಡಿಲ್ಲ. ಇನ್ನು ಗುತ್ತಿಗೆ ವಿಚಾರದಲ್ಲಿ 40% ಕಮಿಷನ್ ಲೂಟಿ ಮಾಡಿದ್ದಾರೆ.
ಇವರು ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಕೇವಲ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಜನರ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.